ಚಿಕ್ಕಮಗಳೂರು, ಸೆ.11: ಮೆಸ್ಕಾಂ ಅಧಿಕಾರಿಗಳ ಎಡವಟ್ಟಿಗೆ ಗ್ರಾಹಕರು ಕಂಗಾಲಾದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಡೂರು ಪಟ್ಟಣದಲ್ಲಿ ನಡೆದಿದೆ. ಪಟ್ಟಣದ ಮೋಹಿತ್ ಎಂಬುವವರಿಗೆ ಪ್ರತಿ ತಿಂಗಳು 5 ಸಾವಿರದವರೆಗೆ ವಿದ್ಯುತ್ ಬಿಲ್ ಬರುತ್ತಿತ್ತು(Electricity Bill). ಆದರೆ ಈ ಬಾರಿಯ ಆಗಸ್ಟ್ ತಿಂಗಳ ಬಿಲ್ ಬರೋಬ್ಬರಿ 10 ಲಕ್ಷ ಬಂದಿದೆ. ವಿದ್ಯುತ್ ಬಿಲ್ ನೋಡಿ ಮೋಹಿತ್ ಶಾಕ್ ಆಗಿದ್ದು ತಲೆ ಮೇಲೆ ಕೈ ಹೊತ್ತು ಕೂರುವಂತಾಗಿದೆ. ಸದ್ಯ ಈ ಬಗ್ಗೆ ಮೆಸ್ಕಾಂ(Mescom) ಅಧಿಕಾರಿಗಳಿಗೆ ದೂರು ಸಲ್ಲಿಸಲಾಗಿದೆ.
ಆಗಸ್ಟ್ 1 ರಿಂದ ಸೆಪ್ಟೆಂಬರ್ 1ರವರೆಗೆ ಒಂದು ತಿಂಗಳ ಕರೆಂಟ್ ಬಿಲ್ 10 ಲಕ್ಷ ರೂಪಾಯಿ ಬಂದಿದ್ದು ಅಂಗಡಿ ಮಾಲೀಕ ಶಾಕ್ ಆಗಿದ್ದಾರೆ. ಕಡೂರು ಪಟ್ಟಣದ ಉಳುಕಿನಕಲ್ಲು ಸಮೀಪದ ಡಾಗಾ ಕಾಂಪ್ಲೆಕ್ಸ್ನಲ್ಲಿನ ಮೋಹಿತ್ ಏಜೆನ್ಸಿಗೆ ಆಗಸ್ಟ್ ತಿಂಗಳ ವಿದ್ಯುತ್ ಬಿಲ್ 10,26,054 ರೂಪಾಯಿ ಬಂದಿದೆ. ಪ್ರತಿ ತಿಂಗಳು ವಿದ್ಯುತ್ ಬಿಲ್ ಅಂದಾಜು 4,000 ಸಾವಿರದಿಂದ 4,500 ರೂಗಳು ಮಾತ್ರ ಬರುತ್ತಿತ್ತು. ಆಗಸ್ಟ್ ತಿಂಗಳ ಬಿಲ್ ಏಕಾಏಕಿ 10 ಲಕ್ಷ ಬಂದಿದೆ. ಬಿಲ್ ಅವಧಿ 1/8/2023 ರಿಂದ 1/9/23ರವರೆಗೆ ಎಂದು ನಮೂದಿಸಲಾಗಿದೆ.
ಇದನ್ನೂ ಓದಿ: ಅಯ್ಯೋ ಶಿವನೇ! ಮನೆ ಹೊರಗಡೆ ನಿಂತು ವಿದ್ಯುತ್ ಬಿಲ್ ಕೇಳಿದ್ದಕ್ಕೆ ಮೀಟರ್ ರೀಡರ್ ಮೇಲೆ ಹಲ್ಲೆ
ಬಿಲ್ ನಂ.259 ಆಗಿದ್ದು 8,35,737 ಬಿಲ್ ಎಫ್‍ಪಿಪಿಎಸಿ (1.16) ಟ್ಯಾಕ್ಸ್ 0.9% (75,216.33 ರೂಗಳು) ಒಟ್ಟು 10,260,54 ರೂ ಬಿಲ್ ಅನ್ನು ನೀಡಲಾಗಿದೆ. ಈ ಹಿಂದೆ ವಿದ್ಯುತ್ ಬಿಲ್ ಅನ್ನು ಸಮಯಕ್ಕೆ ಸರಿಯಾಗಿ ಪಾವತಿಸುತ್ತಾ ಬಂದಿದ್ದೇವೆ. ಯಾವ ತಿಂಗಳು ಕೂಡ ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿಲ್ಲ. ಆದರೆ, ಈ ತಿಂಗಳು 10 ಲಕ್ಷ ಬಿಲ್ ನೋಡಿ ಕಡೂರು ಮೆಸ್ಕಾಂ ಅಧಿಕಾರಿಗಳನ್ನು ಸಂಪರ್ಕಿಸಿದ್ದಾರೆ. ಅವರು ಸರಿ ಮಾಡಿಕೊಡುತ್ತೇವೆ ಎಂದು ಭರವಸೆ ನೀಡಿದ್ದಾರೆ. ಮೆಸ್ಕಾಂ ಸಿಬ್ಬಂದಿ ಹೇಳಿ 4 ದಿನವಾದರೂ ಈವರೆಗೂ ಯಾವುದೇ ಮಾಹಿತಿ ನೀಡಿಲ್ಲ ಎಂದು ಅಂಗಡಿ ಮಾಲೀಕ ಕಮಲ್ ಚಂದ್ ಡಾಗಾ ಹಾಗೂ ಮೊಹೀತ್ ಡಾಗಾ ಮೆಸ್ಕಾಂ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. 500 ರೂಪಾಯಿ ಬರುವ ಜಾಗದಲ್ಲಿ 15 ಸಾವಿರ ಬಂದಿದೆ. ಇದು ಸಾಫ್ಟ್‍ವೇರ್ ಪ್ರಾಬ್ಲಂ. ಈ ಬಗ್ಗೆ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಮೆಸ್ಕಾಂ ಸಿಬ್ಬಂದಿಗಳು ತಿಳಿಸಿದ್ದಾರೆ.
ಚಿಕ್ಕಮಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