ಅಪ್ರಾಪ್ತ ವಯಸ್ಸಿನ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಪೊಕ್ಸೋ ಪ್ರಕರಣ ಎದುರಿಸುತ್ತಿರುವ ಸೆರೆಮನೆ ವಾಸಿ ಶಿವಮೂರ್ತಿ ಮುರುಘಾ ಶರಣನ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಚುರುಕಾಗಿ ಸಾಗಿದೆ. ಪೊಲೀಸರ ತನಿಖೆ ವೇಳೆ ಪೀಠದಲ್ಲಿದ್ದ ವ್ಯಕ್ತಿ ನಡೆಸಿದ ಅತ್ಯಾಚಾರಗಳು ಮತ್ತು ಅದಕ್ಕೆ ನೆರವು ನೀಡಿದವರ ರಾಕ್ಷಸೀ ಪ್ರವೃತ್ತಿ ಬೆಳಕಿಗೆ ಬಂದಿದೆ. ಮಕ್ಕಳು ತಮ್ಮ ಮೇಲೆ ನಡೆದ ದೌರ್ಜನ್ಯ ವಿವರಿಸುವಾದ ಎಂಥವರ ಕಣ್ಣಿನಲ್ಲಿಯೂ ನೀರು ಹರಿಯುತ್ತಿತ್ತು. ‘ನಂಬಿಸಿ ಕತ್ತು ಕುಯ್ಯುವ ಮೋಸಗಾರರು’ ಎಂಬ ಗಾದೆಯನ್ನು ಹೋಲುವ ಪ್ರಕರಣ ಇದು. ಎಲ್ಲ ಕಳೆದುಕೊಂಡು ತಮ್ಮ ಆಶ್ರಯಕ್ಕೆ ಬಂದಿದ್ದ ಮಕ್ಕಳನ್ನು ತಂದೆಯಂತೆ ಪೊರೆಯಬೇಕಿದ್ದ ವ್ಯಕ್ತಿಯೇ ಕಾಮಪಿಪಾಸೆ ತಣಿಸಿಕೊಳ್ಳಲು ಬಳಸಿಕೊಂಡು ಕ್ರೌರ್ಯ ಮೆರೆದ ಅಕ್ಷಮ್ಯ ಪ್ರಕರಣದ ವಿವರವನ್ನು ಪೊಲೀಸರು ಸಲ್ಲಿಸಿದ ಚಾರ್ಜ್ಶೀಟ್ನಲ್ಲಿ ಉಲ್ಲೇಖಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಈ ಚಾರ್ಜ್ಶೀಟ್ ನ್ಯಾಯಾಲಯದಲ್ಲಿ ಪರಿಶೀಲನೆಗೆ ಒಳಪಡಬೇಕಿದೆ. ಪೊಲೀಸ್ ಮೂಲಗಳು ನೀಡಿರುವ ಮಾಹಿತಿ ಆಧರಿಸಿದ ಈ ಬರಹದಲ್ಲಿ ಶಿವಮೂರ್ತಿ ಮುರುಘಾ ಶರಣನ ಅಕ್ರಮಗಳ ಬಗ್ಗೆ ‘ಟಿವಿ9’ ಚಿತ್ರದುರ್ಗ ವರದಿಗಾರರಾದ ಬಸವರಾಜ ಮುದನೂರ್ ವಿವರಿಸಿದ್ದಾರೆ. ‘ಹಲವು ಸಾಧಕ ಮಹಾಪುರುಷರು ಅಧ್ಯಾತ್ಮ ಸಾಧನೆ ಮಾಡಿದ ಮುರುಘಾ ಮಠದ ಭವ್ಯ ಪರಂಪರೆಗೂ ಈ ಲಂಪಟನ ಕೃತ್ಯಕ್ಕೂ ತಳಕು ಹಾಕಿ ನೋಡುವುದು, ಪೀಠದ ಪರಂಪರೆಯ ಬಗ್ಗೆ ಗೌರವ ಕಳೆದುಕೊಳ್ಳುವುದು ಬೇಡ’ ಎಂದು ಅವರು ಬರಹ ಓದುವ ಓದುಗರಲ್ಲಿ ವಿನಂತಿಸುತ್ತಾರೆ.
