ಈ ವರ್ಷ ಲಾಲ್ಬಾಗ್ನಲ್ಲಿ ನಟ ಪುನೀತ್ ರಾಜ್ಕುಮಾರ್ ಹೆಸರಲ್ಲಿ ಫ್ಲವರ್ ಶೋ; ಸಚಿವ ಮುನಿರತ್ನ
ಆಗಸ್ಟ್ ಹದಿನೈದರ ಬಳಿಕ ಒಂದೆರಡು ದಿನಗಳ ಕಾಲ ಫ್ಲವರ್ ಶೋ ಮುಂದುವರಿಸುವ ಬಗ್ಗೆ ಚರ್ಚೆ ನಡೆದಿದೆ. ಈ ಬಾರಿ ವಿದೇಶಗಳಿಂದಲೂ ಹೂವುಗಳನ್ನು ತರಿಸಲಾಗಿದೆ ಎಂದು ಸಚಿವ ಮುನಿರತ್ನ ಹೇಳಿದರು.
ಬೆಂಗಳೂರು: ಈ ವರ್ಷ ಲಾಲ್ಬಾಗ್ನಲ್ಲಿ (Lalbagh) ಆಗಸ್ಟ್ 5ರಿಂದ ಆ.15ರವರೆಗೆ ಫ್ಲವರ್ ಶೋ (Flower Show) ನಡೆಯಲಿದೆ ಎಂದು ವಿಕಾಸಸೌಧದಲ್ಲಿ ಸುದ್ದಿಗೋಷ್ಟಿ ನಡೆಸಿ ತೋಟಗಾರಿಕಾ ಸಚಿವ ಮುನಿರತ್ನ (Munirathna) ಮಾಹಿತಿ ನೀಡಿದ್ದಾರೆ. ಈ ಬಾರಿ ನಟ ಪುನೀತ್ ರಾಜ್ಕುಮಾರ್ ಹೆಸರಿನಲ್ಲಿ ಫ್ಲವರ್ ಶೋ ನಡೆಯುತ್ತದೆ. ಆಗಸ್ಟ್ 5ರಂದು ಸಿಎಂ ಬೊಮ್ಮಾಯಿ ಉದ್ಘಾಟಿಸಲಿದ್ದಾರೆ. ಕೊವಿಡ್ ನಿಯಮಗಳ ಪಾಲನೆಯೊಂದಿಗೆ ಫ್ಲವರ್ ಶೋ ನಡೆಯುತ್ತದೆ. ಡಾ.ರಾಜ್ಕುಮಾರ್ ಅವರ ಗಾಜನೂರಿನ ಮನೆಗೆ ಹೂವಿನ ಅಲಂಕಾರ ಮಾಡಲಾಗುತ್ತದೆ ಎಂದು ಸಚಿವರು ತಿಳಿಸಿದ್ದಾರೆ.
ಆಗಸ್ಟ್ ಹದಿನೈದರ ಬಳಿಕ ಒಂದೆರಡು ದಿನಗಳ ಕಾಲ ಫ್ಲವರ್ ಶೋ ಮುಂದುವರಿಸುವ ಬಗ್ಗೆ ಚರ್ಚೆ ನಡೆದಿದೆ. ಈ ಬಾರಿ ವಿದೇಶಗಳಿಂದಲೂ ಹೂವುಗಳನ್ನು ತರಿಸಲಾಗಿದೆ ಎಂದು ಸಚಿವ ಮುನಿರತ್ನ ಹೇಳಿದರು. ಇನ್ನು ಇದೆ ವೇಳೆ ಸಚಿವ ಮುನಿರತ್ನ ರಾಜ್ಯದಲ್ಲಿ ಮಳೆಯಿಂದ ತೋಟಗಾರಿಕೆ ಬೆಳೆ ನಷ್ಟ ಆಗುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿದರು. ಅಧಿಕಾರಿಗಳು ಬೆಳೆ ಹಾನಿ ಬಗ್ಗೆ ಸಂಪೂರ್ಣ ವರದಿ ತರಿಸುತ್ತಿದ್ದಾರೆ. ವರದಿ ಬಳಿಕ ರೈತರಿಗೆ ಮಾಡಬೇಕಿರುವ ಸಹಾಯವನ್ನು ಖಂಡಿತವಾಗಿಯೂ ಮಾಡುತ್ತೇವೆ. ಏನೇನು ನಷ್ಟ ಉಂಟಾಗಿದೆಯೋ ಅದನ್ನು ಗಮನಿಸುತ್ತೇವೆ. ಪ್ರಾಮಾಣಿಕವಾಗಿ ನಾವು ರೈತರ ಜೊತೆ ಇದ್ದೇವೆ ಎಂದು ಹೇಳಿದರು.
ಇದನ್ನೂ ಓದಿ: ಮೊಹಮ್ಮದ್ ಜುಬೇರ್ ಮಧ್ಯಂತರ ಜಾಮೀನು ವಿಸ್ತರಿಸಿದ ಸುಪ್ರೀಂ; ಸೆಪ್ಟೆಂಬರ್ 7ಕ್ಕೆ ಮುಂದಿನ ವಿಚಾರಣೆ
ದಾವಣಗೆರೆಯಲ್ಲಿ ಸಿದ್ದರಾಮೋತ್ಸವ ನಡೆಯುವ ಬಗ್ಗೆ ಮಾತನಾಡಿದ ಸಚಿವ ಮುನಿರತ್ನ, ಕೆಪಿಸಿಸಿ ಅಧ್ಯಕ್ಷರು ಒಂದು ಉತ್ಸವ ಆಚರಣೆ ಮಾಡಿಕೊಂಡರೂ ಅಚ್ಚರಿ ಇಲ್ಲ. ಸಿದ್ದರಾಮಯ್ಯ ಅವರಿಗೆ ಹುಟ್ಟಿದ ದಿನವೇ ಗೊತ್ತಿಲ್ಲ. ಹಿಂದೆ ಸಿದ್ದರಾಮಣ್ಣ ಹುಟ್ಟಿದ ದಿನದ ಶುಭಾಷಯ ಅಂದರೆ ಏಯ್ ಹೋಗೋ ನನಗೆ ಹುಟ್ಟಿದ ದಿನವೇ ಗೊತ್ತಿಲ್ಲ ಅಂತಿದ್ದರು. ಆದರೆ ಈಗ ಇದ್ದಕ್ಕಿದ್ದಂತೆ 75ನೇ ವರ್ಷಕ್ಕೆ ಆಗಸ್ಟ್ 3 ಅಂತಲೇ ಹೇಗೆ ತಿಳಿಯಿತೋ ಗೊತ್ತಿಲ್ಲ. ಈ ಹುಟ್ಟುಹಬ್ಬ ಅವರು ಮಾಡಿಕೊಳ್ಳುತ್ತಿರುವುದಲ್ಲ. ಅವರ ಅಕ್ಕಪಕ್ಕದಲ್ಲಿ ಇರುವವರು ಮಾಡುತ್ತಿರುವುದು ಎಂದರು.
ಇದನ್ನೂ ಓದಿ: ಕಾಂಗ್ರೆಸ್ ಪಕ್ಷದಲ್ಲಿ ಐಕ್ಯಮತ್ಯವಿದೆ; ಒಳಜಗಳಗಳಿವೆ ಅನ್ನೋದು ಬಿಜೆಪಿಯ ಸೃಷ್ಟಿ: ಡಾ ಯತೀಂದ್ರ ಸಿದ್ದರಾಮಯ್ಯ
Published On - 12:25 pm, Tue, 12 July 22