ಕೆಫೆ ಸ್ಫೋಟ ಪ್ರಕರಣ: ಆರೋಪಿ ಮುಜಾಮಿಲ್​ ಜೊತೆ ಪೊಲೀಸಪ್ಪನ ಲಿಂಕ್? ಬಾಡಿಗೆ ಮನೆ ಕೊಡಿಸಿದ್ದ ಮಂಗಳೂರಿನ ಇನ್​ಸ್ಪೆಕ್ಟರ್

ಬೆಂಗಳೂರು ನಗರದ ವೈಟ್​ಫೀಲ್ಡ್ ಬಳಿಯ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣ ಸಂಬಂಧ ಎನ್​ಐಎ ತೀವ್ರ ತನಿಖೆ ನಡೆಸುತ್ತಿದ್ದು, ಒಂದೊಂದೇ ವಿಚಾರಗಳು ಬಹಿರಂಗವಾಗುತ್ತಿದೆ. ಇದೀಗ ಮತ್ತೊಂದು ಸ್ಫೋಟಕ ವಿಚಾರ ಬಯಲಾಗಿದೆ. ಪ್ರಮುಖ ಆರೋಪಿ ಮುಜಾಮಿಲ್​ ಒಬ್ಬ ಪೊಲೀಸ್ ಇನ್​ಸ್ಪೆಕ್ಟರ್​ ಜೊತೆ ಸಂಪರ್ಕದಲ್ಲಿದ್ದ ವಿಚಾರ ಎನ್​ಐಎಗೆ ತಿಳಿದುಬಂದಿದ್ದು, ತನಿಖೆ ಚುರುಕುಗೊಂಡಿದೆ.

ಕೆಫೆ ಸ್ಫೋಟ ಪ್ರಕರಣ: ಆರೋಪಿ ಮುಜಾಮಿಲ್​ ಜೊತೆ ಪೊಲೀಸಪ್ಪನ ಲಿಂಕ್? ಬಾಡಿಗೆ ಮನೆ ಕೊಡಿಸಿದ್ದ ಮಂಗಳೂರಿನ ಇನ್​ಸ್ಪೆಕ್ಟರ್
ಆರೋಪಿ ಮುಜಾಮಿಲ್​ಗೆ ಚಿಕ್ಕಮಗಳೂರಿನಲ್ಲಿ ಬಾಡಿಗೆ ಮನೆ ಕೊಡಿಸಿದ್ದ ದ.ಕ. ಜಿಲ್ಲೆಯ ಪೊಲೀಸ್ ಇನ್​ಸ್ಪೆಕ್ಟರ್
Updated By: Rakesh Nayak Manchi

Updated on: Mar 31, 2024 | 4:42 PM

ಚಿಕ್ಕಮಗಳೂರು, ಮಾ.31: ಬೆಂಗಳೂರು ನಗರದ ವೈಟ್​ಫೀಲ್ಡ್ ಬಳಿಯ ರಾಮೇಶ್ವರಂ ಕೆಫೆ (Rameshwram Cafe) ಬಾಂಬ್ ಸ್ಫೋಟ ಪ್ರಕರಣ ಸಂಬಂಧ ಎನ್​ಐಎ (NIA) ತೀವ್ರ ತನಿಖೆ ನಡೆಸುತ್ತಿದ್ದು, ಒಂದೊಂದೇ ವಿಚಾರಗಳು ಬಹಿರಂಗವಾಗುತ್ತಿದೆ. ಇದೀಗ, ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯಲ್ಲಿ ಕರ್ತವ್ಯದಲ್ಲಿರುವ ಪೊಲೀಸ್ ಇನ್​ಸ್ಪೆಕ್ಟರ್ ಜೊತೆ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಮುಜಾಮಿಲ್ ಸಂಪರ್ಕದಲ್ಲಿದ್ದ ಎನ್ನುವ ಸ್ಫೋಟಕ ವಿಚಾರ ಬಹಿರಂಗವಾಗಿದೆ. ಅಲ್ಲದೆ, ಎನ್​ಐಎ ತನಿಖೆ ಮತ್ತಷ್ಟು ಚುರುಕುಗೊಂಡಿದೆ.

ತುಂಗಾ ತೀರದ ಟ್ರಯಲ್ ಬ್ಲಾಸ್ಟ್, ಮಂಗಳೂರು ಕುಕ್ಕರ್ ಬ್ಲಾಸ್ಟ್ , ರಾಮೇಶ್ವರಂ ಬ್ಲಾಸ್ಟ್ ಪ್ರಕರಣ ಸಂಬಂಧ ಎನ್​ಐಎ ತನಿಖಾಧಿಕಾರಿಗಳು ಮಾಹಿತಿ ಕಲೆ‌ಹಾಕುತ್ತಿದ್ದಾರೆ. ತಲೆಮರೆಸಿಕೊಂಡಿರುವ ಅಬ್ದುಲ್ ಮತೀನ್ ತಾಹ ಈ ಮೂರು ಸ್ಫೋಟ ಪ್ರಕರಣಗಳ ಹ್ಯಾಂಡ್ಲರ್ ಆಗಿದ್ದಾನೆ.