ಶಿವಮೂರ್ತಿ ಮುರುಘಾ ಶರಣನ ರಾಕ್ಷಸೀ ಪ್ರವೃತ್ತಿ
ಪುಟ್ಟ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಎದುರಿಸುತ್ತಿರುವ ಶಿವಮೂರ್ತಿ ಮುರುಘಾ ಶರಣ ಮಕ್ಕಳೊಂದಿಗೆ ಅಕ್ಷರಶಃ ರಾಕ್ಷಸನಂತೆ ವರ್ತಿಸಿದ್ದ ಸಂಗತಿ ಇದೀಗ ಬೆಳಕಿಗೆ ಬಂದಿದೆ. ಕಾವಿ ಧರಿಸಿ ಮೆಲುವಾಗಿ ಮಾತನಾಡುತ್ತಿದ್ದ ಈತ ಅಕ್ಷರಶಃ ಕಾಮುಕನಾಗಿದ್ದ ಎಂಬ ಸಂಗತಿ ಭಕ್ತರಲ್ಲಿ ಆಘಾತ ಉಂಟು ಮಾಡಿದೆ. ಪೊಲೀಸರ ತನಿಖೆಯ ವೇಳೆ ಬಹಿರಂಗಗೊಳ್ಳುತ್ತಿರುವ ಸತ್ಯಗಳು ಮಕ್ಕಳು ಅನುಭವಿಸಿರುವ ನೋವಿನ ಬಗ್ಗೆ ಎಂಥವರ ಕಣ್ಣೂ ಮಂಜಾಗುವಂತೆ ಮಾಡುತ್ತಿವೆ.
ಹಾಸ್ಟೆಲ್ನ ಲೇಡಿ ವಾರ್ಡನ್ ಮೂಲಕ ಕ್ಷುಲ್ಲಕ ನೆಪ ಮುಂದಿಟ್ಟು ಮಕ್ಕಳನ್ನು ಈತ ತನ್ನ ಕೊಠಡಿಗೆ ಕರೆಸಿಕೊಳ್ಳುತ್ತಿದ್ದ. ಮಕ್ಕಳಿಗೆ ಆಶೀರ್ವಾದ ಮಾಡುವ ನೆಪದಲ್ಲಿ ಚಾಕೊಲೇಟ್ ಅಥವಾ ಸೇಬು ಕೊಡುತ್ತಿದ್ದ. ಇವುಗಳಲ್ಲಿ ಮತ್ತಿನ ಔಷಧಿ ಬೆರೆತಿರುತ್ತಿತ್ತು. ಇದನ್ನು ಸೇವಿಸಿದ ಮಕ್ಕಳು ಮತ್ತಿನಿಂದ ಪ್ರಜ್ಞೆ ತಪ್ಪಿದಾಗ ಅವರ ಮೇಲೆ ಅತ್ಯಾಚಾರ, ಲೈಂಗಿಕ ದೌರ್ಜನ್ಯ ಎಸಗುತ್ತಿದ್ದ. ಮಕ್ಕಳಿಗೆ ಪ್ರಜ್ಞೆ ಬಂದಾಗ ಅವರು ಸ್ವತಃ ತಾವು ಹಾಗೂ ತಮ್ಮ ಸಮೀಪದಲ್ಲಿರುವ ಶಿವಮೂರ್ತಿ ಮುರುಘಾ ಶರಣನ ಮೈಮೇಲೆ ಬಟ್ಟೆ ಇಲ್ಲದಿರುವುದನ್ನು ಗಮನಿಸಿ ಆಘಾತಕ್ಕೆ ಒಳಗಾಗುತ್ತಿದ್ದರು. ಅದೇ ಸ್ಥಿತಿಯಲ್ಲಿ ಮಕ್ಕಳಿಗೆ ಶಾಪದ ಭೀತಿ ಹುಟ್ಟಿಸುತ್ತಿದ್ದ ಈ ಕಾಮುಕ, ‘ಅತ್ಯಾಚಾರದ ವಿಷಯ ಹೊರಗೆ ಬಾಯಿ ಬಿಟ್ಟರೆ ನೀವು ನಿಮ್ಮ ಕುಟುಂಬ ಬೀದಿಗೆ ಬರುತ್ತದೆ. ಜೀವ ಸಹಿತ ಉಳಿಯುವುದಿಲ್ಲ’ ಎಂದು ಬೆದರಿಕೆ ಹಾಕುತ್ತಿದ್ದ ಎಂದು ಪೊಲೀಸ್ ಮೂಲಗಳು ಹೇಳಿವೆ.
