ಚಿಕ್ಕಮಗಳೂರು: ಗದ್ದೆಗಳಿಗೆ ಬಂದಿದ್ದ ಕಾಡಾನೆಗಳನ್ನ ಓಡಿಸಲು ಹೋಗಿದ್ದ ವ್ಯಕ್ತಿ ನಾಪತ್ತೆಯಾಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಎನ್.ಆರ್ ಪುರ ತಾಲೂಕಿನ ಭೈರಾಪುರ ಗ್ರಾಮದಲ್ಲಿ ನಡೆದಿದೆ.
ನಿನ್ನೆ ರಾತ್ರಿ ಯಶವಂತ್ ಉಳುಮೆ ಮಾಡಿದ ಗದ್ದೆಗಳಿಗೆ ಕಾಡಾನೆಗಳು ದಾಳಿ ಮಾಡಿದ್ದವು. ಈ ವೇಳೆ ಕಾಡಾನೆಗಳನ್ನ ಓಡಿಸಲು ಯಶವಂತ್ ಹಾಗೂ ಪಕ್ಕದ ಮನೆಯ ಹರೀಶ್ ಎಂಬುವವರು ಹೋಗಿದ್ದಾರೆ. ಇವರಿಬ್ಬರನ್ನ ನೋಡಿದ ಕಾಡಾನೆಗಳು ಘೀಳಿಡುತ್ತಾ ಓಡಿಸಿಕೊಂಡು ಬಂದಿವೆಯಂತೆ. ಈ ಸಂದರ್ಭದಲ್ಲಿ ಹರೀಶ್ ಊರಿನ ಕಡೆ ಮುಖ ಮಾಡಿ ಓಡಿಬಂದ್ರೆ, ಇನ್ನೊಂದೆಡೆ ಕಾಡಾನೆಗಳು ತನ್ನ ಮೇಲೆ ದಾಳಿ ಮಾಡಲು ಬಂದಾಗ ಅರಣ್ಯ ಪ್ರದೇಶದ ಕಡೆಗೆ ಯಶವಂತ್ ಓಡಿಹೋಗಿದ್ದಾರೆ. ನಿನ್ನೆ ಮಧ್ಯರಾತ್ರಿ ಅರಣ್ಯ ಪ್ರದೇಶದ ಕಡೆಗೆ ಓಡಿ ಹೋದ ಯಶವಂತ್ ಇಂದು ಮಧ್ಯಾಹ್ನದವರೆಗೂ ಪತ್ತೆಯಾಗಿಲ್ಲ. ಅರಣ್ಯ ಇಲಾಖೆಯವರಿಗೆ ಸುದ್ದಿ ಮುಟ್ಟಿಸಿದ್ರೂ ಯಾರೂ ಕೂಡ ಸ್ಪಂದಿಸುತ್ತಿಲ್ಲ ಅಂತಾ ಸ್ಥಳೀಯರು ಆರೋಪಿಸಿದ್ದಾರೆ.
