ಹಾಸನ ಜಿಲ್ಲೆಯಿಂದ ಭದ್ರಾ ಅಭಯಾರಣ್ಯಕ್ಕೆ ಕಾಡಾನೆಗಳ ಸ್ಥಳಾಂತರಕ್ಕೆ ತೀವ್ರ ವಿರೋಧ: ಹೋರಾಟದ ಎಚ್ಚರಿಕೆ

ಹಾಸನ ಜಿಲ್ಲೆಯ ಬೇಲೂರು ಭಾಗದ ಕಾಡಾನೆಗಳನ್ನು ಚಿಕ್ಕಮಗಳೂರಿನ ಭದ್ರಾ ಅಭಯಾರಣ್ಯಕ್ಕೆ ಓಡಿಸುವ ಸರ್ಕಾರದ ನಿರ್ಧಾರಕ್ಕೆ ಶೃಂಗೇರಿ, ಮೂಡಿಗೆರೆ ಮತ್ತು ಎನ್.ಆರ್.ಪುರ ಭಾಗದ ಜನರು ಹಾಗೂ ಬಿಜೆಪಿ ನಾಯಕರು ತೀವ್ರ ವಿರೋಧ ವ್ಯಕ್ತಪಡಿಸಿ ಹೋರಾಟದ ಎಚ್ಚರಿಕೆ ನೀಡಿದ್ದಾರೆ. 100 ಕಿ.ಮೀ. 50 ಆನೆಯನ್ನ ಓಡೊಸೋದು ಅಂದ್ರೆ ಹುಡುಗಾಟದ ಮಾತಾ ಎಂದು ಪ್ರಶ್ನಿಸಿದ್ದಾರೆ.

ಹಾಸನ ಜಿಲ್ಲೆಯಿಂದ ಭದ್ರಾ ಅಭಯಾರಣ್ಯಕ್ಕೆ ಕಾಡಾನೆಗಳ ಸ್ಥಳಾಂತರಕ್ಕೆ ತೀವ್ರ ವಿರೋಧ: ಹೋರಾಟದ ಎಚ್ಚರಿಕೆ
ಸಾಂದರ್ಭಿಕ ಚಿತ್ರ
Image Credit source: PTI

Updated on: Nov 17, 2026 | 2:00 PM

ಚಿಕ್ಕಮಗಳೂರು, ನವೆಂಬರ್​​ 17: ಹಾಸನ ಜಿಲ್ಲೆಯಿಂದ ಭದ್ರಾ ಅಭಯಾರಣ್ಯಕ್ಕೆ ಕಾಡಾನೆಗಳನ್ನು ಓಡಿಸುವುದಕ್ಕೆ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಕ್ಷೇತ್ರದ ವ್ಯಾಪ್ತಿಯ ಜನರಿಂದ ತೀವ್ರ ವಿರೋಧ ವ್ಯಕ್ತವಾಗಿದ್ದು, ಇಂತಹ ಯತ್ನವನ್ನು ತಕ್ಷಣವೇ ನಿಲ್ಲಿಸುವಂತೆ ಒತ್ತಾಯ ಕೇಳಿಬಂದಿದೆ. ಇದರಿಂದ ಎನ್​​.ಆರ್​​.ಪುರ ತಾಲೂಕು, ಚಿಕ್ಕಮಗಳೂರು ಭಾಗದ ಜನರಿಗೆ ಸಮಸ್ಯೆ ಅರೋಪ ಕೇಳಿಬಂದಿದ್ದು, ಆದೇಶ ಹಿಂದಪಡೆಯದಿದ್ದರೆ ಹೋರಾಟ ಮಾಡುವುದಾಗಿ ಬಿಜೆಪಿ ಕೂಡ ಎಚ್ಚರಿಕೆ ನೀಡಿದೆ.

’50 ಆನೆಯನ್ನ ಓಡೊಸೋದು ಅಂದ್ರೆ ಹುಡುಗಾಟದ ಮಾತಾ?’

ಬೇಲೂರು ಭಾಗದ ಕಾಡಾನೆಗಳನ್ನು ಭದ್ರಾ ಅಭಯಾರಣ್ಯ ಶಿಫ್ಟ್ ಮಾಡಲು ಆದೇಶವಾಗಿರುವ ಬಗ್ಗೆ ನಿನ್ನೆ ಬೇಲೂರಿನಲ್ಲಿ ಸಚಿವ ಶಿವಲಿಂಗೇಗೌಡ ಹೇಳಿಕೆ ನೀಡಿದ್ದರು. ಆ ಬೆನ್ನಲ್ಲೇ ಮಾಜಿ ಶಾಸಕ‌ ಜೀವರಾಜ್ ಸೇರಿದಂತೆ ಶೃಂಗೇರಿ ಕ್ಷೇತ್ರದ ಜನತೆಯಿಂದ ಭಾರೀ ವಿರೋಧ ವ್ಯಕ್ತವಾಗಿದೆ. ಹಾಸನದ ಜಿಲ್ಲಾಡಳಿತ ತಮ್ಮ ತಲೆ ತೊಳೆದುಕೊಳ್ಳಲು ಆನೆ ಸಮಸ್ಯೆಯನ್ನು ನಮ್ಮ ತಲೆಗೆ ಕಟ್ಟಲು ಹೊರಟಿದೆ. ದನ-ಕರುಗಳೇ ನಾವು ಹೇಳಿದಂತೆ ಹೋಗಲ್ಲ, ಆನೆಗಳು ಹೋಗುತ್ತವಾ? ಬೇಲೂರಿನಿಂದ ಚಿಕ್ಕಮಗಳೂರು ಜಿಲ್ಲೆಯ ಭದ್ರಾ ಅಭಯಾರಣ್ಯಕ್ಕೆ ಸುಮಾರು 100 ಕಿ.ಮೀ. ದೂರವಿದೆ. 100 ಕಿ.ಮೀ. 50 ಆನೆಯನ್ನ ಓಡೊಸೋದು ಅಂದ್ರೆ ಹುಡುಗಾಟದ ಮಾತಾ ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ.

