ಚಿಕ್ಕಮಗಳೂರು: ಈ ವರ್ಷ ಸುರಿದ ಭಾರೀ ಮಳೆಗೆ ಜನಜೀವನ ಅಸ್ತವ್ಯಸ್ತವಾಗಿದೆ. ಪ್ರವಾಹ (Flood) ಭೀತಿಯಿಂದಾಗಿ ಬೆಳೆ ಮತ್ತು ಪ್ರಾಣ ಹಾನಿ ಸಂಭವಿಸಿದೆ. ಅನೇಕರು ತಮ್ಮ ಮೂಲ ನೆಲೆಯನ್ನೇ ಕಳೆದುಕೊಂಡಿದ್ದಾರೆ. ಇಂತಹದ್ದೇ ಪರಿಸ್ಥಿತಿ ಎದರಿಸುತ್ತಿರುವ ಮಲೆನಾಡು ಭಾಗದ ಜನ ನಿತ್ಯವೂ ಕಣ್ಣೀರಿನಲ್ಲಿ ಕೈ ತೊಳೆಯುವಂತಾಗಿದೆ. ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗಗಳಾದ ಮೂಡಿಗೆರೆ, ಕಳಸ, ಎನ್.ಆರ್.ಪುರ, ಕೊಪ್ಪ, ಶೃಂಗೇರಿ ತಾಲೂಕಿನ ಜನರು ಆ ದಿನ ಮಹಾಮಳೆಯಿಂದ ಅನುಭವಿಸಿದ್ದ ನೋವು, ಸವಾಲು ಹೇಳತೀರದು.
ಮಲೆನಾಡಿಗರಿಗೆ ಮಳೆ ಹೊಸತೇನಲ್ಲ, ಆದರೆ 2019ರ ಆಗಸ್ಟ್ 9 ರಂದು ಆರ್ಭಟಿಸಿದ ಮಳೆ ಜನರನ್ನು ಕಂಗಾಲಾಗಿತ್ತು. ಜಿಲ್ಲೆಯಲ್ಲಿ ಹುಟ್ಟುವ ತುಂಗಾ-ಭದ್ರಾ, ಹೇಮಾವತಿ ನದಿಗಳು ಉಕ್ಕಿ ಹರಿದಿದ್ದವು. ಈ ಭಾಗದ ಜನರು ಮನೆಬಿಟ್ಟು ಓಡುತ್ತಿದ್ದರೆ ಹಿಂದೆ ಪ್ರವಾಹ ಅವರನ್ನು ಬೆನ್ನಟ್ಟುತ್ತಿತ್ತು. ಆ ವೇಳೆ ಸಾವಿರಾರು ಜನರು ಮಳೆಯಿಂದ ಬಚಾವಾದರೆ, 13 ಜನರು ಪ್ರವಾಹದ ಸಂಕೋಲೆಯಿಂದ ತಪ್ಪಿಸಿಕೊಳ್ಳಲಾಗದೇ ಸಾವಿಗೆ ಶರಣಾಗಿದ್ದರು.