ಈ ಹಿಂದೆ ಬೇರೊಬ್ಬರಿಂದ ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಮಕ್ಕಳಿಗೆ ಆಶ್ರಯ ನೀಡುವ ನೆಪದಲ್ಲಿ ಹತ್ತಿರಕ್ಕೆ ಕರೆಸಿಕೊಳ್ಳುತ್ತಿದ್ದ ಶಿವಮೂರ್ತಿ ಮುರುಘಾ ಶರಣ, ಮಾನವೀಯ ನೆರವಿನ ಸೋಗಿನಲ್ಲಿ ಅವರ ಹಿನ್ನೆಲೆಯ ಬಗ್ಗೆ ಸಂಪೂರ್ಣ ಮಾಹಿತಿ ಕಲೆಹಾಕುತ್ತಿದ್ದ. ನಂತರ ಅವರಿಗೆ ಒಂದಿಷ್ಟು ಸಹಾಯ ಮಾಡಿ, ತನ್ನ ಬಗ್ಗೆ ಗೌರವದ ಹಾಗೂ ದೈವಿಕ ಭಾವನೆ ಹುಟ್ಟುವಂತೆ ಮಾಡುತ್ತಿದ್ದ. ಕೆಲ ಪೋಷಕರು ಮಕ್ಕಳನ್ನು ಭೇಟಿಯಾದಾಗ, ‘ಇಂಥ ಮಠದಲ್ಲಿ, ಇಂಥ ಗುರುಗಳ ಬಳಿ ನೀವು ಆಶ್ರಯ ಪಡೆದದ್ದೇ ಪುಣ್ಯ. ಚೆನ್ನಾಗಿ ಓದಿಕೊಂಡಿರಿ’ ಎಂದು ಹೇಳುತ್ತಿದ್ದರು. ಅದೇ ಗುರುಗಳಿಂದ ದೌರ್ಜನ್ಯ ಅನುಭವಿಸಿದ್ದ ಮಕ್ಕಳು ತಮ್ಮ ಮೇಲೆ ನಡೆದ ಅತ್ಯಾಚಾರದ ವಿಚಾರವನ್ನು ಪೋಷಕರಿಗೆ ತಿಳಿಸಲು ಹಿಂಜರಿಯುತ್ತಿದ್ದರು. ಈ ಸಂಗತಿಯನ್ನೂ ಕೆಲವು ಮಕ್ಕಳು ಪೊಲೀಸರಿಗೆ ತಿಳಿಸಿದ್ದಾರೆ.
ಲೇಡಿ ವಾರ್ಡನ್ ಎಂಬ ವಿಲನ್
ಶಿವಮೂರ್ತಿ ಮುರುಘಾ ಶರಣನ ಕೊಠಡಿ ಸ್ವಚ್ಛಗೊಳಿಸುವ ನೆಪದಲ್ಲಿ ಲೇಡಿ ವಾರ್ಡನ್ ಮಕ್ಕಳನ್ನು ಮುರುಘಾಶ್ರೀ ಕೊಠಡಿಗೆ ಕಳಿಸುತ್ತಿದ್ದಳು. ಯಾವ ದಿನ ಯಾವ ಮಕ್ಕಳನ್ನು ಕಳಿಸಬೇಕು ಎಂಬ ಸರದಿಯನ್ನೂ ನಿಗದಿಪಡಿಸಲಾಗಿತ್ತು. ಹೀಗೆ ಕೊಠಡಿಗೆ ಬಂದ ಮಕ್ಕಳನ್ನು ಮುರುಘಾಶ್ರೀ ಪೈಶಾಚಿಕ ಕೃತ್ಯಕ್ಕೆ ಬಳಸಿಕೊಳ್ಳುತ್ತಿದ್ದ. ಕೆಲವೊಮ್ಮೆ ಬಚ್ಚಲಿಗೆ ಕರೆದು ಬೆನ್ನು ಉಜ್ಜುವಂತೆ ಹೇಳಿ ಮಕ್ಕಳ ಮೇಲೆ ಲೈಗಿಕ ದೌರ್ಜನ್ಯ ಎಸಗುತ್ತಿದ್ದ. ಹೀಗೆ ಮಠದ ಹಾಸ್ಟೆಲ್ನ ಹಲವು ಮಕ್ಕಳು ಹಾಗೂ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ. ಈ ಸಂದರ್ಭದಲ್ಲಿ ಲೇಡಿ ವಾರ್ಡನ್ ಪಾಪಕೃತ್ಯವು ಬಹಿರಂಗವಾಗದಂತೆ ಒಬ್ಬ ಕಾವಲುಗಾರ್ತಿಯಂತೆ ಕಾರ್ಯ ನಿರ್ವಹಿಸಿದ್ದಾಳೆ. ಈಕೆಗೆ ಶಿವಮೂರ್ತಿ ಮುರುಘಾ ಶರಣನಿಂದ ಹಣದ ಆಮಿಷವಿತ್ತು ಎಂದು ಹೇಳಲಾಗಿದೆ.
