ಬೆಂಗಳೂರು: ವಿಧಾನಸೌಧದಲ್ಲಿ ರಾಜ್ಯ ಸಚಿವ ಸಂಪುಟ ಸಭೆ ಮುಕ್ತಾಯಗೊಂಡಿದ್ದು, ದಿ. ನಿಸಾರ್ ಅಹ್ಮದ್ ಟ್ರಸ್ಟ್ಗೆ 2 ಎಕರೆ ಭೂಮಿ ಮಂಜೂರು ಮಾಡಲು ಸಂಪುಟದಲ್ಲಿ ತೀರ್ಮಾನವಾಗಿದೆ ಎಂದು ಸಚಿವ ಮಾಧುಸ್ವಾಮಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಕಾರ್ಮಿಕರ ಹೆಚ್ಚುವರಿ ಕೆಲಸದ ಅವಧಿ ಆದೇಶ ವಾಪಸ್
ಮುಖ್ಯವಾಗಿ, ಕೊರೊನಾ ಸಂಕಟದಿಂದಾಗಿ ಕಾರ್ಮಿಕರ ಹೆಚ್ಚುವರಿ ಕೆಲಸದ ಅವಧಿ ಹೆಚ್ಚಿಸುವ ತಿದ್ದುಪಡಿ ಆದೇಶ ವಾಪಸ್ ಪಡೆದಿದ್ದೇವೆ. ಇನ್ನು ಮಹಾರಾಷ್ಟ್ರ, ತಮಿಳುನಾಡು, ಮಧ್ಯಪ್ರದೇಶ, ರಾಜಸ್ಥಾನ ಮತ್ತು ಗುಜರಾತ್ನಿಂದ ಬರುವವರಿಗೆ 15 ದಿನಗಳ ಕಾಲ ನಿಷೇಧ ಕಡ್ಡಾಯಗೊಳಿಸಲಾಗಿದೆ. ರೈಲು, ವಿಮಾನ, ಬಸ್ಗಳಲ್ಲಿ ಬರುವ ಎಲ್ಲರಿಗೂ 15 ದಿನಗಳ ಕಾಲ ರಾಜ್ಯಕ್ಕೆ ಬರಲು ನಿಷೇಧ ಹೇರಿದ್ದೇವೆ ಎಂದು ಅವರು ಸ್ಪಷ್ಟಪಡಿಸಿದರು.
ಪಿಎಸ್ಐ ನೇಮಕಾತಿ ವಯೋಮಿತಿ ಹೆಚ್ಚಳಕ್ಕೆ ನಿರ್ಧಾರ
ಪಿಎಸ್ಐ ನೇಮಕಾತಿ ವಯೋಮಿತಿ ಹೆಚ್ಚಳಕ್ಕೆ ನಿರ್ಧಾರ ಮಾಡಲಾಗಿದೆ. ಸಾಮಾನ್ಯ ವರ್ಗಕ್ಕೆ 28 ರಿಂದ 30 ವರ್ಷಕ್ಕೆ ಹೆಚ್ಚಳವಾಗಿದೆ. ಎಸ್ಸಿ, ಎಸ್ಟಿ ಪಂಗಡಕ್ಕೆ 30ರಿಂದ 32 ವರ್ಷಕ್ಕೆ ಹೆಚ್ಚಳಗೊಂಡಿದೆ. 18 ಕೋಟಿ ವೆಚ್ಚದಲ್ಲಿ ಔಷಧ ಉಗ್ರಾಣ ನಿರ್ಮಿಸಲು ಒಪ್ಪಿಗೆ ದೊರೆತಿದೆ. ಉಡುಪಿ, ಚಿಕ್ಕಮಗಳೂರು, ಚಾಮರಾಜನಗರ, ಮಂಡ್ಯ ಮತ್ತು ಚಿಕ್ಕಬಳ್ಳಾಪುರಗಳಲ್ಲಿ ಔಷಧ ಉಗ್ರಾಣ ನಿರ್ಮಿಸಲು ಒಪ್ಪಿಗೆ ನೀಡಲಾಗಿದೆ ಎಂದು ಅವರು ಹೇಳಿದರು.
ವಿಧಾನಪರಿಷತ್ 5 ಸ್ಥಾನಗಳಿಗೆ ನಾಮನಿರ್ದೇಶನ ವಿಚಾರವಾಗಿ ಮಾತನಾಡಿದ ಸಚಿವ ಮಾಧುಸ್ವಾಮಿ, ನಾಮನಿರ್ದೇಶನ ಅಧಿಕಾರ ಸಿಎಂಗೆ ಕೊಡಲು ಸಂಪುಟ ಒಪ್ಪಿಗೆ ಸೂಚಿಸಿತು ಎಂದರು. ಎಲ್ಲ ರೈತರಿಗೆ 5 ಸಾವಿರ ರೂ. ಪರಿಹಾರ ನೀಡಲು ನಿರ್ಧಾರ. ಆಟೋ, ಟ್ಯಾಕ್ಸಿ ಚಾಲಕರು ಸೇರಿದಂತೆ ಶ್ರಮಿಕ ವರ್ಗಕ್ಕೆ ಪ್ಯಾಕೇಜ್ ನೀಡಲಾಗುವುದು. ಈ ಹಿಂದೆ ಇದ್ದ ಕೆಲ ಷರತ್ತುಗಳಲ್ಲಿ ವಿನಾಯಿತಿ ನೀಡಿದ್ದೇವೆ ಎಂದೂ ಅವರು ಹೇಳಿದರು.