ಜೀವಮಾನವಿಡೀ ಗಳಿಸಿದ್ದನ್ನೆಲ್ಲಾ ಕ್ಷಣಮಾತ್ರದಲ್ಲಿ ಕಳೆದುಕೊಂಡೆವು. ಕಣ್ಣ ಮುಂದೆಯೇ ಕನಸಿನ ಮನೆ ಕೊಚ್ಚಿ ಹೋಗುತ್ತಿದ್ದರೆ, ಅಸಹಾಯಕ ಸ್ಥಿತಿಯಲ್ಲಿ ಮನಸ್ಸನ್ನು ಗಟ್ಟಿಮಾಡಿ ನೋಡುತಿದ್ದೆವು. ಎದೆ ಬಡಿದುಕೊಂಡರೂ ನಮ್ಮ ಕೂಗು ಯಾರಿಗೂ ಕೇಳುತ್ತಿರಲಿಲ್ಲ ಎಂದು ಈ ಭಾಗದ ಜನರು ಟಿವಿ9 ಡಿಜಿಟಲ್ ಜತೆ ತಮ್ಮ ಅಳಲು ತೋಡಿಕೊಂಡಿದ್ದಾರೆ. ಉಟ್ಟ ಬಟ್ಟೆಯಲ್ಲಿ ಮನೆಯಿಂದ ಓಡಿ ಬಂದು ಜೀವ ಉಳಿಸಿಕೊಂಡೆವು. ಮುಂದೆ ಎಲ್ಲವೂ ಸರಿಯಾಗುತ್ತದೆ ಎಂದು ಎಲ್ಲರೂ ಸಮಾಧಾನ ಮಾಡಿದರು. ದಿನಗಳು ಕಳೆದವು, ತಿಂಗಳುಗಳು ಆದವು, ವರ್ಷಗಳೇ ಉರುಳಿದವು, ಸ್ವತಃ ಮುಖ್ಯಮಂತ್ರಿಗಳೇ ಬಂದ್ದರು. ಮಂತ್ರಿಗಳು, ಅಧಿಕಾರಿಗಳು ಕೂಡ ಬಂದರು. ಆದರೆ ನಮ್ಮ ಸಹಾಯಕ್ಕೆ ಯಾರು ಬರಲಿಲ್ಲ ಎಂದು 2019 ರಲ್ಲಿ ಬಂದ ಪ್ರವಾಹಕ್ಕೆ ಮನೆ ಕಳೆದುಕೊಂಡ ಜನರು ಬೇಸರ ವ್ಯಕ್ತಪಡಿಸಿದ್ದಾರೆ.
ಬರೋಬ್ಬರಿ 2 ವರ್ಷಗಳಲ್ಲಿ ಮಾಡಿದ ಮನವಿಗಳಿಗೆ ಲೆಕ್ಕವಿಲ್ಲ. ಕಚೇರಿಗಳಿಗಂತೂ ಅಲೆದು ಅಲೆದು ಸುಸ್ತಾಗಿ ಹೋಗಿದೆ. ಕೇವಲ ಚಪ್ಪಲಿಗಳು ಸವೆದ್ವು ವಿನಃ ಪ್ರಯೋಜನ ಮಾತ್ರ ಶೂನ್ಯ. ಮನೆಯ ಜತೆಗೆ ಹಣ, ಚಿನ್ನಾಭರಣ, ಪಿಠೋಪಕರಣಗಳು, ಶೇಖರಣೆ ಮಾಡಿಟ್ಟಿದ್ದ ಕಾಫಿ, ಏಲಕ್ಕಿ, ಮೆಣಸು, ಅಡಿಕೆ ಬೆಳೆಗಳು ನಾಶವಾದವು. ಕಾಫಿ ತೋಟ, ಅಡಿಕೆ ತೋಟ, ಗದ್ದೆಗಳೇ ಸರ್ವನಾಶವಾದವು. ನಮ್ಮ ಭಾರವನ್ನು ಹೊತ್ತುಕೊಂಡು ಸಾಗುತ್ತಿದ್ದ ಜೀಪ್, ಕಾರು, ಬೈಕ್ ಎಲ್ಲವೂ ಮಳೆಯಲ್ಲಿ ಸಮಾಧಿಯಾದವು. ಇಷ್ಟಾದರೂ, ನಮಗೆ ಪ್ರಕೃತಿಯ ಮೇಲೆ ಆ ಕ್ಷಣಕ್ಕೆ ಬೇಜಾರ್ ಆಗಿತ್ತು ಬಿಟ್ಟರೆ, ಮತ್ತೆ ಪ್ರಕೃತಿಯ ಮುನಿಸಿನ ಬಗ್ಗೆ ಕೋಪ ಬರಲೇ ಇಲ್ಲ. ನಿಜಕ್ಕೂ ನಮಗೆ ಕೋಪ, ಆಕ್ರೋಶ ಹುಟ್ಟಿಸುವ ಭ್ರಮನಿರಸನ ಬಂದಿರುವುದು ಈ ವ್ಯವಸ್ಥೆಯ ಮೇಲೆ, ನಮ್ಮ ನಾಳುತ್ತಿರುವ ಸರ್ಕಾರದ ಮೇಲೆ. ಸುಳ್ಳು ಭರವಸೆಗಳಲ್ಲಿ ನಮ್ಮನ್ನು ಇನ್ನೂ ಅಂದಕಾರದಲ್ಲಿಟ್ಟು ಮೂರ್ಖರನ್ನಾಗಿಸುತ್ತಿರುವ ಜನಪ್ರತಿನಿಧಿಗಳ ಮೇಲೆ ಎಂದು 2019, ಆಗಸ್ಟ್ 9 ರಂದು ಮಹಾಮಳೆಯಿಂದ ಸರ್ವಸ್ವವನ್ನೂ ಕಳೆದುಕೊಂಡವರು ಅಸಹಾಯಕತೆಯ ನುಡಿಗಳನ್ನಾಡಿದ್ದಾರೆ.
