ಪೋಕ್ಸೋ ಪ್ರಕರಣ: ಮುರುಘಾ ಶ್ರೀ ಸೇರಿ ಮೂವರ ವಿರುದ್ಧ ಆರೋಪ ದೃಢಪಟ್ಟಿದೆ -ಚಿತ್ರದುರ್ಗ ಎಸ್ಪಿ
ಆದರೆ, ಎ3 ಮಠದ ಉತ್ತರಾಧಿಕಾರಿ ಮತ್ತು ಎ5 ಗಂಗಾಧರಯ್ಯ - ಇವರಿಬ್ಬರ ವಿರುದ್ಧ ಆರೋಪಗಳಿಗೆ ಈವರೆಗೆ ಸಾಕ್ಷ್ಯಾಧಾರ ಲಭ್ಯವಾಗಿಲ್ಲ. ತನಿಖೆ ಜಾರಿಯಲ್ಲಿದ್ದು ಸಾಕ್ಷ್ಯಾಧಾರ ಸಂಗ್ರಹ ಮಾಡುತ್ತಿದ್ದೇವೆ. ಸಾಕ್ಷ್ಯಾಧಾರ ಸಂಗ್ರಹಿಸಿ ಅಂತಿಮ ಚಾರ್ಜ್ಶೀಟ್ ಸಲ್ಲಿಸುತ್ತೇವೆ ಎಂದು ಚಿತ್ರದುರ್ಗ ಎಸ್ಪಿ ಸ್ಪಷ್ಟಪಡಿಸಿದ್ದಾರೆ.
ಚಿತ್ರದುರ್ಗ: ಪೋಕ್ಸೋ ಪ್ರಕರಣದಲ್ಲಿ (Protection of Children from Sexual Offences (POCSO) Act) ಜೈಲುಪಾಲಾಗಿರುವ ಮುರುಘಾ ಶರಣರ (Muruga Mutt seer Shivamurthy Murugha Sharanaru) ವಿರುದ್ಧ ಇಬ್ಬರು ಬಾಲಕಿಯರು ದೂರು ನೀಡಿದ್ದರು. ತನಿಖೆ ಭಾಗಶಃ ಪೂರ್ಣಗೊಂಡಿದ್ದು ಚಾರ್ಜ್ಶೀಟ್ ಸಲ್ಲಿಸಲಾಗಿದೆ ಎಂದು ಚಿತ್ರದುರ್ಗದಲ್ಲಿ ಪೊಲೀಸ್ ವರಿಷ್ಠಾಧಿಕಾರಿ ಪರಶುರಾಮ್ ಹೇಳಿದ್ದಾರೆ. ಅಕ್ಟೋಬರ್ 27ರಂದೇ ತನಿಖಾಧಿಕಾರಿ ಅನಿಲ್ ಚಾರ್ಜ್ಶೀಟ್ ಸಲ್ಲಿಸಿದ್ದಾರೆ. 2ನೇ ಹೆಚ್ಚುವರಿ ಸೆಷನ್ಸ್ ಕೋರ್ಟ್ಗೆ ಚಾರ್ಜ್ಶೀಟ್ ಸಲ್ಲಿಸಿದ್ದಾರೆ. ಚಾರ್ಜ್ಶೀಟ್ನ ಸಿಸಿ ನಂಬರ್ ಬರುವುದು ಬಾಕಿಯಿದೆ. ಈ ಮಧ್ಯೆ, ಎ1 ಡಾ. ಶಿವಮೂರ್ತಿ ಮುರುಘಾ ಶರಣರು, ಎ2 ವಾರ್ಡನ್ ರಶ್ಮಿ ಮತ್ತು ಎ4 ಪರಮಶಿವಯ್ಯ ವಿರುದ್ಧ ಆರೋಪಗಳು ದೃಢಪಟ್ಟಿವೆ ಎಂದು ಚಿತ್ರದುರ್ಗ ಎಸ್ಪಿ (Chitradurga SP) ಹೇಳಿದ್ದಾರೆ.
