ಚಿತ್ರದುರ್ಗದಲ್ಲಿ ಕಲುಷಿತ ನೀರು ಸೇವಿಸಿ 6 ಜನ ಸಾವು ಪ್ರಕರಣ: ಕಾಲರಾ ಮಾದರಿಯ ಬ್ಯಾಕ್ಟೀರಿಯ ಪತ್ತೆ, ಕೇಸ್​ ಬುಕ್

ಚಿತ್ರದುರ್ಗ ನಗರದ ಕವಾಡಿಗರಹಟ್ಟಿ ಕವಾಡಿಗರಹಟ್ಟಿ ಬಡಾವಣೆಯಲ್ಲಿ ಕಲುಷಿತ ನೀರು ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಬೆಂಗಳೂರು ಪ್ರಯೋಗಾಲಯದ ವರದಿ ಬಂದಿದ್ದು, ಕಾಲರಾ ಮಾದರಿಯ ಬ್ಯಾಕ್ಟೀರಿಯ ಪತ್ತೆಯಾಗಿದೆ.

ಚಿತ್ರದುರ್ಗದಲ್ಲಿ ಕಲುಷಿತ ನೀರು ಸೇವಿಸಿ 6 ಜನ ಸಾವು ಪ್ರಕರಣ: ಕಾಲರಾ ಮಾದರಿಯ ಬ್ಯಾಕ್ಟೀರಿಯ ಪತ್ತೆ, ಕೇಸ್​ ಬುಕ್
ಕಲುಷಿತ ನೀರಿನ ವರದಿ
Edited By:

Updated on: Aug 09, 2023 | 10:34 AM

ಚಿತ್ರದುರ್ಗ, (ಆಗಸ್ಟ್ 09): ಚಿತ್ರದುರ್ಗ (Chitradurga) ನಗರದ ಕವಾಡಿಗರಹಟ್ಟಿ ಕವಾಡಿಗರಹಟ್ಟಿ ಬಡಾವಣೆಯಲ್ಲಿ ಕಲುಷಿತ ನೀರು ಸೇವಿಸಿ 6 ಜನ ಮೃತಪಟ್ಟಿದ್ದು, ಹಲವು ಅಸ್ವಸ್ಥಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು ಇದೀಗ ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಪ್ರಯೋಗಾಲಯದ ವರದಿ ಬಂದಿದ್ದು, ನೀರಿನಲ್ಲಿ ಕಾಲರಾ ಮಾದರಿಯ ಬ್ಯಾಕ್ಟೀರಿಯ ಪತ್ತೆಯಾಗಿದೆ. ಐವರ ಸಾವಿಗೆ ಕಾಲರಾ ಮಾದರಿಯ ಬ್ಯಾಕ್ಟೀರಿಯ ಕಾರಣ ಎಂದು ವದಿಯಲ್ಲಿ ಉಲ್ಲೇಖವಾಗಿದೆ. ಇನ್ನು ಚಿತ್ರದುರ್ಗ‌ ಜಿಲ್ಲಾ ಸರ್ವೇಕ್ಷಣಾ ಘಟಕವು ಸಹ ಇದೇ ರೀತಿ ವರದಿಯನ್ನು ನೀಡಿತ್ತು.

ಇದನ್ನೂ ಓದಿ: ಚಿತ್ರದುರ್ಗದಲ್ಲಿ ಕಲುಷಿತ ನೀರು ಸೇವನೆ: ಪ್ರಯೋಗಾಲಯ ವರದಿ ಬಹಿರಂಗ, ಕಾಲರಾ ಮಾದರಿ ಪತ್ತೆ