ಹಾಸ್ಟೆಲ್ನಲ್ಲಿ ಓರ್ವ ಬಾಲಕಿಯುವ ಅತ್ಯಾಚಾರಕ್ಕೆ ಪ್ರಬಲ ಪ್ರತಿರೋಧ ಒಡ್ಡಿದಾಗ ಆಕೆಯನ್ನು ಕೊಲೆ ಮಾಡಲಾಯಿತು ಎಂಬ ಅಂಶವನ್ನೂ ಮಕ್ಕಳು ಪೊಲೀಸರ ಎದುರು ಹೇಳಿದ್ದಾರೆ. ಈ ಪ್ರಕರಣದ ಬೆನ್ನು ಹತ್ತಿದ ಪೊಲೀಸರಿಗೆ ಮತ್ತಷ್ಟು ಸಾಕ್ಷ್ಯಗಳು ದೊರಕಿತಾದರೂ ಕೊಲೆಯನ್ನು ನಿರೂಪಿಸಲು ಬೇಕಿರುವ ಪುರಾವೆಗಳು ಲಭ್ಯವಾಗಿಲ್ಲ. ಆಕೆಯದ್ದು ಅಪಘಾತದಿಂದಾದ ಸಾವು ಎಂಬ ಮಾಹಿತಿ ಪೊಲೀಸರಿಗೆ ಸಿಕ್ಕಿದೆ. ಪ್ರತಿದಿನ ರಾತ್ರಿ 8 ಗಂಟೆಗೆ ಮುರುಘಾ ಶರಣನಿಂದ ಲೇಡಿ ವಾರ್ಡನ್ಗೆ ಸೂಚನೆ ರವಾನೆಯಾಗುತ್ತಿತ್ತು. ಈತ ಸೂಚಿಸಿದ ಬಾಲಕಿಯನ್ನೇ ಆಕೆ ಕಳಿಸುತ್ತಿದ್ದಳು. ಮಠದ ಮುಖ್ಯ ದ್ವಾರದ ಮೂಲಕ ಅಥವಾ ಸ್ಕೈವಾಕರ್ ಮೂಲಕ ಮಕ್ಕಳನ್ನು ಕೊಠಡಿಗೆ ಕಳುಹಿಸಲಾಗುತ್ತಿತ್ತು. ರಾತ್ರಿ ಪೂರ್ತಿ ಕೊಠಡಿಯಲ್ಲೇ ಬಾಲಕಿಯರನ್ನು ಇರಿಸಿಕೊಂಡು ಅತ್ಯಾಚಾರ ಎಸಗಲಾಗುತ್ತಿತ್ತು. ನಸುಕಿನ 4ರಿಂದ 5 ಗಂಟೆಯ ವೇಳೆಯಲ್ಲಿ ಅವರನ್ನು ವಾಪಸ್ ಹಾಸ್ಟೆಲ್ಗೆ ಕಳಿಸಲಾಗುತ್ತಿತ್ತು. ವಿಚಾರಣೆ ವೇಳೆ ಸುಮಾರು 15ಕ್ಕೂ ಹೆಚ್ಚು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವುದು ಬೆಳಕಿಗೆ ಬಂದಿದೆ. ಬಡವರು, ತಂದೆ-ತಾಯಿ ಇಲ್ಲದ ಅನಾಥರನ್ನೇ ಹುಡುಕಿ ಲೈಂಗಿಕ ದೌರ್ಜನ್ಯಕ್ಕೆ ಗುರಿಯಾಗಿಸಲಾಗುತ್ತಿತ್ತು. ಯಾವುದೇ ಮಕ್ಕಳು ಮುರುಘಾ ಶರಣರ ಕೊಠಡಿಗೆ ತೆರಳಲು ವಿರೋಧ ವ್ಯಕ್ತಪಡಿಸಿದರೆ ಇಲ್ಲದ ನೆಪ ಹೇಳಿ ಊಟ, ಉಪಹಾರ ಇಲ್ಲದಂತೆ ಮಾಡಲಾಗುತ್ತಿತ್ತು. ಶಿಕ್ಷೆ ಕೊಡಲಾಗುತ್ತಿತ್ತು.
