ಗಣಿ ಲಾರಿಗಳ ಓಡಾಟದಿಂದ ತತ್ತರಿಸಿದ ಚಿತ್ರದುರ್ಗ; ಅಧಿಕಾರಿಗಳ ನಿರ್ಲಕ್ಷ್ಯದಿಂದ ಹೋರಾಟಕ್ಕೆ ಮುಂದಾದ ರೈತರು

ಭೀಮಸಮುದ್ರ ಗ್ರಾಮದ ಬಳಿ ಸುಮಾರು ವರ್ಷಗಳಿಂದ ವೇದಾಂತ ಮೈನ್ಸ್ ಕಾರ್ಯನಿರ್ವಹಿಸುತ್ತಿದೆ. ನಿತ್ಯ ನೂರಾರು ಲಾರಿಗಳು ಈ ಭಾಗದಲ್ಲಿ ಓಡಾಡುತ್ತವೆ. ಕೆಲವು ಕಡೆ ಅಕ್ರಮವಾಗಿ ಲಾರಿಗಳು ಓಡಾಡುತ್ತಿದ್ದು ರೈತರ ಜಮೀನು ಮತ್ತು ಬೆಳೆಗೆ ಹಾನಿ ಆಗಿದೆ.

ಗಣಿ ಲಾರಿಗಳ ಓಡಾಟದಿಂದ ತತ್ತರಿಸಿದ ಚಿತ್ರದುರ್ಗ; ಅಧಿಕಾರಿಗಳ ನಿರ್ಲಕ್ಷ್ಯದಿಂದ ಹೋರಾಟಕ್ಕೆ ಮುಂದಾದ ರೈತರು
ಗಣಿ ಲಾರಿಗಳ ಓಡಾಟದಿಂದ ತತ್ತರಿಸಿದ ಚಿತ್ರದುರ್ಗ
Updated By: sandhya thejappa

Updated on: Apr 19, 2021 | 4:33 PM

ಚಿತ್ರದುರ್ಗ: ಜಿಲ್ಲೆಯ ಭೀಮಸಮುದ್ರ ಗ್ರಾಮದಲ್ಲಿ ಗಣಿ ಲಾರಿಗಳ ಓಡಾಟದಿಂದಾಗಿ ಜನರು ತತ್ತರಿಸಿದ್ದಾರೆ. ಗ್ರಾಮೀಣ ಪರಿಸರ ಹಾಳಾಗಿದ್ದು, ರೈತರ ಬದುಕು ದುಸ್ಥರವಾಗಿದೆ. ಹೀಗಿದ್ದರೂ ಸಹ ಯಾರೊಬ್ಬರೂ ಪರಿಹಾರ ಕ್ರಮಕ್ಕೆ ಮುಂದಾಗದ ಹಿನ್ನೆಲೆಯಲ್ಲಿ ಸದ್ಯ ಭೀಮೇಶ್ವರ ಆಧ್ಯಾತ್ಮಿಕ ಶಕ್ತಿಪೀಠದ ನೇತೃತ್ವದಲ್ಲಿ ಈ ಭಾಗದ ಯುವ ರೈತರು ಹೋರಾಟಕ್ಕಿಳಿದಿದ್ದಾರೆ. ಭೀಮಸಮುದ್ರ ಗ್ರಾಮದ ಬಳಿ ಸುಮಾರು ವರ್ಷಗಳಿಂದ ವೇದಾಂತ ಮೈನ್ಸ್ ಕಾರ್ಯನಿರ್ವಹಿಸುತ್ತಿದೆ. ನಿತ್ಯ ನೂರಾರು ಲಾರಿಗಳು ಈ ಭಾಗದಲ್ಲಿ ಓಡಾಡುತ್ತವೆ. ಕೆಲವು ಕಡೆ ಅಕ್ರಮವಾಗಿ ಲಾರಿಗಳು ಓಡಾಡುತ್ತಿದ್ದು, ರೈತರ ಜಮೀನು ಮತ್ತು ಬೆಳೆ ಹಾನಿಯಾಗಿದೆ.

ತಾಡಪಲ್ ಮುಚ್ಚದೇ ಇರುವುದು, ಹೆಚ್ಚಿನ ಅದಿರು ಸಾಗಣೆ ಸೇರಿದಂತೆ ಇತರೆ ನಿಯಮಗಳನ್ನು ಮೀರಿ ಲಾರಿಗಳು ಓಡಾಡುತ್ತಿದ್ದು, ಇಡೀ ಪ್ರದೇಶ ಧೂಳುಮಯ ಆಗುತ್ತಿದೆ. ಹೀಗಿದ್ದರೂ ಸಹ ಯಾರೊಬ್ಬರೂ ಈ ಬಗ್ಗೆ ಗಮನಹರಿಸಿ ಪರಿಹಾರದ ವ್ಯವಸ್ಥೆ ಮಾಡಿಲ್ಲ. ಈ ಭಾಗದ ಜನರಿಗೆ ಮೈನ್ಸ್ ನಲ್ಲಿ ಕೆಲಸವೂ ಕೊಟ್ಟಿಲ್ಲ, ಭೂಮಿ ಮತ್ತು ಬೆಳೆ ಪರಿಹಾರವೂ ನೀಡಿಲ್ಲ ಎಂಬುವುದು ಹೋರಾಟಕ್ಕೆ ಮುಂದಾದ ಯುವ ರೈತರ ಆರೋಪವಾಗಿದೆ.

