
ಹೊಲದಲ್ಲೋ, ಬಯಲು ಖಾಲಿ ಜಾಗದಲ್ಲೋ ಹುತ್ತ (Huge Anthood anthill hutta) ಬೆಳೆಯುವುದನ್ನ ಕೇಳಿದ್ದೇವೆ ನೋಡಿದ್ದೇವೆ! ಆದರೆ ಗರ್ಭಗುಡಿಯ ದೇವರ ಮೂರ್ತಿಯ ಮೇಲೆ ಹುತ್ತ ಬೆಳೆಯುವುದನ್ನು ಎಲ್ಲಾದರೂ ಕೇಳಿದ್ದೀರಾ..! ಇಂಥದೊಂದು ಅಚ್ಚರಿಗೆ ಕಾರಣವಾಗಿದೆ ಈ ಗ್ರಾಮದ ದೇವಾಲಯ. ದಿನೇ ದಿನೇ ಹುತ್ತ ಬೆಳೆಯುತ್ತಿರೋ ಈ ಪರಿ ನೋಡಿ ಗ್ರಾಮಸ್ಥರಿಗೆ ಅಚ್ಚರಿಯ ಮೇಲೆ ಅಚ್ಚರಿ ಅಷ್ಟಕ್ಕೂ ಈ ಪವಾಡಕ್ಕೆ ಸಾಕ್ಷಿಯಾದ ಊರು ಯಾವುದು ನೀವೇ ನೋಡಿ...!

ಹೀಗೆ ಗ್ರಾಮ ದೇವತೆಯ ಮೂರ್ತಿಯ ಮೇಲೆ ಅಚ್ಚರಿ ಎಂಬಂತೆ ಬೆಳೆಯುತ್ತಿರೋ ಹುತ್ತ... ಗ್ರಾಮಸ್ಥರ ಕಣ್ಣೆದುರೆ ನೋಡನೋಡುತ್ತಿದ್ದಂತೆ ದಿನೇ ದಿನೇ ಇಡೀ ದೇವಾಲಯವನ್ನು ಆವರಿಸಿರುವ ಹುತ್ತ. ಗ್ರಾಮದಿಂದ ಹಿಡಿದು ಇಡೀ ಜಿಲ್ಲೆಯಾದ್ಯಂತ ಈ ದೇವರದ್ದೇ ಮಾತು.. ಹೌದು ಇಂಥದೊಂದು ಅಚ್ಚರಿ ಪವಾಡಕ್ಕೆ ಸಾಕ್ಷಿಯಾಗಿದ್ದು ಕಾಫಿ ನಾಡು ಚಿಕ್ಕಮಗಳೂರು (Chikkamagaluru) ಜಿಲ್ಲೆಯ ಕಡೂರು (Kadur) ತಾಲೂಕಿನ ಕುಂದೂರು (Kundur) ಗ್ರಾಮ.

ಕುಂದೂರು ಗ್ರಾಮದ ಕೆಂಪಮ್ಮ ಗರ್ಭಗುಡಿಯ (Goddess Kempamma Devi) ವಿಗ್ರಹದ ಮೇಲೆ ಹುತ್ತಾ ಬೆಳೆಯುತ್ತಿರುವುದು ಸಾವಿರಾರು ಭಕ್ತರ ಅಚ್ಚರಿಗೆ ಕಾರಣವಾಗಿದೆ. ಕಳೆದ ಹಲವು ದಶಕಗಳಿಂದ ಗ್ರಾಮದಲ್ಲಿ ಕೆಂಪಮ್ಮ ದೇವಿಯನ್ನು ಗ್ರಾಮಸ್ಥರು ಭಯ ಭಕ್ತಿಯಿಂದ ಪೂಜಿಸಿಕೊಂಡು ಬರುತ್ತಿದ್ದಾರೆ. ಆದರೆ ಇತ್ತೀಚಿನ ದಿನಗಳಲ್ಲಿ ದೇವರ ಮೂರ್ತಿಯ ಮೇಲೆ ಹಾಗೂ ಇಡೀ ದೇವಾಲಯವನ್ನು ಹುತ್ತ ಆವರಿಸಿರುವುದು ನಿಜಕ್ಕೂ ಪವಾಡ ಎನಿಸಿದೆ.

