ಚಿತ್ರದುರ್ಗ: ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿನ ದೌರ್ಜನ್ಯ ನಡೆಸಿದ ಆರೋಪ ಹೊತ್ತು ಸೆರೆಮನೆಯಲ್ಲಿರುವ ಶಿವಮೂರ್ತಿ ಮುರುಘಾ ಶರಣ ಮತ್ತು ಇತರರ ನ್ಯಾಯಾಂಗ ಬಂಧನ ಅವಧಿ ಇಂದು (ನ 14) ಮಕ್ತಾಯವಾಗಲಿದೆ. ಈ ಹಿನ್ನೆಲೆಯಲ್ಲಿ ಪ್ರಕರಣದ ಮುಖ್ಯ ಆರೋಪಿ ಶಿವಮೂರ್ತಿ ಮುರುಘಾ ಶರಣ, ವಾರ್ಡನ್ ರಶ್ಮಿ, ಮ್ಯಾನೇಜರ್ ಪರಮಶಿವಯ್ಯ ಅವರನ್ನು ಪೊಲೀಸರು 2ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ. ಪೊಲೀಸರು ಚಾರ್ಜ್ಶೀಟ್ ಸಲ್ಲಿಸಿದ ನಂತರ ನಡೆಯುತ್ತಿರುವ ಮೊದಲ ವಿಚಾರಣೆ ಇದು. ಹೀಗಾಗಿಯೇ ಈ ವಿಚಾರಣೆಯು ಮಹತ್ವ ಪಡೆದಿದೆ. ಪ್ರಕರಣದ ಮುಂದಿನ ವಿಚಾರಣೆಗೂ ನ್ಯಾಯಾಲಯವು ಇಂದು ದಿನಾಂಕ ನಿಗದಿಪಡಿಸಲಿದೆ. ಪೋಕ್ಸೋ ಪ್ರಕರಣದ ವಿಚಾರಣೆ ಮುಂದಿನ ದಿನಗಳಲ್ಲಿ ತ್ವರಿತಗತಿಯಲ್ಲಿ ನಡೆಯುವ ಸಾಧ್ಯತೆಯಿದೆ.
ಶಿವಮೂರ್ತಿ ಮುರುಘಾ ಶರಣನ ವಿರುದ್ಧ ಪ್ರಕರಣ ದಾಖಲಿಸಲು ಪಿತೂರಿ ನಡೆಸಿರುವ ಆರೋಪ ಹೊತ್ತಿರುವ ಮಠದ ಮಾಜಿ ಆಡಳಿತಾಧಿಕಾರಿ ಎಸ್.ಕೆ.ಬಸವರಾಜನ್ ಹಾಗೂ ಮಠದ ಶಾಲೆಯಲ್ಲಿ ಶಿಕ್ಷಕನನಾಗಿದ್ದ ಬೆಳಗಾವಿಯ ಬಸವ ರಾಜೇಂದ್ರ ಪ್ರಸ್ತುತ ಪೊಲೀಸರ ಕಸ್ಟಡಿಯಲ್ಲಿದ್ದಾರೆ. ಇವರು ನಾಲ್ಕು ದಿನಗಳ ಪೊಲೀಸ್ ಕಸ್ಟಡಿ ಅವಧಿ ಮುಕ್ತಾಯವಾಗಿರುವ ಹಿನ್ನೆಲೆಯಲ್ಲಿ ಇವರನ್ನೂ ಪೊಲೀಸರು ಇಂದು ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ. ಚಿತ್ರದುರ್ಗದ 1ನೇ ಹೆಚ್ಚುವರಿ ಜೆಎಂಎಫ್ಸಿ ನ್ಯಾಯಾಲಯದಲ್ಲಿ ವಿಚಾರಣೆ ನಡೆಯಲಿದೆ. ಇವರನ್ನು ನ್ಯಾಯಾಲಯವು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಬಹುದು ಎಂದು ಹೇಳಲಾಗುತ್ತಿದೆ.
