ಚಿತ್ರದುರ್ಗ, ಏ.07: ಜಿಲ್ಲೆಯ ಹೊಳಲ್ಕೆರೆ(Holalkere) ಪಟ್ಟಣದ ಬಳಿಯ ಕಣಿವೆ ಪ್ರದೇಶದಲ್ಲಿ ಖಾಸಗಿ ಬಸ್ ಪಲ್ಟಿಯಾಗಿ ಮೂವರು ಸಾವನ್ನಪ್ಪಿದ ಧಾರುಣ ಘಟನೆ ಇಂದು(ಏ.07) ಬೆಳಗ್ಗೆ 5 ಗಂಟೆ ಸುಮಾರಿಗೆ ನಡೆದಿದೆ. ಬಸ್‌ನಲ್ಲಿದ್ದ 10ಕ್ಕೂ ಹೆಚ್ಚು ಜನರಿಗೆ ಗಾಯವಾಗಿದ್ದು, ಇಬ್ಬರ ಸ್ಥಿತಿ ಗಂಭೀರವಾಗಿದೆ. ಕೂಡಲೇ ಗಾಯಾಳುಗಳನ್ನು ಹೊಳಲ್ಕೆರೆ ತಾಲೂಕು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇನ್ನು ಬೆಂಗಳೂರಿನಿಂದ ಶಿವಮೊಗ್ಗದತ್ತ ತೆರಳುತ್ತಿದ್ದ ಖಾಸಗಿ ಬಸ್ ಇದಾಗಿದ್ದು, 50 ಜನ ಪ್ರಯಾಣಿಸುತ್ತಿದ್ದ ಮಾಹಿತಿ ದೊರೆತಿದೆ. ಸ್ಥಳಕ್ಕೆ ಹೊಳಲ್ಕೆರೆ ಪಿಎಸ್ ಐ ಸುರೇಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಹೊಳಲ್ಕೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಇನ್ನು ಖಾಸಗಿ ಬಸ್ ಪಲ್ಟಿಯಾಗಿ ಮೂವರು ಪ್ರಯಾಣಿಕರು ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಮೃತರ ಪೈಕಿ ಇಬ್ಬರ ಗುರುತು ಪತ್ತೆಯಾಗಿದೆ. ಶಿವಮೊಗ್ಗ ಜಿಲ್ಲೆಯ ಸಾಗರ ಮೂಲದ ಗಣಪತಿ(40) ಹಾಗೂ ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ಮೂಲದ ಜಗದೀಶ್ ಮೃತರು. ಮತ್ತೊಬ್ಬ ಮೃತ ವ್ಯಕ್ತಿಯ ಗುರುತು ಪತ್ತೆಯಾಗಿಲ್ಲ.
ಬೆಂಗಳೂರು: ಚಾಮರಾಜಪೇಟೆಯ ಗವಿಪುರಂ ಬಳಿಯ ಟೈರ್ ಗೋದಾಮಿನಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಅದೃಷ್ಟವಶಾತ್ ಯಾವುದೇ ಜೀವಹಾನಿ ಸಂಭವಿಸಿಲ್ಲ. ಮುಂಜಾನೆ 4 ಗಂಟೆ ಸಮಯದಲ್ಲಿ ಈ ಘಟನೆ ನಡೆದಿದೆ. ಇನ್ನು ಟೈರ್, ಪೈಪ್ ,ಹಾಗೂ ಪ್ಲೆವುಡ್ಗಳನ್ನು ಇರಿಸಿರುವ ಸುಮಾರು 3 ಗೋದಾಮಿಗೂ ಬೆಂಕಿ ಆವರಿಸಿದೆ. ಸದ್ಯ ಸಿವಿಲ್ ಡಿಫೆನ್ಸ್ ಹಾಗೂ ಸ್ಥಳೀಯರ ಜೊತೆಗೆ ಅಗ್ನಿಶಾಮಕ ಸಿಬ್ಬಂದಿ ಬೆಂಕಿಯನ್ನು ನಂದಿಸುತ್ತಿದ್ದಾರೆ.
ಇದನ್ನೂ ಓದಿ:ಬೆಂಗಳೂರು: 2024ರ ಮೊದಲ ಎರಡು ತಿಂಗಳಲ್ಲಿ ಅಪಘಾತದಿಂದ 174 ಜನ ಸಾವು
ಹಾವೇರಿ: ರಾಣೆಬೆನ್ನೂರಿನ ಎಂ.ಜಿ.ರಸ್ತೆಯಲ್ಲಿರುವ ಸುರೇಶ್ ಕುಮಾರ್ ದೇವಸಾಯಿ ಎಂಬುವರಿಗೆ ಸೇರಿದ ಗೋದಾಮಿನ ಮೇಲೆ ವಾಣಿಜ್ಯ ತೆರಿಗೆ ಇಲಾಖೆಯ ಅಧಿಕಾರಿಗಳ ತಂಡ ದಾಳಿ ಮಾಡಿದ್ದು, ಅಕ್ರಮವಾಗಿ ಸಂಗ್ರಹಿಸಿದ್ದ 5.5 ಲಕ್ಷ ಮೌಲ್ಯದ 528 ಕುಕ್ಕರ್, 316 ಫ್ಯಾನ್, 126 ಮಿಕ್ಸಿ, 8 ಗ್ಯಾಸ್ಸ್ಟವ್ನ್ನು ಜಪ್ತಿ ಮಾಡಲಾಗಿದೆ. ಈ ಕುರಿತು ರಾಣೆಬೆನ್ನೂರು ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:29 am, Sun, 7 April 24