ಆನೆ ಕಾಟ ತಪ್ಪಿದ್ದಲ್ಲ, ಅರಣ್ಯ ಇಲಾಖೆಯ ಡೋಂಟ್ ಕೇರ್ ಪ್ರವೃತ್ತಿ
ಕಾಡಾನೆಗಳು ಈ ರೀತಿ ಊರಿಗೆ ದಾಂಗುಡಿ ಇಡೋದು ಸರ್ವೇ ಸಾಮಾನ್ಯ. ಮುತ್ತಿನಕೊಪ್ಪ, ಬೈರಾಪುರ ಸೇರಿದಂತೆ ಅಕ್ಕಪಕ್ಕದ ಹಳ್ಳಿಯ ರೈತರು ಆನೆ ದಾಳಿಯಿಂದ ಪ್ರತಿವರ್ಷ ಬೆಳೆಗಳನ್ನ ಕಳೆದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಅಡಿಕೆ, ಭತ್ತ, ಮೆಣಸು, ಬಾಳೆ ಬೆಳಗಳು ಪ್ರತಿವರ್ಷ ಕಾಡಾನೆಗಳ ದಾಳಿಗೆ ತುತ್ತಾಗುತ್ತಿವೆ. ಕಾಡಾನೆಗಳ ಕಾಟ ತಪ್ಪಿಸಿ ಅಂತಾ ಅರಣ್ಯ ಇಲಾಖೆಗೆ ರೈತರು ಮನವಿ ಮಾಡಿದ್ರೂ ಯಾವುದೇ ಪ್ರಯೋಜನವಾಗಿಲ್ಲ. ರಾತ್ರಿಯಿಡೀ ಕಾಡಾನೆಗಳನ್ನ ಓಡಿಸೋದೇ ಸ್ಥಳೀಯರಿಗೆ ದೊಡ್ಡ ಸಮಸ್ಯೆಯಾಗಿದೆ. ನಿನ್ನೆ ಕೂಡ ಕಾಡಾನೆಗಳನ್ನ ಓಡಿಸಲು ಹೋದಾಗ ವ್ಯಕ್ತಿ ನಾಪತ್ತೆಯಾಗಿರೋದು ಯಶವಂತ್ ಕುಟುಂಬಸ್ಥರನ್ನ ಸೇರಿದಂತೆ ಸ್ಥಳೀಯರಲ್ಲಿ ಆತಂಕ ಮನೆ ಮಾಡಿದೆ.
ಕಾಡಾನೆಗಳು ನಾಡಿಗೆ ಬಾರದಂತೆ ಈಗಾಗಲೇ ಅರಣ್ಯದಂಚಿನಲ್ಲಿ ಟ್ರಂಚ್ ನಿರ್ಮಿಸಲು ಹಣ ಬಿಡುಗಡೆಯಾಗಿದೆ. ಆದರೆ ಅರಣ್ಯ ಇಲಾಖೆಯವರು ಇಲ್ಲಿಯವರೆಗೆ ಟ್ರಂಚ್ ನಿರ್ಮಿಸಿಲ್ಲ ಅಂತಾ ಸ್ಥಳೀಯರು ಆರೋಪಿಸಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ರೈತರು ಬೆಳೆಗಳನ್ನ ಬೆಳೆಯದಂತ ಪರಿಸ್ಥಿತಿ ನಿರ್ಮಾಣವಾಗಿದೆ. ಕಾಡಿನಂಚಿನಲ್ಲಿ ದೊಡ್ಡ ದೊಡ್ಡ ಟ್ರಂಚ್ಗಳನ್ನ ನಿರ್ಮಿಸಿದ್ರೆ ನಾಡಿಗೆ ಕಾಡಾನೆಗಳು ಎಂಟ್ರಿ ಕೊಡುವುದಿಲ್ಲ. ರೈತರು ಬೆಳಗಳನ್ನ ಉಳಿಸಿಕೊಳ್ಳಬಹುದು, ನಿರ್ಭೀತಿಯಿಂದ ತೋಟ-ಗದ್ದೆಗಳಲ್ಲಿ ಕೆಲಸ ಮಾಡಬಹುದು. ಓಡಾಟ ಕೂಡ ನಡೆಸಬಹುದು. ಆದ್ರೆ ಇದೀಗ ಅರಣ್ಯ ಇಲಾಖೆ ಮಾಡಿರೋ ಯಡವಟ್ಟಿನಿಂದ ನಾವು ಬೆಳೆಗಳನ್ನ ಕಳೆದುಕೊಳ್ಳುವ ಹಾಗಾಗಿದೆ ಅಂತಾ ಸ್ಥಳೀಯರಾದ ದೇವತ್ ಗೌಡ ತಿಳಿಸಿದ್ದಾರೆ.
ಇದನ್ನೂ ಓದಿ: ನಟ ಸೋನು ಸೂದ್ ಮೇಲೆ ತೆರಿಗೆ ವಂಚನೆ ಆರೋಪ; ಕಡೆಗೂ ಮೌನ ಮುರಿದ ‘ರಿಯಲ್ ಹೀರೋ’