ಜಾಮೀನಿಗೆ ಅರ್ಜಿ ಸಲ್ಲಿಸಲು ಆರೋಪಿಗಳ ಪರ ವಕೀಲರು ಸಿದ್ಧತೆ ಮಾಡಿಕೊಂಡಿದ್ದಾರೆ. ವಿಚಾರಣೆ ನಡೆಸಲಿರುವ ನ್ಯಾಯಾಲಯವು ಈ ಬಗ್ಗೆ ತೀರ್ಪು ನೀಡಲಿದ್ದಾರೆ.
ಫೋಟೊ ಕಳವು ಪ್ರಕರಣ
ಚಿತ್ರದುರ್ಗ ಮುರುಘಾ ಮಠದ ರಾಜಾಂಗಣದಲ್ಲಿದ್ದ ಶಿವಮೂರ್ತಿ ಮುರುಘಾ ಶರಣರ ಫೋಟೊಗಳನ್ನು ಕಳವು ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನ 10ರಂದು ಬಸವರಾಜನ್ ಅವರನ್ನು ಬಂಧಿಸಲಾಗಿತ್ತು. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ ಹೊಸಹಳ್ಳಿ ಗ್ರಾಮ ಪಂಚಾಯಿತಿಯ ಮಾಜಿ ಸದಸ್ಯ ಮೋಹನಮೂರ್ತಿ ಹಾಗೂ ಡಿಪ್ಲೊಮಾ ಕಾಲೇಜು ಉಪನ್ಯಾಸಕ ಶಿವಾನಂದಸ್ವಾಮಿ ಅವರ ವಿಚಾರಣೆಯನ್ನು ಪೊಲೀಸರು ನಡೆಸಿದ್ದರು. ಈ ವೇಳೆ ಇವರಿಬ್ಬರೂ ನೀಡಿದ್ದ ಹೇಳಿಕೆಗಳನ್ನು ಆಧರಿಸಿ ಪೊಲೀಸರು ಬಸವರಾಜನ್ ಅವರನ್ನು ವಶಕ್ಕೆ ಪಡೆದಿದ್ದರು. ಬಸವರಾಜನ್ ನೀಡಿದ ಪ್ರಚೋನೆಯಿಂದಲೇ ಫೋಟೊ ಕಳುವಾಗಿದೆ ಎಂದು ಪೊಲೀಸರು ಶಂಕಿಸಿದ್ದರು.
ಕಳೆದ ಅ 6ರಂದು ಮುರುಘಾ ಮಠದ ರಾಜಾಂಗಣದಲ್ಲಿದ್ದ ಶಿವಮೂರ್ತಿ ಮುರುಘಾ ಶರಣನ 47 ಫೋಟೊಗಳು ಕಳುವಾಗಿದ್ದವು. ಪ್ರಕರಣಕ್ಕೆ ಸಂಬಂಧಿಸಿದಂತೆ ಬಸವರಾಜನ್ ಪತ್ನಿ ಸೌಭಾಗ್ಯ ಅವರನ್ನೂ ಪತ್ತೆ ಮಾಡಲು ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಬಹುತೇಕ ಫೋಟೊಗಳು ಮಠಕ್ಕೆ ಗಣ್ಯರು ಭೇಟಿ ನೀಡಿದ್ದ ಸಂದರ್ಭದಲ್ಲಿ ಮುರುಘಾ ಶರಣರು ತೆಗೆಸಿಕೊಂಡಿದ್ದವೇ ಆಗಿದ್ದವು. ಸಿಸಿಟಿವಿ ದೃಶ್ಯ ಆಧರಿಸಿ ನ 7ರಂದು ಇಬ್ಬರನ್ನು ಮೊದಲು ಬಂಧಿಸಲಾಗಿತ್ತು.
Published On - 7:25 am, Mon, 14 November 22