ಮೂಡಗೆರೆ: ಕಾಡಾನೆ ಸೆರೆ ಹಿಡಿಯುವಂತೆ ಅರಣ್ಯ ಇಲಾಖೆ ಎದುರು ಗ್ರಾಮಸ್ಥರ ಪ್ರತಿಭಟನೆ; ಲಾಠಿ ಚಾರ್ಜ್​

| Updated By: ವಿವೇಕ ಬಿರಾದಾರ

Updated on: Sep 09, 2022 | 4:35 PM

ಮೂಡಿಗೆರೆ ತಾಲೂಕಿನ ಊರುಬಗೆ ಗ್ರಾಮದಲ್ಲಿ ಕಾಡಾನೆ ದಾಳಿಗೆ ಕೂಲಿ ಕಾರ್ಮಿಕ ಸಾವನ್ನಪ್ಪಿದ್ದಾನೆ.

ಮೂಡಗೆರೆ: ಕಾಡಾನೆ ಸೆರೆ ಹಿಡಿಯುವಂತೆ ಅರಣ್ಯ ಇಲಾಖೆ ಎದುರು ಗ್ರಾಮಸ್ಥರ ಪ್ರತಿಭಟನೆ; ಲಾಠಿ ಚಾರ್ಜ್​
ಲಾಠಿ ಚಾರ್ಜ್​
Follow us on

ಚಿಕ್ಕಮಗಳೂರು: ಮೂಡಿಗೆರೆ ತಾಲೂಕಿನ ಊರುಬಗೆ ಗ್ರಾಮದಲ್ಲಿ ಕಾಡಾನೆ (Elephant) ದಾಳಿಗೆ ಕೂಲಿ ಕಾರ್ಮಿಕ ಸಾವನ್ನಪ್ಪಿದ್ದಾನೆ. ಅರ್ಜುನ್ (45) ಮೃತ ದುರ್ದೈವಿ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ರಾಮಸ್ತರು ಕಾಡಾನೆಗಳನ್ನು ಹಿಡಿಯುವಂತೆ ಆಗ್ರಹಿಸಿ ಅರಣ್ಯ ಇಲಾಖೆ (Forest Department) ಎದುರು ಕಾರ್ಮಿಕನ ಮೃತದೇಹವಿಟ್ಟು ಪ್ರತಿಭಟನೆ ಮಾಡಿದ್ದಾರೆ.

ಈ ವೇಳೆ ಪ್ರತಿಭಟನಾಕಾರರು ಅರಣ್ಯ ಇಲಾಖೆಗೆ ಮುತ್ತಿಗೆ ಹಾಕಲು ಯತ್ನಿಸಿ, ಪೊಲೀಸ್​ ಜೀಪ್​​​ ತಳ್ಳಾಡಿದ್ದಾರೆ. ಆಗ ಮೂಡಿಗೆರೆ ಟೌನ್ ಪೊಲೀಸರು ಲಾಠಿಚಾರ್ಜ್​ ಮಾಡಿ ಪ್ರತಿಭಟನಾಕಾರರನ್ನು ಚದುರಿಸಿದ್ದಾರೆ. ಪೊಲೀಸರು ಪ್ರತಿಭಟನಾಕಾರರನ್ನು ಮನಸೋಇಚ್ಛೆ ಥಳಿಸಿದ್ದಾರೆ. ಪೊಲೀಸರಿಂದ ಲಾಠಿ ಚಾರ್ಜ್ ವಿರೋಧಿಸಿ ಜನರು ಮತ್ತೆ ಪ್ರತಿಭಟನೆ ಮಾಡಿದ್ದಾರೆ. ಕೊನೆಗೆ ಪ್ರತಿಭಟನಾಕಾರರ ಒತ್ತಾಯಕ್ಕೆ ಮಣಿದು ಅರಣ್ಯ ಇಲಾಖೆ ಕಾಡಾನೆ ಸೆರೆ ಹಿಡಿಯುವಂತೆ ಆದೇಶ ನೀಡಿದೆ.

ಭಾರಿ ಮಳೆಗೆ ಮುಳುಗಿದ ಸ್ಮಶಾನ: ಅಂತ್ಯಸಂಸ್ಕಾರಕ್ಕೆ ಜಾಗವಿಲ್ಲದೆ 2 ದಿನ ಮನೆಯಲ್ಲೇ ಉಳಿದ ಮೃತದೇಹ

