ಸಂಡೆ ರಾಬರಿ: ಚಿತ್ರದುರ್ಗದಲ್ಲಿ ಪಿಸ್ತೂಲ್ ಹಿಡಿದು ಮನೆಗೆ ನುಗ್ಗಿ ಇಬ್ಬರ ಒತ್ತೆಯಾಳಾಗಿಸಿಕೊಂಡು ಸಿನಿಮೀಯ ರೀತಿಯಲ್ಲಿ ಲಕ್ಷಾಂತರ ರೂ ದರೋಡೆ

| Updated By: ಸಾಧು ಶ್ರೀನಾಥ್​

Updated on: Jul 10, 2023 | 8:25 AM

  ಪೂರ್ವ ವಲಯ ಐಜಿಪಿ ತ್ಯಾಗರಾಜನ್, ಎಸ್ಪಿ ಪರಶುರಾಮ್ ಪರಿಶೀಲನೆ ನಡೆಸಿದ್ದಾರೆ. ದರೋಡೆಕೋರರು ನಮ್ಮ ಮನೆಯಲ್ಲಿ ಕೋಟ್ಯಂತರ ಹಣವಿದೆ ಎಂದು ಭಾವಿಸಿ ಬಂದಿದ್ದರು ಅನ್ನಿಸುತ್ತದೆ. ಅವರು ಹಲವು ಭಾಷೆಯಲ್ಲಿ ಮಾತಾಡುತ್ತಿದ್ದರು. ಗಾಂಜಾ ವ್ಯಸನಿ, ಸೈಕೋ ರೀತಿ ವರ್ತಿಸುತ್ತಿದ್ದರು ಎನ್ನುತ್ತಾರೆ ದೂರುದಾರ ಉದ್ಯಮಿ ನಜೀರ್ ಅಹ್ಮದ್.

ಸಂಡೆ ರಾಬರಿ: ಚಿತ್ರದುರ್ಗದಲ್ಲಿ ಪಿಸ್ತೂಲ್ ಹಿಡಿದು ಮನೆಗೆ ನುಗ್ಗಿ ಇಬ್ಬರ ಒತ್ತೆಯಾಳಾಗಿಸಿಕೊಂಡು ಸಿನಿಮೀಯ ರೀತಿಯಲ್ಲಿ ಲಕ್ಷಾಂತರ ರೂ ದರೋಡೆ
ಸಂಡೆ ಶಾಕ್: ದುರ್ಗದಲ್ಲಿ ಪಿಸ್ತೂಲ್ ಹಿಡಿದು ಮನೆಗೆ ನುಗ್ಗಿ ರಾಬರಿ
Follow us on

ಕೋಟೆನಾಡು ಚಿತ್ರದುರ್ಗದಲ್ಲಿ (Chitradurga) ಸಿನಿಮೀಯ ರೀತಿಯಲ್ಲಿ ದೊಡ್ಡ ದರೋಡೆಯೊಂದು (Robbery) ನಡೆದಿದೆ. ಹಾಡು ಹಗಲಲ್ಲೇ ದರೋಡೆಕೋರರು ಪಿಸ್ತೂಲ್ ಹಿಡಿದು ಮನೆಗೆ ನುಗ್ಗಿದ್ದಾರೆ. ಇಬ್ಬರನ್ನು ಒತ್ತೆಯಾಳಾಗಿರಿಸಿಕೊಂಡು ಲಕ್ಷಾಂತರ ರೂ. ಹಣ, ಚಿನ್ನಾಭರಣ ದೋಚಿ ಎಸ್ಕೇಪ್ ಆಗಿದ್ದಾರೆ. ಈ ಕುರಿತು ವರದಿ ಇಲ್ಲಿದೆ. ದಿನಪೂರ್ತಿ ದರೋಡೆಕೋರರ ಕಂಟ್ರೋಲ್ ನಲ್ಲಿದ್ದ ಮನೆ. ಐವತ್ತು ಲಕ್ಷ‌ ರೂ. ನಗದು, 12 ತೊಲೆ ಚಿನ್ನಾಭರಣ ದೋಚಿದ ದರೋಡೆಕೋರರು. ಸ್ಥಳಕ್ಕೆ ಪೂರ್ವ ವಲಯ ಐಜಿಪಿ ತ್ಯಾಗರಾಜನ್, ಎಸ್ಪಿ ಕೆ. ಪರಶುರಾಮ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹೌದು, ಚಿತ್ರದುರ್ಗ ನಗರದ ಬ್ಯಾಂಕ್ ಕಾಲೋನಿಯಲ್ಲಿರುವ ಉದ್ಯಮಿ ನಜೀರ್ ಅಹ್ಮದ್ ಮನೆಗೆ ನಿನ್ನೆ ಬೆಳಗ್ಗೆ 9 ಗಂಟೆಗೆ ಮೂವರು ದರೋಡೆಕೋರರ ಗುಂಪು ಎಂಟ್ರಿ ಕೊಟ್ಟಿದೆ. ಪಿಸ್ತೂಲ್ ಮತ್ತು ಲಾಂಗ್, ಚಾಕು, ಪಂಚ್ ಹಿಡಿದಿದ್ದ ಗ್ಯಾಂಗ್ ಮನೆಯಲ್ಲಿದ್ದವರನ್ನು ಬೆದರಿಸಿದೆ. ಹೋಟೆಲ್ ಉದ್ಯಮಿ ನಜೀರ್ ಅಹ್ಮದ್ ಗೆ ಪಿಸ್ತೂಲ್ ನಿಂದ ತಿವಿದು ಕಣ್ಣಿನ ಬಳಿ ಗಾಯಗೊಳಿಸಿದೆ.

