ಚಿಕ್ಕಮಗಳೂರಲ್ಲಿ ಸರ್ಕಾರಿ ಶಾಲೆಗಳ ಸ್ಥಿತಿ ಚಿಂತಾಜನಕ; ಮಕ್ಕಳನ್ನು ಕಳಿಸಲು ಪೋಷಕರು ಹಿಂದೇಟು, 2 ವರ್ಷದಲ್ಲಿ 48 ಶಾಲೆಗಳಿಗೆ ಬೀಗ

| Updated By: ಆಯೇಷಾ ಬಾನು

Updated on: Jul 22, 2023 | 11:38 AM

ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಗಾಳಿ ಹಳ್ಳಿ ಕ್ರಾಸ್ ಬಳಿ ಇರುವ ಸರ್ಕಾರಿ ಶಾಲೆಯ ಸ್ಥಿತಿ ದೇವರಿಗೆ ಪ್ರೀತಿ, 100ಕ್ಕೂ ಅಧಿಕ ಮಕ್ಕಳಿರುವ ಸರ್ಕಾರಿ ಶಾಲೆ ಸಂಪೂರ್ಣ ಬಿರುಕು ಬಿಟ್ಟಿದ್ದು ಮೇಲ್ಚಾವಣಿ ಕುಸಿಯುತ್ತಿದೆ.

ಚಿಕ್ಕಮಗಳೂರಲ್ಲಿ ಸರ್ಕಾರಿ ಶಾಲೆಗಳ ಸ್ಥಿತಿ ಚಿಂತಾಜನಕ; ಮಕ್ಕಳನ್ನು ಕಳಿಸಲು ಪೋಷಕರು ಹಿಂದೇಟು, 2 ವರ್ಷದಲ್ಲಿ 48 ಶಾಲೆಗಳಿಗೆ ಬೀಗ
ಗಾಳಿ ಹಳ್ಳಿ ಕ್ರಾಸ್ ಬಳಿ ಇರುವ ಸರ್ಕಾರಿ ಶಾಲೆ
Follow us on

ಚಿಕ್ಕಮಗಳೂರು, ಜುಲೈ 22: ಸರ್ಕಾರಿ ಶಾಲೆಗಳಲ್ಲಿ(Government Schools) ವಿದ್ಯಾರ್ಥಿಗಳ ಕೊರತೆ ಎಂದು ರಾಜ್ಯ ಸರ್ಕಾರ(Karnataka Government) ಒಂದೊಂದೇ ಸರ್ಕಾರಿ ಶಾಲೆಗಳಿಗೆ ಬೀಗ ಹಾಕಿಸುತ್ತಿದೆ. ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳಿದ್ದರೂ ಮೂಲಭೂತ ಸೌಕರ್ಯಗಳನ್ನ‌ ನೀಡದೆ ವಿದ್ಯಾರ್ಥಿಗಳ ವಿದ್ಯಾಭ್ಯಾಸದ ಜೊತೆ ಚೆಲ್ಲಾಟವಾಡುತ್ತಿದೆ. ಮಳೆ ಬಂದ್ರೆ ಸೋರುವ, ಸಂಪೂರ್ಣ ಕುಸಿಯುವ ಸ್ಥಿತಿಯಲ್ಲಿರುವ ಚಿಕ್ಕಮಗಳೂರು ಜಿಲ್ಲೆಯ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳು(Students) ಸೇರಿದಂತೆ ಶಿಕ್ಷಕರ(Teacher) ಸ್ಥಿತಿ ಚಿಂತಾಜನಕವಾಗಿದೆ.

ಸರ್ಕಾರ ಸರ್ಕಾರಿ ಶಾಲೆಗಳನ್ನ ಉಳಿಸಿ‌ ಅಭಿವೃದ್ಧಿ ಪಡಿಸುವ ಭರವಸೆಯನ್ನ ನೀಡುತ್ತಲೇ ಇದೆ. ಆದ್ರೆ ಭರವಸೆಗಳು ಕಾರ್ಯರೂಪಕ್ಕೆ ಬರುತ್ತಿಲ್ಲ. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತರೀಕೆರೆ ತಾಲೂಕಿನಲ್ಲಿ ಡೇಂಜರಸ್ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳು ಪರದಾಟ ಪಡುತ್ತಿದ್ದಾರೆ. ಮೂಡಿಗೆರೆ ತಾಲೂಕಿನ ಗೌಡಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳಿದ್ರು ಉತ್ತಮ ಕಟ್ಟಡ ಮಾತ್ರ ಇಲ್ಲ. ಮಳೆ ಬಂದ್ರೆ ಸೋರುವ, ಸಂಪೂರ್ಣ ಶಿಥಿಲವಾದ ಕಟ್ಟಡದಲ್ಲೇ ಶಿಕ್ಷಕರು ವಿದ್ಯಾರ್ಥಿಗಳಿಗೆ ಪಾಠ ಮಾಡುವ ಸ್ಥಿತಿ ನಿರ್ಮಾಣವಾಗಿದೆ. ಮಳೆ ಬಂದ್ರೆ ಶಾಲಾ ಮೇಲ್ಚಾವಣಿ ಸೋರುತ್ತಿದ್ದು. ಶಾಲಾ ಕಟ್ಟಡ ಸಂಪೂರ್ಣವಾಗಿ ಕುಸಿಯುವ ಹಂತ ತಲುಪಿದೆ.

