ಚಿಕ್ಕಮಗಳೂರು: ಚಾರ್ಮಾಡಿ ಘಾಟ (charmadi ghat) ಅರಣ್ಯ ಪ್ರದೇಶದಲ್ಲಿ ಕಾಡ್ಗಿಚ್ಚು ಹೊತ್ತಿಕೊಂಡಿದ್ದು ನೂರಾರು ಎಕರೆ ಅರಣ್ಯ ಸಂಪತ್ತು ಭಸ್ಮವಾಗಿರುವಂತಹ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟಗೆ ಹೊಂದಿಕೊಂಡಿರುವ ಆಲೇಖಾನ್ ಹೊರಟ್ಟಿ ಗುಡ್ಡ ನಡೆದಿದೆ. ಕಿಡಿಗೇಡಿಗಳು ಬೆಂಕಿ ಹಚ್ಚಿರುವುದಾಗಿ ಶಂಕೆ ವ್ಯಕ್ತವಾಗಿದೆ. ರಭಸವಾಗಿ ಬೀಸುತ್ತಿರುವ ಗಾಳಿಯಿಂದ ಅರಣ್ಯ ಹೊತ್ತಿ ಉರಿದಿದೆ. ಬೆಂಕಿಯ ಕೆನ್ನಾಲಿಗೆಗೆ ಸಿಕ್ಕಿ ನೂರಾರು ಪ್ರಾಣಿ-ಪಕ್ಷಿಗಳು ಮೃತಪಟ್ಟಿವೆ. ಸ್ಥಳಕ್ಕೆ ಅರಣ್ಯ ಅಧಿಕಾರಿಗಳು ದೌಡಾಯಿಸಿದ್ದು, ಸ್ಥಳಿಯರ ಸಾಥ್ನೊಂದಿಗೆ ಬೆಂಕಿ ನಂದಿಸಲು ಹರಸಹಾಸ ಪಟ್ಟಿದ್ದಾರೆ. ಇನ್ನು ಚಾಮರಾಜನಗರ ಬಂಡಿಪುರ ಅರಣ್ಯದಲ್ಲಿ ಕಾಡ್ಗಿಚ್ಚಿನಿಂದ ಬೆಂಕಿ ಹೊತ್ತುಕೊಂಡಿದ್ದು, ಹತ್ತಾರು ಎಕರೆ ಗುಡ್ಡಕ್ಕೆ ಬೆಂಕಿ ಹೊತ್ತಿಕೊಂಡಿದೆ. ಬೆಂಕಿ ನಂದಿಸಲು ಅರಣ್ಯ ಸಿಬ್ಬಂದಿಗಳು ಹರಸಾಹಸಪಟ್ಟಿದ್ದಾರೆ. ದಟ್ಟ ಹೊಗೆಯಿಂದ ಆತಂಕ ಹೆಚ್ಚಿತ್ತು.
ಮೈಸೂರು: ಜಿಲ್ಲೆಯ ಚಾಮುಂಡಿ ಬೆಟ್ಟದ ಕುರುಚಲು ಪ್ರದೇಶದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಕಾಡ್ಗಿಚ್ಚಿನಿಂದ ಬೆಂಕಿ ಹಬ್ಬಿರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ, ಅರಣ್ಯ ಸಿಬ್ಬಂದಿ, ಪೊಲೀಸರು ದೌಡಾಯಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮತ್ತೊಂದು ಪ್ರಕರಣದಲ್ಲಿ ಬೆಂಗಳೂರಿನ ಕುರುಬರಹಳ್ಳಿಯ ಕಾವೇರಿ ನಗರದಲ್ಲಿ ಮನೆಯ ಮುಂದೆ ನಿಲ್ಲಿಸಿದ್ದ ಸುಬ್ರಹ್ಮಣ್ಯ ಎಂಬುವರಿಗೆ ಸೇರಿದ ಕಾರು ಮತ್ತು ಬೈಕ್ಗೆ ತಡರಾತ್ರಿ ಕಿಡಿಗೇಡಿಗಳು ಬೆಂಕಿ ಹಾಕಿ ಪರಾರಿಯಾಗಿದ್ದಾರೆ. ಬೆಂಕಿ ಹೊತ್ತಿ ಉರಿಯುವಾಗ ಪಕ್ಕದ ಮನೆಗಳಿಗೂ ಹಾನಿಯಾಗಿದ್ದು, ಸ್ಥಳಕ್ಕೆ ಮಹಾಲಕ್ಷ್ಮೀ ಲೇಔಟ್ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇನ್ನು ಎರಡು ಜನ ದುಷ್ಕರ್ಮಿಗಳು ಸೇರಿ ಸುಬ್ರಹ್ಮಣ್ಯ ಅವರ ಟಿಯುವಿ 300(TUV 300) ಕಾರು ಹಾಗೂ ಬೈಕ್ಗೆ ಬೆಂಕಿ ಹಾಕಿರುವ ಶಂಕೆ ವ್ಯಕ್ತವಾಗಿದೆ.