ಮಕ್ಕಳ ಹೇಳಿಕೆ ಆದರಿಸಿ ಡಿವೈಎಸ್ಪಿ ಅನಿಲ್ ನೇತೃತ್ವದಲ್ಲಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಕಳೆದ ಆಗಸ್ಟ್ 26ರಂದು ಮೊದಲ ಬಾರಿಗೆ ಶಿವಮೂರ್ತಿ ಮುರುಘಾ ಶರಣನ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಾಗಿತ್ತು. ನಂತರ ಅಕ್ಟೋಬರ್ 13ರಂದು ಎರಡನೇ ಪ್ರಕರಣ ದಾಖಲಾಯಿತು. ಹಾಸ್ಟೆಲ್ನಲ್ಲಿದ್ದ ಮಠದ ಅಡುಗೆ ಸಹಾಯಕಿಯ ಇಬ್ಬರು ಹೆಣ್ಣು ಮಕ್ಕಳು ಹಾಗೂ ಇನ್ನಿಬ್ಬರು ಬಾಲಕಿಯರು ಸೇರಿ ನಾಲ್ವರ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ ಎಂಬ ದೂರು ದಾಖಲಾಗಿದೆ. ಇದು ಆಗಸ್ಟ್ 26ರಂದು ದೂರು ದಾಖಲಿಸಿದ ಮಠದ ಹಾಸ್ಟೆಲ್ನ ಇಬ್ಬರು ಬಾಲಕಿಯರ ಹೇಳಿಕೆಗೆ ಪುಷ್ಟಿ ಕೊಟ್ಟಿದೆ.
ಆರಂಭದಲ್ಲಿ ಮಠದ ಭಕ್ತರು, ರಾಜ್ಯದ ಜನರು ಈ ಆರೋಪಗಳನ್ನು ಒಪ್ಪಿರಲಿಲ್ಲ. ಮುರುಘ ಶರಣ ಪರಾರಿಯಾಗಲು ಯತ್ನಿಸಿದ ನಂತರ ಪರಿಸ್ಥಿತಿ ಬದಲಾಯಿತು. ರಾಜ್ಯದಲ್ಲಿ ಜನಾಭಿಪ್ರಾಯವೂ ವ್ಯತಿರಿಕ್ತವಾಯಿತು. ಸೆಪ್ಟೆಂಬರ್ 1ರಂದು ಪೊಲೀಸರು ಮುರುಘಾ ಶರಣನನ್ನು ಬಂಧಿಸಿದರು. ಎ1 ಶಿವಮೂರ್ತಿ ಮುರುಘಾ ಶರಣ, ಎ2 ಮಠದ ಹಾಸ್ಟೆಲ್ ವಾರ್ಡನ್ ರಶ್ಮಿ, ಎ3 ಮಠದ ಉತ್ತರಾಧಿಕಾರಿ, ಎ4 ಮಠದ ಕಾರ್ಯದರ್ಶಿ ಪರಮಶಿವಯ್ಯ ಹಾಗೂ ಎ5 ವಕೀಲ ಗಂಗಾಧರಯ್ಯ ವಿರುದ್ಧ ಪ್ರಕರಣ ದಾಖಲಾಗಿದೆ. ಈ ಪೈಕಿ ಮೂವರು ಬಂಧನದಲ್ಲಿದ್ದಾರೆ. ಉತ್ತರಾಧಿಕಾರಿ ಜಾಮೀನು ಪಡೆದಿದ್ದರೆ, ಪೊಲೀಸರಿಗೆ ಶರಣಾಗಿರುವ ವಕೀಲನನ್ನು ಷರತ್ತಿನ ಮೇಲೆ ಹೊರಗೆ ಕಳಿಸಲಾಗಿದೆ.
