ಚಿತ್ರದುರ್ಗ: ಗಾಂಧಿವಾದಿಗಳ ನೆಲೆಬೀಡು ತುರುವನೂರು; ಸ್ವಾತಂತ್ರ್ಯ ಹೋರಾಟದ ತವರೂರಿನಲ್ಲಿದೆ ಗಾಂಧಿ ಗುಡಿ

| Updated By: preethi shettigar

Updated on: Aug 15, 2021 | 8:29 AM

Independence Day 2021: ಗಾಂಧಿ ಗುಡಿ ಎಂದೇ ಗ್ರಾಮೀಣ ಭಾಗದ ಜನ ತುರುವನೂರಿನ ಕೋಟೆ ಸ್ಥಳವನ್ನು ಕರೆಯುತ್ತಾರೆ. ರಾಷ್ಟ್ರೀಯ ಹಬ್ಬಗಳ ಸಂದರ್ಭದಲ್ಲಿ ಗ್ರಾಮದ ಮುಖಂಡರು ಗಾಂಧೀಜಿ ಗುಡಿಯಲ್ಲಿ ವಿಶೇಷ ಪೂಜೆ ಸಲ್ಲಿಸುತ್ತಾರೆ.

ಚಿತ್ರದುರ್ಗ: ಗಾಂಧಿವಾದಿಗಳ ನೆಲೆಬೀಡು ತುರುವನೂರು; ಸ್ವಾತಂತ್ರ್ಯ ಹೋರಾಟದ ತವರೂರಿನಲ್ಲಿದೆ ಗಾಂಧಿ ಗುಡಿ
ಸ್ವಾತಂತ್ರ್ಯ ಹೋರಾಟದ ತವರೂರಿನಲ್ಲಿದೆ ಗಾಂಧಿ ಗುಡಿ
Follow us on

ಚಿತ್ರದುರ್ಗ: ಮೊಟ್ಟಮೊದಲ ಬಾರಿಗೆ ಸ್ವಾತಂತ್ರ್ಯ ಹೋರಾಟದ ಕಿಚ್ಚು ಹೊತ್ತಿಸಿದ ಪುಣ್ಯಭೂಮಿ ಚಿತ್ರದುರ್ಗ ಜಿಲ್ಲೆಯ ತುರುವನೂರು ಗ್ರಾಮ. ಸ್ವಾತಂತ್ರ್ಯ ಹೋರಾಟಗಾರರ ತವರು ನೆಲ, ಗಾಂಧಿವಾದಿಗಳ ನೆಲೆಬೀಡು ಸಹ ಈ ತುರುವನೂರು ಗ್ರಾಮ. ಹೀಗಾಗಿ ಇಲ್ಲಿ ಮಹಾತ್ಮ ಗಾಂಧೀಜಿ ಅವರ ದೇಗುಲವನ್ನೇ ನಿರ್ಮಿಸಿ ಪೂಜಿಸಿ ಆರಾಧಿಸುವ ವೈಶಿಷ್ಟ್ಯ ಸಂಪ್ರದಾಯವನ್ನು ಬೆಳೆಸಿಕೊಂಡು ಬರಲಾಗಿದೆ.

ಸ್ವಾತಂತ್ರ್ಯೋತ್ಸವ, ಗಣರಾಜ್ಯೋತ್ಸವ, ಗಾಂಧಿ ಜಯಂತಿಯ ಸಂದರ್ಭದಲ್ಲಿ ಇಡೀ ನಾಡಿನ ಜನರು ತುರುವನೂರಿನತ್ತ ಚಿತ್ತ ಹರಿಸಿ ಗೌರವ ವಂದನೆ ಸಲ್ಲಿಸುವಂತಹ ಚಾರಿತ್ರಿಕ ಹಿನ್ನೆಲೆಯ ಊರು ತುರುವನೂರು. ಸ್ವಾತಂತ್ರ್ಯ ಹೋರಾಟದ ಕಿಚ್ಚು ದೇಶದೆಲ್ಲೆಡೆ ಜೋರಾಗಿದ್ದ ವೇಳೆ ತುರುವನೂರು ಗ್ರಾಮದ ಜನರು ಮುನ್ನುಗ್ಗಿ ಹೋರಾಟದಲ್ಲಿ ಭಾಗಿ ಆಗಿದ್ದರು. 1942ರಲ್ಲಿ ಮುಂಬಯಿನಲ್ಲಿ ನಡೆದ ಅಧಿವೇಶನದಲ್ಲಿ ಪೂರ್ಣ ಸ್ವರಾಜ್ಯ ಚಳುವಳಿಗೆ ಕರೆ ಕೊಡಲಾಗಿತ್ತು. ಆಗ ಕೋಟೆನಾಡಿನಲ್ಲೂ ಹೋರಾಟದ ಕಾವು ಹೆಚ್ಚಾಗಿದ್ದು, ಜಿಲ್ಲೆಯಲ್ಲಿ ಮೊದಲ ಬಾರಿಗೆ ಈಚಲ ಮರ ಚಳುವಳಿ ಇದೇ ಗ್ರಾಮದಿಂದ ಆರಂಭವಾಗಿತ್ತು.

