ಚಿತ್ರದುರ್ಗ: ಮುರುಘಾ ಶರಣರ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾದ ಹಿನ್ನೆಲೆ ಮುರುಘಾಶ್ರೀ ಅಜ್ಞಾತ ಸ್ಥಳಕ್ಕೆ ತೆರಳಿದ ಮಾಹಿತಿ ಮೇರೆಗೆ ಗ್ರಾಮಾಂತರ ಠಾಣೆಯ ಇನ್ಸ್ಪೆಕ್ಟರ್ ಬಾಲಚಂದ್ರನಾಯ್ಕ್ ಅವರು ಮಠಕ್ಕೆ ಭೇಟಿ ನೀಡಿ ಸಮಾಜದ ಮುಖಂಡರಿಂದ ಮಾಹಿತಿ ಪಡೆದಿದ್ದಾರೆ. ಶ್ರೀಗಳು ಅಜ್ಞಾತ ಸ್ಥಳಕ್ಕೆ ತೆರಳಿದ ಮಾಹಿತಿ ತಿಳಿಯುತ್ತಿದ್ದಂತೆ ಎಚ್ಚೆತ್ತ ಪೊಲೀಸರು ಮಹಾರಾಷ್ಟ್ರಕ್ಕೆ ತೆರಳುತ್ತಿದ್ದ ಶ್ರೀಗಳನ್ನು ಬಂಕಾಪುರ ರಾಷ್ಟ್ರೀಯ ಹೆದ್ದಾರಿ ಬಳಿ ವಶಕ್ಕೆ ಪಡೆದು ಚಿತ್ರದುರ್ಗಕ್ಕೆ ಕರೆದೊಯ್ದಿದ್ದಾರೆ. ಈ ಬಗ್ಗೆ ಸ್ವತಃ ಮುರುಘಾಮಠದಲ್ಲಿ ಡಾ.ಶಿವಮೂರ್ತಿಶರಣರು ಪ್ರತಿಕ್ರಿಯೆ ನೀಡಿದ್ದು ಇದರಲ್ಲಿ ಯಾವುದೇ ಪಲಾಯನವಾದ ಇಲ್ಲವೆಂದಿದ್ದಾರೆ.
ತನಿಖೆಗೆ ಎಲ್ಲ ರೀತಿಯ ಸಹಕಾರ ನೀಡುತ್ತೇವೆ
ನಿಮ್ಮೆಲ್ಲರ ಬೆಂಬಲದಿಂದಲೇ ನಾವು ಧೈರ್ಯವಾಗಿದ್ದೇವೆ. ಇದರಲ್ಲಿ ಯಾವುದೇ ಪಲಾಯನವಾದ ಇಲ್ಲ. ಯಾವುದೇ ಕಾರಣಕ್ಕೂ ಅತಂಕಪಡಬೇಕಾಗಿಲ್ಲ. ಬಂದಿರುವ ಸಮಸ್ಯೆಯನ್ನು ನಾವೆಲ್ಲರೂ ಶಾಂತವಾಗಿ ಬಗೆಹರಿಸೋಣ. ಇಂತಹ ಪಿತೂರಿ ಹೊಸದಲ್ಲ, 15 ವರ್ಷಗಳಿಂದಲೂ ನಡೆಯುತ್ತಿದೆ. ಒಳಗೊಳಗೆ ನಡೆಯುತ್ತಿದ್ದ ಪಿತೂರಿ ಇದೀಗ ಹೊರಗೆ ನಡೆಯುತ್ತಿವೆ. ಇದಕ್ಕೆ ತಾರ್ಕಿಕ ಅಂತ್ಯಹಾಡುವ ನಿಟ್ಟಿನಲ್ಲಿ ಕೆಲಸ ಮಾಡೋಣ. ನಾವು ನೆಲದ ಈ ಕಾನೂನನ್ನು ಗೌರವಿಸುವಂತಹ ಮಠಾಧೀಶರು. ತನಿಖೆಗೆ ಎಲ್ಲ ರೀತಿಯ ಸಹಕಾರ ನೀಡುತ್ತೇವೆ. ಭಕ್ತಾದಿಗಳು ಕೂಡ ಊಹಾಪೋಹಗಳಿಗೆ ಕಿವಿಗೊಡಬಾರದು. ನಾವು ಕೂಡ ನ್ಯಾಯಸ್ಥಾನದಲ್ಲಿದ್ದೇವೆ. ಏನೋ ಒಂದು ಅಹಿತಕರ ಸಂದರ್ಭ ಎದುರಾಗಿದೆ. ನಾವು