ಜಿಲ್ಲೆಯಲ್ಲಿ ಭಾರೀ ಮಳೆಯಿಂದಾಗಿ (Rain) ಅವಾಂತರಗಳು ಸೃಷ್ಟಿಯಾಗಿದ್ದು, ಮೃತವ್ಯಕ್ತಿಯ ಶವವನ್ನು ಸ್ಮಶಾನಕ್ಕೆ ಕೊಂಡೊಯ್ಯಲು ದಾರಿ ಇಲ್ಲದೆ ಎರಡು ದಿನಗಳ ಕಾಲ ಮನೆಯಲ್ಲೇ ಇಟ್ಟುಕೊಂಡಿರುವಂತಹ ಘಟನೆ ಜಿಲ್ಲೆಯ ಕಡೂರು ತಾಲೂಕಿನ ದೇವನೂರು ಸಮೀಪದ ಎಸ್.ಬೊಮ್ಮೇನಹಳ್ಳಿಯಲ್ಲಿ ನಡೆದಿದೆ. ಪ್ರಮೋದ್(55) ಮೃತಪಟ್ಟಿರುವ ವ್ಯಕ್ತಿ. ಮೃತದೇಹವನ್ನು ಸ್ಮಶಾನಕ್ಕೆ ಕೊಂಡೊಯ್ಯಲು ದಾರಿ ಇಲ್ಲದೆ ಜನ ಪರದಾಡಿದ್ದು, ಎರಡು ದಿನಗಳ ಬಳಿಕ ಅಂತ್ಯಸಂಸ್ಕಾರ ಮಾಡಿದ್ದಾರೆ. ಕಡೂರು ತಾಲೂಕಿನ ಚಿಕ್ಕ ದೇವನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಸ್. ಬೊಮ್ಮನಹಳ್ಳಿಯಲ್ಲಿ ಬಹಳ ವರ್ಷಗಳ ನಂತರ ದೇವನೂರು ಕೆರೆ ತುಂಬಿದ್ದು, ಅಪಾರ ಪ್ರಮಾಣದ ನೀರು ಹರಿದು ಹೋಗುತ್ತಿತ್ತು. ಹೀಗಾಗಿ ಈ ಗ್ರಾಮದಿಂದ ಸ್ಮಶಾನಕ್ಕೆ ಹೋಗುವ ದಾರಿ ಕೂಡ ನೀರಿನಿಂದ ಜಲಾವೃತವಾಗಿದ್ದು, ಮೃತದೇಹ ಕೊಂಡೊಯ್ಯಲು ಸಾಧ್ಯವಾಗದಿರುವುದರಿಂದ ಎರಡು ದಿನಗಳ ಕಾಲ ಶವವಿಟ್ಟು ಕಾದಿದ್ದಾರೆ.

ಎರಡು ದಿನದ ಬಳಿಕ ನೀರು ಸ್ವಲ್ಪ ಕಡಿಮೆಯಾದ ನಂತರ ನೀರಲ್ಲೇ ಶವವನ್ನು ಸ್ಮಶಾನಕ್ಕೆ ಗ್ರಾಮಸ್ಥರು ತೆಗೆದುಕೊಂಡು ಹೋಗಿದ್ದಾರೆ. ದೇವರು ವರ ಕೊಟ್ಟರು, ಪೂಜಾರಿ ವರ ಕೊಡಲಿಲ್ಲ ಎನ್ನುವ ಹಾಗೆ, ವಶ ಹೊಳಲು ಗುಂಡಿ ತೆಗೆದರೂ ಬರೀ ನೀರೇ ಬಂದಿದ್ದು, ಹೀಗಾಗಿ ಶವಸಂಸ್ಕಾರ ಮಾಡಲು ಗ್ರಾಮಸ್ಥರು ಪರದಾಡಿದ್ದಾರೆ. ಬಳಿಕ ಸ್ವಲ್ಪ ಎತ್ತರದ ಭಾಗದಲ್ಲಿ ಗುಂಡಿ ತೆಗೆದು ಅಲ್ಲಿ ಮೃತರ ಅಂತ್ಯಕ್ರಿಯೆ ಮಾಡಲಾಗಿದೆ.

ಈ ಸಮಸ್ಯೆ ಇಂದು-ನಿನ್ನೆಯದ್ದಲ್ಲ. ಕಳೆದ ಸುಮಾರು ವರ್ಷಗಳಿಂದಲೂ ಇದೇ ಸಮಸ್ಯೆ ಇದ್ದು, ಜನಪ್ರತಿನಿಧಿಗಳ ಬಳಿ ಹಲವು ಬಾರಿ ಈ ಸಮಸ್ಯೆ ಬಗ್ಗೆ ಹೇಳಿಕೊಂಡರೂ ಯಾವುದೇ ಪ್ರಯೋಜನವಾಗಿಲ್ಲ. ಸರ್ಕಾರ ಹಾಗೂ ಅಧಿಕಾರಿಗಳ ಬೇಜವಾಬ್ದಾರಿಯಿಂದ ಬೆಸತ್ತು ಸ್ಥಳೀಯರು ಆಕ್ರೋಶ ಹೊರಹಾಕಿದರು.

ರಾಜ್ಯದ ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 4:29 pm, Fri, 9 September 22