ಇದು 21ನೇ ಶತಮಾನದ ಕರಾಳ ಘಟನೆ, ನನ್ನ ವಿರುದ್ಧ ಷಡ್ಯಂತ್ರ ನಡೆದಿದೆ -ಮುರುಘಾ ಮಠದ ಸಭೆಯಲ್ಲಿ ಮುರುಘಾಶ್ರೀ ಭಾಷಣ
ಮುಂಜಾನೆಯ ಸುದ್ದಿ ಕೇಳಿ ನೀವೆಲ್ಲಾ ಇಲ್ಲಿ ಬಂದಿದ್ದೀರಾ. ನಮಗಿಂತ ನಿಮಗೆ ತುಂಬಾ ನೋವಾಗಿದೆ. ಸರ್ವಜಾತಿ, ಧರ್ಮದವರು ಕೂಡಾ ಇಲ್ಲಿದ್ದೀರಿ. ಮುರುಘಾ ಶರಣರ ಬದುಕಿನ ಆತ್ಯಂತಿಕವಾದ ಕಿರುಕುಳ ಇದು. ನಮ್ಮಂತವರ ಜೊತೆಯೇ ಜಗಳ ಮಾಡಬೇಕು.
ಚಿತ್ರದುರ್ಗ: ಮುರುಘಾ ಶ್ರೀಗಳ ಮೇಲೆ ಆರೋಪ ಕೇಳಿ ಬಂದಿದ್ದೇ ತಡ, ಚಿತ್ರದುರ್ಗದ ಮುರುಘಾ ಮಠದಲ್ಲಿ(Murugha Mutt) ಶ್ರೀಗಳು ಸಲಹಾ ಸಮಿತಿ ಸಭೆ ನಡೆಸಿದ್ದಾರೆ. ಸಭೆಯಲ್ಲಿ ಸಲಹಾ ಸಮಿತಿ ಸದಸ್ಯರು, ಭಕ್ತರು, ವಕೀಲರು, ವಿವಿಧ ಸಮಾಜಗಳ ಮುಖಂಡರು ಸೇರಿ ಹಲವರು ಭಾಗಿಯಾಗಿದ್ರು. ಸದ್ಯ ‘ಮಠದಲ್ಲಿ ಅಧಿಕಾರಕ್ಕಾಗಿ ಸಂಘರ್ಷ ನಡೆಯುತ್ತಿದೆ’ ಎಂದು ಮಠದ ಸಭೆಯಲ್ಲಿ ಮುರುಘಾಶ್ರೀ ಭಾಷಣ ಮಾಡಿದ ಆಡಿಯೋ ವೈರಲ್ ಆಗಿದೆ.
ವೈರಲ್ ಆದ ಆಡಿಯೋದ ಭಾಷಣ ವಿವರ
ಸಭೆಯಲ್ಲಿನ ಡಾ.ಶಿವಮೂರ್ತಿ ಮುರುಘಾ ಶರಣರ ಭಾಷಣ ಆಡಿಯೋ ವೈರಲ್ ಆಗಿದೆ. ಆ ಆಡಿಯೋದಲ್ಲಿ ಅವರು, ಗಾಳಿಪಟಕ್ಕೆ ಕೆಳಗೆ ಇದ್ದಾಗ ಗಾಳಿ ಹೊಡೆಯುವುದು ಗೊತ್ತಾಗಲ್ಲ. ಎತ್ತರಕ್ಕೆ ಹೋದಂತೆ ಗಾಳಿ ಹೊಡೆತ ಹೆಚ್ಚಾಗುತ್ತೆ. ಸಣ್ಣವರಿಗೆ ಸಣ್ಣ ಕುತ್ತು ಬರುತ್ತವೆ, ದೊಡ್ಡವರಿಗೆ ದೊಡ್ಡ ಕುತ್ತು ಬರುತ್ತವೆ. ಕುತ್ತುಗಳು ಅಂದರೆ ಆಪತ್ತುಗಳು, ಕಿರುಕುಳಗಳು. ಯಾವ ಸತ್ಪುರುಷರು, ಸಮಾಜ ಸುಧಾರಕರ ಕಾಲದಲ್ಲಿಯೂ ಈ ರೀತಿಯಲ್ಲಿ ದುಷ್ಟ ಶಕ್ತಿಗಳಿದ್ದವು. ಸಾತ್ವಿಕರು ಸಕಾರಾತ್ಮಕ ದೋರಣೆ ಹೊಂದಿರುತ್ತಾರೆ. ಅದಕ್ಕೆ ವ್ಯತಿರಿಕ್ತವಾದದ್ದು ನಕಾರಾತ್ಮಕ ದೋರಣೆಗಳು. ಕ್ರೈಸ್ತ ಧರ್ಮದ ಯೇಸು ಕ್ರಿಸ್ತಗೆ ಶಿಲುಬೆಗೆ ಏರಿಸಿದ್ದು ಅದೇ ಧರ್ಮದವರು. ಪೈಗಂಬರ್ ಗೆ ಟಾರ್ಚರ್ ಮಾಡಿದ್ದು ಅದೇ ಧರ್ಮದವರು. ಬುದ್ದನಿಗೆ ಹಂದಿಯ ಮಾಂಸದ ರಸ ಉಣಿಸಿದ್ದವರ ಉದಾಹರಣೆ ಇದೆ. ಸಾಕ್ರಟೀಸ್ ಬದುಕಿನಲ್ಲಿ ನಿಕಟವಾದ ಶಿಷ್ಯ ಇದ್ದ. ಪ್ಲೆಟೊನಂಥ ಶಿಷ್ಯ ನಮಗೆ ಸಿಗಲಿಲ್ಲ ಎಂದು ಮುರುಘಾಶ್ರೀ ಆಡಿಯೋದಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ.