ಅದರಿಂದ ಹೊರಗೆ ಬಂದೇ ಬರುತ್ತೇವೆಂಬ ವಿಶ್ವಾಸವಿದೆ. ಭಕ್ತಾದಿಗಳು ಹೆದರುವ ಅಗತ್ಯವಿಲ್ಲ ಎಂದು ಚಿತ್ರದುರ್ಗದ ಮುರುಘಾಮಠದಲ್ಲಿ ಶಿವಮೂರ್ತಿಶರಣ ಸ್ವಾಮೀಜಿ ಭಕ್ತರಿಗೆ ತಿಳಿಸಿದ್ದಾರೆ. ಹಾಗೂ ತಾವು ಪಲಾಯನ ಮಾಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಮಲ್ಲಾಡಿಹಳ್ಳಿ ಆಶ್ರಮದಲ್ಲಿ ಶ್ರೀಗಳ ವಿರುದ್ಧ ಕೆಲವರ ಪ್ರತಿಭಟನೆ
ಇನ್ನು ಮುರುಘಾಶ್ರೀಗಳ ವಿರುದ್ಧ ಫೋಕ್ಸೋ ಕೇಸ್ ಹಿನ್ನೆಲೆ ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲೂಕಿನ ಮಲ್ಲಾಡಿಹಳ್ಳಿ ಆಶ್ರಮದಲ್ಲಿ ಶ್ರೀಗಳ ವಿರುದ್ಧ ಕೆಲವರು ಪ್ರತಿಭಟನೆ ನಡೆಸಿದ್ದಾರೆ. ಮುರುಘಾಶ್ರೀ ಫೋಟೋಗಳನ್ನು ಹೊರಗಿಟ್ಟು ಅವರ ಭಾವಚಿತ್ರಕ್ಕೆ ಚಪ್ಪಲಿ ಹಾರ ಹಾಕಿ ಕಿಡಿ ಕಾರಿದ್ದಾರೆ. ಮಲ್ಲಾಡಿಹಳ್ಳಿ ಆಶ್ರಮ, ಮುರುಘಾಮಠಕ್ಕೆ ಒಳಪಟ್ಟಿರುವ ಆಶ್ರಮ. ಈ ಆಶ್ರಮದಲ್ಲಿರುವ ಮುರುಘಾಶ್ರೀ ಭಾವಚಿತ್ರ ಹೊರಗಿಟ್ಟು ಚಪ್ಪಲಿ ಹಾರ ಹಾಕಿ, ಭಾವಚಿತ್ರಕ್ಕೆ ಬೆಂಕಿಯಿಟ್ಟು ಆಕ್ರೋಶ ಹೊರ ಹಾಕಲಾಗಿದೆ. ಕಮಾನಿನಲ್ಲಿದ್ದ ಮುರುಘಾಶ್ರೀ ಪುತ್ಥಳಿ ಹೊಡೆದು ಹಾಕಿ ಆಕ್ರೋಶ ಹೊರ ಹಾಕಲಾಗಿದೆ.
ಮುರುಘಾ ಶರಣರ ಜೊತೆ ಮಠಾಧೀಶರ ಸಭೆ
ಚಿತ್ರದುರ್ಗದ ಮುರುಘಾಮಠದ ಸಭಾಂಗಣದಲ್ಲಿ ಮುರುಘಾ ಶರಣರ ಜೊತೆ ಮಠಾಧೀಶರು ಸಭೆ ನಡೆಸಿದ್ದಾರೆ. ಭಗೀರಥ ಮಠದ ಪುರುಷೋತ್ತಮಾನಂದಪುರಿ ಸ್ವಾಮೀಜಿ, ಗಾಣಿಗ ಮಠದ ಬಸವಕುಮಾರಶ್ರೀ, ಬಸವ ಮಾಚಿದೇವಶ್ರೀ, ಕುಂಚಿಟಿಗ ಮಠದ ಶಾಂತವೀರಶ್ರೀ ಸೇರಿದಂತೆ ಇತರೆ ಮಠಾಧೀಶರು ಹಾಗೂ ಖನಿಜ ನಿಗಮದ ಮಾಜಿ ಅಧ್ಯಕ್ಷ ಲಿಂಗಮೂರ್ತಿ ಸಭೆಯಲ್ಲಿ ಭಾಗಿಯಾಗಿದ್ದಾರೆ.