ಬೆಂಗಳೂರು ಗ್ರಾಮಾಂತರ: ಕಿಡಿಗೇಡಿಗಳು ಅರಣ್ಯ ಪ್ರದೇಶಕ್ಕೆ ಬೆಂಕಿ ಹಚ್ಚಿದ್ದು, ನೂರಾರು ಎಕರೆ ಅರಣ್ಯ ಪ್ರದೇಶ ಹೊತ್ತಿ ಉರಿದಿರುವಂತಹ ಘಟನೆ ಜಿಲ್ಲೆಯ ಹೊಸಕೋಟೆ ತಾಲೂಕಿನ ಗೊಟ್ಟಿಪುರ ಅರಣ್ಯ ಪ್ರದೇಶದಲ್ಲಿ ನಡೆದಿದೆ. ಕಳೆದ ಅರ್ಧ ಗಂಟೆಗೂ ಹೆಚ್ಚುಕಾಲದಿಂದ ಬೆಂಕಿ ಉರಿಯುತ್ತಿದ್ದು, ಬೆಂಕಿಯ ಕೆನ್ನಾಲಿಗೆಗೆ ಮರ ಗಿಡ ಸೇರಿ ಅರಣ್ಯ ಸಂಪತ್ತು ನಾಶವಾಗಿದೆ. ಹೆದ್ದಾರಿಯಲ್ಲಿ ಬಂದ ಕಿಡಿಗೇಡಿಗಳಿಂದ ಬೆಂಕಿ ಹಚ್ಚಿರುವ ಶಂಕೆ ವ್ಯಕ್ತವಾಗಿದೆ.
ಸ್ಥಳಿಯರಿಂದ ಬೆಂಕಿ ನಂದಿಸಲು ಹರಸಾಹಸ ಪಟ್ಟಿದ್ದಾರೆ. ಬಳಿಕ ಸ್ಥಳಕ್ಕಾಗಮಿಸಿದ ಅರಣ್ಯ ಹಾಗೂ ಅಗ್ನಿಶಾಮಕ ಸಿಬ್ಬಂದಿಗಳು ಬೆಂಕಿ ನಂದಿಸಿದ್ದಾರೆ. ಸಿಬ್ಬಂದಿ ಕಾರ್ಯಾಚರಣೆಯಿಂದ ಅರಣ್ಯ ಪ್ರದೇಶ ನಾಶ ತಪ್ಪಿದೆ. ಸಕಾಲದಲ್ಲಿ ಬೆಂಕಿ ನಂದಿಸಿದ ಕಾರಣ ಅರಣ್ಯಕ್ಕೆ ಹಾನಿಯಾಗಿಲ್ಲ ಅಂತ ಅರಣ್ಯಾಧಿಕಾರಿ ಪುಪ್ಪಲತಾ ಟಿವಿ9 ಗೆ ಹೇಳಿಕೆ ನೀಡಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 9:49 pm, Sun, 5 March 23