ಮೈಸೂರು: ರಾಜ್ಯದಲ್ಲಿ ಭಾರೀ ಮಳೆಯಾಗುತ್ತಿದ್ದು, ಅಪಾರ ಪ್ರಮಾಣದಲ್ಲಿ ಹಾನಿ ಉಂಟಾಗಿದೆ. ಅಲ್ಲಲ್ಲಿ ಭೂಕುಸಿತಗಳು ಉಂಟಾಗಿವೆ. ಈ ಬಗ್ಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai), ಇಂದು ಸಂಜೆ ಮಳೆಹಾನಿ ಕುರಿತು ಸ್ಪಷ್ಟ ಮಾಹಿತಿ ಸಿಗಲಿದೆ ಎಂದು ತಿಳಿಸಿದ್ದಾರೆ. ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಡಲಕೊರೆತದಿಂದ ಹಾಗೂ ಮಳೆಯಿಂದ ತೀವ್ರ ಸಮಸ್ಯೆ ಉಂಟಾಗಿದೆ. ಇಂದು ಸಂಜೆ ಮಳೆಹಾನಿ ಕುರಿತು ಸ್ಪಷ್ಟ ಮಾಹಿತಿ ಸಿಗಲಿದ್ದು, ಮೊದಲ ಹಂತದ ನಷ್ಟದ ಅಂಕಿ-ಅಂಶ ಬಿಡುಗಡೆಯಾಗಲಿದೆ ಎಂದು ತಿಳಿಸಿದರು.
ಮೊದಲ ಹಂತದ ನಷ್ಟದ ವರದಿ ಬಂದ ಮೇಲೆ ಪರಿಹಾರದ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು, ಕೇಂದ್ರ ಸರ್ಕಾರದಿಂದ ಪರಿಹಾರ ಕೇಳುವ ಬಗ್ಗೆ ಅಲ್ಲಿನ ನಾಯಕರೊಂದಿಗೆ ಮಾತನಾಡಿ ತೀರ್ಮಾನ ಕೈಗೊಳ್ಳುತ್ತೇವೆ. ರಕ್ಷಣಾ ಕಾರ್ಯಾಚರಣೆಗೆ ನಮ್ಮಲ್ಲಿ ಹಣದ ಕೊರತೆ ಇಲ್ಲ. ನದಿಗಳ ಪಕ್ಕದ ಮನೆಗಳನ್ನು ಸ್ಥಳಾಂತರಕ್ಕೆ ಯೋಜನೆ ಮಾಡಿದ್ದೇವೆ. ಜಿಲ್ಲಾ ಉಸ್ತುವಾರಿ ಸಚಿವರು ಇಂತಹ ತುರ್ತು ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದರು.
ಇದನ್ನೂ ಓದಿ: ಮಳೆಯಿಂದ ತತ್ತರಿಸಿರುವ ಜನರಿಗೆ ನೆರವಾಗುವ ಬದ್ಧತೆ ಆಯಾ ಜಿಲ್ಲಾ ಉಸ್ತುವಾರಿ ಸಚಿವರಿಗೆ ಇಲ್ಲ: ಎಮ್ ಬಿ ಪಾಟೀಲ್, ಕಾಂಗ್ರೆಸ್ ಶಾಸಕ
750 ಕೋಟಿ ರೂ. ಎನ್ಡಿಆರ್ಎಫ್ ಹಣ ಇದೆ
ಸದ್ಯಕ್ಕೆ 750 ಕೋಟಿ ರೂಪಾಯಿ ಎನ್ಡಿಆರ್ಎಫ್ ಹಣ ನಮ್ಮಲ್ಲಿ ಇದೆ ಎಂದು ಹೇಳಿದ ಸಿಎಂ ಬೊಮ್ಮಾಯಿ, ಅನೇಕ ಕಡೆಗಳಲ್ಲಿ ಭೂ ಕುಸಿತವಾಗಿದೆ, ರಸ್ತೆಗಳು ಹಾಳಾಗಿದೆ, ಮನೆ ಹಾನಿ ಪ್ರಾಣ ಹಾನಿಯೂ ಉಂಟಾಗಿದೆ. ಈ ಎಲ್ಲದರ ಬಗ್ಗೆ ವರದಿ ಸಿದ್ಧವಾಗುತ್ತಿದೆ. ಸಂಜೆಯೊಳಗಡೆ ಅಧಿಕೃತ ಮಾಹಿತಿ ಪ್ರಕಟವಾಗಲಿದೆ ಎಂದರು.
