ಚಿತ್ರದುರ್ಗ: ಪೋಕ್ಸೋ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಚಿತ್ರದುರ್ಗ ಮುರುಘಾ ಮಠದ ಡಾ. ಶಿವಾಚಾರ್ಯ ಶಿವಮೂರ್ತಿ ಮುರುಘಾ ಶ್ರೀಗಳಿಗೆ ನಿನ್ನೆ (ನ. 4) ಸಂಜೆ 5 ಗಂಟೆಯಿಂದ 2 ಗಂಟೆಗಳಕಾಲ ಪುರುಷತ್ವ ಪರೀಕ್ಷೆ ಮಾಡಲಾಗಿತ್ತು. ಈಗ ಪರೀಕ್ಷೆಯ ವರದಿ ಬಂದಿದ್ದು ಮುರುಘಾಶ್ರೀ ಲೈಗಿಂಕವಾಗಿ ಸಮರ್ಥರಾಗಿದ್ದಾರೆಂದು ಜಿಲ್ಲಾಸ್ಪತ್ರೆಯ ಮೂಲಗಳಿಂದ ಟಿವಿ9ಗೆ ಸಿಕ್ಕಿದೆ. ಹಾಗೇ ಇಂದು (ನ. 5) ಬೆಳಿಗ್ಗೆ 10:30 ರಿಂದ ಸುಮಾರು 2 ತಾಸು ಕಾಲ ಮುರುಘಾಮಠದಲ್ಲಿ ಪೊಲೀಸರು ಸ್ಥಳ ಮಹಜರು ಮಾಡಿದರು. ಈ ಸಮಯದಲ್ಲಿ ಮುರುಘಾಶ್ರೀ ಕಚೇರಿ, ಬೆಡ್ ರೂಮ್, ಬಾತ್ ರೂಮ್ಗೆ ತೆರಳಿ ಸ್ಥಳ ಮಹಜರು ನಡೆಸಲಾಯಿತು. ಸ್ಥಳ ಮಹಜರು ವೇಳೆ ಮುರುಘಾಶ್ರೀ ಬಟ್ಟೆ ಸೇರಿ ಇತರೆ ವಸ್ತುಗಳನ್ನು ವಶಕ್ಕೆ ಪಡೆದ ಪೊಲೀಸರು 2 ಬ್ಯಾಗ್ಗಳಲ್ಲಿ ತೆಗೆದುಕೊಂಡು ಹೋದರು.
ಮುರುಘಾಶ್ರೀಗಳನ್ನು ಮೂರು ದಿನಗಳಲ್ಲಿ ಸುಮಾರು 12ಕ್ಕೂ ಹೆಚ್ಚು ತಾಸುಗಳ ಕಾಲ ವಿಚಾರಣೆ ನಡೆಸಲಾಗಿದೆ. ಈ ವೇಳೆ ಎಸ್ಪಿ ಕೆ. ಪರಶುರಾಮ್, ಸಿಪಿಐ ಬಾಲಚಂದ್ರ ನಾಯ್ಕ್ ಹಲವು ಪ್ರಶ್ನೆಗಳನ್ನು ಕೇಳಿದ್ದಾರೆ.
ಮಠದಲ್ಲಿ ಸ್ಥಳ ಮಹಜರು ಬಳಿಕ ಪೊಲೀಸರು ಮತ್ತೆ ಮೆಡಿಕಲ್ ಚಕ್ಅಪ್ ಮಾಡಿಸಿ ಡಿವೈಎಸ್ಪಿ ಕಚೇರಿಗೆ ಕರೆದುಕೊಂಡು ಹೋದರು. ಕೆಲ ಹೊತ್ತು ವಿಶ್ರಾಂತಿ ಬಳಿಕ ಮಧ್ಯಾಹ್ನದ ಊಟಕ್ಕೆ ಚಪಾತಿ ನೀಡಲಾಗಿದೆ. ಬಳಿಕ ಮದ್ಯಾನ 3:30ಕ್ಕೆ ಪೊಲೀಸರು ಮುರುಘಾಶ್ರೀಗಳನ್ನು ಕೋರ್ಟ್ಗೆ ಕರೆತಂದರು. 4ಗಂಟೆಗೆ ಜಡ್ಜ್ ಎದುರು ಹಾಜರು ಪಡಿಸಿದಾಗ 1ನೇ ಫೋಕ್ಸೋ ಕೇಸಲ್ಲಿ ನವೆಂಬರ್ 3ರಂದು ನೀಡಿದ್ದ ಆದೇಶವನ್ನೇ ಪಾಲಿಸುವಂತೆ ಸೂಚನೆ ನೀಡಿದರು. ನವೆಂಬರ್ 8 ರವರೆಗೆ ನ್ಯಾಯಾಂಗ ಬಂಧನ ಆದೇಶ ಹಿನ್ನೆಲೆ ಜಿಲ್ಲಾ ಕಾರಾಗೃಹಕ್ಕೆ ಮುರುಘಾಶ್ರೀಗಳನ್ನು ಪೊಲೀಸರು ಕರೆತಂದರು.
ಒಟ್ಟಾರೆಯಾಗಿ ಚಿತ್ರದುರ್ಗದ ಮುರುಘಾಮಠದ ಮುರುಘಾಶ್ರೀ ವಿರುದ್ಧ ಗಂಭೀರ ಪ್ರಕರಣಗಳು ದಾಖಲಾಗಿವೆ. ಹೀಗಾಗಿ, ಪೊಲೀಸರು ಬಂಧನದಲ್ಲಿರುವ ಮುರುಘಾಶ್ರೀ ಬಾಡಿ ವಾರೆಂಟ್ ಪಡೆದು ಮೂರು ದಿನ ವಿಚಾರಣೆ ನಡೆಸಿದ್ದಾರೆ. ಇನ್ನುಳಿದ ಆರೋಪಿಗಳನ್ನು ಪೊಲೀಸ್ರ ವಶಕ್ಕೆ ಪಡೆದು ವಿಚಾರಣೆ ನಡೆಸಿದ ಬಳಿಕ ಚಾರ್ಜ್ ಶೀಟ್ ಸಲ್ಲಿಸಲಿದ್ದಾರೆ. ಮುರುಘಾಶ್ರೀಗೆ ಸದ್ಯಕ್ಕೆ ಜೈಲೇ ಗತಿ ಆಗಿದ್ದು ಇನ್ನೇನು ಕಾದಿದೆಯೋ ಕಾದು ನೋಡಬೇಕಿದೆ.
ವರದಿ-ಬಸವರಾಜ ಮುದನೂರ್ tv9 ಚಿತ್ರದುರ್ಗ
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:01 pm, Sat, 5 November 22