ಚಿಕ್ಕಮಗಳೂರು: ಹೊನ್ನಾಳಿ ಶಾಸಕ ರೇಣುಕಾಚಾರ್ಯ (MP Renukacharya) ಅವರ ತಮ್ಮನ ಮಗ ಚಂದ್ರಶೇಖರ್ ಸಾವಿನ ವಿಚಾರದ ಬಗ್ಗೆ ಪೊಲೀಸರು ಹಲವು ಆಯಾಮಗಳಿಂದ ತನಿಖೆ ನಡೆಸುತ್ತಿದ್ದಾರೆ. ನಾಪತ್ತೆಯಾಗುವ ಮೊದಲು ಚಂದ್ರಶೇಖರ್ ಕೊಪ್ಪ ತಾಲ್ಲೂಕು ಗೌರಿಗದ್ದೆಯಲ್ಲಿರುವ ವಿನಯ್ ಗುರೂಜಿ ಆಶ್ರಮಕ್ಕೆ (Vinay Guruji) ಭೇಟಿ ನೀಡಿದ್ದರು. ಆಶ್ರಮದಿಂದ ತೆರಳುವ ಮೊದಲು ‘ಜಾಗ್ರತೆಯಿಂದ ಮನೆಗೆ ಹೋಗಿ’ ಎಂದು ವಿನಯ್ ಗುರೂಜಿ ಸೂಚಿಸಿದ್ದರು. ಈ ವೇಳೆ ಚಂದ್ರಶೇಖರ್ (Chandrashekhar) ಜೊತೆಗೆ ಅವರ ಗೆಳೆಯ ಕಿರಣ್ ಸಹ ಉಪಸ್ಥಿತರಿದ್ದರು ಎಂದು ಆಶ್ರಮದಲ್ಲಿರುವ ಚಂದ್ರಶೇಖರ್ ಗುರೂಜಿ ಅವರ ಅಪ್ತ ಮಿಥುನ್ ‘ಟಿವಿ9’ಗೆ ಮಾಹಿತಿ ನೀಡಿದರು.
‘ಚಂದ್ರಶೇಖರ್ ಅಂದು ರಾತ್ರಿ ಒಂಬತ್ತು ಗಂಟೆಯ ನಂತರ ಆಶ್ರಮಕ್ಕೆ ಬಂದಿದ್ದರು. ಸುಮಾರು 9.40ರವರೆಗೂ ವಿನಯ್ ಗುರೂಜಿಗಾಗಿ ಕಾದಿದ್ದರು. ಅವರು ಆಗಾಗ ಆಶ್ರಮಕ್ಕೆ ಬರುತ್ತಿದ್ದ ಕಾರಣ ಗುರೂಜಿಗೆ ಚಿರಪರಿಚಿತರಾಗಿದ್ದರು. ‘ಯಾಕೋ ಲೇಟ್ ಆಗಿ ಬಂದೆ, ಇದು ಬರುವ ಟೈಮಾ’ ಎಂದು ಗುರೂಜಿ ಸಲಗೆಯಿಂದಲೇ ಚಂದ್ರಶೇಖರ್ಗೆ ಗದರಿಸಿದ್ದರು. ‘ಈಗಾಗಲೇ ತಡವಾಗಿದೆ, ಜಾಗ್ರತೆಯಿಂದ ಹೋಗಿ’ ಎಂದು ಎಚ್ಚರಿಕೆ ಹೇಳಿದ್ದರು. ನಂತರ ರಾತ್ರಿ ಸುಮಾರು 9.45ರ ಹೊತ್ತಿಗೆ ಚಂದ್ರಶೇಖರ್ ಅವರು ಆಶ್ರಮದಿಂದ ಸ್ನೇಹಿತ ಕಿರಣ್ ಜೊತೆಗೆ ಹೊರ ಹೊರಟರು. ರಾತ್ರಿ 10 ಗಂಟೆಯ ವೇಳೆಯಲ್ಲಿ ಚಂದ್ರಶೇಖರ್ ಅವರಿದ್ದ ಕಾರು ಕೊಪ್ಪ ಬಸ್ ನಿಲ್ದಾಣದಿಂದ ದಾಟಿ ಹೋಗಿರುವ ದೃಶ್ಯವು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ವಿರೋಧಿಗಳ ಕುತಂತ್ರ ಕಾರಣ: ರೇಣುಕಾಚಾರ್ಯ
