ಚಿತ್ರದುರ್ಗ: ಮಠದ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಕ್ಕೆ ಸಂಬಂಧಿಸಿ ಚಿತ್ರದುರ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪರಶುರಾಮ್ ಪ್ರತಿಕ್ರಿಯೆ ನೀಡಿದ್ದಾರೆ. ಪ್ರಕರಣ ಸಂಬಂಧ ಹಾಸ್ಟೆಲ್ ವಾರ್ಡನ್ ದೂರು ನೀಡಿದ ಬಗ್ಗೆ ಮಾಹಿತಿ ನೀಡಿದ್ದಾರೆ. ಮಾಜಿ ಶಾಸಕ ಎಸ್.ಕೆ.ಬಸವರಾಜನ್, ಪತ್ನಿ ಸೌಭಾಗ್ಯ ವಿರುದ್ಧ ಹಾಸ್ಟೆಲ್ ವಾರ್ಡನ್ ದೂರು ನೀಡಿದ್ದಾರೆ.
ಜು.24ರಂದು ಬಾಲಕಿಯರಿಬ್ಬರನ್ನ ಹಾಸ್ಟೆಲ್ನಿಂದ ಹೊರಕಳಿಸಲಾಗಿತ್ತು. ಆ ಬಾಲಕಿಯರು ಬೆಂಗಳೂರಿನ ಕಾಟನ್ಪೇಟೆಯಲ್ಲಿ ಪತ್ತೆಯಾಗಿದ್ರು. ಬಾಲಕಿಯರನ್ನು ಕರೆತಂದು ಬಸವರಾಜನ್ ವಶದಲ್ಲಿಟ್ಟುಕೊಂಡಿದ್ರು. ಈ ಬಗ್ಗೆ ಹಾಸ್ಟೆಲ್ ವಾರ್ಡನ್ ಬಸವರಾಜನ್ ವಿರುದ್ಧ ಲೈಂಗಿಕ ದೌರ್ಜನ್ಯದ ದೂರು ನೀಡಿದ್ದಾರೆ ಎಂದು ಎಸ್ಪಿ ಪರಶುರಾಮ್ ತಿಳಿಸಿದ್ದಾರೆ.
ಜು.24ರಂದು ಬಾಲಕಿಯರಿಬ್ಬರು ಚಿತ್ರದುರ್ಗದಿಂದ ಬೆಂಗಳೂರಿಗೆ ಬಂದಿದ್ದರು. ಅಂದು ರಾತ್ರಿ 11.30ರ ಸುಮಾರಿಗೆ ಮೆಜೆಸ್ಟಿಕ್ಗೆ ಬಂದಿಳಿದಿದ್ರು. ಆಟೋ ಡ್ರೈವರ್ ವಿದ್ಯಾರ್ಥಿನಿಯರನ್ನು ಲಗ್ಗೆರೆಗೆ ಕರೆದೊಯ್ದಿದ್ದ. ಮನೆಗೆ ಬಿಟ್ಟುಕೊಳ್ಳದೆ ಬಾಲಕಿ ದೊಡ್ಡಮ್ಮ ಹೊರಗೆ ಹಾಕಿದ್ದರು. ಬಳಿಕ ಆಟೋ ಚಾಲಕ ಇಬ್ಬರನ್ನು ಮತ್ತೆ ಮೆಜೆಸ್ಟಿಕ್ಗೆ ಕರೆತಂದಿದ್ದ. ಪೊಲೀಸ್ ಕಂಟ್ರೋಲ್ ರೂಮ್ಗೆ ಕರೆ ಮಾಡಿ ಮಾಹಿತಿ ನೀಡಿದ್ದ. ಸ್ಥಳಕ್ಕೆ ಬಂದ ಪೊಲೀಸರು ಬಾಲಕಿಯರನ್ನು