ಭೀಮಸಮುದ್ರ ಗ್ರಾಮದಲ್ಲಿ ಕೆಲ‌ ರೈತರು ಧರಣಿ‌ ನಡೆಸುತ್ತಿರುವುದು ಗಮನಕ್ಕೆ ಬಂದಿದೆ. ಈ ಬಗ್ಗೆ ಜಿಲ್ಲಾಧಿಕಾರಿ ಹಾಗೂ ಸಂಬಂಧಿತ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದು ಚರ್ಚಿಸಲಾಗುವುದು. ಪರಿಶೀಲನೆ ನಡೆಸಿ ಅಧಿಕಾರಿಗಳ ಸೂಚನೆ ಮೇರೆಗೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಚಿತ್ರದುರ್ಗದ ತಹಸೀಲ್ದಾರ್ ವೆಂಕಟೇಶಯ್ಯ ಹೇಳಿದ್ದಾರೆ.

ಭೀಮಸಮುದ್ರ ಭಾಗದಲ್ಲಿ ಪರಿಸರ ನಾಶಕ್ಕೆ ಈ ಗಣಿಗಾರಿಕೆ ಮತ್ತು ಗಣಿಲಾರಿಗಳ ಓಡಾಟವೇ ಕಾರಣವಾಗಿದೆ. ಅಂತೆಯೇ ಧೂಳಿನಿಂದಾಗಿ ರೈತಾಪಿ ವರ್ಗ ವಿವಿಧ ರೋಗಗಳಿಗೆ ತುತ್ತಾಗುವ ಸ್ಥಿತಿ ನಿರ್ಮಾಣವಾಗಿದೆ. ಲಾರಿಗಳ ಓಡಾಟದಿಂದಾಗಿ ರಸ್ತೆಗಳು ಹಾಳಾಗಿದ್ದು, ರೈತರು ಜಮೀನು, ತೋಟಗಳಿಗೆ ಹೋಗುವುದು ಕಷ್ಟಸಾಧ್ಯವಾಗಿದೆ. ಯಮರೂಪಿ ಲಾರಿಗಳ ಓಡಾಟದಿಂದ ಪದೇಪದೇ ಅಪಘಾತಗಳು, ಸಾವು ನೋವು ಸಂಭವಿಸುತ್ತಿದ್ದು, ಜನ ನಿತ್ಯ ಆತಂಕದಲ್ಲೇ ಓಡಾಡುವಂತಾಗಿದೆ. ಹೀಗಾಗಿ ಜಿಲ್ಲಾಡಳಿತ, ಗಣಿ ಕಂಪನಿ ಮತ್ತು ಸರ್ಕಾರ ಈ ಬಗ್ಗೆ ಗಮನಹರಿಸಿ ಸೂಕ್ತ ಶಾಶ್ವತ ಪರಿಹಾರ ಒದಗಿಸಬೇಕು. ಅಲ್ಲಿವರೆಗೆ ಹೋರಾಟ ನಿಲ್ಲಿಸುವುದಿಲ್ಲ ಎಂದು ರೈತ ವೆಂಕಟೇಶ್ ಹೇಳಿದ್ದಾರೆ.

ಒಟ್ಟಾರೆಯಾಗಿ ಭೀಮಸಮುದ್ರ ಗ್ರಾಮದ ಬಳಿ ಅದಿರು ಗಣಿಗಾರಿಕೆ ಮತ್ತು ಗಣಿ ಲಾರಿಗಳ ಓಡಾಟದಿಂದಾಗ ಪರಿಸರ ಮತ್ತು ಜನರ ಬದುಕಿನ ಮೇಲೆ ದುಷ್ಪರಿಣಾಮ ಬೀರಿದೆ. ಹೀಗಾಗಿ, ಯುವ ರೈತರು ಪ್ರತಿಭಟನೆಗೆ ಇಳಿದಿದ್ದಾರೆ. ಇನ್ನಾದರೂ ಸರ್ಕಾರ ಈ ಬಗ್ಗೆ ಗಮನಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕಿದೆ.

ಇದನ್ನೂ ಓದಿ:

ಗಣಿ ಮತ್ತು ಖನಿಜಗಳ ಕಾಯ್ದೆ ತಿದ್ದುಪಡಿ ಮಸೂದೆ ಸಂಸತ್ತಿನಲ್ಲಿ ಅಂಗೀಕಾರ; ಗಣಿಗಾರಿಕೆ ಗುತ್ತಿಗೆ ಹರಾಜು ಇನ್ನು ಸರಳ, ಮುಕ್ತ ಮುಕ್ತ

‘ಗಣಿಗಾರಿಕೆಯಿಂದ ಭಾರಿ ಅನಾಹುತ ಆಗುತ್ತೆ ಅಂತಾ ಸಂಸತ್‌ನಲ್ಲಿ ಮಾತಾಡ್ತಾರೆ.. ಆದ್ರೆ ಇಲ್ಲಿ ರಾಯಲ್ಟಿ ಬರ್ತಿಲ್ಲ ಅಂತಾನೂ ಹೇಳ್ತಾರೆ’

( Chitradurga people suffers from Mining lorries and farmers planning to protest against illegal mining)