ಸರ್ಕಾರಿ ಶಾಲೆ ಅಂದಾಕ್ಷಣ ಮೂಗು ಮುರಿಯುವವರೇ ಹೆಚ್ಚು. ಅಂತೆಯೇ ಸರ್ಕಾರಿ ಶಾಲೆಯ ದುರವಸ್ಥೆಗೆ ಕನ್ನಡಿ ಹಿಡಿಯುವ ಅನೇಕ ಉದಾಹರಣೆಗಳಿವೆ. ಆದ್ರೆ, ಕೋಟೆನಾಡು ಚಿತ್ರದುರ್ಗದಲ್ಲಿ ಮಾತ್ರ ಹಿರಿಯ ವಿದ್ಯಾರ್ಥಿಗಳು, ನಾಗರಿಕರು ಶಾಲಾ ಅಭಿವೃದ್ಧಿಗೆ ಟೊಂಕಕಟ್ಟಿ ನಿಲ್ಲುವ ಮೂಲಕ ಮಾದರಿ ಶಾಲೆಯನ್ನಾಗಿಸಿದ್ದಾರೆ. ಈ ಕುರಿತು ವರದಿ ಇಲ್ಲಿದೆ. ಅಪರೂಪದ ಉಪಯುಕ್ತ ಗೋಡೆ ಚಿತ್ರಗಳ ಮೂಲಕ ವಿದ್ಯಾರ್ಥಿಗಳ (students) ಸೆಳೆಯುತ್ತಿರುವ ಶಾಲೆ. ಕಾನ್ವೆಂಟ್ ಮಾದರಿ ಶಾಲೆ ಕಂಡು ವಿದ್ಯಾರ್ಥಿಗಳು ದಿಲ್ ಖುಷ್. ಖಾಸಗಿ ಶಾಲೆಗೆ ಸೆಡ್ಡು ಹೊಡೆಯುವಂತೆ ನವೀಕರಣಗೊಂಡಿರುವ ಸರ್ಕಾರಿ ಶಾಲೆ. ಈ ದೃಶ್ಯಗಳು ಕಂಡು ಬಂದಿದ್ದು ಕೋಟೆನಾಡು ಚಿತ್ರದುರ್ಗ (Chitradurga) ನಗರದ ಕವಾಡಿಗರಹಟ್ಟಿಯ (Kavadigarhatti) ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ (Government School).
ಹೌದು, ಕೆಲ ತಿಂಗಳ ಹಿಂದಷ್ಟೇ ಕಲುಷಿತ ನೀರಿನ ಅವಘಡದಿಂದ ( Contaminated water) ಕವಾಡಿಗರಹಟ್ಟಿ ಭಾರೀ ಸುದ್ದಿಯಾಗಿತ್ತು. ಅದೇ ಕವಾಡಿಗರಹಟ್ಟಿಯ ಸರ್ಕಾರಿ ಶಾಲೆ ಈಗ ನಾಡಿನ ಗಮನಸೆಳೆಯುತ್ತಿದೆ. ಹಿರಿಯ ನಾಗರಿಕರು, ಹಳೇ ವಿದ್ಯಾರ್ಥಿಗಳು ಮತ್ತು ಎಬಿವಿಪಿ ಕಾರ್ಯಕರ್ತರು ಸರ್ಕಾರಿ ಶಾಲೆಗೆ ಸುಣ್ಣ ಬಣ್ಣ ಬಳಿದು ನವೀಕರಣಗೊಳಿಸಿದ್ದಾರೆ. ಅಷ್ಟೇ ಅಲ್ಲದೆ, ವಿದ್ಯಾರ್ಥಿಗಳಿಗೆ ಉಪಯುಕ್ತ ಮಾಹಿತಿಯ ಗೋಡೆ ಚಿತ್ರಗಳನ್ನು ಬರೆಯುವ ಮೂಲಕ ವಿದ್ಯಾರ್ಥಿಗಳನ್ನು ಬರಸೆಳೆಯಲಾಗುತ್ತಿದೆ. ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಈ ಬಗ್ಗೆ ಖುಷಿ ವ್ಯಕ್ತಪಡಿಸಿದ್ದಾರೆ.
Also read: ಇನ್ಮುಂದೆ ಕಲುಷಿತ ನೀರು ಸೇವಿಸಿ ಮರಣ ಹೊಂದಿದರೇ ಜಿ.ಪಂ ಸಿಇಒಗಳೇ ನೇರ ಹೊಣೆ: ಸಿಎಂ ಸಿದ್ದರಾಮಯ್ಯ
ಇನ್ನು ಶಾಲೆಯಲ್ಲಿ ಪಠ್ಯಕ್ಕೆ ಅನುಗುಣವಾಗಿ ವಿಜ್ಞಾನ, ಗಣಿತಕ್ಕೆ ಸಂಬಂಧಿಸಿದ ಚಿತ್ರಗಳು, ನಲಿ ಕಲಿ ಮಕ್ಕಳಿಗೆ ಅಕ್ಷರ ಅಭ್ಯಾಸ, ಹಣ್ಣು ತರಕಾರಿ, ವಾರಗಳು, ವಿರುದ್ಧಾರ್ಥಕ ಪದಗಳು, ಸೌರ ಮಂಡಲ, ಚಂದ್ರಯಾನ ಸೇರಿದಂತೆ ಇತರೆ ಚಿತ್ರಗಳು ವಿದ್ಯಾರ್ಥಿಗಳ ಗಮನ ಸೆಳೆಯುತ್ತಿವೆ.
ಚಿತ್ರ ಕಲಾವಿದರಾದ ಅನುಶ್ರೀ, ತೇಜಸ್ ಸೇರಿದಂತ ಸುಮಾರು 10 ಜನರ ತಂಡ ಶಾಲೆ ನವೀಕರಣಕ್ಕೆ ಟೀಮ್ ವರ್ಕ್ ಮಾಡಿದೆ. ಹೀಗಾಗಿ, ಹಿರಿಯ ನಾಗರಿಕರು, ಹಳೇ ವಿದ್ಯಾರ್ಥಿಗಳು ಮತ್ತು ಎಬಿವಿಪಿ ಕಾರ್ಯಕರ್ತರ ಸತ್ಕಾರ್ಯದಿಂದ ಕವಾಡಿಗರಹಟ್ಟಿ ಶಾಲೆ ಮಾದರಿ ಸರ್ಕಾರಿ ಶಾಲೆಯಾಗಿ ರೂಪುಗೊಂಡಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