ಶಿಕ್ಷಕರ ನೇಮಕಾತಿಯಲ್ಲಿ ಅಕ್ರಮ ಪ್ರಕರಣ: ಚಿತ್ರದುರ್ಗದಲ್ಲಿ ಐವರು, ಕೋಲಾರದಲ್ಲಿ 25 ಶಿಕ್ಷಕರು ವಶಕ್ಕೆ

| Updated By: ಆಯೇಷಾ ಬಾನು

Updated on: Oct 20, 2022 | 11:44 AM

ಶಿಕ್ಷಕರ ನೇಮಕಾತಿಯಲ್ಲಿ ಅಕ್ರಮ ಪ್ರಕರಣ ಸಂಬಂಧ ಚಿತ್ರದುರ್ಗದಲ್ಲಿ ಐವರು, ಕೋಲಾರದಲ್ಲಿ 25 ಶಿಕ್ಷಕರು ಸಿಐಡಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಪ್ರಕರಣ ಸಂಬಂಧ ತನಿಖೆ ಮುಂದುವರೆದಿದೆ.

ಶಿಕ್ಷಕರ ನೇಮಕಾತಿಯಲ್ಲಿ ಅಕ್ರಮ ಪ್ರಕರಣ: ಚಿತ್ರದುರ್ಗದಲ್ಲಿ ಐವರು, ಕೋಲಾರದಲ್ಲಿ 25 ಶಿಕ್ಷಕರು ವಶಕ್ಕೆ
ಸಾಂದರ್ಭಿಕ ಚಿತ್ರ
Follow us on

ಚಿತ್ರದುರ್ಗ: 2014-15ರಲ್ಲಿ ಶಿಕ್ಷಕರ ನೇಮಕಾತಿಯಲ್ಲಿ ನಡೆದಿದ್ದ ಅಕ್ರಮ ಪ್ರಕರಣ(Teachers Recruitment Scam) ಸಂಬಂಧ ಚಿತ್ರದುರ್ಗ ಜಿಲ್ಲೆಯಲ್ಲಿ ಸಿಐಡಿ(CID) ಅಧಿಕಾರಿಗಳು ಕಾರ್ಯಚರಣೆ ನಡೆಸಿ ಐವರು ಶಿಕ್ಷಕರನ್ನು ಬಂಧಿಸಿದ್ದಾರೆ. ಹಾಗೂ ಕೋಲಾರ ಜಿಲ್ಲೆಯಲ್ಲಿ 25 ಜನ ಶಿಕ್ಷಕರನ್ನು ವಶಕ್ಕೆ ಪಡೆಯಲಾಗಿದೆ. ಬೆಂಗಳೂರಿನಿಂದ ಚಿತ್ರದುರ್ಗಕ್ಕೆ ಬಂದಿದ್ದ ಸಿಐಡಿ ಅಧಿಕಾರಿಗಳು ಕಾರ್ಯಚರಣೆ ನಡೆಸಿ ಮೊಳಕಾಲ್ಮೂರು ತಾಲೂಕಿನ ನಾಗಸಮುದ್ರ ಗ್ರಾಮದ ಶಾಲಾ ಶಿಕ್ಷಕ ಕರಿಬಸಪ್ಪ ಐರಾಣಿ, ಬಾಂಡ್ರಾವಿ ಗ್ರಾಮದ ಶಾಲಾ ಶಿಕ್ಷಕಿ ಸವಿತಾ, ಹೊಳಲ್ಕೆರೆ ತಾಲೂಕಿನ ಮದ್ದೇರು ಗ್ರಾಮದ ಶಾಲಾ ಶಿಕ್ಷಕ ಕೊಟ್ರಪ್ಪ, ಹಿರೇಕಂದವಾಡಿ ಗ್ರಾಮದ ಶಾಲಾ ಶಿಕ್ಷಕ ದೀಪಕ್ ಪೂಜಾರಿ, ಹಿರಿಯೂರು ತಾಲೂಕಿನ ಯರಬಳ್ಳಿ ಗ್ರಾಮದ ಶಾಲಾ ಶಿಕ್ಷಕ ಪಿ.ಏಕಾಂತ ಸೇರಿ ಐವರನ್ನು ಬಂಧಿಸಿದ್ದಾರೆ.

