ನೀರಾವರಿ ಯೋಜನೆಗೆ ತಮಿಳುನಾಡು ತಕರಾರು: ನ್ಯಾಯಾಧಿಕರಣ ಬೇಡ, ಕೂತು ಸಮಸ್ಯೆ ಪರಿಹರಿಸೋಣ ಎಂದ ಡಿಕೆ ಶಿವಕುಮಾರ್

| Updated By: Rakesh Nayak Manchi

Updated on: Jun 30, 2023 | 9:14 PM

ನಾನು ಸಚಿವನಾದ ಬಳಿಕ ದೆಹಲಿಗೆ ಅಧಿಕೃತ ಭೇಟಿ ನೀಡಿದ್ದು, ನಿನ್ನೆ ರಾತ್ರಿ ಕೇಂದ್ರ ಜಲಶಕ್ತಿ ಸಚಿವರನ್ನು ಭೇಟಿ ಮಾಡಿದ್ದೇನೆ. ಮಹದಾಯಿ ವಿಚಾರವಾಗಿ ಮಧ್ಯಸ್ಥಿಕೆ ವಹಿಸಬೇಕು ಎಂದು ಕೇಂದ್ರ ಅರಣ್ಯ ಸಚಿವರನ್ನು ಭೇಟಿ ಮಾಡುತ್ತೇನೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ.

ನೀರಾವರಿ ಯೋಜನೆಗೆ ತಮಿಳುನಾಡು ತಕರಾರು: ನ್ಯಾಯಾಧಿಕರಣ ಬೇಡ, ಕೂತು ಸಮಸ್ಯೆ ಪರಿಹರಿಸೋಣ ಎಂದ ಡಿಕೆ ಶಿವಕುಮಾರ್
ಕರ್ನಾಟಕ ಡಿಸಿಎಂ ಡಿಕೆ ಶಿವಕುಮಾರ್ ಮತ್ತು ತಮಿಳುನಾಡು ಸಿಎಂ ಎಂಕೆ ಸ್ಟಾಲಿನ್
Follow us on

ನವದೆಹಲಿ: ಮಾರ್ಕಂಡೇಯ ಯೋಜನೆ, ವರ್ತೂರು ಟ್ಯಾಂಕ್, ನರಸಾಪುರ ಯೋಜನೆ ಕೈಗೆತ್ತಿ ಕೊಂಡಿದ್ದೇವೆ. ಈ ವಿಚಾರವಾಗಿ ನ್ಯಾಯಾಧಿಕರಣ ಬೇಡ. ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳೋಣ. ದಿನನಿತ್ಯ ಈ ವಿಚಾರವಾಗಿ ಎರಡು ರಾಜ್ಯಗಳು ಸಂಘರ್ಷ ಮಾಡಿಕೊಳ್ಳುವುದು ಬೇಡ ಎಂದು ಕೇಂದ್ರ ಜಲಶಕ್ತಿ ಸಚಿವರಿಗೆ ಮನವಿ ಸಲ್ಲಿಸಿದ್ದಾಗಿ ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಹೇಳಿದ್ದಾರೆ.

ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬೆಂಗಳೂರಿನಲ್ಲಿ ನೀರು ಶುದ್ಧೀಕರಿಸಿ ಕೋಲಾರ ಭಾಗಕ್ಕೆ ನೀಡುತ್ತಿರುವುದನ್ನು ಪ್ರಶ್ನಿಸಿ ತಮಿಳುನಾಡು ಆಕ್ಷೇಪ ವ್ಯಕ್ತಪಡಿಸಿದೆ. ಇದರಲ್ಲಿ ಟ್ರಿಬ್ಯೂನಲ್ ರಚನೆಗೆ ಆಗ್ರಹಿಸಿ ನ್ಯಾಯಾಲಯದ ಮೊರೆ ಹೋಗಿದ್ದು, ಜುಲೈ 5ರ ಒಳಗಾಗಿ ಇದನ್ನು ಸ್ಥಾಪಿಸಬೇಕು ಎಂದು ನ್ಯಾಯಾಲಯ ಆದೇಶ ನೀಡಿದೆ ಎಂದರು.

ನಾನು ಈ ಹಿಂದೆ ನೀರಾವರಿ ಸಚಿವನಾಗಿ ನಂತರ ಕೊಳಚೆ ನೀರು ಶುದ್ಧೀಕರಣ ಮಾಡಿ ಅದನ್ನು ಬೇರೆ ಪ್ರದೇಶಗಳಿಗೆ ನೀಡಲಾಗಿತ್ತು. ಇನ್ನು ವೃಷಭಾವತಿ ಕಲುಷಿತ ನೀರು ಪರಿಷ್ಕರಿಸಿ ಅದನ್ನು ಕೆರೆ ತುಂಬಿಸಲಾಗಿತ್ತು. ನಮ್ಮ ಈ ಕೆಲಸವನ್ನು ಕೇಂದ್ರ ಸರ್ಕಾರ ಕೂಡ ಪ್ರಶಂಸೆ ಮಾಡಿತ್ತು. ಆದರೆ ಈಗ ತಮಿಳುನಾಡು ತಕರಾರು ಎತ್ತಿದ್ದು, ಜುಲೈ 5ರ ಒಳಗಾಗಿ ನ್ಯಾಯಾಧಿಕರಣಕ್ಕೆ ಆದೇಶ ನೀಡಿದೆ ಎಂದರು.