ಬಳಿಕ ಜೀವಬೆದರಿಕೆಯೊಡ್ಡಿ ಮನೆಯಲ್ಲಿದ್ದವರ ಬಳಿ ಮೊಬೈಲ್ ಕಸಿದುಕೊಂಡು ಒಂದು ಕೋಣೆಯಲ್ಲಿ ಕೂಡಿ ಹಾಕಿದೆ. ಕೈಗಳನ್ನು ಕಟ್ಟಿ ಹಾಕಿ ಹಣ ನೀಡುವಂತೆ ಬೆದರಿಸಿದೆ. ಐವತ್ತು ಲಕ್ಷ ರೂ ಕೊಡಲು ಒಪ್ಪಿದಾಗ ನಜೀರ್ ಅಹ್ಮದ್ ಪುತ್ರ ಸಮೀರ್ ಮತ್ತು ಅಳಿಯ ಶಹನಾಜ್ ರನ್ನು ಒತ್ತೆಯಾಳಾಗಿರಿಸಿಕೊಂಡು ಕಾರಲ್ಲಿ ಕರೆದೊಯ್ದಿದೆ.

ಚಿತ್ರದುರ್ಗದ ಕ್ಯಾದಿಗ್ಗೆರೆ ಬಳಿ ಓರ್ವ ವ್ಯಕ್ತಿ ಬಳಿ ತುರ್ತಾಗಿ ಹಣ ಬೇಕೆಂದು ಕೇಳಿಕೊಂಡು 25 ಲಕ್ಷ ರೂ. ತೆಗೆದುಕೊಂಡು ಕೊಟ್ಟಿದ್ದಾರೆ. ಬಳಿಕ ದಾವಣಗೆರೆಗೆ ಕರೆದೊಯ್ದು ಅಲ್ಲೊಬ್ಬರ ಬಳಿ 25 ಲಕ್ಷ ರೂ. ಪಡೆದು ಕೊಟ್ಟಿದ್ದಾರೆ. ಬಳಿಕ ರಾತ್ರಿ 9ಗಂಟೆ ಸುಮಾರಿಗೆ ಚಿತ್ರದುರ್ಗಕ್ಕೆ ವಾಪಸ್ ಬರುವ ವೇಳೆ ಚನ್ನಗಿರಿ ತಾಲೂಕಿನ ಗ್ರಾಮವೊಂದರ ಬಳಿ ಪೊಲೀಸ್ ಬ್ಯಾರಿಕೇಡ್ ಗೆ ಡಿಕ್ಕಿ ಹೊಡೆದಿದ್ದಾರೆ.