ಇನ್ನು ಮತ್ತೊಂದೆಡೆ ಕೋಲಾರ ಜಿಲ್ಲೆಯಲ್ಲಿ CID ಪೊಲೀಸರು ಕಾರ್ಯಾಚರಣೆ ನಡೆಸಿ 25 ಜನ ಶಿಕ್ಷಕರನ್ನು ವಶಕ್ಕೆ ಪಡೆದಿದ್ದಾರೆ. ಜಿಲ್ಲೆಯ ಎಲ್ಲಾ ತಾಲೂಕಿನಲ್ಲಿ CID ಕಾರ್ಯಾಚರಣೆ ನಡೆಸಿದ್ದು ಮಹಿಳಾ ಶಿಕ್ಷಕರು ಸಹ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಬಂಗಾರಪೇಟೆಯಲ್ಲಿ 11ಜನ, ಶ್ರೀನಿವಾಸಪುರದಲ್ಲಿ 06, ಮುಳಬಾಗಿಲು -03, ಮಾಲೂರು -02, ಕೆಜಿಎಫ್ -01, ಕೋಲಾರ -02 ಸೇರಿದಂತೆ 25ಜನ ಶಿಕ್ಷಕರನ್ನು ವಶಕ್ಕೆ ಪಡೆಯಲಾಗಿದೆ ಎಂದು ಡಿಡಿಪಿಐ ಕೃಷ್ಣಮೂರ್ತಿ ಮಾಹಿತಿ ನೀಡಿದರು. ಇದನ್ನೂ ಓದಿ: Big News: ಶಿಕ್ಷಕರ ನೇಮಕಾತಿ ಹಗರಣ: ಇಡಿ ಅಧಿಕಾರಿಗಳಿಂದ ಟಿಎಂಸಿ ಶಾಸಕ ಮಾಣಿಕ್ ಭಟ್ಟಾಚಾರ್ಯ ಬಂಧನ

ಘಟನೆ ಹಿನ್ನೆಲೆ

2014-15 ರಲ್ಲಿ ನಡೆದ ಪ್ರಾಥಮಿಕ ಹಾಗೂ ಫ್ರೌಢ ಶಿಕ್ಷಣ ಶಿಕ್ಷಕರ ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಎಂದು ವಿಧಾನಸೌಧ ಠಾಣೆಯಲ್ಲಿ ಐಪಿಸಿ ಸೆಕ್ಷನ್ 420, 465, 768, 471ರ ಅಡಿ ಎಫ್​ಐಆರ್​ ದಾಖಲಾಗಿತ್ತು. ಪ್ರಕರಣವನ್ನು ಸರ್ಕಾರ ಸಿಐಡಿಗೆ ವರ್ಗಾಯಿಸಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಸೆಪ್ಟೆಂಬರ್​ 6 ರಂದು ಸಿಐಡಿ ಅಧಿಕಾರಿಗಳು 12ಜನ ಆರೋಪಿಗಳನ್ನು ಬಂಧಿಸಿದ್ದರು. ತುಮಕೂರಿನ 10 ಜನ, ವಿಜಯಪುರದ 2 ಶಿಕ್ಷಕರನ್ನು ಸೆರೆ‌ ಹಿಡಿಯಲಾಗಿತ್ತು.

ದಾವಣಗೆರೆಯಲ್ಲಿ ಮೂವರು ಆರೋಪಿಗಳ ಬಂಧನ

ಸಿಐಡಿ ಪೊಲೀಸರು ದಾವಣಗೆರೆಯಲ್ಲಿ ಮೂವರು ಆರೋಪಿಗಳ ಬಂಧಸಿದ್ದರು. ಯಾಸ್ಮೀನ್ ಅಫ್ಜಾ, ಚೈತ್ರಾ ಬಿಸಿ, ಅಶೋಕ್ ನಾಯಕ್ ಬಂಧಿತ ಆರೋಪಿಗಳು. ಆರೋಪಿಗಳು ದಾವಣಗೆರೆಯಲ್ಲಿ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಮೂವರು ಅಕ್ರಮವಾಗಿ ನೇಮಕವಾಗಿದ್ದರು.

Published On - 11:44 am, Thu, 20 October 22