ಚಿತ್ರದುರ್ಗ: 7 ಸುತ್ತಿನ ಕೋಟೆಯಲ್ಲಿ ಏಳೇಳು ಸುತ್ತು ಸಮಸ್ಯೆಗಳ ಕಾಟ! ಕೇಂದ್ರ ಸಚಿವ ನಾರಾಯಣಸ್ವಾಮಿ-ಪುರಾತತ್ವ ಇಲಾಖೆ ಮಾತ್ರ ಗಪ್​ಚುಪ್!

Chitradurga Fort: ಕೋಟೆನಾಡಿನ ಐತಿಹಾಸಿಕ ಏಳು ಸುತ್ತಿನ ಕೋಟೆಯಲ್ಲಿ ಮೂಲ ವ್ಯವಸ್ಥೆ ಸಮರ್ಪಕವಾಗಿಲ್ಲದೆ ಪ್ರವಾಸಿಗರ ಪರದಾಟ ಹೇಳತೀರದಾಗಿದೆ. ಸಂಸದ, ಕೇಂದ್ರ ಸಚಿವ ನಾರಾಯಣಸ್ವಾಮಿ, ಪುರಾತತ್ವ ಇಲಾಖೆ ಅಧಿಕಾರಿಗಳು ಮಾತ್ರ ಯಾವುದೇ ಅಭಿವೃದ್ಧಿ ಕೆಲಸ ಮಾಡಿಲ್ಲ ಎಂದು ಸ್ಥಳೀಯರು ಆಕ್ರೋಶಗೊಂಡಿದ್ದಾರೆ.

ಚಿತ್ರದುರ್ಗ: 7 ಸುತ್ತಿನ ಕೋಟೆಯಲ್ಲಿ ಏಳೇಳು ಸುತ್ತು ಸಮಸ್ಯೆಗಳ ಕಾಟ! ಕೇಂದ್ರ ಸಚಿವ ನಾರಾಯಣಸ್ವಾಮಿ-ಪುರಾತತ್ವ ಇಲಾಖೆ ಮಾತ್ರ ಗಪ್​ಚುಪ್!
ಏಳು ಸುತ್ತಿನ ಕೋಟೆಯಲ್ಲಿ ಏಳೇಳು ಸುತ್ತು ಸಮಸ್ಯೆಗಳ ಕಾಟ!
Updated By: ಸಾಧು ಶ್ರೀನಾಥ್​

Updated on: Jul 20, 2023 | 3:23 PM

ಕೋಟೆನಾಡಿನ ಐತಿಹಾಸಿಕ ಏಳು ಸುತ್ತಿನ ಕೋಟೆ (Chitradurga Fort) ವೀಕ್ಷಣೆಗೆ ನಿತ್ಯ ಸಾವಿರಾರು ಜನರು (Tourist) ಬರುತ್ತಾರೆ. ಆದ್ರೆ, ಅಧಿಕಾರಿಗಳ ಬೇಜವಬ್ದಾರಿತನದಿಂದಾಗಿ ಕೋಟೆಯಲ್ಲಿ ಮೂಲ ಸೌಕರ್ಯಗಳ ಕೊರತೆ ಸೃಷ್ಟಿ ಆಗಿದೆ. 8 ಕೋಟಿ ಅನುದಾನ ನೀಡಿ ನಾಲ್ಕು ವರ್ಷ ಕಳೆದರೂ ಭಾರತೀಯ ಪುರಾತತ್ವ ಇಲಾಖೆ (Archaeological Survey of India -ASI) ಅಧಿಕಾರಿಗಳು ಸೈಲೆಂಟಾಗಿರುವ ಪರಿಣಾಮ ಪ್ರವಾಸಿಗರು ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಈ ಕುರಿತು ವರದಿ ಇಲ್ಲಿದೆ. ಏಳು ಸುತ್ತಿನ ಕೋಟೆ ವೀಕ್ಷಣೆಗೆ ಬೆಟ್ಟವೇರಿ ಬರುವ ಜನ. ಐತಿಹಾಸಿಕ ಕೋಟೆಯಲ್ಲಿ ಸ್ವಚ್ಛತೆ ಮರೀಚಿಕೆ. ಕುಡಿಯಲು ನೀರಿಲ್ಲ, ಶೌಚಾಲಯ ವ್ಯವಸ್ಥೆಯೂ ಸಮರ್ಪಕವಾಗಿಲ್ಲದೆ ಜನರ ಪರದಾಟ. ಹೌದು, ಪಾಳೇಗಾರರ ಕಾಲದಲ್ಲಿ ನಿರ್ಮಾಣವಾಗಿರುವ ಈ ಐತಿಹಾಸಿಕ ಏಳು ಸುತ್ತಿನ ಕೋಟೆ ಚಿತ್ರದುರ್ಗ ನಗರದ ಹೃದಯ ಭಾಗದಲ್ಲಿದೆ. ಪಾಳೇಗಾರರ ಕಾಲದಲ್ಲಿ ನಿರ್ಮಾಣವಾದ ಈ ಕೋಟೆಯಲ್ಲಿ ಗಾಳಿ ಮಂಟಪ, ತೂಗುಯ್ಯಾಲೆ ಕಂಬ, ಹಳೇ ಮುರುಘಾಮಠ ಸೇರಿದಂತೆ ವಿವಿಧ ದೇಗುಲಗಳಿವೆ. ವೀರ ವನಿತೆ ಒನಕೆ ಓಬವ್ವನ ಕಿಂಡಿ ಸೇರಿದಂತೆ ಅನೇಕ ಸ್ಮಾರಕಗಳಿವೆ. ಆದ್ರೆ, ಭಾರತೀಯ ಪುರಾತತ್ವ ಇಲಾಖೆ ಅಧಿಕಾರಿಗಳ ಬೇಜವಬ್ದಾರಿತನದಿಂದಾಗಿ ಕೋಟೆಯಲ್ಲಿ ಸ್ವಚ್ಚತೆ ಎಂಬುದು ಮರೀಚಿಕೆ ಆಗಿದೆ.