ವಿಬ್ರಿಯಾ ಕಾಲರಾ ಮಾದರಿ ಬ್ಯಾಕ್ಟೀರಿಯ ಪತ್ತೆಯಾಗಿದ್ದು, ಕವಾಡಿಗರಹಟ್ಟಿಯಲ್ಲಿ ಪೂರೈಕೆಯಾದ ನೀರು ಕುಡಿಯಲು ಯೋಗ್ಯವಲ್ಲ ಎಂದು ಆ.3ರಂದು ಚಿತ್ರದುರ್ಗ‌ ಜಿಲ್ಲಾ ಸರ್ವೇಕ್ಷಣಾ ಘಟಕ ವರದಿ ನೀಡಿತ್ತು. ಬಳಿಕ ಉನ್ನತ ಮಟ್ಟದ ಪರೀಕ್ಷೆಗಾಗಿ ನೀರು ಸಂಗ್ರಹಿಸಿ ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಪ್ರಯೋಗಾಲಯಕ್ಕೆ ಕಳಿಸಲಾಗಿತ್ತು. ಇದರೊಂದಿಗೆ ಬೆಂಗಳೂರು ಹಾಗೂ ಚಿತ್ರದುರ್ಗದ ವರದಿ ಒಂದೇ ಮಾದರಿಯಲ್ಲಿದೆ.

ವರದಿ ಕೇಳಿದ ಲೋಕಾಯುಕ್ತ ನ್ಯಾಯಮೂರ್ತಿ

ಕವಾಡಿಗರಹಟ್ಟಿಯ ಕಲುಷಿತ ನೀರು ಪ್ರಕರಣ ಪ್ರಕರಣ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಈ ಬಗ್ಗೆ ಸುಮೋಟೋ ಕೇಸ್ ದಾಖಲಾಗಿದೆ. ಅಲ್ಲದೇ ಕವಾಡಿಗರಹಟ್ಟಿಯಲ್ಲಿನ ದುರ್ಘಟನೆ ಬಹಳ ನೋವು ತರುವಂಥದ್ದು ಎಂದು ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ್ ಕಳವಳ ವ್ಯಕ್ತಪಡಿಸಿದ್ದು, ಈ ಪ್ರಕರಣದ ವರದಿ ನೀಡುವಂತೆ ಸೂಚಿಸಿದ್ದಾರೆ. ವಿಕಾಸಸೌಧದ ನಗರಾಭಿವೃದ್ದಿ ಇಲಾಖೆ ಕಾರ್ಯದರ್ಶಿ, ಚಿತ್ರದುರ್ಗ ಜಿಲ್ಲಾಧಿಕಾರಿ, ಪುರಸಭೆ ಆಡಳಿತ ನಿರ್ದೇಶಕ, ಚಿತ್ರದುರ್ಗ ಜಿಲ್ಲಾ ಆರೋಗ್ಯಾಧಿಕಾರಿ, ನಗರಸಭೆ ಆಯುಕ್ತ, ಎಇಇ ಹಾಗೂ ಆರೋಗ್ಯ ನಿರೀಕ್ಷಕರಿಗೆ ಪ್ರಕರಣಕ್ಕೆ ಸಂಬಂಧಿತ ವರದಿಯೊಂದಿಗೆ ಆಗಸ್ಟ್ 24ರಂದು ಕಚೇರಿಗೆ ಬಂದು ಸಂಪೂರ್ಣ ಮಾಹಿತಿ ನೀಡುವಂತೆ ಖಡಕ್ ಸೂಚನೆ ಕೊಟ್ಟಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Basavaraj Mudnur