ಪರಿಣಾಮ ಅನುಮಾನಗೊಂಡ ದಾವಣಗೆರೆ ಪೊಲೀಸರು ಕಾರ್ ನ್ನು ಬೆನ್ನತ್ತಿದ್ದಾರೆ. ಕೊನೆಗೂ ಪೊಲೀಸ್ರು ಕಾರ್ ಹಿಡಿದಾಗ ಸಮೀರ್ ಮತ್ತು ಶಹನಾಜ್ ರನ್ನು ಬಿಟ್ಟು ದರೋಡೆಕೋರರು ಜಮೀನುಗಳಲ್ಲಿ ಓಡಿ ಎಸ್ಕೇಪ್ ಗೆ ಯತ್ನಿಸಿದ್ದಾರೆ. ಇಬ್ಬರು ತಪ್ಪಿಸಿಕೊಂಡಿದ್ದು ಓರ್ವ ಸಿಕ್ಕಿ ಬಿದ್ದಿದ್ದಾನೆ. ಸದ್ಯ ಪೊಲೀಸ್ರು ವಿಚಾರಣೆ ನಡೆಸುತ್ತಿದ್ದಾರೆ ಅಂತಾರೆ ಒತ್ತೆಯಾಳಾಗಿದ್ದ ಸಮೀರ್ ಮತ್ತು ಮುನೀರ್.

ಇನ್ನು ವಿಷಯ ತಿಳಿಯುತ್ತಿದ್ದಂತೆ ಚಿತ್ರದುರ್ಗ ಪೊಲೀಸರು ಅಲರ್ಟ್ ಆಗಿದ್ದಾರೆ. ರಾತ್ರಿಯೇ ದಾವಣಗೆರೆ ಜಿಲ್ಲೆಯ ಚನ್ನಗಿರಿ ಬಳಿಗೆ ತೆರಳಿ ಸಮೀರ್ ಮತ್ತು ಶಹನಾಜ್ ರನ್ನು ಕರೆ ತಂದಿದ್ದಾರೆ. ಉದ್ಯಮಿ ನಜೀರ್ ಅಹ್ಮದ್ ಬಡಾವಣೆ ಠಾಣೆಗೆ ದೂರು ನೀಡಿದ್ದು ಮೂವರು ದರೋಡೆಕೋರರು ಬೆದರಿಸಿ ಐವತ್ತು ಲಕ್ಷ ನಗದು, 12ತೊಲೆ ಚಿನ್ನಾಭರಣೆ ದೋಚಿದ್ದಾರೆಂದು ದೂರು ದಾಖಲಿಸಿದ್ದಾರೆ.

ಪೂರ್ವ ವಲಯ ಐಜಿಪಿ ತ್ಯಾಗರಾಜನ್, ಎಸ್ಪಿ ಕೆ.ಪರಶುರಾಮ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆದ್ರೆ, ಪ್ರಕರಣದ ಬಗ್ಗೆ ಪೊಲೀಸ್ ಅಧಿಕಾರಿಗಳು ಪ್ರತಿಕ್ರಿಯಿಸಿಲ್ಲ. ದೂರುದಾರ ಉದ್ಯಮಿ ನಜೀರ್ ಅಹ್ಮದ್ ರನ್ನು ಕೇಳಿದ್ರೆ ದರೋಡೆಕೋರರು ನಮ್ಮ ಮನೆಯಲ್ಲಿ ಕೋಟ್ಯಂತರ ರೂ. ಹಣವಿದೆ ಎಂದು ಭಾವಿಸಿ ಬಂದಿದ್ದರು ಅನ್ನಿಸುತ್ತದೆ. ಅವರು ಹಲವು ಭಾಷೆಯಲ್ಲಿ ಮಾತಾಡುತ್ತಿದ್ದರು. ಗಾಂಜಾ ವ್ಯಸನಿಗಳಾಗಿದ್ದು ಸೈಕೋ ರೀತಿ ವರ್ತಿಸುತ್ತಿದ್ದರು ಎನ್ನುತ್ತಾರೆ.

ಒಟ್ಟಾರೆಯಾಗಿ ಕೋಟೆನಾಡು ಚಿತ್ರದುರ್ಗದಲ್ಲಿ ಹಾಡುಹಗಲಲ್ಲೇ ಸಿನಿಮೀಯ ರೀತಿಯ ದರೋಡೆ ಪ್ರಕರಣ ನಡೆದಿದೆ. ಬಡಾವಣೆ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ. ಪೊಲೀಸರ ತನಿಖೆಯಿಂದಷ್ಟೇ ಪ್ರಕರಣದ ಅಸಲಿಯತ್ತೇನು, ದರೋಡೆಕೋರರು ಯಾರು, ಉದ್ದೇಶ ಏನಾಗಿತ್ತು ಎಂಬುದು ಬಯಲಾಗಬೇಕಿದೆ.

ಚಿತ್ರದುರ್ಗ ಜಿಲ್ಲಾ ವರದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 8:15 am, Mon, 10 July 23