ಅಷ್ಟೇ ಅಲ್ಲದೆ, ಬೆಟ್ಟವೇರುತ್ತಾ ಕೋಟೆ ವೀಕ್ಷಣೆಗೆಂದು ದಣಿದು ಬಂದ ಪ್ರವಾಸಿಗರಿಗೆ ಇಲ್ಲಿ ಕುಡಿಯಲು ನೀರಿನ ವ್ಯವಸ್ಥೆಯೂ ಇಲ್ಲವಾಗಿದೆ. ನೀರಿನ ಕೇಂದ್ರಗಳು ಕೆಟ್ಟು ಹೋಗಿ ಅನೇಕ ತಿಂಗಳುಗಳೇ ಕಳೆದಿವೆ. ಸಂಜೆಯಾದರೆ ವಿದ್ಯುತ್ ದೀಪಗಳು ಸಹ ಉರಿಯುವುದಿಲ್ಲ. ಶೌಚಾಲಯ ವ್ಯವಸ್ಥೆಯೂ ಸಮರ್ಪಕವಾಗಿಲ್ಲದೆ ಜನ ಹೈರಾಣಾಗುತ್ತಿದ್ದಾರೆ. ಹೀಗಿದ್ರೂ, ಚಿತ್ರದುರ್ಗದ ಸಂಸದ, ಕೇಂದ್ರ ಸಚಿವ ಎ.ನಾರಾಯಣಸ್ವಾಮಿ, ಭಾರತೀಯ ಪುರಾತತ್ವ ಇಲಾಖೆ ಅಧಿಕಾರಿಗಳು ಮಾತ್ರ ಯಾವುದೇ ಅಭಿವೃದ್ಧಿ ಕೆಲಸ ಮಾಡಿಲ್ಲ
ಎಂಬುದು ಸ್ಥಳೀಯರ ಆರೋಪವಾಗಿದೆ.

ಇನ್ನು ಈ ಬಗ್ಗೆ ಪ್ರವಾಸಿಗರು ಮತ್ತು ಸ್ಥಳೀಯ ನಾಗರಿಕರಿಂದ ದೂರುಗಳು ಬಂದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ದಿವ್ಯಪ್ರಭು ಕೋಟೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಭಾರತೀಯ ಪುರಾತತ್ವ ಇಲಾಖೆಯ ಅಧಿಕಾರಿಗಳಿಗೆ ಶೀಘ್ರ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ. ಸ್ವಚ್ಛತೆ ಕಾಪಾಡುವುದು, ನೀರಿನ ವ್ಯವಸ್ಥೆ ಕಲ್ಪಿಸುವುದು ಮತ್ತು ಹೆಚ್ಚುವರಿ ಶೌಚಾಲಯ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲು ಸೂಚಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ಡಿಸಿ ದಿವ್ಯಪ್ರಭು ಕೋಟೆ ಅಭಿವೃದ್ಧಿಗಾಗಿ ಪ್ರವಾಸೋದ್ಯಮ ಇಲಾಖೆಯಿಂದ 8 ಕೋಟಿ ರೂಪಾಯಿ ಅನುದಾನ ನೀಡಲಾಗಿದೆ. ಆದ್ರೆ, ಅನುದಾನ ನೀಡಿ 4 ವರ್ಷ ಕಳೆದರೂ ಅಧಿಕಾರಿಗಳು ಅಭಿವೃದ್ಧಿ ಕಾರ್ಯ ಕೈಗೊಂಡಿಲ್ಲ. ಶೀಘ್ರ ಅಭಿವೃದ್ಧಿ ಕಾರ್ಯ ಕೈಗೊಳ್ಳಲು ಸೂಚಿಸಿದ್ದೇನೆ ಎಂದಿದ್ದಾರೆ.

ಒಟ್ಟಾರೆಯಾಗಿ ಕೋಟೆನಾಡಿಗೆ ಕಳಶಪ್ರಾಯವಾದ ಏಳುಸುತ್ತಿನ ಕೋಟೆಯೇ ಅಧಿಕಾರಿಗಳ ಬೇಜವಬ್ದಾರಿತನದಿಂದಾಗಿ ಕಳೆಗುಂದುವಂತಾಗಿದೆ. ಕೋಟೆಗೆ ಭೇಟಿ ನೀಡಿ ಜನರ ದೂರು ಆಲಿಸಿದ ಡಿಸಿ ದಿವ್ಯಪ್ರಭು ಶೀಘ್ರ ಅಭಿವೃದ್ಧಿ ಕಾರ್ಯ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಲ್ಲದೆ ಫಾಲೋಅಪ್ ಮಾಡುವುದಾಗಿ ಹೇಳಿದ್ದಾರೆ. ಎಷ್ಟರಮಟ್ಟಿಗೆ ಕೋಟೆಯಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯಲಿವೆ ಎಂಬುದನ್ನು ಕಾದು ನೋಡಬೇಕಿದೆ.

ಚಿತ್ರದುರ್ಗ ಜಿಲ್ಲಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:20 pm, Thu, 20 July 23