ಆದ್ಯ ವಚನಕಾರ ದೇವರ ದಾಸಿಮಯ್ಯನ 'ಮುದನೂರು' ನಮ್ಮ ಮೂಲ ಊರು. ಸಂತಗುಣದ ತಾತ ಕಿರಿ ವಯಸ್ಸಿನಲ್ಲೇ ಊರು-ಮನೆ ತೊರೆದು ಬರಿಗೈಲಿ ಬಂದು ಯಾದಗಿರಿ ಜಿಲ್ಲೆಯ ಶಹಾಪುರದಲ್ಲಿ ಸ್ವಾಭಿಮಾನದ ಬದುಕು ಕಟ್ಟಿಕೊಂಡರು. ಅಪ್ಪ ಶಿಕ್ಷಕರಾಗಿ ಬದುಕು ರೂಪಿಸಿಕೊಂಡರು. ನನಗೂ ಜೀವನ ಪಾಠ ಕಲಿಸಿದ 'ಗುರು' & 'ಗಾಡ್ ಫಾದರ್' ನನ್ನಪ್ಪ. ಓದು ಮತ್ತು ಬರವಣಿಗೆ ನನ್ನ ಹವ್ಯಾಸ. ಕೋಟೆ-ಕೊತ್ತಲು‌, ಕಾಡು-ಮೇಡು‌‌‌ ಸುತ್ತಾಟ, ಚಾರಣವೆಂದರೆ ಪ್ರಾಣಪ್ರೀತಿ. ಹಳೇ ಹಿಂದಿ ಹಾಡು, ಗಝಲ್, ಜನಪದ, ಭಾವಗೀತೆಗಳು ಮತ್ತು ಭಜನೆ ನನಗಿಷ್ಟ. ಕಾಲೇಜು ದಿನಗಳಲ್ಲಿದ್ದ ಕ್ರಿಕೆಟ್ ಹುಚ್ಚು ಕಡಿಮೆ ಆಗಿದೆ. ಕೋಟೆನಾಡು‌ ಚಿತ್ರದುರ್ಗ ಜಿಲ್ಲೆಯ ಟಿವಿ9 ಪ್ರತಿನಿಧಿಯಾಗಿ ಒಂದೂವರೆ ದಶಕದಿಂದ ಕಾರ್ಯ ನಿರ್ವಹಿಸುತ್ತಿದ್ದೇನೆ. 'ಹೆಣ್ಣಾಗಿದ್ದೇ ತಪ್ಪಾ?' ಅಭಿಯಾನದ ಮೂಲಕ ಮೌಢ್ಯದ ವಿರುದ್ಧ ಜಾಗೃತಿ, 'ವಿಷಾಮೃತ' ಅಭಿಯಾನದ ಮೂಲಕ ನೀರಿನ ಕುರಿತು ಸರ್ಕಾರದ ಕಣ್ತೆರೆಸುವ ಕಾರ್ಯ, 'ಕೆರೆ ಉಳಿಸಿ' ಅಭಿಯಾನದ ಮೂಲಕ ಜಲಮೂಲಗಳ ಸಂರಕ್ಷಣೆ, 'ಆಪರೇಷನ್ ಚಿನ್ನ' ಸರಣಿ ವರದಿ ಮೂಲಕ ವಂಚಕರ ಜಾಲ ಬೇಧಿಸುವ ಕರ್ತವ್ಯ, ಬುಡಕಟ್ಟು ಸಮುದಾಯಗಳ ಜೀವನ, ಸಂಸ್ಕೃತಿ, ಆಚರಣೆಗಳ ಅನಾವರಣ, ಬಯಲುಸೀಮೆಯ ರೈತರ ಸಂಕಷ್ಟ, ಭದ್ರಾ ಮೇಲ್ದಂಡೆ ಯೋಜನೆ ಅಗತ್ಯತೆ ಕುರಿತು ವರದಿ, ಭ್ರಷ್ಟರ ಮುಖವಾಡ ಬಯಲು, ಕಾವಿಧಾರಿಗಳ ಕಪಟತನ ತೆರೆದಿಡುವುದು ಸೇರಿ ಅನೇಕ ಜೀವಪರ, ಜನಪರ ವರದಿಗಾರಿಕೆಗೆ ಟಿವಿ9 ವಾಹಿನಿಯಲ್ಲಿ ಅವಕಾಶ ಸಿಕ್ಕಿದ್ದು ಹೆಮ್ಮೆಯ ಸಂಗತಿ.

Read More
Follow Us