ಚಿಕ್ಕಮಗಳೂರಿನಲ್ಲಿ ಹೆಚ್ಚಾಯ್ತು ಕೆಎಫ್​​ಡಿ ಆತಂಕ: 7 ಜನರಿಗೆ ವಕ್ಕರಿಸಿದ ಮಂಗನ ಕಾಯಿಲೆ

ಕಾಫಿನಾಡು ಚಿಕ್ಕಮಗಳೂರಿಗೆ ಮತ್ತೆ ಮಂಗನ ಕಾಯಿಲೆಯ ಭೀತಿ ಆವರಿಸಿದೆ. ಹಗಲಲ್ಲಿ ರಣ ಬಿಸಿಲು, ಸಂಜೆ ಆಗುತ್ತಿದ್ದಂತೆಯೇ ಭಾರೀ ಚಳಿ. ಬೆಳಗಿನ ಜಾವ ಮತ್ತಷ್ಟು ಚಳಿ. ಹವಾಮಾನ ವೈಪರಿತ್ಯಕ್ಕೆ ಜನ ಹೈರಾಣಾಗಿದ್ದಾರೆ. ಈ ಮಧ್ಯೆ ಮಂಗನ ಕಾಯಿಲೆ ಜನರಲ್ಲಿ ಭೀತಿ ಹುಟ್ಟಿಸಿದೆ. ಜಿಲ್ಲೆಯಲ್ಲಿ 7 ಜನ ಸೋಂಕಿತರಾಗಿದ್ದಾರೆ.

ಚಿಕ್ಕಮಗಳೂರಿನಲ್ಲಿ ಹೆಚ್ಚಾಯ್ತು ಕೆಎಫ್​​ಡಿ ಆತಂಕ: 7 ಜನರಿಗೆ ವಕ್ಕರಿಸಿದ ಮಂಗನ ಕಾಯಿಲೆ
ಚಿಕ್ಕಮಗಳೂರು ಜಿಲ್ಲೆಯಲ್ಲಿ ಹೆಚ್ಚಾಯ್ತು ಕೆಎಫ್​​ಡಿ ಆತಂಕ
Updated By: Ganapathi Sharma

Updated on: Feb 04, 2025 | 7:14 AM

ಚಿಕ್ಕಮಗಳೂರು, ಫೆಬ್ರವರಿ 4: ಇನ್ನೇನು ಚಳಿಗಾಲ ಮುಗಿದು ಬೇಸಿಗೆ ಆರಂಭವಾಗುತ್ತಿದೆ. ಬಿಸಿಲ ಬೇಗೆ ಹೆಚ್ಚಾಗುತ್ತಿದ್ದಂತೆಯೇ ಕಾಫಿನಾಡಿಗೆ ಮಹಾಮಾರಿ‌ ಕೆಎಫ್​ಡಿ (ಮಂಗನ ಕಾಯಿಲೆ) ಸದ್ದಿಲ್ಲದೆ ಎಂಟ್ರಿ ಕೊಟ್ಟಿದೆ. ಈ ಮಾರಣಾಂತಿಕ ರೋಗ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ಬಾರಿ ಆರಂಭದಲ್ಲೇ ತೀವ್ರ ಸ್ವರೂಪ ಪಡೆದಿದೆ. ಚಿಕ್ಕಮಗಳೂರು ತಾಲೂಕಿನ ಖಾಂಡ್ಯ ಹೋಬಳಿಯ ಮತ್ತಿಖಂಡ‌ ಗ್ರಾಮದ 25 ವರ್ಷದ ಯುವಕನಲ್ಲಿ ಮೊದಲು ಕೆಎಫ್​ಡಿ ಕಾಣಿಸಿಕೊಂಡಿತ್ತು. ಆ ನಂತರ ಇದೀಗ ಚಿಕ್ಕಮಗಳೂರು ಜಿಲ್ಲೆಯಲ್ಲಿ 7 ಜನರಲ್ಲಿ ಮಂಗನ ಕಾಯಿಲೆ ಕಾಣಸಿಕೊಂಡಿದ್ದು ಆತಂಕ ಸೃಷ್ಟಿ ಮಾಡಿದೆ.