ಕಾಳಜಿ ಕೇಂದ್ರಗಳಲ್ಲಿ ಸಾವನ್ನ ಗೆದ್ದವರ ಜೀವನ!
ಹೀಗೆ ಬೆನ್ನಟ್ಟಿ ಬಂದ ಪ್ರವಾಹಕ್ಕೂ ಸವಾಲು ಹಾಕಿ ಉಟ್ಟ ಬಟ್ಟೆಯಲ್ಲಿ ಬಂದ ಜನರು, ಸೇರಿದ್ದು ಕಾಳಜಿ ಕೇಂದ್ರಕ್ಕೆ. ಅಲ್ಲಲ್ಲಿ ತೆರೆದ ಕಾಳಜಿ ಕೇಂದ್ರದಲ್ಲಿ ಕೆಲ ದಿನಗಳವರೆಗೂ ಕಣ್ಣೀರಿಡುತ್ತಲೇ ಜೀವನ ಸಾಗಿಸುತ್ತಿದ್ದ ಸಂತ್ರಸ್ತರನ್ನು ನೀವು ಬಾಡಿಗೆ ಮನೆಗಳಿಗೆ ಹೋಗಿ. ನಾವು ಕಾಳಜಿ ಕೇಂದ್ರಗಳನ್ನು ಮುಚ್ಚುತ್ತೇವೆ ಎಂದು ಸರ್ಕಾರ ತಿಳಿಸಿ ಅಲ್ಲಿಂದಲೂ ಕೊನೆಗೆ ಕಳುಹಿಸಿಬಿಟ್ಟಿತು.
ಎಲ್ಲೆಲ್ಲಿ ಹೆಚ್ಚು ಅನಾಹುತ?
2019ರ ಮಹಾಮಳೆ ಹೆಚ್ಚು ಹೊಡೆತ ಕೊಟ್ಟಿದ್ದು ಮೂಡಿಗೆರೆ, ಕಳಸ, ಎನ್.ಆರ್. ಪುರ ತಾಲೂಕಿನ ಭಾಗದಲ್ಲಿ. ಇಲ್ಲಿನ ಬಾಳೂರು, ಮಧುಗುಂಡಿ, ದುರ್ಗದಹಳ್ಳಿ, ಅಲೇಖಾನ್ ಹೊರಟ್ಟಿ, ಹಲಗಡಕ, ಸುಂಕಸಾಲೆ, ಚನ್ನಡ್ಲು, ಹಿರೇಬೈಲ್, ಯೆಡೂರು, ಮಾಗುಂಡಿ ಸೇರಿದಂತೆ ಕೆಲ ಗ್ರಾಮಗಳು ಮಳೆಯಿಂದ ತತ್ತರಿಸಿದ್ದವು.