ಎರಡು ಚಾರ್ಜ್ಶೀಟ್
ಚಿತ್ರದುರ್ಗ ಡಿವೈಎಸ್ಪಿ ಅನಿಲ್ ಕುಮಾರ್ ನೇತೃತ್ವದಲ್ಲಿ ತನಿಖೆ ಚುರುಕಾಗಿದೆ. ಅ 27ರಂದು ಚಿತ್ರದುರ್ಗದ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಎರಡು ಚಾರ್ಜ್ಶೀಟ್ ಸಲ್ಲಿಸಲಾಗಿದೆ. ಎ ಮತ್ತು ಬಿ ಎಂದು ಎರಡು ಭಾಗವಾಗಿ ಚಾರ್ಜ್ಶೀಟ್ನಲ್ಲಿ ಉಲ್ಲೇಖಿಸಲಾಗಿದೆ. ಒಟ್ಟು 694 ಪುಟದ ಚಾರ್ಜ್ ಶೀಟ್ ಸಲ್ಲಿಸಲಾಗಿದ್ದು 347 ಪುಟಗಳ ಎರಡು ಸೆಟ್ ಚಾರ್ಜ್ ಶೀಟ್ ಸಲ್ಲಿಸಲಾಗಿದೆ. ಎ1 ಮುರುಘಾಶ್ರೀ, ಎ2 ಲೇಡಿ ವಾರ್ಡನ್, ಎ4 ಪರಮಶಿವಯ್ಯ ಕೃತ್ಯದ ಬಗ್ಗೆ ಚಾರ್ಜ್ಶೀಟ್ನಲ್ಲಿ ವಿವರಿಸಲಾಗಿದೆ.
ದೂರು ನೀಡಿರುವ ಸಂತ್ರಸ್ತರ ಪೈಕಿ ಓರ್ವ ಬಾಲಕಿ ಎಸ್ಸಿ ಸಮುದಾಯಕ್ಕೆ ಸೇರಿದ್ದು ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಮೇಲಿನ ದೌರ್ಜನ್ಯ ತಡೆ ಪ್ರತಿಬಂಧಕ ಅಧಿನಿಯಮ ಕಲಂ ಅಳವಡಿಸಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಲಂ 376 (2) (ಎನ್), 376 (ಡಿಎ), 376 (3), 201, 202, 506, ಆರ್/34 ಮತ್ತು 37 ಐಪಿಸಿ ಮತ್ತು ಕಲಂ 17, 5 (ಎಲ್), 6 ಫೋಕ್ಸೋ ಕಾಯ್ದೆ 2012 ಮತ್ತು 3 ಕ್ಲಾಸ್(1) ಸಬ್ ಕ್ಲಾಸ್ ಡಬ್ಲೂ (1), (2), (3) ಕ್ಲಾಸ್ (2), (ವಿ), (ವಿಎ), ಎಸ್ಸಿ/ಎಸ್ಟಿ ಪಿಎ 1989 ಸೆಕ್ಷನ್ 3 (ಎಫ್) ಮತ್ತು ಸೆಕ್ಷನ್ 7 ಆಫ್ ರಿಲಿಜಿಯಸ್ ಇನ್ಸ್ಟಿಟ್ಯೂಷನ್ ಪ್ರಿವೆಂಟೇಷನ್ ಆಫ್ ಮಿಸ್ ಯೂಸ್ -1988 ಮತ್ತು ಸೆಕ್ಷನ್ 75 ಆಫ್ ದಿ ಜುವೆನಿಲ್ ಜಸ್ಟೀಸ್ (ಕೇರ್ ಅಂಡ್ ಪ್ರೊಟೆಕ್ಷನ್ ಆಫ್ ಚಿಲ್ಡ್ರನ್ ಆಕ್ಟ್ -2015) ಅಡಿ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ.