ಉಸ್ತುವಾರಿ ಸಚಿವರು ನೆರೆ ಪ್ರದೇಶಗಳಿಗೆ ಭೇಟಿ ಕೊಡುತ್ತಿಲ್ಲ ಎನ್ನುವುದು ಸುಳ್ಳು
ರಾಜ್ಯದಲ್ಲಿ ಭಾರಿ ಮಳೆಯಿಂದಾಗಿ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ಇಡೀ ರಾಜ್ಯ ಸರ್ಕಾರ ರಸ್ತೆಗಿಳಿದು ಕೆಲಸ ಮಾಡುತ್ತಿದೆ ಎಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರು ನೆರೆ ಹಾನಿ ಪ್ರದೇಶಕ್ಕೆ ಹೋಗುತ್ತಿಲ್ಲ ಎಂಬುದು ಶುದ್ದ ಸುಳ್ಳು. ಎಲ್ಲಾ ಜಿಲ್ಲಾ ಉಸ್ತುವಾರಿ ಸಚಿವರು ತಮಗೆ ಸಂಬಂಧಿಸಿದ ಜಿಲ್ಲೆಗಳಲ್ಲಿ ಹಾನಿಯುಂಟಾದ ಪ್ರದೇಶಗಳಿಗೆ ಹೋಗಿ ಪರಿಶೀಲನೆ ನಡೆಸಿದ್ದಾರೆ. ನಾನು ಸೇರಿದಂತೆ ಎಲ್ಲಾ ಸಚಿವರುಗಳು ಕೆಲಸ ಮಾಡುತ್ತಿದ್ದಾರೆ ಎಂದರು.
ಇದನ್ನೂ ಓದಿ: ಉತ್ತರ ಕನ್ನಡದಲ್ಲಿ ಮುಂದುವರಿದ ಮಹಾ ಮಳೆ! ವರುಣನ ಅಬ್ಬರಕ್ಕೆ ಮನೆಯಲ್ಲಿ ಮಲಗಿದ್ದ ತಾಯಿ, ಮಗಳು ಸಾವು
ನಿಗಮ ಮಂಡಳಿ ಅಧ್ಯಕ್ಷರ ರಾಜೀನಾಮೆಗೆ ಪಟ್ಟಿ ತಯಾರಿ
ನಿಗಮ ಮಂಡಳಿ ಅಧ್ಯಕ್ಷರ ಬದಲಾವಣೆ ವಿಚಾರ ಸಂಬಂಧ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ, ಆರು ತಿಂಗಳ ಹಿಂದೆಯೇ ಅಧ್ಯಕ್ಷರ ಬದಲಾವಣೆಗೆ ಕೋರ್ ಕಮಿಟಿಯಲ್ಲಿ ತೀರ್ಮಾನ ಮಾಡಿದ್ದೇವೆ. ಒಂದೂವರೆ ವರ್ಷ ಪೂರೈಸಿರುವ ಅಧ್ಯಕ್ಷರು ರಾಜೀನಾಮೆ ನೀಡಲು ಸೂಚನೆ ನೀಡಿದ್ದೇವೆ. ಒಂದೂವರೆ ವರ್ಷ ಅಧಿಕಾರಾವಧಿ ಪೂರೈಸಿದವರ ಪಟ್ಟಿ ತಯಾರಿಸಿದ್ದೇವೆ. ಶೀಘ್ರದಲ್ಲೇ ಅದರ ಅಧಿಕೃತ ಆದೇಶ ಹೊರಡಿಸುತ್ತೇವೆ ಎಂದರು.
ಬೆಂಗಳೂರಿನ ಚಾಮರಾಜಪೇಟೆ ಬಂದ್ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಸಿಎಂ ಬಸವರಾಜ ಬೊಮ್ಮಾಯಿ, ಚಾಮರಾಜಪೇಟೆ ಬಂದ್ ವಿಚಾರವನ್ನು ಸ್ಥಳೀಯ ಅಧಿಕಾರಿಗಳು ನೋಡಿಕೊಳ್ಳುತ್ತಾರೆ ಎಂದು ಹೇಳಿದರು.
ಇದನ್ನೂ ಓದಿ: India Rain: ಗುಜರಾತ್, ತೆಲಂಗಾಣದಲ್ಲಿ ಇಂದು ಭಾರಿ ಮಳೆ ನಿರೀಕ್ಷಿತ; ದೆಹಲಿಗೆ ತಂಪೆರೆಯಲಿದ್ದಾನೆ ವರುಣ