ಬಾಡಿಗೆ ದುಡ್ಡು ಕೊಡದೇ ನಿರ್ಲಕ್ಷ್ಯ ತೋರಿದ ಸರ್ಕಾರ
ಬಾಡಿಗೆ ಮನೆಯ ದಾರಿ ಹಿಡಿದ ಜನರಿಗೆ ಹಣ ಹಾಕುವ ಭರವಸೆಯನ್ನು ಸರ್ಕಾರ ನೀಡಿತ್ತು. ಆದರೆ ಮೊದಲು 25 ಸಾವಿರ ನೀಡಿದ ಸರ್ಕಾರ, ಆಮೇಲೆ ಸಂತ್ರಸ್ತರನ್ನು ಸಂಪೂರ್ಣವಾಗಿ ಮರೆತು ಬಿಟ್ಟಿತು. ಆಗಲೇ ಸಂತ್ರಸ್ತರಿಗೆ ಅರಿವಾಗಿದ್ದು, ನಾವು ಹೇಗೆ ಅಡ್ಡಕತ್ತರಿಯಲ್ಲಿ ಸಿಲುಕಿಕೊಂಡಿದ್ದೀವಿ ಎನ್ನುವುದು. ಬಾಡಿಗೆ ಕೊಡಲು ಸಂತ್ರಸ್ತರು ಅನುಭವಿಸಿದ ಕಷ್ಟ ಅಷ್ಟಿಷ್ಟಲ್ಲ. ಕಾಫಿ ತೋಟಗಳು ಕೊಚ್ಚಿ ಹೋಗಿದ್ವು, ಗದ್ದೆಗಳು ಸರ್ವನಾಶವಾಗಿದ್ವು. ಯಾವುದೇ ಆದಾಯವಿಲ್ಲ, ಹೇಗೆ ಬಾಡಿಗೆ ಕೊಡೋದು ? ಒಂದು ತಿಂಗಳು ಮನೆಯ ಮಾಲೀಕರಿಗೆ ಸಬೂಬು ಹೇಳಬಹುದು. ಆದರೆ ಪ್ರತಿ ಬಾರಿಯೂ ನೆಪ ಹೇಳಲು ಹೇಗೆ ಸಾಧ್ಯ? ಎಂದು ಸಂತ್ರಸ್ತರು ಬೇಸರ ವ್ಯಕ್ತಪಡಿಸಿದ್ದಾರೆ.
ಮನೆ ಕಟ್ಟಿಕೊಡಲು ಸರ್ಕಾರಕ್ಕೆ ಸಿಗುತ್ತಿಲ್ಲ ಜಾಗ
ಎರಡು ವರ್ಷ ಕಳೆದರೂ 2019ರಲ್ಲಿ ಸಂತ್ರಸ್ತರಾದ ಜನರಿಗೆ ಮನೆ ಕಟ್ಟಿಕೊಡಲು ಜಾಗವನ್ನು ಹುಡುಕುತ್ತಲೇ ಇದೆ. ಕೆಲವೆಡೆ ಸಂತ್ರಸ್ತರಿಗೆ ಮನೆ ಕಟ್ಟಿಕೊಡಲು ಜಾಗ ಗುರುತಿಸಿದರೂ, ಕೆಲ ತಾಂತ್ರಿಕ ಕಾರಣಗಳಿಂದ ಆ ಜಾಗದಲ್ಲಿ ಮನೆಗಳಿಗೆ ಗುದ್ದಲಿ ಪೂಜೆ ಮಾಡಲು ಸರ್ಕಾರಕ್ಕೆ ಸಾಧ್ಯವಾಗಿಲ್ಲ. ಈ ನಡುವೆ ಕೇವಲ 40 ಕುಟುಂಬಗಳಿಗೆ ಮೂಡಿಗೆರೆ ತಾಲೂಕಿನ ಬಣಕಲ್ ಬಳಿಯ ಸುಣ್ಣದಗೂಡಿನಲ್ಲಿ 5 ಲಕ್ಷ ವೆಚ್ಚದಲ್ಲಿ ಮನೆಯನ್ನು ನಿರ್ಮಿಸಲು ಜಾಗ ನೀಡಿದೆ. ಈ 40 