ಎನ್​ಆರ್ ಪುರ ಗ್ರಾಮದ ಮೇಲ್ಪಾಲ್ ಗ್ರಾಮದಲ್ಲೇ ಮೂರು ಜನರಲ್ಲಿ ಕೆಎಫ್​ಡಿ ಕಾಣಿಸಿಕೊಂಡಿದೆ. ಕೊಪ್ಪ ಸರ್ಕಾರಿ ಆಸ್ಪತ್ರೆಯಲ್ಲಿ ಕೆಎಫ್​ಡಿ ವಾರ್ಡ್ ತೆರೆಯಲಾಗಿದೆ. ಕಳೆದ‌ ವರ್ಷ ಚಿಕ್ಕಮಗಳೂರು ಜಿಲ್ಲೆಯಲ್ಲಿ 132 ಜನರಲ್ಲಿ ಕೆಎಫ್​ಡಿ ಕಾಣಿಸಿಕೊಂಡು ನಾಲ್ವರು ಮೃತಪಟ್ಟಿದ್ದರು. ಕಾಡಂಚಿನ ತಾಲೂಕುಗಳಾದ ಚಿಕ್ಕಮಗಳೂರು, ಕೊಪ್ಪ, ಎನ್.ಆರ್.ಪುರ, ಶೃಂಗೇರಿ ತಾಲೂಕುಗಳಲ್ಲಿ ಮಂಗನ ಕಾಯಿಲೆ ತನ್ನ ರುದ್ರರೂಪ ತಾಳುವ ಮುನ್ನವೇ ಅರೋಗ್ಯ ಇಲಾಖೆ ‌ಕೆಎಫ್​ಡಿ ಅಲರ್ಟ್ ಘೋಷಣೆ ಮಾಡಿ‌ದೆ. ಮಂಗನ ಕಾಯಿಲೆ‌ ಪತ್ತೆಯಾಗಿರುವ ಚಿಕ್ಕಮಗಳೂರು ಜಿಲ್ಲೆಯ ಖಾಂಡ್ಯ ಹೋಬಳಿ ಮತ್ತಿಖಂಡ‌ ಗ್ರಾಮದಲ್ಲಿ ಉಣ್ಣೆಗಳನ್ನ ಸಂಗ್ರಹ ಮಾಡಲಾಗಿದ್ದು, ಅರಣ್ಯದಲ್ಲಿ ಮಂಗಗಳು ಸಾವನ್ನಪ್ಪಿರುವ ಕುರಿತು ಮಾಹಿತಿ ಸಂಗ್ರಹ ಮಾಡಲಾಗಿದೆ.

ಗಾಯದ ಮೇಲೆ ಬರೆ ಎಂಬಂತೆ ಮಲೆನಾಡು ಭಾಗದಲ್ಲಿ ಕೆಎಫ್​ಡಿ ಆತಂಕ ಹುಟ್ಟಿಸಿದೆ. ಕಳೆದ ವರ್ಷ ನಾಲ್ವರನ್ನು ಬಲಿ ‌ಪಡೆದಿದ್ದ ಕಾಯಿಲೆ ಇದೀಗ ಮತ್ತೆ ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗದಲ್ಲಿ ರಣಕೇಕೆ ಆರಂಭಿಸಿರುವುದು ಜನರಲ್ಲಿ ಆತಂಕಕ್ಕೆ ಕಾರಣವಾಗಿದೆ.

ಚಿಕ್ಕಮಗಳೂರು ತಾಲೂಕಿನ ಖಾಂಡ್ಯ ಹೋಬಳಿ, ಎನ್​ಆರ್ ಪುರ ತಾಲೂಕಿನ ಮೇಲ್ಪಾಲ್ ಗ್ರಾಮ ಸೇರಿದಂತೆ ಸುತ್ತಮುತ್ತಲಿನ ಗ್ರಾಮದಲ್ಲಿ ಮನೆ ಮನೆಗಳಿಗೆ ತೆರಳಿ ಜಾಗೃತಿ ಮೂಡಿಸುವ ಕೆಲಸವನ್ನು ಆರೋಗ್ಯ ಇಲಾಖೆ ಮಾಡುತ್ತಿದೆ. ಅರಣ್ಯಗಳಿಗೆ ತೆರಳದಂತೆ ಎಚ್ಚರಿಕೆ ನೀಡುತ್ತಿದೆ.

ಇದನ್ನೂ ಓದಿ: ರಾತ್ರೋರಾತ್ರಿ ಕಲ್ಲು ಬಂಡೆಗಳು ಬ್ಲಾಸ್ಟ್: ಹತ್ತಾರು ಮನೆಗಳಿಗೆ ಹಾನಿ, ಪ್ರಾಣಾಪಾಯದಿಂದ ಬಾಣಂತಿ, ಮಗು ಪಾರು

ಕಳೆದ ಏಳೆಂಟು ವರ್ಷಗಳಲ್ಲಿ ತೀವ್ರ ಸ್ವರೂಪದಲ್ಲಿ ಕಾಣಿಸಿಕೊಳ್ಳದ ಮಂಗನ ಕಾಯಿಲೆ 2024 ರಲ್ಲಿ ತನ್ನ ರೌದ್ರ ರೂಪ ತಾಳಿತ್ತು. ಮಲೆನಾಡಿನ ತಾಲೂಕುಗಳಲ್ಲಿ ಜೀವ ಭಯ ತರಿಸಿತ್ತು. ಈ ಮಂಗನ ಕಾಯಿಲೆ ಮಹಾಮಾರಿ ಇದೀಗ ಮತ್ತೆ ಸದ್ದಿಲ್ಲದೆ ವಕ್ಕರಿಸುತ್ತಿದ್ದು, ಜನರು ಬಹಳಷ್ಟು ಜಾಗರೂಕತೆ ವಹಿಸಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