ಇದನ್ನೂ ಓದಿ: ಸೋರುತ್ತಿರುವ ಸರ್ಕಾರಿ ಶಾಲೆ ಕೊಠಡಿಗಳು; ಪ್ರಾಣ ಭಯದಲ್ಲಿಯೇ ಪಾಠ ಕೇಳುತ್ತಿರುವ ವಿದ್ಯಾರ್ಥಿಗಳು

ಇನ್ನೂ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಗಾಳಿ ಹಳ್ಳಿ ಕ್ರಾಸ್ ಬಳಿ ಇರುವ ಸರ್ಕಾರಿ ಶಾಲೆಯ ಸ್ಥಿತಿ ದೇವರಿಗೆ ಪ್ರೀತಿ, 100ಕ್ಕೂ ಅಧಿಕ ಮಕ್ಕಳಿರುವ ಸರ್ಕಾರಿ ಶಾಲೆ ಸಂಪೂರ್ಣ ಬಿರುಕು ಬಿಟ್ಟಿದ್ದು ಮೇಲ್ಚಾವಣಿ ಕುಸಿಯುತ್ತಿದೆ. ಈ ಸರ್ಕಾರಿ ಶಾಲೆಯ ಶೌಚಾಲಯ ಕೂಡ ಸಂಪೂರ್ಣ ಶಿಥಿಲವಾಗಿದೆ. ಮಕ್ಕಳಿದ್ರು ಸರಿಯಾದ ಮೂಲಭೂತ ಸೌಕರ್ಯಗಳನ್ನ ನೀಡುವಲ್ಲಿ ಸರ್ಕಾರ, ಚಿಕ್ಕಮಗಳೂರು ಜಿಲ್ಲಾಡಳಿತ ವಿಫಲವಾಗಿದೆ. ಸರ್ಕಾರಿ ಶಾಲೆಗಳ ಇಂತಹ ಸ್ಥಿತಿಯಿಂದ ಪೋಷಕರು ವಿದ್ಯಾರ್ಥಿಗಳನ್ನ ಸರ್ಕಾರಿ ಶಾಲೆಗಳಿಗೆ ಸೇರಿಸಲು ಹಿಂದೇಟು ಹಾಕುತ್ತಿದ್ದು ಇದ್ರಿಂದ ಚಿಕ್ಕಮಗಳೂರು ಜಿಲ್ಲೆಯಾದ್ಯಂತ ವರ್ಷದಿಂದ ವರ್ಷಕ್ಕೆ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುತ್ತಿದೆ.

ಸರ್ಕಾರ ತನ್ನ ತಪ್ಪನ್ನು ಮರೆಮಾಚಿ ವಿದ್ಯಾರ್ಥಿಗಳು‌ ಸರ್ಕಾರಿ ಶಾಲೆಗಳ ಕಡೆ ಮುಖ ಮಾಡುತ್ತಿಲ್ಲ ಎಂದು ಸರ್ಕಾರಿ ಶಾಲೆಗಳಿಗೆ ಬೀಗ ಹಾಕಿಸುತ್ತಿದೆ. ಕಳೆದ ಎರಡು ವರ್ಷಗಳಿಂದ ಚಿಕ್ಕಮಗಳೂರು ಜಿಲ್ಲೆಯಾದ್ಯಂತ 48 ಶಾಲೆಗಳು ಬಾಗಿಲು ಮುಚ್ಚಿದ್ದು ಜಿಲ್ಲೆಯಾದ್ಯಂತ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಕೊರತೆ ಇದೆ. ಸರಿಯಾದ ಕಟ್ಟಡ, ಮೂಲಭೂತ ಸೌಕರ್ಯಗಳನ್ನ ನೀಡದೆ ಪೋಷಕರು, ವಿದ್ಯಾರ್ಥಿಗಳ ವಿರುದ್ಧ ಸರ್ಕಾರ ಆರೋಪ ಮಾಡುತ್ತಿರುವುದು ವಿಪರ್ಯಾಸ.

ಚಿಕ್ಕಮಗಳೂರು ಜಿಲ್ಲೆಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