Loading...

ಇದನ್ನೂ ಓದಿ: ಬೇಲೂರಿನ ಕೋಗಿಲಮನೆ ಬಳಿ 30ಕ್ಕೂ ಹೆಚ್ಚು ಕಾಡಾನೆಗಳ ಹಿಂಡು ಪ್ರತ್ಯಕ್ಷ

ಅಲ್ಲದೆ ಇದು ಅಡಿಕೆ-ಕಾಫಿ ಕೊಯ್ಲಿನ ಸಮಯವಾಗಿರುವ ಕಾರಣ ತೋಟಗಳಲ್ಲಿ ಸಾವಿರಾರು ಕಾರ್ಮಿಕರು ಕೆಲಸ ಮಾಡುತ್ತಿರುತ್ತಾರೆ. ಆ ವೇಳೆ ಆನೆಗಳಿಂದ ಅನಾಹುತವಾದರೆ ಹೊಣೆ ಯಾರು? ಬೇಲೂರು ಶಾಸಕರ ಸ್ಥಿತಿಯೇ ನಾಳೆ ಮೂಡಿಗೆರೆ ಶಾಸಕರಿಗೂ ಬರುತ್ತೆ. ಆನೆಗಳನ್ನು ಸೆರೆ ಹಿಡಿದು ಸ್ಥಳಾಂತರಿಸಿ. ಅದನ್ನು ಬಿಟ್ಟು ಆನೆಯನ್ನ ಓಡಿಸೋ ಕ್ರಮಕ್ಕೆ ಮುಂದಾದರೆ ನೀವು ಊಹೆ ಮಾಡದ ರೀತಿ ಹೋರಾಟವಾಗಲಿದೆ ಎಂದು ಮೂಡಿಗೆರೆ ತಾಲೂಕಿನ ಜನ ಸರ್ಕಾರವನ್ನು ಎಚ್ಚರಿಸಿದ್ದಾರೆ.

‘ಅರಣ್ಯ ಸಚಿವರು ಈ ವಿಷಯದಲ್ಲಿ ಗಮನ ಹರಿಸಬೇಕು’

ಇನ್ನು ಬೇಲೂರು ಭಾಗದ ಕಾಡಾನೆಗಳನ್ನು ಭದ್ರಾ ಅಭಯಾರಣ್ಯ ಶಿಫ್ಟ್ ಮಾಡುವ ಬಗ್ಗೆ ಸಚಿವರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಸಂಸದ ಕೋಟಾ ಶ್ರೀನಿವಾಸ ಪೂಜಾರಿ, ಮಂತ್ರಿಗಳ ಹೇಳಿಕೆ ಬಗ್ಗೆ ಜನ ಆತಂಕ ವ್ಯಕ್ತಪಡಿಸಿದ್ದಾರೆ. ಈಗಾಗಲೇ 50-60 ಆನೆಗಳನ್ನು ಶಿಫ್ಟ್ ಮಾಡಿದ್ದೇವೆ ಅಂತಾ ಹೇಳುತ್ತೀರಿ. ಹೀಗಿರುವಾಗ ಮತ್ತೆ ಅದೇ ಜಾಗಕ್ಕೆ ಅಷ್ಟೇ ಪ್ರಮಾಣದ ಆನೆಗಳನ್ನು ತಂದು ಬಿಡುತ್ತೇವೆ ಅಂತಾ ಹೇಳುವುದು ಎಷ್ಟು ಸೂಕ್ತ ಎಂದವರು ಪ್ರಶ್ನಿಸಿದ್ದಾರೆ. ಶಿವಲಿಂಗೇಗೌಡರು ಯಾವ ಅರ್ಥದಲ್ಲಿ ಈ ರೀತಿ ಹೇಳಿದ್ದಾರೋ ಗೊತ್ತಿಲ್ಲ. ಅರಣ್ಯ ಸಚಿವರು ಈ ವಿಷಯದಲ್ಲಿ ಗಮನ ಹರಿಸಬೇಕು. ಚಿಕ್ಕಮಗಳೂರು ಜನರ ಹಿತ ಕಾಯುವ ಕೆಲಸ ಮಾಡಬೇಕು ಎಂದವರು ಆಗ್ರಹಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

ಪ್ರಸನ್ನ ಹೆಗಡೆ

ಪ್ರಸನ್ನ ಹೆಗಡೆ ಹುಟ್ಟಿದ್ದು ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕು. 9 ವರ್ಷಗಳಿಂದ ಪತ್ರಕರ್ತರಾಗಿ ಕೆಲಸ ಮಾಡಿರುವ ಅನುಭವವಿದೆ. ಮುದ್ರಣ, ಟಿವಿ ಮತ್ತು ಡಿಜಿಟಲ್​ ಮಾಧ್ಯಮಗಳಲ್ಲಿ ವಿವಿಧ ಜವಾಬ್ದಾರಿ ನಿಭಾಯಿಸಿದ್ದಾರೆ. ರಾಜಕೀಯ, ಸಿನಿಮಾ ವಿಷಯಗಳಲ್ಲಿ ಹೆಚ್ಚಿನ ಆಸಕ್ತಿ ಇದೆ. ಕವನಗಳ ರಚನೆ, ಪುಸ್ತಕಗಳನ್ನ ಓದುವುದು ನೆಚ್ಚಿನ ಹವ್ಯಾಸಗಳು.

Read More
Loading...
Unable to load recommendations.
Follow Us