ಗ್ರಾಮದ ಹಳ್ಳದ ಬಳಿಯ ಪ್ರದೇಶದಲ್ಲಿ ಹುಲುಸಾಗಿ ಬೆಳೆದಿದ್ದ ಈಚಲ ಮರಗಳ ಮೇಲೆ ಬ್ರಿಟೀಷರ ಕಣ್ಣು ಬಿದ್ದಿದ್ದು, ಇಡೀ ಗ್ರಾಮದ ಜನ ಈಚಲ ಮರ ಚಳುವಳಿ ಮೂಲಕ ಹೋರಾಟಕ್ಕೆ ಧುಮುಕಿದ್ದರು. ಎಸ್.ನಿಜಲಿಂಗಪ್ಪ ಅವರ ನೇತೃತ್ವದಲ್ಲಿ ನಡೆದ ಚಳುವಳಿಯಲ್ಲಿ ಬಳ್ಳಾರಿ ಸಿದ್ದಮ್ಮ, ಗೌಡರ ತಿಪ್ಪಣ್ಣ ಸೇರಿದಂತೆ ತುರುವನೂರಿನ ಸುಮಾರು 25 ಜನರು ಬಂಧನಕ್ಕೆ ಒಳಗಾಗಿದ್ದರು.

ಸ್ವಾತಂತ್ರ್ಯ ಹೋರಾಟದಲ್ಲಿ ತುರುವನೂರಿನ ಜನ ಸಕ್ರಿಯವಾಗಿ ತೊಡಗಿಸಿಕೊಂಡು ಇತರೆ ಗ್ರಾಮಗಳ ಜನರಿಗೆ ಹೋರಾಟಕ್ಕೆ ಧುಮುಕಲು ಸ್ಪೂರ್ತಿ ಆಗಿದ್ದರು. ಸ್ವಾತಂತ್ರ್ಯ ನಂತರ ಈ ಗ್ರಾಮದ 136 ಜನರನ್ನು ಸ್ವಾತಂತ್ರ್ಯ ಹೋರಾಟಗಾರರೆಂದು ಗುರುತಿಸಿ ಸರ್ಕಾರ ಮಾಸಾಶನ ನೀಡಿದೆ. ಇತ್ತೀಚೆಗೆ ಬಹುತೇಕ ಸ್ವಾತಂತ್ರ್ಯ ಹೋರಾಟಗಾರರು ದೈವಾಧೀನರಾಗಿದ್ದಾರೆ. ಈಗ ಸ್ವಾತಂತ್ರ್ಯ ಹೋರಾಟಗಾರರ ಪತ್ನಿ ಮತ್ತು ಆಶ್ರಿತರು ಸೇರಿ 17 ಜನ ಮಾಸಾಶನ ಪಡೆಯುತ್ತಿದ್ದಾರೆ.

ಗಾಂಧಿ ಗುಡಿ

ಮಹಾತ್ಮಾ ಗಾಂಧೀಜಿ ಅವರ ಹೋರಾಟದಿಂದ ಪ್ರಭಾವಿತರಾಗಿ ಈ ಗ್ರಾಮದ ಅನೇಕರು ಹೋರಾಟಕ್ಕೆ ಪ್ರವೇಶಿಸಿದ್ದರು. ಗಾಂಧಿ ತತ್ವ ಆದರ್ಶಗಳನ್ನು ಅಳವಡಿಸಿಕೊಂಡು ಹೋರಾಟ ಮತ್ತು ಬದುಕು ಕಟ್ಟಿಕೊಂಡಿದ್ದರು. ಅಂತೆಯೇ ಸ್ವಾತಂತ್ರ್ಯ ನಂತರದಲ್ಲಿ ಸ್ವಾತಂತ್ರ್ಯ ಹೋರಾಟ ಮತ್ತು ಗಾಂಧೀಜಿ ಅವರ ಸ್ಮರಣಾರ್ಥವಾಗಿ ಗ್ರಾಮದ ಕೋಟೆಯ ಬತೇರಿ ಸ್ಥಳದಲ್ಲಿ ಗಾಂಧೀಜಿ ಅವರ ದೇಗುಲ ನಿರ್ಮಿಸಲಾಗಿದೆ. ಆಳೆತ್ತರದ ಗಾಂಧೀಜಿ ಅವರ ಪುತ್ಥಳಿಯನ್ನು ಪ್ರತಿಷ್ಠಾಪಿಸಲಾಗಿದೆ. ಫೆಬ್ರವರಿ 1, 1968 ರಂದು ಗಾಂಧೀಜಿ ದೇಗುಲ ಮತ್ತು ಪುತ್ಥಳಿ ಲೋಕಾರ್ಪಣೆ ಆಗಿದೆ.

