Murugha math: ಮುರುಘಾ ಶ್ರೀ ಜೈಲಿಗೆ ಹೋದ ಮೇಲೆ ಮಠದ ಕಾರ್ಯ ವೈಖರಿ ಹೇಗಿದೆ? ಸರ್ಕಾರಕ್ಕೆ 70 ಪುಟಗಳ ವರದಿ ಸಲ್ಲಿಸಿದ ಡಿಸಿ

| Updated By: ವಿವೇಕ ಬಿರಾದಾರ

Updated on: Nov 15, 2022 | 6:33 PM

ಚಿತ್ರದುರ್ಗದ ಮುರುಘಾ ಶ್ರೀಗಳು ಪೋಕ್ಸೋ ಪ್ರಕರಣದಲ್ಲಿ ಜೈಲುಪಾಲಾದ ಹಿನ್ನೆಲೆ ಮುರುಘಾ ಮಠ ಮತ್ತು ವಿದ್ಯಾಪೀಠದ ಕಾರ್ಯವೈಖರಿ ಬಗ್ಗೆ ಚಿತ್ರದುರ್ಗದ ಜಿಲ್ಲಾಧಿಕಾರಿ ದಿವ್ಯಾ ಪ್ರಭು ಕಂದಾಯ ಇಲಾಖೆಗೆ ವರದಿ ಸಲ್ಲಿಸಿದ್ದಾರೆ.

Murugha math: ಮುರುಘಾ ಶ್ರೀ ಜೈಲಿಗೆ ಹೋದ ಮೇಲೆ ಮಠದ ಕಾರ್ಯ ವೈಖರಿ ಹೇಗಿದೆ? ಸರ್ಕಾರಕ್ಕೆ 70 ಪುಟಗಳ ವರದಿ ಸಲ್ಲಿಸಿದ ಡಿಸಿ
ಚಿತ್ರದುರ್ಗ ಮುರುಘಾ ಮಠದ ಕುರಿತು ಸರ್ಕಾರಕ್ಕೆ ವರದಿ ಸಲ್ಲಿಸಿದ ಡಿಸಿ ದಿವ್ಯ ಪ್ರಭು
Follow us on

ಚಿತ್ರದುರ್ಗ: ಚಿತ್ರದುರ್ಗದ ಮುರುಘಾ ಶ್ರೀಗಳು (Chitradurga Murugha Math Swamiji) ಪೋಕ್ಸೋ (Pocso) ಪ್ರಕರಣದಲ್ಲಿ ಜೈಲುಪಾಲಾದ ಹಿನ್ನೆಲೆ ಮುರುಘಾ ಮಠ (Murugha Math) ಮತ್ತು ವಿದ್ಯಾಪೀಠದ ಕಾರ್ಯವೈಖರಿ ಬಗ್ಗೆ ಚಿತ್ರದುರ್ಗದ ಜಿಲ್ಲಾಧಿಕಾರಿ (Chitradurga DC) ದಿವ್ಯಾ ಪ್ರಭು ಕಂದಾಯ ಇಲಾಖೆಗೆ ವರದಿ ಸಲ್ಲಿಸಿದ್ದಾರೆ. ರಾಜ್ಯ ಸರ್ಕಾರ ನವೆಂಬರ್​ 4 ರಂದು ಚಿತ್ರದುರ್ಗದ ಮುರುಘಾ ಮಠ ಮತ್ತು ವಿದ್ಯಾಪೀಠ ಕಾರ್ಯವೈಖರಿ ಕುರಿತು ಜಿಲ್ಲಾಧಿಕಾರಿಗೆ ವರದಿ ಕೇಳಿತ್ತು. ಹೀಗಾಗಿ ಜಿಲ್ಲಾಧಿಕಾರಿ ದಿವ್ಯಾ ಪ್ರಭು ದಾಖಲೆಗಳು ಸೇರಿ ಒಟ್ಟು 70 ಪುಟಗಳ ವರದಿಯನ್ನು ನ.10 ರಂದು ಸಲ್ಲಿಸಿದ್ದಾರೆ. ಇನ್ನು ಜಿಲ್ಲಾಧಿಕಾರಿಗಳ ವರದಿ ಆಧರಿಸಿ ಸರ್ಕಾರ ಮುಂದಿನ ಕ್ರಮ ಕೈಗೊಳ್ಳಲಿದೆ.

ರಾಜ್ಯ ಸರ್ಕಾರದ ಆದೇಶದಂತೆ ವಾಸ್ತವಾಂಶದ ವರದಿ ಸಲ್ಲಿಸಿದ್ದೇನೆ

ವರದಿ ಸಲ್ಲಿಕೆ ಬಗ್ಗೆ ಚಿತ್ರದುರ್ಗ ಡಿಸಿ ದಿವ್ಯಾ ಪ್ರಭು ಮಾತನಾಡಿ ರಾಜ್ಯ ಸರ್ಕಾರದ ಆದೇಶದಂತೆ ವಾಸ್ತವಾಂಶದ ವರದಿ ಸಲ್ಲಿಸಿದ್ದೇನೆ. ಮಠದ ಏಕಸದಸ್ಯ ಟ್ರಸ್ಟ್​​ನ ಬೈಲಾ, ವಿದ್ಯಾಪೀಠದ ಸಂಸ್ಥೆಗಳ ಸಂಖ್ಯೆ, ಸಿಬ್ಬಂದಿ ಸಂಖ್ಯೆ ಬಗ್ಗೆ ಮಾಹಿತಿ ನೀಡಿದ್ದೇನೆ. ವಿದ್ಯಾಪೀಠದ ಸಿಬ್ಬಂದಿಗೆ ಸಂಬಳ ವ್ಯವಸ್ಥೆಯ ಬಗ್ಗೆ, ಮುರುಘಾಶ್ರೀ ಜೈಲು ಸೇರಿದ ಬಳಿಕ ಮಠದಲ್ಲಿನ ವ್ಯತ್ಯಾಸದ ಬಗ್ಗೆ ಮಾಹಿತಿ ನೀಡಿದ್ದೇನೆ. ವರದಿ ಪರಿಶೀಲಿಸಿ ಸರ್ಕಾರ ಮುಂದಿನ ಕ್ರಮ ಕೈಗೊಳ್ಳುತ್ತದೆ ಎಂದರು.

ಮಾಜಿ ಸಚಿವ ಹೆಚ್.ಏಕಾಂತಯ್ಯ ನೇತೃತ್ವದಲ್ಲಿ ವೀರಶೈವ ಲಿಂಗಾಯತ ಸಮಾಜ ಸಭೆ ನಡೆದಿತ್ತು. ಮಠಕ್ಕೆ ಆಡಳಿತಾಧಿಕಾರಿ ನೇಮಿಸಿ, ಹೊಸ ಪೀಠಾದ್ಯಕ್ಷರ ನೇಮಕಕ್ಕೆ ಅವಕಾಶ ನೀಡಲು ಸರ್ಕಾರಕ್ಕೆ ಮನವಿ ಮಾಡಿದ್ದರು. ಹೀಗಾಗಿ, ಸರ್ಕಾರ ಡಿಸಿಗೆ ಮಠ ಮತ್ತು ವಿದ್ಯಾಸಂಸ್ಥೆಗಳ ಕಾರ್ಯವೈಖರಿ ಬಗ್ಗೆ ವಾಸ್ತವಾಂಶದ ವರದಿ‌ ಕೇಳಿತ್ತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:01 pm, Tue, 15 November 22