ದಾವಣಗೆರೆ: ನನ್ನ ತಮ್ಮನ ಮಗ ಚಂದ್ರಶೇಖರ್ ಹಿಂದುತ್ವಕ್ಕಾಗಿ ಹೋರಾಡುತ್ತಿದ್ದ. ಶಿವಮೊಗ್ಗದ ಸಾವರ್ಕರ್ ಫ್ಲೆಕ್ಸ್ ವಿವಾದಲ್ಲಿಯೂ ಮುಂಚೂಣಿಯಲ್ಲಿದ್ದ. ಸಾವರ್ಕರ್ ಫ್ಲೆಕ್ಸ್ ಗಲಾಟೆ ಆದಾಗಲೇ ನಾನು ಎಚ್ಚೆತ್ತುಕೊಳ್ಳಬೇಕಿತ್ತು ಎಂದು ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯ ಹೇಳಿದರು. ಚಂದ್ರಶೇಖರ್ ಸಾವಿನ ಕುರಿತು ಪ್ರತಿಕ್ರಿಯಿಸಿದ ಅವರು, ನಾವು ಆಗಲೇ ನಾಪತ್ತೆ ಪ್ರಕರಣ ದಾಖಲಿಸಿದ್ದೆವು. ಈಗ ಅನುಮಾನಾಸ್ಪದ ಸಾವು ಎಂದು ದೂರು ನೀಡಿದ್ದೇವೆ. ನನ್ನ ರಾಜಕೀಯ ಪ್ರಭಾವ ಕುಗ್ಗಿಸಲು ಇಂಥ ಕೆಲಸ ಮಾಡಿದ್ದಾರೆ. ನನ್ನ ವೈರಿಗಳು ನನ್ನನ್ನೇ ಬಲಿ ತೆಗೆದುಕೊಳ್ಳಬೇಕಿತ್ತು. ಅದುಬಿಟ್ಟು ಹೀಗೆ ಹುಡುಗನನ್ನು ಹೊಡೆದು ಹಾಕಿರುವುದು ಸರಿಯಲ್ಲ ಎಂದು ಕಣ್ಣೀರು ಹಾಕಿದರು.
ಅವನು ನನ್ನನ್ನು ತಂದೆಯಂತೆ ಪ್ರೀತಿಸುತ್ತಿದ್ದ. ಹಿಂದುತ್ವದ ಬಗ್ಗೆ ಹೆಚ್ಚು ಅಭಿಮಾನ ಹೊಂದಿದ್ದ. ನನ್ನನ್ನು ಒಂದು ಸಮುದಾಯಕ್ಕೆ ಸೀಮಿತ ಮಾಡಬೇಡಿ. ವೀರಶೈವ ಪದ್ಧತಿಯ ಬದಲಾಗಿದೆ ಹಿಂದೂ ಸಂಸ್ಕೃತಿಯಂತೆ ಅಂತ್ಯಸಂಸ್ಕಾರ ನೆರವೇರಿಸಬೇಕು. ನಾನು ಜಾತ್ಯತೀತ ವ್ಯಕ್ತಿ, ನನ್ನನ್ನು ಒಂದು ಸಮುದಾಯಕ್ಕೆ ಸೀಮಿತನನ್ನಾಗಿಸಬೇಡಿ. ಹಿಂದುತ್ವ ನನ್ನ ಉಸಿರು ಎಂದು ರೇಣುಕಾಚಾರ್ಯ ಹೇಳಿದರು.
ಮೃತ ಚಂದ್ರಶೇಖರ್ ತಾಯಿ ಅನಿತಾ ಮಾತನಾಡಿ, ಮಗ ಗೌರಿಗದ್ದೆಗೆ ಹೋಗಿದ್ದೇ ನನಗೆ ಗೊತ್ತಿರಲಿಲ್ಲ. ಆತನನ್ನು ನಾನು ನಿನ್ನೆ ಶವವಾಗಿ ನೋಡಿದ್ದೇನೆ. ನನ್ನ ಮಗನಿಗೆ ಏನು ಮಾಡಿದ್ದಾರೋ ಗೊತ್ತಿಲ್ಲ. ಆದರೆ ಅವನು ಸಾಯುವ ಮೊದಲು ತುಂಬಾ ಹಿಂಸೆ ಅನುಭವಿಸಿದ್ದಾನೆ. ಯಾರ ಮಕ್ಕಳಿಗೂ ಇಂಥ ಪರಿಸ್ಥಿತಿ ಬರಬಾರದು ಎಂದು ಕಣ್ಣೀರು ಹಾಕಿರು. ಮೃತನ ಅಜ್ಜಿ ಜಯಮ್ಮ ಮತ್ತು ದೊಡ್ಡಮ್ಮ ಸುಜಾತಾ ಸಹ ಮೊಮ್ಮಗನ ಸರಳತೆ ನೆನಪಿಸಿಕೊಂಡು ಕಣ್ಣೀರಿಟ್ಟರು.
Published On - 2:07 pm, Fri, 4 November 22