ಸದ್ಯ ಎನ್​ಐಎ ಅಧಿಕಾರಿಗಳು ಹ್ಯಾಂಡ್ಲರ್ ತಾಹ ಮತ್ತು ಬಾಂಬರ್ ಜೊತೆ ಸಂಪರ್ಕದಲ್ಲಿದ್ದ ಬಂಧಿತ ಆರೋಪಿ ಮುಜಾಮಿಲ್​ನನ್ನು ಬಂಧಿಸಿ ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಅದರಂತೆ, ಪೊಲೀಸ್ ಇನ್​ಸ್ಪೆಕ್ಟರ್ ಬಾಡಿಗೆ ಮನೆ ಕೊಡಿಸಿದ್ದರ ಬಗ್ಗೆ ಬಾಯಿಬಿಟ್ಟಿದ್ದಾನೆ.

ಇದನ್ನೂ ಓದಿ: ಬೆಂಗಳೂರು ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟಕ್ಕೆ ಉಗ್ರರು ಮಾಡಿದ ಖರ್ಚು 4,500 – 5 ಸಾವಿರ!

ಬಾಡಿಗೆ ಮನೆ ಕೊಡಿಸುವಂತೆ ಮುಜಾಮಿಲ್, ಪೊಲೀಸ್ ಇನ್​ಸ್ಪೆಕ್ಟರ್ ಸಹಾಯ ಕೇಳಿದ್ದಾನೆ. ಚಿಕ್ಕಮಗಳೂರು ನಗರದ ಅಯ್ಯಪ್ಪ ನಗರದಲ್ಲಿರುವ ಮಾಲೀಕರೊಬ್ಬರನ್ನು ಸಂಪರ್ಕಿಸಿ ಮುಜಾಮಿಲ್​ಗೆ ಬಾಡಿಗೆ ಮನೆ ನೀಡುವಂತೆ ಇನ್​ಸ್ಪೆಕ್ಟರ್ ಸೂಚಿಸುತ್ತಾರೆ. ಅದರಂತೆ, ಮುಜಾಮಿಲ್​ಗೆ ಮಾಲೀಕರು ಬಾಡಿಗೆ ಮನೆ ನೀಡಿದ್ದರು.

ಒಂದು ವರ್ಷದ ಹಿಂದೆ ಬಾಡಿಗೆ ಮನೆಯನ್ನು ತನ್ನ ಹೆಸರಿನಲ್ಲೇ ಪಡೆದಿದ್ದ ಮುಜಾಮಿಲ್, ತನ್ನ ತಾಯಿಯೊಂದಿಗೆ ನೆಲೆಸಿದ್ದನು. 6 ತಿಂಗಳಿನಿಂದ ಅಯ್ಯಪ್ಪ ನಗರದ ಬಾಡಿಗೆ ಮನೆಯಲ್ಲೇ ಇದ್ದ ಮುಜಾಮಿಲ್, ರಾಮೇಶ್ವರಂ ಕೆಫೆ ಸ್ಫೋಟ ನಡೆಯುವ 20 ದಿನದ ಹಿಂದೆ ಬೆಂಗಳೂರಿಗೆ‌ ತೆರಳಿದ್ದನು. ಬಳಿಕ ಮುಜಾಮಿಲ್ ಬಂಧನ ಬೆನ್ನಲೇ ಆತನ ತಾಯಿ ಬಾಡಿಗೆ ಮನೆಗೆ ಬೀಗ ಹಾಕಿ ಹೋಗಿದ್ದಾರೆ.

ಈ ವಿಚಾರ ತಿಳಿಯುತ್ತಿದ್ದಂತೆ ಎನ್​ಐಎ ಅಧಿಕಾರಿಗಳು, ಅಯ್ಯಪ್ಪ ನಗರದ ಬಾಡಿಗೆ ಮನೆಯ ಮೇಲು ದಾಳಿ ಮಾಡಿದ್ದರು. ಆದರೆ, ಕಳೆದ ಮೂರು ದಿನಗಳಿಂದ ಬಾಡಿಗೆ ಮನೆಗೆ ಬೀಗ ಹಾಕಲಾಗಿದೆ. ಸದ್ಯ, ಮುಜಾಮಿಲ್​ಗೆ ಬಾಡಿಗೆ ಮನೆ ಕೊಡಿಸಿದ್ದ ಇನ್​ಸ್ಪೆಕ್ಟರ್​ ಕುರಿತು ಎನ್​ಐಎ ಅಧಿಕಾರಿಗಳು ಮಾಹಿತಿ ಕಲೆ ಹಾಕುತ್ತಿದ್ದಾರೆ. ಈಗಾಗಲೇ ಮುಜಾಮಿಲ್ ಜೊತೆ ಸಂಪರ್ಕದಲ್ಲಿದ್ದವರನ್ನು ವಿಚಾರಣೆ ನಡೆಸಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