ಆದರೆ, ಎ3 ಮಠದ ಉತ್ತರಾಧಿಕಾರಿ ಮತ್ತು ಎ5 ಗಂಗಾಧರಯ್ಯ – ಇವರಿಬ್ಬರ ವಿರುದ್ಧ ಆರೋಪಗಳಿಗೆ ಈವರೆಗೆ ಸಾಕ್ಷ್ಯಾಧಾರ ಲಭ್ಯವಾಗಿಲ್ಲ. ತನಿಖೆ ಜಾರಿಯಲ್ಲಿದ್ದು ಸಾಕ್ಷ್ಯಾಧಾರ ಸಂಗ್ರಹ ಮಾಡುತ್ತಿದ್ದೇವೆ. ಸಾಕ್ಷ್ಯಾಧಾರ ಸಂಗ್ರಹಿಸಿ ಅಂತಿಮ ಚಾರ್ಜ್ಶೀಟ್ ಸಲ್ಲಿಸುತ್ತೇವೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
2ನೇ ಫೊಕ್ಸೋ ಪ್ರಕರಣ ತನಿಖೆ ನಡೆದಿದೆ:
ತನಿಖಾಧಿಕಾರಿ ಡಿವೈಎಸ್ಪಿ ಅನಿಲ್ 27/10/2022ರಂದು 2ನೇ ಅಪರ ಜಿಲ್ಲಾ & ಸತ್ರ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ. ಚಿತ್ರದುರ್ಗದ ಮುರುಘಾಶ್ರೀ ವಿರುದ್ಧ 2ನೇ ಫೊಕ್ಸೋ ಪ್ರಕರಣದಲ್ಲಿ ಈಗಾಗಲೇ ಸಂತ್ರಸ್ತರ ಹೇಳಿಕೆ ದಾಖಲಿಸಲಾಗಿದೆ. ಸಂತ್ರಸ್ತರ ಪೋಷಕರ ಹೇಳಿಕೆಗಳನ್ನೂ ದಾಖಲಿಸಲಾಗಿದೆ. ಎ1 ಮುರುಘಾಶ್ರೀ ಕಸ್ಟಡಿಗೆ ಪಡೆದು ವಿಚಾರಣೆ ನಡೆಸಲಾಗಿದೆ. ಸಂತ್ರಸ್ತರ ಹೇಳಿಕೆ ಆಧರಿಸಿ ಕೆಲವು ಬಾಲಕಿಯರ ಹೇಳಿಕೆ ಪಡೆದಿದ್ದೇವೆ ಎಂದು ಅವರು ಹೇಳಿದ್ದಾರೆ.
ಮುರುಘಾಶ್ರೀಗಳಿಂದ 15ಕ್ಕೂ ಹೆಚ್ಚು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಆರೋಪ:
ಮುರುಘಾಶ್ರೀಗಳಿಂದ 15ಕ್ಕೂ ಹೆಚ್ಚು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಆರೋಪ ದಾಖಲಾಗಿದೆ. ಒಡನಾಡಿ ಸಂಸ್ಥೆಯ ಸ್ಟ್ಯಾನ್ಲಿ ಅವರನ್ನು ಕರೆಸಿ ಮಾಹಿತಿ ಕೇಳಿದ್ದೇವೆ. ಸಂತ್ರಸ್ತರ ಮಾಹಿತಿ ನೀಡಿದರೆ ತನಿಖೆ ನಡೆಸುತ್ತೇವೆಂದು ತಿಳಿಸಿದ್ದೇವೆ. ಒಡನಾಡಿ ಸಂಸ್ಥೆ, ಮಕ್ಕಳ ಕಲ್ಯಾಣ ಸಮಿತಿ ಸಹಯೋಗದಲ್ಲಿ ತನಿಖೆ ನಡೆಸುವುದಾಗಿ ಮನವಿ ಮಾಡಿದ್ದೇವೆ. ಕೆಲ ಮಾಹಿತಿಯನ್ನು ಒಡನಾಡಿ ಸಂಸ್ಥೆಯವರು ನೀಡಿದ್ದಾರೆ. ಮಾಹಿತಿ ಆಧಾರದ ಮೇಲೆ ನಾವು ತನಿಖೆಗೆ ತೆರಳಿದ್ದೆವು. ಆದರೆ ಸಂತ್ರಸ್ತ ಬಾಲಕಿ ಆ ಸ್ಥಳದಲ್ಲಿ ಸಿಕ್ಕಿಲ್ಲ. ಒಡನಾಡಿ ಸಂಸ್ಥೆಯವರಿಗೂ ಈ ಬಗ್ಗೆ ತಿಳಿಸಿದ್ದೇವೆ. ಸಂತ್ರಸ್ತೆಯರ ಮಾಹಿತಿ ಸಿಕ್ಕರೆ ಖಂಡಿತ ತನಿಖೆ ನಡೆಸುತ್ತೇವೆ ಎಂದು ದುರ್ಗದ ಎಸ್ಪಿ ಹೇಳಿದರು.
ಮೊದಲ ಪ್ರಕರಣದ ಸಂತ್ರಸ್ತರು ಓರ್ವ ಬಾಲಕಿಯ ರೇಪ್ ಅಂಡ್ ಮರ್ಡರ್ ಆಗಿದೆ ಎಂದಿದ್ದರು. ಆದರೆ ಆಂಧ್ರ ವ್ಯಾಪ್ತಿಯಲ್ಲಿ ಆಕಸ್ಮಿಕ ಸಾವು ಘಟಿಸಿದ್ದು ತಿಳಿದಿದೆ. ರೈಲಿನಿಂದ ಬಿದ್ದು ಸಾವನ್ನಪ್ಪಿರುವ ವರದಿ ಆಗಿದೆ. ಇನ್ನು, ಮಠದಲ್ಲಿ ಡ್ರಗ್ಸ್ ಬಳಕೆ ಆರೋಪ ವಿಚಾರ ಪ್ರಕರಣದ ತನಿಖೆ ಇನ್ನೂ ನಡೆಯುತ್ತಿದೆ, ಎಲ್ಲಾ ಮಾಹಿತಿ ಹೇಳಲಾಗದು. ವೈದ್ಯಕೀಯ ಪರೀಕ್ಷೆಯ ಕೆಲ ವರದಿ ಇನ್ನೂ ಬರಬೇಕಿದೆ ಎಂದು ಅವರು ಹೇಳಿದರು.
Published On - 3:48 pm, Mon, 7 November 22