ಗಾಂಧಿ, ಬಸವಣ್ಣ, ಅವರಿಗೂ ಕೂಡಾ ನೋವಿನ ದಿನಗಳಿದ್ದವು
ಶಿಷ್ಯರು ಮರಣ ದಂಡನೆ ತಪ್ಪಿಸಲು ಪ್ರಯತ್ನಿಸುತ್ತಾರೆ. ನಾನು ವ್ಯವಸ್ಥೆ ವಿರುದ್ಧ ರಾಜಿ ಮಾಡಿಕೊಂಡರೆ ಅತ್ಯಂತ ಕಳಂಕ. ಈ ನಿಸರ್ಗ ಬ್ರಹ್ಮಾಂಡ ಈ ವ್ಯವಸ್ಥೆ ಮಾಡಿದೆ ಎಂದು ಸಾಕ್ರಟೀಸ್ ಬದುಕಿನ ಕೊನೆಯ ಕ್ಷಣಗಳನ್ನ ಮುರುಘಾ ಶರಣರು ನೆನೆದಿದ್ದಾರೆ. ಕೊನೆ ಗಳಿಗೆಯಲ್ಲಿ ನೆನೆದ ವಿಷ ಕುಡಿದ ಪ್ರಸಂಗ ಮೆಲುಕು ಹಾಕಿದ್ದಾರೆ. ಜಗತ್ತಿನಲ್ಲಿ ಧರ್ಮಾಂಧರು, ಕಳ್ಳರು ಈ ರೀತಿ ಸನ್ನಿವೇಶ ಎದುರಿಸಿಲ್ಲ. ತಾತ್ವಿಕ ತಳಹದಿಯ ಮೇಲೆ ನಡೆದವರಿಗೆ ಕುತ್ತು ಇರುತ್ತದೆ. ಗಾಂಧಿ, ಬಸವಣ್ಣ, ಅವರಿಗೂ ಕೂಡಾ ನೋವಿನ ದಿನಗಳು ಇದ್ದವು. ಅಂಥ ದೊಡ್ಡ ಮಹಾನೀಯರ ಜೀವನದಲ್ಲಿ ದುರಂತ ನಡೆದಿವೆ. ಆ ದಿಸೆಯಲ್ಲಿ ನಾವು ಕೂಡಾ ಹೊರತಲ್ಲ.
