
ಬೆಳಗಾವಿ: ಉಪಚುನಾವಣೆ ಪ್ರಚಾರ ನಿಮಿತ್ತ ಬೆಳಗಾವಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಮಂಗಳಾ ಅಂಗಡಿ ಪರ ಪ್ರಚಾರಕ್ಕೆ ತೆರಳಿದ್ದ 78 ವರ್ಷ ವಯಸ್ಸಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬಿಸಿಲಿನ ತಾಪ ತಾಳಲಾರದೇ ಸುಸ್ತಾಗಿ ಅರ್ಧದಾರಿಗೆ ತೆರಳಿ ನಂತರ ಮರಳಿದ್ದಾರೆ. ತೆರೆದ ವಾಹನದಲ್ಲಿ ರೋಡ್ ಶೋ ನಡೆಸಲು ಹೊರಟಿದ್ದ ಯಡಿಯೂರಪ್ಪ ಬಿಸಿಲಿನ ಬೇಗೆಗೆ ಸಿಲುಕಿ ಸುಸ್ತಾಗಿದ್ದು, ಪ್ರಚಾರ ಕಾರ್ಯದಿಂದ ಅರ್ಧಕ್ಕೆ ವಾಪಸ್ಸಾಗಿ ತಮ್ಮ ಕಾರಿನಲ್ಲಿ ಖಾಸಗಿ ಹೊಟೇಲಿಗೆ ಬಂದು ವಿಶ್ರಾಂತಿ ಪಡೆದಿದ್ದಾರೆ. ನಿನ್ನೆಯಿಂದಲೂ ಜ್ವರ ಹಾಗೂ ಸುಸ್ತಿನಿಂದ ಬಳಲುತ್ತಿರುವ ಮುಖ್ಯಮಂತ್ರಿಗಳು ಆಯಾಸದ ನಡುವಲ್ಲೇ ಪ್ರಚಾರ ಕಾರ್ಯದಲ್ಲಿ ಭಾಗಿಯಾಗಿದ್ದಾರೆ. ಆದರೆ, ಅವರ ಆರೋಗ್ಯ ಸಹಕರಿಸದ ಕಾರಣ ವಾಪಾಸಾಗಿದ್ದಾರೆ.
ರೋಡ್ ಶೋ ವೇಳೆ ತೆರೆದ ವಾಹನ ಏರಲು ತುಸು ಕಷ್ಟಪಟ್ಟ ಯಡಿಯೂರಪ್ಪ ಸುಮಾರು ಹೊತ್ತು ಬಿಸಿಲಿನಲ್ಲೇ ನಿಲ್ಲಬೇಕಾಗಿ ಬಂತು. ರೋಡ್ ಶೋ ಆಯೋಜನೆ ಮಾಡಿದ್ದರೂ ಟ್ರಾಫಿಕ್ ನಿರ್ವಹಣೆಯಲ್ಲಿ ಸೂಕ್ತ ವ್ಯವಸ್ಥೆ ಇಲ್ಲದ ಕಾರಣ ಕಾರಿನಲ್ಲೇ 5 ನಿಮಿಷಗಳಿಗೂ ಹೆಚ್ಚು ಕಾಲ ಕುಳಿತು ಕಾಯಬೇಕಾಯಿತು. ನಂತರ ತೆರೆದ ವಾಹನ ಏರಿ ಬೈಕ್ ಮೆರವಣಿಗೆ ತೆರಳುವವರೆಗೂ ಕಾದ ಮುಖ್ಯಮಂತ್ರಿಗಳು ಮತ್ತು ಸಚಿವರು ಬಿಸಿಲಿನ ಝಳಕ್ಕೆ ಸುಸ್ತಾದರು. ಈ ವೇಳೆ ಯಡಿಯೂರಪ್ಪ ಬಿಸಿಲಿನಿಂದ ರಕ್ಷಣೆ ಪಡೆಯಲು ಟೋಪಿ ಮತ್ತು ಕೊಡೆಯ ಮೊರೆ ಹೋದರಾದರೂ ನಿನ್ನೆ ಜ್ವರದಿಂದ ಬಳಲಿದ್ದ ಕಾರಣ ಹೆಚ್ಚು ಹೊತ್ತು ಆಯಾಸವನ್ನು