ಚಿಕ್ಕಮಗಳೂರು, ಆಗಸ್ಟ್ 29: ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯ ಮಲೆನಾಡಿನ 6 ತಾಲೂಕಿನಲ್ಲಿ ಅರಣ್ಯ ಒತ್ತುವರಿ ತೆರವು ಮಾಡುವಂತೆ ಸರ್ಕಾರ ನೀಡಿರುವ ಆದೇಶಕ್ಕೆ ಭಾರೀ ವಿರೋಧ ವ್ಯಕ್ತವಾಗಿದೆ. ಒತ್ತುವರಿ ತೆರವು ಆದೇಶ ಹೊರಬರುತ್ತಿದ್ದಂತೆಯೇ ಅರಣ್ಯ ಇಲಾಖೆ ಸರ್ಕಾರದ ಆದೇಶದಂತೆ ಅರಣ್ಯ ಒತ್ತುವರಿ ತೆರವಿಗೆ ಮುಂದಾಗಿದ್ದು ನೂರಾರು ಎಕರೆ ತೆರವು ಮಾಡಲಾಗಿದೆ.
ವಯನಾಡು ದುರಂತದ ಬಳಿಕ ಎಚ್ಚೆತ್ತುಕೊಂಡ ಸರ್ಕಾರ ಅರಣ್ಯ ಉಳಿಸುವ ನಿಟ್ಟಿನಲ್ಲಿ ಮುಂಜಾಗ್ರತಾ ಕ್ರಮವಾಗಿ ಅರಣ್ಯ ಒತ್ತುವರಿ ತೆರವಿಗೆ ಆದೇಶ ನೀಡಿತ್ತು. ಇದೇ ಆದೇಶ ರಾಜಕೀಯ ಲಾಭಕ್ಕೆ ತಿರುಗಿದ್ದು, ಬಿಜೆಪಿ ವರ್ಸಸ್ ಕಾಂಗ್ರೆಸ್ ನಡುವೆ ಚಿಕ್ಕಮಗಳೂರಿನಲ್ಲಿ ರಾಜಕೀಯ ಲಾಭದ ಲೆಕ್ಕಾಚಾರಕ್ಕೆ ತಿರುಗಿದೆ.
ಕೊಪ್ಪ, ಶೃಂಗೇರಿ, ಚಿಕ್ಕಮಗಳೂರು, ಮೂಡಿಗೆರೆ, ಕಳಸ, ಎನ್ಆರ್ ಪುರ ಭಾಗದಲ್ಲಿ ಒತ್ತುವರಿ ತೆರವು ಕಾರ್ಯಕ್ಕೆ ವಿರೋಧ ವ್ಯಕ್ತವಾಗಿದ್ದು, ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಸೇರಿದಂತೆ ರೈತ ಸಂಘಟನೆಗಳು ರೈತ ಚಳುವಳಿ ಆರಂಭಿಸಿವೆ. ಕಾಂಗ್ರೆಸ್ ಮಾತ್ರ ಸರ್ಕಾರದ ಆದೇಶವನ್ನು ತಪ್ಪಾಗಿ ಬಿಂಬಿಸಿ ರೈತರಲ್ಲಿ ಗೊಂದಲ ಸೃಷ್ಟಿಸಿ ಸರ್ಕಾರದ ವಿರುದ್ಧ ಊಹಾಪೋಹಗಳನ್ನು ಎಬ್ಬಿಸಿದೆ ಬಿಜೆಪಿ ಎಂದು ಆಕ್ರೋಶ ವ್ಯಕ್ತಪಡಿಸಿದೆ.
ಚಿಕ್ಕಮಗಳೂರು ಜಿಲ್ಲೆಯ ಒತ್ತುವರಿ ಸಮಸ್ಯೆ ಸಂಬಂಧ ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ನೇತೃತ್ವದಲ್ಲಿ ಲೋಕಸಭೆ ಮಾಜಿ ಸದಸ್ಯ ಜಯಪ್ರಕಾಶ್ ಹೆಗ್ಡೆ, ಮಾಜಿ ಸಚಿವರಾದ ಕಿಮ್ಮನೆ ರತ್ನಾಕರ್ ಹಾಗೂ ಜಿಲ್ಲೆಯ ಐವರು ಕಾಂಗ್ರೆಸ್ ಶಾಸಕರು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರನ್ನು ಭೇಟಿ ಮಾಡಿ ಅರಣ್ಯ ಒತ್ತುವರಿ ತೆರವು ವಿರುದ್ಧ ಮಲೆನಾಡು ಭಾಗದಲ್ಲಿ ಸೃಷ್ಟಿಯಾಗಿರುವ ಗೊಂದಲದ ಬಗ್ಗೆ ಮಾಹಿತಿ ನೀಡಿದ್ದಾರೆ.