ಕಳೆದ 15 ವರ್ಷಗಳ ಹಿಂದೆ ಇಂಥದೊಂದು ಘಟನೆ ನಡೆದಿತ್ತು. ಆದರೆ ಇದೀಗ ಮತ್ತೆ ಪುನರಾವರ್ತನೆ ಆಗ್ತಿರೋದು ಕೌತುಕದ ಜೊತೆಗೆ ಭಕ್ತರಲ್ಲಿ ದೇವಿಯ ಮೇಲೆ ಇನ್ನಷ್ಟು ನಂಬಿಕೆ ಮೂಡುವಂತೆ ಮಾಡಿದೆ.

ಇನ್ನು ಕೆಂಪಮ್ಮ ದೇವಿಯ ಮೇಲೆ ಇದ್ದಕ್ಕಿದ್ದಂತೆ ಹುತ್ತ ಬೆಳೆಯುತ್ತಿರುವುದನ್ನು ನೋಡಿದ ಗ್ರಾಮಸ್ಥರು ದೇವಿಯನ್ನು ವಿಸರ್ಜನೆ ಮಾಡಿ ಕಲ್ಲಿನ ವಿಗ್ರಹ ಪ್ರತಿಷ್ಠಾಪಿಸಲು ನಿರ್ಧರಿಸಿದ್ದಾರೆ. ಕಳೆದ ಒಂದೂವರೆ ದಶಕದ ಹಿಂದೆ ಇದೇ ರೀತಿ ದೇವಿಯ ಮೇಲೆ ಉದ್ದುದ್ದ ಹುತ್ತ ಬೆಳೆದ ಪರಿಣಾಮ ದೇವರನ್ನು ವಿಸರ್ಜನೆ ಮಾಡಿ ಮತ್ತೆ ಪುನರ್ ಪ್ರತಿಷ್ಠಾಪಿಸಲಾಗಿತ್ತು.

ಕಳೆದ ಒಂದು ವರ್ಷದಿಂದ ದೇವಿಯ ಎಡಗೈ ಸೇರಿದಂತೆ ವಿವಿಧ ಭಾಗಗಳಲ್ಲಿ ಹುತ್ತ ಗಣನೀಯವಾಗಿ ಬೆಳೆಯುತ್ತಿರುವುದನ್ನು ಕಂಡ ಗ್ರಾಮಸ್ಥರು ನಿಜಕ್ಕೂ ಅಚ್ಚರಿಗೆ ಒಳಗಾಗಿದ್ದಾರೆ. ಇದರಿಂದ ಸುತ್ತಮುತ್ತಲ ಗ್ರಾಮಗಳ ಜನರ ಬಾಯಲ್ಲಿ ಹುತ್ತದ ಕೆಂಪಮ್ಮ ಎಂದೆ ದೇವರು ಹೆಸರು ವಾಸಿಯಾಗಿದೆ. ಜಿಲ್ಲೆ ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಅಚ್ಚರಿಯನ್ನು ಕಣ್ತುಂಬಿಕೊಳ್ಳಲು ದೇವರ ದರ್ಶನ ಮಾಡಲು ಭಕ್ತರು ತಂಡೋಪ ತಂಡವಾಗಿ ಆಗಮಿಸುತ್ತಿದ್ದಾರೆ.


ಒಟ್ಟಾರೆ ವೈಜ್ಞಾನಿಕವೋ ಅಥವಾ ಭಕ್ತರ ನಂಬಿಕೆಯೋ ಗೊತ್ತಿಲ್ಲ. ಅಚ್ಚರಿಯ ಬೆಳವಣಿಗೆಗಂತೂ ಕಡೂರು ತಾಲೂಕಿನ ಕುಂದೂರು ಗ್ರಾಮ ಸಾಕ್ಷಿಯಾಗಿದ್ದು, ಹುತ್ತದ ಬೆಳವಣಿಗೆಯ ಹಿಂದಿನ ಸತ್ಯ ಹಾಗೂ ಸಾವಿರಾರು ಭಕ್ತರ ನಂಬಿಕೆಗೆ ಹುಸಿಯಾಗದಂತೆ ಸಂಬಂಧಪಟ್ಟವರು ಸಾಕ್ಷೀಕರಿಸಬೇಕಿದೆ. ಸದ್ಯ ಕೆಂಪಮ್ಮ ಕಾಫಿ ನಾಡಿನ ಕೇಂದ್ರ ಬಿಂದುವಾಗಿದ್ದು ನೂರಾರು ಭಕ್ತರನ್ನು ಸೆಳೆಯುವಲ್ಲಿ ಹುತ್ತದ ಮಹಿಮೆ ಅಚ್ಚರಿ ಮೂಡಿಸಿದೆ.