ಗಾಂಧಿ ಗುಡಿ ಎಂದೇ ಗ್ರಾಮೀಣ ಭಾಗದ ಜನ ತುರುವನೂರಿನ ಕೋಟೆ ಸ್ಥಳವನ್ನು ಕರೆಯುತ್ತಾರೆ. ರಾಷ್ಟ್ರೀಯ ಹಬ್ಬಗಳ ಸಂದರ್ಭದಲ್ಲಿ ಗ್ರಾಮದ ಮುಖಂಡರು ಗಾಂಧೀಜಿ ಗುಡಿಯಲ್ಲಿ ವಿಶೇಷ ಪೂಜೆ ಸಲ್ಲಿಸುತ್ತಾರೆ. ಗ್ರಾಮದಲ್ಲಿ ಯಾವುದೇ ವಿಶೇಷ ಕಾರ್ಯಕ್ರಮಗಳು, ಅಭಿವೃದ್ಧಿ ಯೋಜನೆಗಳು ನಡೆದರೂ ಗಾಂಧೀಜಿ ಪುತ್ಥಳಿಗೆ ಮಾಲಾರ್ಪಣೆ ಸಲ್ಲಿಸುವ ಮೂಲಕವೇ ಆರಂಭ ಆಗುತ್ತದೆ. ಇಂದಿಗೂ ಸ್ವಾತಂತ್ರ್ಯ ಹೋರಾಟದ ತವರೂರಾದ ತುರುವನೂರು ಸ್ಪೂರ್ತಿ ನೀಡುವ ಗ್ರಾಮವಾಗಿದೆ ಅಂದರೆ ಅತಿಶಯೋಕ್ತಿ ಆಗದು.

ನನ್ನ ಪತಿ ಗೌಡರ ತಿಪ್ಪಣ್ಣ ಈಚಲ ಮರ ಚಳುವಳಿಯಲ್ಲಿ ಭಾಗಿಯಾಗಿ ದೇಶಕ್ಕಾಗಿ ಹೋರಾಟ ನಡೆಸಿದ್ದರು. ನಮ್ಮ ಗ್ರಾಮದ ಅನೇಕ ಜನರು ಸ್ವಾತಂತ್ರ್ಯ ಹೋರಾಟದಲ್ಲಿ ಜೀವ ಪಣಕ್ಕಿಟ್ಟು ಹೋರಾಡಿದ್ದರು ಎಂಬುದು ಗ್ರಾಮದ ನಮಗೆಲ್ಲ ಹೆಮ್ಮೆಯ ಸಂಗತಿ. ಪತಿ ಮರಣಾ ನಂತರ ನನಗೆ ಮಸಾಶನ ದೊರೆಯುತ್ತಿದೆ ಎಂದು ಹೋರಾಟಗಾರರ ಪತ್ನಿ ಸರ್ವ ಮಂಗಳಮ್ಮ ಹೇಳಿದ್ದಾರೆ.

ಸ್ವಾತಂತ್ರ್ಯ ಹೋರಾಟದ ಕಿಚ್ಚು ಹೊತ್ತಿಸಿದ ಗ್ರಾಮಸ್ಥರು ಎಂದು ಹೇಳಿಕೊಳ್ಳುವುದೇ ನಮಗೆ ಗೌರವ ಮತ್ತು ಹೆಮ್ಮೆಯ ಸಂಗತಿ ಆಗಿದೆ. ನಮ್ಮ ಪೂರ್ವಜರ ಹೋರಾಟ ಮತ್ತು ಗಾಂಧೀಜಿ ಅವರ ಆದರ್ಶ ನಮಗೂ ಮತ್ತು ಯುವ ಪೀಳಿಗೆಗೆ ಸ್ಪೂರ್ತಿ. ಇಂದಿಗೂ ನಾವು ಗಾಂಧಿ ಗುಡಿಯಲ್ಲಿ ಪೂಜೆ ಸಲ್ಲಿಸಿಯೇ ಗ್ರಾಮದ ಕೆಲಸಗಳನ್ನು ಆರಂಭಿಸುವ ಮೂಲಕ ಹಿರಿಕರನ್ನು ಸ್ಮರಿಸುತ್ತೇವೆ ಎಂದು ಗ್ರಾಮದ ಮುಖಂಡ ಕಾಕಿ ಹನುಮಂತರೆಡ್ಡಿ ಅಭಿಪ್ರಾಯಪಟ್ಟಿದ್ದಾರೆ.

ವರದಿ : ಬಸವರಾಜ ಮುದನೂರ್

ಇದನ್ನೂ ಓದಿ:
75th Indian Independence Day: 100ನೇ ಸ್ವಾತಂತ್ರ್ಯ ದಿನಾಚರಣೆ ಹೊತ್ತಿಗೆ ಆದರ್ಶ ಭಾರತ ನಿರ್ಮಾಣದ ಗುರಿ: ಪ್ರಧಾನಿ ಮೋದಿ

ಸ್ವಾತಂತ್ರೋತ್ಸವದ ಜತೆಗೆ ಧಾರವಾಡದ 75 ವರ್ಷದ ಈ ರಾಷ್ಟ್ರಧ್ವಜಕ್ಕೂ ಅಮೃತ ಮಹೋತ್ಸವದ ಸಂಭ್ರಮ!