ಜಿಲ್ಲಾಧಿಕಾರಿ ದಿವ್ಯಾ ಪ್ರಭು ಅವರು ಪ್ರಕರಣಕ್ಕೆ ಸಂಬಂಧಿಸಿದಂತೆ ಹಾಗೂ ಮಠದ ಸ್ಥಿತಿಗತಿಗೆ ಸಂಬಂಧಿಸಿದಂತೆ ಸರ್ಕಾರಕ್ಕೆ ವರದಿ ಸಲ್ಲಿಸುವ ಸಾಧ್ಯತೆಯಿದೆ. ಕಂದಾಯ ಇಲಾಖೆಯು ವರದಿ ಕೋರಿದ್ದ ಹಿನ್ನೆಲೆಯಲ್ಲಿ ಮುರುಘಾ ಮಠಕ್ಕೆ ಭೇಟಿನೀಡಿ ಪರಿಶೀಲಿಸಿದ್ದ ಅವರು, ಸಿಬ್ಬಂದಿ ವೇತನ ಪಾವತಿ ಸಮಸ್ಯೆ, ಮಠ ಮತ್ತು ಮಠದ ವಿದ್ಯಾಸಂಸ್ಥೆಗಳ ಕಾರ್ಯನಿರ್ವಹಣೆಯ ಬಗ್ಗೆ ಮಾಹಿತಿ ಸಂಗ್ರಹಿಸಿದ್ದರು. ಶಿವಮೂರ್ತಿ ಮುರುಘಾ ಶರಣ ಪ್ರಸ್ತುತ ಅತ್ಯಾಚಾರದ ಆರೋಪ ಎದುರಿಸುತ್ತಿರುವುದರಿಂದ ಆತನನ್ನು ಪೀಠಾಧ್ಯಕ್ಷ ಸ್ಥಾನದಿಂದ ವಜಾ ಮಾಡಿ, ಹೊಸಬರನ್ನು ನೇಮಿಸಬೇಕು ಎಂದು ವೀರಶೈವ ಲಿಂಗಾಯತ ಸಮುದಾಯದ ಮುಖಂಡ ಹಾಗೂ ಮಾಜಿ ಶಾಸಕ ಏಕಾಂತಯ್ಯ ಒತ್ತಾಯಿಸಿದ್ದರು. ಈ ಸಂಬಂಧ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಗಮನವನ್ನೂ ಸೆಳೆಯಲಾಗಿತ್ತು. ಜಿಲ್ಲಾಧಿಕಾರಿಯು ಸೋಮವಾರ ಸರ್ಕಾರಕ್ಕೆ ವರದಿ ಸಲ್ಲಿಸುವ ಸಾಧ್ಯತೆಯಿದೆ.
ಕೊನೆಯ ಮಾತು
ಚಿತ್ರದುರ್ಗದ ಮುರುಘಾಮಠಕ್ಕೆ ಸುದೀರ್ಘ ಐತಿಹಾಸಿಕ ಪರಂಪರೆ ಇದೆ. ಬಸವ ಅಲ್ಲಮಾದಿ ಶರಣರಿಂದ ಸ್ಥಾಪಿತವಾದ ಶೂನ್ಯಪೀಠದ ಭವ್ಯ ಪರಂಪರೆ ಇದೆ. ಶೈಕ್ಷಣಿಕ ಕ್ರಾಂತಿ ಮಾಡಿರುವ ಇತಿಹಾಸ ಪ್ರಸಿದ್ಧ ಧಾರ್ಮಿಕ ಕೇಂದ್ರದ ಬಗ್ಗೆ ನಾಡಿನಾದ್ಯಂತ ಗೌರವವಿದೆ. ಆದರೆ ಅಲ್ಲಿನ ಪೀಠಕ್ಕೆ ಬಂದ ವ್ಯಕ್ತಿಯೊಬ್ಬ ಮಾಡಿದ ಅಕ್ರಮ ಮತ್ತು ನಡೆಸಿದ ಪೈಶಾಚಿಕ ಅತ್ಯಾಚಾರಗಳಿಂದ ಇಂದು ಸಲ್ಲದ ಕಾರಣಕ್ಕೆ ಸುದ್ದಿಯಾಗುತ್ತಿದೆ. ಆದರೆ ಮಠದ ಭವ್ಯ ಪರಂಪರೆಗೂ ಈ ಲಂಪಟನ ಕೃತ್ಯಕ್ಕೆ ತಳಕು ಹಾಕಿ ನೋಡುವುದು, ಪೀಠದ ಪರಂಪರೆಯ ಬಗ್ಗೆ ಗೌರವ ಕಳೆದುಕೊಳ್ಳುವುದು ಬೇಡ. ಪೊಲೀಸರು ಸಲ್ಲಿಸಿದ ಚಾರ್ಜ್ಶೀಟ್ ಇನ್ನಷ್ಟೇ ನ್ಯಾಯಾಲಯದಲ್ಲಿ ಪರಿಶೀಲನೆಗೆ ಒಳಪಡಬೇಕಿದೆ. ಪೊಲೀಸ್ ಮೂಲಗಳು ನೀಡಿರುವ ಮಾಹಿತಿಯನ್ನು ಈ ಬರಹಕ್ಕೆ ಬಳಸಲಾಗಿದೆ.
Published On - 9:28 am, Mon, 7 November 22