ಚಿತ್ರದುರ್ಗ: ಪೋಕ್ಸೋ ಪ್ರಕರಣದಲ್ಲಿ (POCSO) ಚಿತ್ರದುರ್ಗದ (Chitradurga) ಮುರುಘಾ ಸ್ವಾಮೀಜಿ (Murugha Sharana Swamiji) ಜೈಲುಪಾಲಾಗಿದ್ದಾರೆ. ಸದ್ಯ ಮುರುಘಾಶ್ರೀ ಅವರನ್ನು ಗಲ್ಲಿಗೇರಿಸಲು ಒತ್ತಾಯಿಸಿ ನಗರದಲ್ಲಿ ಬಹುಜನ ಸಮಾಜ ಪಕ್ಷ (Bahujan Samaj Party) ದಿಂದ ಪ್ರತಿಭಟನೆ ಮಾಡಲಾಗುತ್ತಿದೆ. ಜಿಲ್ಲಾಧಿಕಾರಿ ಕಚೇರಿ ಎದುರು BSP ಮುಖ್ಯಸ್ಥ ಮಾರಸಂದ್ರ ಮುನಿಯಪ್ಪ ನೇತೃತ್ವದಲ್ಲಿ ಧರಣಿ ಮಾಡಲಾಗುತ್ತಿದೆ. ಮುರುಘಾಶ್ರೀ ವಿರುದ್ಧದ ಫೋಕ್ಸೋ ಕೇಸ್ ನ್ಯಾಯಾಂಗ ತನಿಖೆಗೆ ವಹಿಸಲು ಆಗ್ರಹಿಸಲಾಗುತ್ತಿದೆ. ಮಠದ ಹಾಸ್ಟೆಲ್ನಿಂದ ಕಾಣೆಯಾದ 32 ಮಕ್ಕಳ ಪತ್ತೆ ಮಾಡಿ ಎಂದು ಪ್ರತಿಭಟನಾಕಾರರು ಆಗ್ರಹಿಸುತ್ತಿದ್ದಾರೆ. ಮುರುಘಾಶ್ರೀ ವಿರುದ್ಧದ ದೂರುದಾರರು, ಸಾಕ್ಷಿಗಳ ಮೇಲೆ ದಾಖಲಾದ ದೂರು ಹಿಂಪಡೆಯುವಂತೆ ಪಟ್ಟುಹಿಡಿಯಲಾಗಿದೆ.
ಚಿತ್ರದುರ್ಗದ ಮುರುಘಾಶ್ರೀ ವಿರುದ್ಧ ಫೋಕ್ಸೋ ಪ್ರಕರಣ ಹಿನ್ನೆಲೆ ಶಿವಮೂರ್ತಿ ಮುರುಘಾ ಶರಣರು ಕಳೆದ 3 ತಿಂಗಳಿಂದ ನ್ಯಾಯಾಂಗ ಬಂಧನದಲ್ಲಿದ್ದಾರೆ. ಇದರಿಂದ ಹಲವು ದಿನಗಳಿಂದ ಮುರುಘಾಮಠದ ಆಡಳಿತಾಧಿಕಾರಿಯನ್ನು ನೇಮಿಸಬೇಕೆಂದು ಆಗ್ರಹಗಳು ಬರುತ್ತಿದ್ದವು. ಅಂತಿಮವಾಗಿ ರಾಜ್ಯ ಸರ್ಕಾರ ಜಿಲ್ಲಾಧಿಕಾರಿಯಿಂದ ವರದಿ ತರಿಸಿಕೊಂಡು ಅದರ ಆಧಾರದ ಮೇಲೆ ಸರ್ಕಾರ ಆಡಳಿತಾಧಿಕಾರಿಯನ್ನು ನೇಮಿಸಿದೆ. ಜಿಲ್ಲಾಧಿಕಾರಿಗಳು ಕಂದಾಯ ಇಲಾಖೆಗೆ ಸಲ್ಲಿಸಿರುವ ವರದಿ ಆಧರಿಸಿ ಆಡಳಿತಾಧಿಕಾರಿ ನೇಮಕ ಮಾಡಲಾಗುವುದು ಎಂದು ಈ ಹಿಂದೆ ಸ್ವತಃ ಸಿಎಂ ಬಸವರಾಜ ಬೊಮ್ಮಾಯಿ ಅವರು ಮಾಧ್ಯಮಗಳ ಮುಂದೆ ಹೇಳಿದ್ದರು.
