
ಕೋಟೆನಾಡು ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿ ಗ್ರಾಮದ ಹಿರೇಕೆರೆಯಲ್ಲಿ ಈ ವರ್ಷ ಭರ್ತಿ ಮಳೆ ಸುರಿದಿದ್ದು, ಇದೇ ಸಂದರ್ಭದಲ್ಲಿ ಐತಿಹಾಸಿಕ ಹಿರೇಕೆರೆಯಲ್ಲಿ ತಿಪ್ಪೇರುದ್ರಸ್ವಾಮಿ ತೆಪ್ಪೋತ್ಸವ ನಡೆದಿದೆ. ಸಾವಿರಾರು ಜನರು ತೆಪ್ಪೋತ್ಸವದಲ್ಲಿ ಭಾಗಿಯಾಗಿದ್ದಾರೆ.

ದಶಕದ ಬಳಿಕ ಈವರ್ಷ ಹಿರೇಕೆರೆ ತುಂಬಿ ಕೋಡಿ ಬಿದ್ದಿದೆ. ಹೀಗಾಗಿ, ಗ್ರಾಮದ ಜನರು, ನಾಯಕನಹಟ್ಟಿ ತಿಪ್ಪೇರುದ್ರಸ್ವಾಮಿ ದೇಗುಲದ ಭಕ್ತರು ವಿಶೇಷ ತೆಪ್ಪೋತ್ಸವ ಆಯೋಜಿಸಿದ್ದರು.

ಹಿರೇಕೆರೆಯಲ್ಲಿ ಅದ್ಧೂರಿಯಾಗಿ ಗುರು ತಿಪ್ಪೇರುದ್ರಸ್ವಾಮಿ ತೆಪ್ಪೋತ್ಸವ ನಡೆದಿದ್ದು, ತೆಪ್ಪೋತ್ಸವಕ್ಕೆ ಮೊಳಕಾಲ್ಮೂರು ಕ್ಷೇತ್ರದ ಶಾಸಕರು ಆಗಿರುವ ಸಾರಿಗೆ ಸಚಿವ ಬಿ.ಶ್ರೀರಾಮುಲು ಖುದ್ದಾಗಿ ತೆಪ್ಪೋತ್ಸವದಲ್ಲಿ ಭಕ್ತನಾಗಿ ಭಾಗಿಯಾಗಿ ತೆಪ್ಪೋತ್ಸವಕ್ಕೆ ದಾರಿ ಮಾಡಿಕೊಡುವ ಕೆಲಸ ಮಾಡಿದರು.

ಈ ಭಾಗಕ್ಕೆ ಭಗೀರಥನಂತೆ ಬಂದ ಸಂತ ಗುರು ತಿಪ್ಪೇರುದ್ರಸ್ವಾಮಿ ‘ಮಾಡಿದಷ್ಟು ನೀಡು ಭೀಕ್ಷೆ' ಎಂಬ ನುಡಿಯೊಂದಿಗೆ ಜನರನ್ನು ಒಳಗೂಡಿಸಿಕೊಂಡು ಏಳು ಕೆರೆಗಳನ್ನು ನಿರ್ಮಿಸಿದ್ದರು. ಗರ್ಭಿಣಿಯರಿಗೆ ಒಂದೂವರೆ ಪಟ್ಟು ಕೂಲಿ ಕೊಟ್ಟಿದ್ದರು ಎಂಬ ಪ್ರತೀತಿಯಿದೆ.

ಆ ಮೂಲಕ ಈ ಭಾಗದ ಜನರ ಪಾಲಿಗೆ ಭಗೀರಥನಾಗಿ ಕಷ್ಟ ಕಾರ್ಪಣ್ಯಗಳಿಗೆ ಪರಿಹಾರ ನೀಡಿ ದೈವತ್ವಕ್ಕೇರಿದರು ಎಂಬ ನಂಬಿಕೆಯಿದೆ. ಅಂತೆಯೇ ನಾಯಕನಹಟ್ಟಿಯಲ್ಲಿ ಇಂದಿಗೂ ಗುರು ತಿಪ್ಪೇರುದ್ರಸ್ವಾಮಿ ಭವ್ಯ ದೇಗುಲವಿದ್ದು ಲಕ್ಷಾಂತರ ಜನ ಭಕ್ತರು ಜಾತ್ರೆಗೆ ಸೇರುತ್ತಾರೆ.

ಒಟ್ಟಾರೆಯಾಗಿ ಕೋಟೆನಾಡು ಚಿತ್ರದುರ್ಗದ ನಾಯಕನಹಟ್ಟಿಯ ಹಿರೇಕರೆಯ ತೆಪ್ಪೋತ್ಸವ ಅದ್ಧೂರಿಯಾಗಿ ನಡೆದಿದೆ. ಸಚಿವರಿಂದ ಹಿಡಿದು ಜನ ಸಾಮಾನ್ಯರವರೆಗೆ ಸಾಗರೋಪಾದಿಯಲ್ಲಿ ಜನರು ಭಾಗಿಯಾಗಿದ್ದಾರೆ. ತೆಪ್ಪೋತ್ಸವದ ಸಂಭ್ರಮದೊಂದಿಗೆ ಗುರು ತಿಪ್ಪೇರುದ್ರಸ್ವಾಮಿಗೆ ನಮಿಸಿ ಕೃತಾರ್ಥ ಭಾವ ಅನುಭವಿಸಿದ್ದಾರೆ.