ಠಾಣೆಗೆ ಕರೆದೊಯ್ದಿದ್ದರು. ನಂತರ ಪೊಲೀಸರು ವಿಚಾರಿಸಿದಾಗ ವಾರ್ಡನ್ ಕಿರುಕುಳದಿಂದ ಹೊರಗೆ ಬಂದಿದ್ದಾಗಿ ಬಾಲಕಿಯರು ಹೇಳಿಕೊಂಡಿದ್ದಾರೆ. ಆಗ ಕೂಡಲೇ ಚಿತ್ರದುರ್ಗದ ಮುರುಘಾ ಮಠಕ್ಕೆ ಸಂಪರ್ಕ ಮಾಡಲಾಗಿದೆ. ಮಠದ ಆಡಳಿತಾಧಿಕಾರಿ ಬಸವರಾಜನ್ ಬಂದು ಮಕ್ಕಳನ್ನು ಕರೆದುಕೊಂಡು ಹೋಗುವುದಾಗಿ ಹೇಳಲಾಗಿದೆ. ಆಗ ಪೊಲೀಸರು ಪುರುಷರ ಜೊತೆ ಬಾಲಕಿಯರನ್ನು ಕಳಿಸುವುದಿಲ್ಲ ಅಂತಾ ಹೇಳಿದ್ದಾರೆ. ಹೀಗಾಗಿ ಪತ್ನಿ ಸೌಭಾಗ್ಯ ಜೊತೆ ಬಸವರಾಜನ್ ಬೆಳಗಿನ ಜಾವ 5 ಗಂಟೆಗೆ ಆಗಮಿಸಿ ಬಾಲಕಿಯರನ್ನು ಕರೆದುಕೊಂಡು ಹೋಗಿದ್ದಾರೆ. ಈ ವೇಳೆ ಪೊಲೀಸರು ಬಾಲಕಿಯರು ಹಾಗೂ ಬಸವರಾಜನ್ ದಂಪತಿ ಹೇಳಿಕೆ ಪಡೆದಿದ್ದಾರೆ.
ಕಾಟನ್ಪೇಟೆ ಪೊಲೀಸರು ಹೇಳಿಕೆಗಳನ್ನು ಪಡೆದು ಕಳುಹಿಸಿದ್ದಾರೆ. ಬಳಿಕ ಬಸವರಾಜನ್ ದಂಪತಿ ಬಾಲಕಿಯರನ್ನು ಬೆಂಗಳೂರಿನಿಂದ ಕರೆದೊಯ್ದಿದ್ದಾರೆ. ಎರಡು ದಿನಗಳ ಕಾಲ ತಮ್ಮ ಬಳಿಯೇ ಇರಿಸಿಕೊಂಡಿದ್ದಾರೆ. ಅನಾಥಾಲಯ & ಪೋಷಕರಿಗೂ ಒಪ್ಪಿಸದೇ ತಮ್ಮ ಬಳಿಯೇ ಇರಿಸಿಕೊಂಡಿದ್ದಾರೆ. 2 ದಿನಗಳ ಬಳಿಕ ಬಾಲಕಿಯರ ಬಗ್ಗೆ ಮಾಹಿತಿ ಪಡೆದ ಪೊಲೀಸರು ಬಾಲಕಿಯರ ಸುರಕ್ಷತೆ ಬಗ್ಗೆ ವಿಚಾರಣೆ ಮಾಡಿದ್ದಾರೆ. ಆಗ ಆಡಳಿತಾಧಿಕಾರಿ ಬಸವರಾಜನ್ ಚಿತ್ರದುರ್ಗ ಗ್ರಾಮೀಣ ಠಾಣೆ ಪೊಲೀಸರ ಮೂಲಕ ಬಾಲಕಿಯರನ್ನು ಪೋಷಕರಿಗೆ ಒಪ್ಪಿಸಿದ್ದಾರೆ.
ಚಿತ್ರದುರ್ಗದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 5:07 pm, Sat, 27 August 22