ಜೀವನೋಪಾಯಕ್ಕಾಗಿ ಒತ್ತುವರಿಯೂ ನಡೆದಿದೆ. ಅರಣ್ಯವೂ ಕ್ಷೀಣಿಸಿದ್ದು, ಹಿಂದೆ ಜಿಲ್ಲಾಧಿಕಾರಿಗಳು ಘೋಷಿಸಿದ ಮೀಸಲು ಅರಣ್ಯ ಸಂಬಂಧ ರಚನೆಯಾಗಿದ್ದ ಟಾಸ್ಕ್ ಫೋರ್ಸ್ ಸಮಿತಿ ಯಾವುದೇ ವಾಸ್ತಾವಂಶವನ್ನು ಪರಿಗಣಿಸದೇ ಇರುವುದರಿಂದ ಪುನಃ ಟಾಸ್ಕ್ ಫೋರ್ಸ್ ಸಮಿತಿ ರಚಿಸಬೇಕು. ಒತ್ತುವರಿಯನ್ನು ಕೂಲಂಕುಷವಾಗಿ ಪರಿಶೀಲಿಸಿ ಅರಣ್ಯ ಮತ್ತು ಅರಣ್ಯೇತರ ಒತ್ತುವರಿ ವಿಂಗಡಿಸಿ ನೈಜ್ಯ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲು ಅರಣ್ಯ ಇಲಾಖೆಗೆ ಮುಖ್ಯಮಂತ್ರಿಗಳು ಸೂಚಿಸಿದ್ದಾರೆ ಎಂದು ಕಾಂಗ್ರೆಸ್ ಶಾಸಕ ರಾಜೇಗೌಡ ತಿಳಿಸಿದ್ದಾರೆ.
ಅರಣ್ಯ ಹಕ್ಕು ಕಾಯ್ದೆಯಡಿಯಲ್ಲಿ ಪರಿಶಿಷ್ಟ ಪಂಗಡಗಳಿಗೆ ಅನ್ವಯವಾಗುವ ಮಾನದಂಡಗಳಂತೆ ಇತರೆ ಪಾರಂಪರಿಕ ಅರಣ್ಯವಾಸಿಗಳಿಗೆ ಭೂ ಮಂಜೂರು ಮಾಡಲು 75 ವರ್ಷಗಳ ದಾಖಲಾತಿ ಬದಲಾಗಿ 25 ವರ್ಷಗಳ ದಾಖಲಾತಿ ಒದಗಿಸಿ ಭೂ ಮಂಜೂರಾತಿಗೆ ನಿಯಮಗಳ ತಿದ್ದುಪಡಿ ಮಾಡಲು ಅಧಿವೇಶನದಲ್ಲಿ ಅರಣ್ಯ ಸಚಿವರು ಪ್ರಸ್ತಾಪಿಸಿದ್ದಾರೆ. ಸರ್ವಾನುಮತದಿಂದ ನಿರ್ಣಾಯಿಸಿ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಡೀಮ್ಡ್ ಅರಣ್ಯಕ್ಕೆ ಸಂಬಂಧಿಸಿದಂತೆ ಡೀಮ್ಡ್ ಅರಣ್ಯ ಪುನರ್ ಪರಿಶೀಲನೆ ಮಾಡಿ ನೈಜ್ಯ ವರದಿ ನೀಡಲು ಅರಣ್ಯ ಇಲಾಖೆಗೆ ಮುಖ್ಯಮಂತ್ರಿಗಳು ನಿರ್ದೇಶನ ನೀಡಿದ್ದಾರೆ. ಕಸ್ತೂರಿ ರಂಗನ್ ವರದಿಗೆ ಸಂಬಂಧಿಸಿದಂತೆ ಈ ಹಿಂದೆ ಐದು ಬಾರಿ ಕರಡು ಅಧಿಸೂಚನೆಯನ್ನು ತಿರಸ್ಕರಿಸಿದ್ದು, ಈ ಬಾರಿಯೂ ಅಧಿವೇಶನದಲ್ಲಿ ತಿರಸ್ಕರಿಸಲು ಸಮ್ಮತಿ ಸೂಚಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಕಸ್ತೂರಿ ರಂಗನ್ ವರದಿ ಶಿಫಾರಸುಗಳ ಸಂಪೂರ್ಣ ಅನುಷ್ಠಾನ ಅಸಾಧ್ಯ: ಈಶ್ವರ್ ಖಂಡ್ರೆ
ನಮೂನೆ 50, 23, 57 ಹಾಗೂ 94ಸಿ ಹಾಗೂ 64ಸಿಸಿ ಅಡಿಯಲ್ಲಿ ಭೂಮಿ ನೀಡಲು ಸರ್ಕಾರ ಮುಂದಾಗಿದೆ. ಮೀಸಲು ಅರಣ್ಯ ಪ್ರದೇಶದಲ್ಲಿ ಒತ್ತುವರಿಯಾಗಿದ್ದು ಎಸಿಎಫ್, ಸಿಸಿಎಫ್ ಹಾಗೂ ಹೈಕೋರ್ಟ್ಲ್ಲಿ ಪ್ರಕರಣ ದಾಖಲಾಗಿದೆ. ಈ ಹಿನ್ನಲೆಯಲ್ಲಿ ಒತ್ತುವರಿ ತೆರವುಗೊಳಿಸಲಾಗುತ್ತಿದೆ. ಅರ್ಜಿಗಳು ಇತ್ಯಾರ್ಥಗೊಳ್ಳುವರೆಗೂ ತೆರವುಗೊಳಿಸಬಾರದು ಎಂದು ಸರ್ಕಾರ ಅರಣ್ಯ ಇಲಾಖೆಗೆ ನಿರ್ದೇಶನ ನೀಡಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:09 pm, Thu, 29 August 24