ಚಿಕ್ಕಮಗಳೂರು, (ಡಿಸೆಂಬರ್ 22): ಪೊಲೀಸ್ ಬಂಧನ, ಜಾಮೀನು ರದ್ಧಾಂತದ ಬಳಿಕ ಬಿಜೆಪಿ ವಿಧಾನಪರಿಷತ್ ಸದಸ್ಯ ಸಿ.ಟಿ ರವಿ ಅವರು ಚಿಕ್ಕಮಗಳೂರಿಗೆ ಆಗಮಿಸಿದ್ದಾರೆ. ಬೆಂಗಳೂರಿನಿಂದ ಚಿಕ್ಕಮಗಳೂರಿನವರೆಗೂ ದಾರಿಯುದ್ಧಕ್ಕೂ ಕಾರ್ಯಕರ್ತರು ಮೆರವಣಿಗೆ, ಪುಷ್ಪಾರ್ಚನೆ ಮಾಡಿ ಅದ್ಧೂರಿ ಸ್ವಾಗತ ಕೋರಿದ್ದಾರೆ. ಅದರಲ್ಲೂ ಚಿಕ್ಕಮಗಳೂರಿನಲ್ಲಿ ಭರ್ಜರಿ ರೋಡ್ ಶೋ ಮಾಡಿದ್ದು, ಈ ವೇಳೆ ಆ್ಯಂಬುಲೆನ್ಸ್ಗಳನ್ನು ಬಳಕೆ ಮಾಡಲಾಗಿದೆ. ಹೌದು… ಸಿ.ಟಿ.ರವಿ ಸ್ವಾಗತಕ್ಕೆ ಆ್ಬಂಬುಲೆನ್ಸ್ಗಳು ಸೈರನ್ ಹಾಕಿಕೊಂಡು ಬಂದಿವೆ. ಈ ಸಂಬಂಧ ಇದೀಗ ಎಫ್ಐಆರ್ ದಾಖಲಾಗಿದೆ. ಕೈಮರದಿಂದ ಸೈರನ್ ಹಾಕಿಕೊಂಡು ಬಂದಿದ್ದ 7 ಆ್ಯಂಬುಲೆನ್ಸ್ ಮೇಲೆ ಈಗ ಪ್ರಕರಣ ದಾಖಲಾಗಿದೆ.
ರೋಗಿಗಳಲ್ಲಿದೆ ಸೈರನ್ ಹಾಕಿಕೊಂಡು ಹಾಗೂ ಟಾಪ್ನಲ್ಲಿ ಲೈಟ್ ಹಾಕಿಕೊಂಡು ಬಂದಿದ್ದ 7 ಆ್ಯಂಬ್ಯುಲೆನ್ಸ್ ಚಾಲಕ, ಮಾಲೀಕರ ವಿರುದ್ಧ ಈಗ ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಾರ್ವಜನಿಕರ ಶಾಂತಿ ಭಂಗ ಆರೋಪದಡಿ ಆ್ಯಂಬುಲೆನ್ಸ್ ಮಾಲೀಕ, ಚಾಲಕರ ವಿರುದ್ಧ ಸುಮೋಟೋ ಕೇಸ್ ದಾಖಲಾಗಿದೆ.
ಬಂಧನದಿಂದ ಮುಕ್ತವಾದ ಬಳಿಕ ಸಿಟಿ ರವಿ ಅವರು ನಿನ್ನೆ(ಡಿಸೆಂಬರ್ 21) ಮಧ್ಯರಾತ್ರಿ ಚಿಕ್ಕಮಗಳೂರಿಗೆ ಆಗಮಿಸಿದ್ದಾರೆ. ಈ ವೇಳೆ ಬಿಜೆಪಿ ಕಾರ್ಯಕರ್ತರು, ಅವರ ಅಭಿಮಾನಿಗಳು ಸಿ.ಟಿ ರವಿ ಅವರನ್ನು ಭರ್ಜರಿ ಸ್ವಾಗತ ಕೋರಿದ್ದರು. ರಸ್ತೆಯುದ್ದಕ್ಕೂ ಜೈಕಾರ ಹಾಕಿ ಹೂಮಳೆಗೈದಿದ್ದರು.ಇನ್ನು ಈ ಸ್ವಾಗತದ ಮೆರವಣಿಗೆಯಲ್ಲಿ 7 ಆ್ಯಂಬುಲೆನ್ಸ್ಗಳು ಭಾಗಿಯಾಗಿದ್ದವು. ಚಿಕ್ಕಮಗಳೂರು ನಗರದ ಹಿರೇಮಗಳೂರಿನಿಂದ ಸಿ.ಟಿ ರವಿ ನಿವಾಸದ ವರೆಗೂ ಜೋರಾಗಿ ಸೈರನ್ ಹಾಕಿಹೊಂಡು ಬಂದಿದ್ದವು.
ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ಗೆ ಅವಾಚ್ಯ ಶಬ್ಧದಿಂದ ನಿಂದನೆ ಮಾಡಿದ್ದ ಆರೋಪದ ಮೇಲೆ ಸಿಟಿ ರವಿ ಅವರನ್ನು ಬೆಳಗಾವಿಯಲ್ಲಿ ಪೊಲೀಸರು ಬಂಧಿಸಿದ್ದರು. ಆದರೆ, ಹೈಕೋರ್ಟ್ ಕೂಡಲೇ ಬಿಡುಗಡೆ ಮಾಡುವಂತೆ ಆದೇಶಿಸಿತ್ತು. ಈ ಹಿನ್ನೆಲೆಯಲ್ಲಿ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದ್ದರು.
Published On - 6:57 pm, Sun, 22 December 24