ಮಠದಲ್ಲಿ ಅಧಿಕಾರಕ್ಕಾಗಿ ಸಂಘರ್ಷ ನಡೆಯುತ್ತಿದೆ
ಮುಂಜಾನೆಯ ಸುದ್ದಿ ಕೇಳಿ ನೀವೆಲ್ಲಾ ಇಲ್ಲಿ ಬಂದಿದ್ದೀರಾ. ನಮಗಿಂತ ನಿಮಗೆ ತುಂಬಾ ನೋವಾಗಿದೆ. ಸರ್ವಜಾತಿ, ಧರ್ಮದವರು ಕೂಡಾ ಇಲ್ಲಿದ್ದೀರಿ. ಮುರುಘಾ ಶರಣರ ಬದುಕಿನ ಆತ್ಯಂತಿಕವಾದ ಕಿರುಕುಳ ಇದು. ನಮ್ಮಂತವರ ಜೊತೆಯೇ ಜಗಳ ಮಾಡಬೇಕು. ಬೇರೆಯವರ ಜೊತೆ ಜಗಳವಾಡಿದ್ರೆ ಏನೂ ಸಿಗಲ್ಲ. ಮಠದಲ್ಲಿ ಅಧಿಕಾರಕ್ಕಾಗಿ ಸಂಘರ್ಷ ನಡೆಯುತ್ತಿದೆ. ಮುರುಘಾಮಠವನ್ನು ಜನ ಬಂದು ನೋಡುವಂತೆ ನಾವು ಮಾಡಿದ್ದೇವೆ. 21 ನೇ ಶತಮಾನ ಅಂದರೆ ಈ ಕರಾಳ ಘಟನೆ. ರೋಲ್‌ಕಾಲ್, ಬ್ಲ್ಯಾಕ್‌ಮೇಲ್ ಮೂಲಕ ಅಧಿಕಾರಬೇಕೆಂಬ ಧೋರಣೆ ನಡೆಯುತ್ತಿದೆ. ನಾವು ಸಂಧಾನಕ್ಕೂ ಸಿದ್ದ, ಸಮರಕ್ಕೂ ಸಿದ್ದ. ಕೆಲವರು ಸಂಧಾನ ಮಾಡುತ್ತಿದ್ದಾರೆ, ಅದು ಫೇಲ್ ಆದರೆ ಸಮರ ಇದ್ದೇ ಇರುತ್ತದೆ ಎಂದು ಮುರುಘಾಶ್ರೀ ಹೇಳಿದ್ರು.
ಮಠದಲ್ಲಿ ಇದ್ದವರೇ ಷಡ್ಯಂತ್ರ ಮಾಡಿದ್ದಾರೆ
ಕೆಲವು ಸ್ವಾಮೀಜಿಗಳ ಜೀವನದಲ್ಲಿ ಇಂಥ ಘಟನೆ ನಡೆದಾಗ ಕೋರ್ಟ್ ಶುಲ್ಕ ನಾನು ಕೊಟ್ಟಿದ್ದೇನೆ. ನಾವೇ ಧೈರ್ಯ ಹೇಳಿದ್ದೂ ಇದೆ. ನಮ್ಮ ವಿರುದ್ದ ಇದೊಂದು ಪಿತೂರಿ, ಒಳ ಸಂಚು ಮಾಡಿದ್ದಾರೆ. ಯಾವ ಸಮಸ್ಯೆ ಕೂಡಾ ಶಾಶ್ವತ ಅಲ್ಲ, ಎಲ್ಲವೂ ತಾತ್ಕಾಲಿಕ. ಮುರುಘಾ ಮಠದ ಮೇಲಿನ ಅಭಿಮಾನ ಬಡಿದ್ದೇಬ್ಬಿಸಲು ನಡೆದಿರುವ ಘಟನೆ. ಜನ ರಾಜ್ಯಾದ್ಯಂತ ಮಠಕ್ಕೆ ಆಗಮಿಸುತ್ತಿದ್ದಾರೆ. ಇದು ಗರಿಷ್ಠ ಮಟ್ಟದ ಕಿರುಕುಳ& ಪಿತೂರಿ. ಮಠದಲ್ಲಿ ಇದ್ದವರೇ ಷಡ್ಯಂತ್ರ ಮಾಡಿದ್ದಾರೆ. ಎಲ್ಲವನ್ನೂ ಕೂಡಾ ಕಾಲವೇ ನಿರ್ಣಯ ಮಾಡುತ್ತದೆ. ಸಾಧ್ಯವಾದರೆ ಸಮಸ್ಯೆ ಬಗೆಹರಿಸೋಣ, ಇಲ್ಲ ಹೋರಾಟ ಮಾಡೋಣ. ಎರಡು ವಿಚಾರಕ್ಕೂ ನಾವು ಸಿದ್ಧ ಮತ್ತು ಬದ್ಧ. ಯಾವ ಸುಖವೂ ಶಾಶ್ವತ ಅಲ್ಲ, ಸಮಸ್ಯೆಯೂ ಶಾಶ್ವತ ಅಲ್ಲ. ಯಾರು ಕೂಡಾ ದುಃಖ ಮಾಡಿಕೊಳ್ಳಬೇಡಿ. ನೀವೆಲ್ಲಾ ನಮ್ಮ ಜೊತೆಗೆ ಇರುವುದು ದೊಡ್ಡ ಧೈರ್ಯ ಎಂದು ಮಠದ ಸಭೆಯಲ್ಲಿ ಮುರುಘಾಶ್ರೀ ಭಾಷಣ ಮಾಡಿದ್ದಾರೆ.