ಇದನ್ನೂ ಓದಿ: ಶ್ರಮ ಒಬ್ಬರದ್ದು, ಅನುಭವಿಸುವವರು ಮತ್ತೊಬ್ಬರು; ಚರ್ಚೆಗೆ ಗ್ರಾಸವಾಯ್ತು ಡಿಕೆ ಶಿವಕುಮಾರ್ ‘ಮಾರ್ಮಿಕ’ ಹೇಳಿಕೆ

ನಾವು ಈಗಾಗಲೇ 500mcft ಶೇಖರಣೆಯ ಮಾರ್ಕಂಡೇಯ ಯೋಜನೆ, ವರ್ತೂರು ಟ್ಯಾಂಕ್, ನರಸಾಪುರ ಯೋಜನೆ ಕೈಗೆತ್ತಿ ಕೊಂಡಿದ್ದೇವೆ. ಈ ವಿಚಾರವಾಗಿ ನ್ಯಾಯಾಧಿಕರಣ ಬೇಡ. ನಾವು ಕೂತು ಸಮಸ್ಯೆ ಬಗೆಹರಿಸಿಕೊಳ್ಳೋಣ. ದಿನನಿತ್ಯ ಈ ವಿಚಾರವಾಗಿ ಎರಡು ರಾಜ್ಯಗಳು ಸಂಘರ್ಷ ಮಾಡಿಕೊಳ್ಳುವುದು ಬೇಡ ಎಂದು ಕೇಂದ್ರ ಜಲಶಕ್ತಿ ಸಚಿವರಿಗೆ ಮನವಿ ಸಲ್ಲಿಸಿದ್ದೇನೆ ಎಂದು ತಿಳಿಸಿದರು.

ಕೇಂದ್ರ ಅರಣ್ಯ ಸಚಿವರ ಭೇಟಿಗೆ ಮುಂದಾದ ಡಿಕೆ ಶಿವಕುಮಾರ್

ಕೃಷ್ಣಾ ಮೇಲ್ದಂಡೆ ಯೋಜನೆ ಗೆಜೆಟ್ ಅಧಿಸೂಚನೆ ಬಗ್ಗೆ ನಾನು ಕೇಂದ್ರ ಸಚಿವರ ಗಮನ ಸೆಳೆದಿದ್ದೇನೆ. ಮಹದಾಯಿ ವಿಚಾರವಾಗಿ ಪರಿಸರ ಇಲಾಖೆ ಅನುಮತಿ ಸಿಕ್ಕಿಲ್ಲ. ಎಲ್ಲೆಲ್ಲಿ ನದಿ ಹರಿಯುತ್ತದೆಯೋ ಅಲ್ಲಿ ಕಾಡು ಇದ್ದೇ ಇರುತ್ತದೆ. ಅದಕ್ಕೆ ಪರ್ಯಾಯ ವ್ಯವಸ್ಥೆ ಮಾಡಬೇಕು. ಇದಕ್ಕಾಗಿ ಮಧ್ಯಸ್ಥಿಕೆ ವಹಿಸಬೇಕು ಎಂದು ಕೇಂದ್ರ ಅರಣ್ಯ ಸಚಿವರನ್ನು ಭೇಟಿ ಮಾಡುತ್ತೇನೆ. ಜಲಶಕ್ತಿ ಸಚಿವಾಲಯದಿಂದ ಅನುಮತಿ ಸಿಕ್ಕಿದ್ದು, ಅರಣ್ಯ ಇಲಾಖೆಯಲ್ಲಿ ನಿಂತಿದೆ. ಇಲ್ಲಿ ಅನುಮತಿ ಸಿಕ್ಕರೆ ಕಳಸಾ ಬಂಡೂರಿ ಯೋಜನೆ ಜಾರಿ ಆಗಲಿದೆ ಎಂದು ಡಿಸಿಎಂ ಹೇಳಿದರು.

ಮೇಕೆದಾಟು ವಿಚಾರವಾಗಿ ಕಾನೂನು ತಜ್ಞರ ಜೊತೆ ಚರ್ಚೆ ಮಾಡಬೇಕಿದೆ. ಯೋಜನೆ ತಡವಾದಷ್ಟು ರಾಜ್ಯಕ್ಕೆ ನಷ್ಟ ಹೆಚ್ಚು. ಈ ಮಧ್ಯೆ ಸುಪ್ರೀಂ ಕೋರ್ಟ್ ಮೆಟ್ಟಿಲೇರಲಾಗಿದೆ. ಕಾವೇರಿ ನೀರನ್ನು ನಾವು ಹೆಚ್ಚಾಗಿ ಬಳಸಲು ಸಾಧ್ಯವಿಲ್ಲ. ಕಾರಣ ಇದರ ಬೀಗ ಕೇಂದ್ರದ ಬಳಿ ಇದೆ. ಅದು ಅವರಿಗೂ ಗೊತ್ತಿದೆ. ಆದರೂ ಈ ವಿಚಾರವಾಗಿ ಅವರಿಗೆ ಮನದಟ್ಟು ಮಾಡಬೇಕಿದೆ. ನಮಗೆ ಯಾವುದೇ ರಾಜ್ಯದ ಜೊತೆ ಜಗಳ ಮಾಡಲು ಇಷ್ಟವಿಲ್ಲ. ಹೀಗಾಗಿ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸುತ್ತೇವೆ. ಇದಕ್ಕೆ ಮೊದಲು ಕಾನೂನು ತಂಡದ ಜೊತೆ ಮಾತನಾಡಬೇಕು ಎಂದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