ಇದನ್ನೂ ಓದಿ: ಮುರುಘಾಶ್ರೀ ವಿರುದ್ಧ ಪಿತೂರಿ ಪ್ರಕರಣ: ಸೌಭಾಗ್ಯ ಬಸವರಾಜನ್ ಅರೆಸ್ಟ್
ನಿವೃತ್ತ ಐಎಎಸ್ ಅಧಿಕಾರಿ ಪಿ.ಎಸ್.ವಸ್ತ್ರದ್ ಅಧಿಕಾರ ಸ್ವೀಕಾರ
ನಿವೃತ್ತ ಐಎಎಸ್ ಅಧಿಕಾರಿ ಪಿ.ಎಸ್.ವಸ್ತ್ರದ್ ಅವರು ಇಂದು (ಡಿ. 15) ರಂದು ಸರ್ಕಾರದ ಆದೇಶದಂತೆ ಆಡಳಿತಾಧಿಕಾರಿಯಾಗಿ ಅಧಿಕಾರ ಸ್ವೀಕಾರ ಮಾಡಿದ್ದಾರೆ. ಅಧಿಕಾರ ಸ್ವೀಕರಿಸಿ ಮುರುಘಾಮಠದ ಕರ್ತೃಗದ್ದುಗೆ ದರ್ಶನ ಪಡೆದುಕೊಂಡರು. ಬಳಿಕ ಪ್ರತಿಕ್ರಿಯೆ ನೀಡಿದ ಅವರು, ಮುರುಘಾಶರಣರು ಜಿಪಿಎ ನೀಡಿರುವ ಬಗ್ಗೆ ಪರಿಶೀಲಿಸಬೇಕಿದೆ. ಎಸ್ಜೆಎಂ ವಿದ್ಯಾಪೀಠದ ಕಾರ್ಯದರ್ಶಿ, ಮಠದ ಪೂಜಾ ಕೈಂಕರ್ಯ ಉಸ್ತುವಾರಿ ಬಸವಪ್ರಭುಶ್ರೀಗೆ ಜಿಪಿಎ ನೀಡಿರುವ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು. ಸಮಸ್ಯೆಗಳಿಗೆ ಪರಿಹಾರ ಹುಡುಕಲಾಗುವುದು ಎಂದು ಪಿ.ಎಸ್.ವಸ್ತ್ರದ್ ಹೇಳಿದರು.
ಮುರುಘಾಶ್ರೀ ವಜಾಕ್ಕೆ ಹೆಚ್ಚಿದ ಒತ್ತಡ
ಫೋಕ್ಸೋ ಪ್ರಕರಣದಲ್ಲಿ ಜೈಲು ಪಾಲಾಗಿರುವ ಮುರುಘಾಶ್ರೀಯನ್ನು ಚಿತ್ರದುರ್ಗ ಮುರುಘಾಮಠದ ಪೀಠಾದ್ಯಕ್ಷ ಸ್ಥಾನದಿಂದ ವಜಾ ಮಾಡಲು ಒತ್ತಡ ಹೆಚ್ಚಾಗಿದೆ. ಹೀಗಾಗಿ ಇಂದು ಚಿತ್ರದುರ್ಗದಲ್ಲಿ ವೀರಶೈವ ಲಿಂಗಾಯತ ಸಮಾಜದ ಸಭೆ ನಡೆಯಲಿದೆ. ಮಾಜಿ ಸಚಿವ ಎಚ್.ಏಕಾಂತಯ್ಯ ನೇತೃತ್ವದಲ್ಲಿ ಚಿತ್ರದುರ್ಗ ತಾಲೂಕಿನ ಸಿಬಾರ ಬಳಿಯ ಎಸ್.ನಿಜಲಿಂಗಪ್ಪ ಸ್ಮಾರಕ ಆವರಣದಲ್ಲಿ ಸಭೆ ನಡೆಯಲಿದೆ.
ಇದನ್ನೂ ಓದಿ: ಚಿತ್ರದುರ್ಗ ಮುರುಘಾಮಠಕ್ಕೆ ಆಡಳಿತಾಧಿಕಾರಿ ನೇಮಕ ಪ್ರಶ್ನಿಸಿ ರಿಟ್ ಅರ್ಜಿ: ತೀರ್ಪು ಕಾಯ್ದಿರಿಸಿದ ಹೈಕೋರ್ಟ್
ಮುರುಘಾ ಮಠ ಅಧೀನ ಸಂಸ್ಥೆ ಎಸ್ಜೆಎಂ ವಿದ್ಯಾಪೀಠದ ಕಾರ್ಯನಿರ್ವಾಹಕ ನಿರ್ದೇಶಕರಾಗಿ ಉದ್ಯಮಿ ಭರತ್ ನೇಮಕ
ಚಿತ್ರದುರ್ಗ ಮುರುಘಾ ಮಠದ ಅಧೀನ ಸಂಸ್ಥೆಯಾಗಿರುವ ಎಸ್ಜೆಎಂ ವಿದ್ಯಾಪೀಠದ ಕಾರ್ಯನಿರ್ವಾಹಕ ನಿರ್ದೇಶಕರಾಗಿ ಭರತ್ ಅವರನ್ನು ನೇಮಕ ಮಾಡಲಾಗಿದೆ. ವಿದೇಶದಲ್ಲಿ ಕಾರ್ಯ ನಿರ್ವಹಿಸಿರುವ ಚಿತ್ರದುರ್ಗ ಮೂಲದ ಉದ್ಯಮಿ ಭರತ್ ಕುಮಾರ್ ಅವರು ಮುರುಘಾ ಮಠದ ಸಭಾಂಗಣದಲ್ಲಿ ಅಧಿಕಾರ ಸ್ವೀಕರಿಸಿದ್ದಾರೆ. ಇನ್ನು ಈ ಕಾರ್ಯಕ್ರಮದಲ್ಲಿ ಮುರುಘಾಮಠದ ಪೂಜಾ ಕೈಂಕರ್ಯ ಉಸ್ತುವಾರಿ ಬಸವಪ್ರಭು ಶ್ರೀಗಳು, ಎಸ್ಜೆಎಂ ವಿದ್ಯಾಪೀಠದ ಕಾರ್ಯದರ್ಶಿ ಎಸ್.ಬಿ.ವಸ್ತ್ರದಮಠ ಉಪಸ್ಥಿತರಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.