ತಡೆದುಕೊಳ್ಳಲಾಗಿಲ್ಲ. ಮುಖ್ಯಮಂತ್ರಿಗಳು ರೋಡ್ ಶೋ ಬಿಟ್ಟು ವಾಪಾಸಾದ ನಂತರ ಸಚಿವರಾದ ಪ್ರಹ್ಲಾದ್ ಜೋಷಿ, ಜಗದೀಶ್ ಶೆಟ್ಟರ್, ಉಮೇಶ್ ಕತ್ತಿ, ಮುರುಗೇಶ್ ನಿರಾಣಿ ಪ್ರಚಾರ ಕಾರ್ಯ ಮುಂದುವರೆಸಿದರು. ಸದ್ಯ ಯಡಿಯೂರಪ್ಪ ಅವರಿಗೆ ಮತ್ತೆ ಜ್ವರ ಕಾಣಿಸಿಕೊಂಡಿದೆ ಎನ್ನಲಾಗುತ್ತಿದ್ದು, ಖಾಸಗಿ ಆಸ್ಪತ್ರೆ ವೈದ್ಯರು ತಪಾಸಣೆ ನಡೆಸುವ ಸಾಧ್ಯತೆ ಇದೆ.
ಧನ್ವಂತರಿ ಸುದರ್ಶನ ಹೋಮದಲ್ಲಿ ಭಾಗಿ
ಬೆಳಗಾವಿಗೆ ಚುನಾವಣಾ ಪ್ರಚಾರ ಕಾರ್ಯಕ್ಕಾಗಿ ತೆರಳಿರುವ ಬಿ.ಎಸ್.ಯಡಿಯೂರಪ್ಪ ಹುಕ್ಕೇರಿ ಹಿರೇಮಠದಲ್ಲಿ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ನೇತೃತ್ವದಲ್ಲಿ, ವಿದ್ವಾನ್ ಚಂದ್ರಶೇಖರಯ್ಯ, ವಿದ್ವಾನ್ ಸಂಪತ್ ಕುಮಾರಯ್ಯ ಅವರಿಂದ ನಡೆದ ಧನ್ವಂತರಿ ಸುದರ್ಶನ ಹೋಮದಲ್ಲಿ ಪಾಲ್ಗೊಂಡಿದ್ದರು. ಆರೋಗ್ಯ ವೃದ್ಧಿ, ಕೊರೊನಾ ಸೋಂಕು ತಡೆ ಹಾಗೂ ಲೋಕಕಲ್ಯಾಣಕ್ಕೆ ಪ್ರಾರ್ಥಿಸಿ ಮಾಡಲಾದ ಹೋಮದಲ್ಲಿ ಪಾಲ್ಗೊಂಡ ಮುಖ್ಯಮಂತ್ರಿಗಳಿಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಸಚಿವ ಜಗದೀಶ್ ಶೆಟ್ಟರ್ ಜೊತೆಯಾದರು. ಜೊತೆಗೆ ಬೆಳಗಾವಿಯ ನಾಗನೂರು ರುದ್ರಾಕ್ಷಿ ಮಠಕ್ಕೂ ಮುಖ್ಯಮಂತ್ರಿಗಳು ಭೇಟಿ ನೀಡಿದ್ದು, ಡಾ.ಅಲ್ಲಮಪ್ರಭು ಸ್ವಾಮೀಜಿಗಳ ಆಶೀರ್ವಾದ ಪಡೆದಿದ್ದಾರೆ.
ಇದನ್ನೂ ಓದಿ:
ಬಿ.ಎಸ್.ಯಡಿಯೂರಪ್ಪ ಅವರಿಗೆ ಜ್ವರ, ಸುಸ್ತು; ವಾಸ್ತವ್ಯ ಹೂಡಿದ ಹೊಟೇಲ್ ಸುತ್ತಮುತ್ತ ಸ್ಯಾನಿಟೈಸೇಶನ್
(CM BS Yediyurappa returned from ByElection campaign as he can not sustain Summer Heat in Belagavi)