ಮೂಡಿಗೆರೆ: ಕಾಂಗ್ರೆಸ್​ನಲ್ಲಿ ಭಿನ್ನಮತ ಸ್ಫೋಟ, ಮಾಜಿ ಸಚಿವೆ ಮೋಟಮ್ಮ ಪುತ್ರಿಯ ವಿರುದ್ಧ ಆಕ್ರೋಶ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Nov 02, 2022 | 1:24 PM

ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ನಯನಾಗೆ ಟಿಕೆಟ್​ ನೀಡಬಾರದು ಎಂದು ಕಾಂಗ್ರೆಸ್ ಮುಖಂಡರು ಕಾರ್ಯಕರ್ತರು ಸಭೆಯಲ್ಲಿ ಆಗ್ರಹಿಸಿದರು.

ಮೂಡಿಗೆರೆ: ಕಾಂಗ್ರೆಸ್​ನಲ್ಲಿ ಭಿನ್ನಮತ ಸ್ಫೋಟ, ಮಾಜಿ ಸಚಿವೆ ಮೋಟಮ್ಮ ಪುತ್ರಿಯ ವಿರುದ್ಧ ಆಕ್ರೋಶ
ಮೂಡಿಗೆರೆ ಕ್ಷೇತ್ರದ ವಸ್ತಾರೆಯಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆ (ಎಡಚಿತ್ರ). ನಯನಾ ಮೋಟಮ್ಮ (ಬಲಚಿತ್ರ)
Follow us on

ಚಿಕ್ಕಮಗಳೂರು: ಜಿಲ್ಲೆಯ ಮೂಡಿಗೆರೆ ಕಾಂಗ್ರೆಸ್ ಘಟಕದಲ್ಲಿ (Congress Party) ಭಿನ್ನಮತ ಸ್ಫೋಟಗೊಂಡಿದೆ. ಮಾಜಿ ಸಚಿವೆ ಮೋಟಮ್ಮ ಪುತ್ರಿ ನಯನಾ (Nayana Motamma) ವಿರುದ್ಧ ಕಾಂಗ್ರೆಸ್ ಮುಖಂಡರು ಅಸಮಾಧಾನ ಹೊರಹಾಕಿದ್ದಾರೆ. ಮೂಡಿಗೆರೆ ವಿಧಾನಸಭಾ ಕ್ಷೇತ್ರದ ವಸ್ತಾರೆ ಗ್ರಾಮದಲ್ಲಿ ನಡೆದ ಕಾಂಗ್ರೆಸ್ ಮುಖಂಡರ ಸಭೆಯಲ್ಲಿ ಹಲವು ಮುಖಂಡರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ನಯನಾಗೆ ಟಿಕೆಟ್​ ನೀಡಬಾರದು ಎಂದು ಆಗ್ರಹಿಸಿದರು.

ಜಿಲ್ಲಾ ಪಂಚಾಯಿತಿಯ ಮಾಜಿ ಸದಸ್ಯರು, ಗ್ರಾಮ ಪಂಚಾಯಿತಿ ಸದಸ್ಯರು ಸಭೆಯಲ್ಲಿ ಪಾಲ್ಗೊಂಡಿದ್ದರು. ಕಳೆದ ವಾರವೂ ಸ್ಥಳೀಯ ಮುಖಂಡರು ಸಭೆ ನಡೆಸಿ ಮೋಟಮ್ಮ ಪುತ್ರಿ ನಯನಾಗೆ ಟಿಕೆಟ್ ಕೊಡಬಾರದು ಎಂದು ಆಗ್ರಹಿಸಿದ್ದರು. ಮೋಟಮ್ಮಗೆ ಟಿಕೆಟ್ ಕೊಟ್ಟರೆ ಕಾಂಗ್ರೆಸ್ ಅಭ್ಯರ್ಥಿ ಸೋಲುವುದು ಖಚಿತ ಎಂದು ಅವರು ಎಚ್ಚರಿಸಿದ್ದರು. ಮುಂದಿನ ದಿನಗಳಲ್ಲಿ ಈ ಕುರಿತು ಕೆಪಿಸಿಸಿಗೆ ಮನವಿ ನೀಡಲಾಗುವುದು ಎಂದು ಅವರು ತಿಳಿಸಿದರು.

ಮೋಟಮ್ಮ ಅವರನ್ನೇ ಕ್ಷೇತ್ರದ ಜನರು ಒಪ್ಪುತ್ತಿಲ್ಲ, ಇನ್ನು ನಯನ ಅವರನ್ನು ಒಪ್ಪುವುದು ದೂರದ ಮಾತು. ಕ್ಷೇತ್ರದಲ್ಲಿ ಐದು ಬಾರಿ ಸೋಲು ಕಂಡಿರುವ ಮೋಟಮ್ಮ ನಾನು ರಾಜಕೀಯದಿಂದ ನಿವೃತ್ತಿಯಾಗಿದ್ದೇನೆ ಎಂದಿದ್ದಾರೆ. ಅವರ ಮಗಳಿಗೆ ಟಿಕೆಟ್ ನೀಡಿದರೆ ಕಾಂಗ್ರೆಸ್ ಪಕ್ಷ ಸೋಲುವುದು ಗ್ಯಾರಂಟಿ ಎಂದು ಹಲವರು ಬಹಿರಂಗವಾಗಿ ಅಸಮಾಧಾನ ಹೊರಹಾಕಿದರು. ಈ ಬಾರಿ ಕ್ಷೇತ್ರದಲ್ಲಿ ಹೊಸಬರಿಗೆ ಅವಕಾಶ ನೀಡಬೇಕು ಎಂದು ಕಾರ್ಯಕರ್ತರು ಒತ್ತಾಯಿಸಿದರು.

ಕಳೆದ 2018ರ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿಯೂ ಮೂಡಿಗೆರೆ ಕ್ಷೇತ್ರದಿಂದ ಮೋಟಮ್ಮ ಅವರಿಗೆ ಅವಕಾಶ ನೀಡಬಾರದು ಎಂದು ಹಲವು ಆಕ್ರೋಶ ವ್ಯಕ್ತಪಡಿಸಿದ್ದರು. ಆದರೂ ಕಾಂಗ್ರೆಸ್ ಹೈಕಮಾಂಡ್ ಮೋಟಮ್ಮ ಅವರಿಗೆ ಟಿಕೆಟ್ ನೀಡಿತ್ತು. 46,271 ಮತ ಪಡೆದಿದ್ದ ಮೋಟಮ್ಮ ಸೋಲನುಭವಿಸಿದ್ದರು. ಜೆಡಿಎಸ್ ಅಭ್ಯರ್ಥಿ ಬಿ.ಬಿ.ನಿಂಗಯ್ಯ 22,063 ಮತಗಳನ್ನು ಪಡೆದಿದ್ದರು. ಹಾಲಿ ಶಾಸಕ ಬಿಜೆಪಿಯ ಎಂ.ಪಿ.ಕುಮಾರಸ್ವಾಮಿ 58,783 ಮತಗಳನ್ನು ಪಡೆದು ಜಯಗಳಿಸಿದ್ದರು. ಈ ಬಾರಿಯೂ ಬಿಜೆಪಿಯಿಂದ ಕುಮಾರಸ್ವಾಮಿ ಅವರೇ ಮೂಡಿಗೆರೆಯಲ್ಲಿ ಸ್ಪರ್ಧಿಸಬಹುದು ಎಂಬ ಮಾತುಗಳು ಪ್ರಬಲವಾಗಿವೆ.