ಕುಟುಂಬಗಳಲ್ಲಿ ಕೆಲವರು ಈ ಜಾಗದಲ್ಲಿ ಮನೆಯನ್ನು ನಿರ್ಮಿಸಿಕೊಂಡಿದ್ದರೂ ಕೂಡ ಯಾವುದೇ ಮೂಲ ಸೌಕರ್ಯವನ್ನು ಕಲ್ಪಿಸಿಕೊಟ್ಟಿಲ್ಲ. ಹೀಗಾಗಿ ಜನರು ತಮ್ಮ ಮೂಲ ಜಾಗಗಳಲ್ಲಿ ಮನೆಯನ್ನೂ ಕಟ್ಟಿಕೊಳ್ಳಲಾಗದೇ ಅನಿವಾರ್ಯವಾಗಿ ಬಾಡಿಗೆ ಮನೆಯಲ್ಲಿಯೇ ಇರುವಂತಾಗಿದೆ. ಮಳೆಯಿಂದ ಹೆಚ್ಚು ಬಾಧಿತವಾದ ಮೂಡಿಗೆರೆ, ಕಳಸ ತಾಲೂಕಿನ ಸಂತ್ರಸ್ತರ ಬದುಕು ಇಂದಿಗೂ ಅತಂತ್ರವಾಗಿಯೇ ಉಳಿದಿದೆ.
ನೆರವಿಗಾಗಿ ಮನವಿ ಮಾಡಿಕೊಳ್ಳುತ್ತಿರುವ ಸಂತ್ರಸ್ತರು
ಹೇಗೋ ನಮ್ಮ ಬದುಕು ನಡಿಯುತ್ತದೆ ಬಿಡಿ, ಬದುಕುವ ಎಲ್ಲಾ ಭರವಸೆಗಳನ್ನು ನಾವು ಬಿಟ್ಟಿದ್ದೀವಿ ಅನ್ನುವಷ್ಟರ ಮಟ್ಟಿಗೆ ಎಲ್ಲಾ ಪ್ರಯತ್ನಗಳನ್ನು ಮಾಡಿ ಅಸಹಾಯಕರಾಗಿದ್ದಾರೆ. ದಯವಿಟ್ಟು, ಬೆಚ್ಚಗಿನ ಮನೆಯಲ್ಲಿದ್ದುಕೊಂಡು ಮೈ ಕೊರೆಯುವ ಚಳಿ ಮಳೆಯಲ್ಲಿ ಒದ್ದಾಡುತ್ತಿರುವ ಸಂತ್ರಸ್ತರಿಗೆ ಸುಳ್ಳು ಭರವಸೆಗಳನ್ನು ಕೊಡುವುದನ್ನು ಇನ್ನಾದರೂ ಬಿಡಿ. ಜೀವಮಾನವಿಡೀ ಸಂಪಾದನೆ ಮಾಡಿದ್ದ ಸರ್ವಸ್ವವನ್ನೂ ಕಳೆದುಕೊಂಡ ಸ್ವಾಭಿಮಾನಿಗಳು ಇದೀಗ ಸಂತ್ರಸ್ತರಾಗಿದ್ದಾರೆ. ಸಂತ್ರಸ್ತರು ಭಿಕ್ಷುಕರಂತೆ ಅಲೆದಾಡಿಸದೇ ಇನ್ನಾದರೂ ಪ್ರಾಮಾಣಿಕ ಪ್ರಯತ್ನ ಮಾಡಿ ಎಂದು ಸಂತ್ರಸ್ತರು ಮನವಿ ಮಾಡಿಕೊಂಡಿದ್ದಾರೆ.
ವರದಿ: ಪ್ರಶಾಂತ್
ಇದನ್ನೂ ಓದಿ:
Karnataka Rain: ಅಬ್ಬರಿಸಲಾರಂಭಿಸಿದ ಆಶ್ಲೇಷಾ; ಮಲೆನಾಡು, ಕರಾವಳಿ ಭಾಗದಲ್ಲಿ ಮತ್ತೆ ಮಳೆ
Published On - 2:56 pm, Mon, 9 August 21