ಶ್ರಮ ಒಬ್ಬರದ್ದು, ಅನುಭವಿಸುವವರು ಮತ್ತೊಬ್ಬರು; ಚರ್ಚೆಗೆ ಗ್ರಾಸವಾಯ್ತು ಡಿಕೆ ಶಿವಕುಮಾರ್ ‘ಮಾರ್ಮಿಕ’ ಹೇಳಿಕೆ
ಶ್ರಮಪಡುವುದು ಒಬ್ಬರು, ಅದನ್ನು ಅನುಭವಿಸುವುದು ಮತ್ತೊಬ್ಬರು ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮಾರ್ಮಿಕವಾಗಿ ನೀಡಿದ್ದ ಹೇಳಿಕೆಯೂ ಚರ್ಚೆಗೆ ಗ್ರಾಸವಾಗಿದೆ.
ಬೆಂಗಳೂರು: ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡುವಾಗ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಅವರು ಉಕ್ಕಿನ ಸೇತುವೆ ವಿಚಾರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಬಗ್ಗೆ ನೀಡಿದ್ದ ಹೇಳಿಕೆ ರಾಜಕೀಯ ಪಡಸಾಲೆಯಲ್ಲಿ ಚರ್ಚೆಗೆ ಗ್ರಾಸವಾಗಿತ್ತು. ಇದೀಗ ಶ್ರಮಪಡುವುದು ಒಬ್ಬರು, ಅದನ್ನು ಅನುಭವಿಸುವುದು ಮತ್ತೊಬ್ಬರು ಎಂದು ಅವರು ಮಾರ್ಮಿಕವಾಗಿ ನೀಡಿದ್ದ ಹೇಳಿಕೆಯೂ ಚರ್ಚೆಗೆ ಗ್ರಾಸವಾಗಿದೆ. ಡಿಕೆ ಶಿವಕುಮಾರ್ ಅವರ ಹೇಳಿಕೆ ಕುರಿತ ಪತ್ರಿಕಾ ವರದಿಯ ತುಣುಕನ್ನು ಸಾಮಾಜಿಕ ಮಾಧ್ಯಮ ಫೇಸ್ಬುಕ್ನಲ್ಲಿ ಹಂಚಿಕೊಂಡಿರುವ ಬಿಜೆಪಿ ಶಾಸಕ ಎಸ್ ಸುರೇಶ್ ಕುಮಾರ್, ಈ ‘ಮಾರ್ಮಿಕ’ ಮಾತು ಓದಿದ ನಂತರ ಹಂಚಿಕೊಳ್ಳಬೇಕೆಂದು ಅನಿಸಿತು ಎಂದು ಬರೆದುಕೊಂಡಿದ್ದಾರೆ.
ಡಿಕೆ ಶಿವಕುಮಾರ್ ಮಾತಿನ ಹಿನ್ನೆಲೆ ಏನು? ಯಾರನ್ನು ಉದ್ದೇಶಿಸಿ ಅವರು ಈ ಹೇಳಿಕೆ ನೀಡಿರಬಹುದು ಎಂಬ ಚರ್ಚೆ ಆರಂಭವಾಗಿದೆ. ಶ್ರಮಕ್ಕೆ ಸಿಗಬೇಕಾದ ಸಿಎಂ ಸ್ಥಾನ ಸಿಗಲಿಲ್ಲ ಎಂಬ ಬೇಸರ ಡಿಕೆ ಶಿವಕುಮಾರ್ ಅವರ ಮಾತಿನಲ್ಲಿ ಎದ್ದುಕಾಣಿಸುತ್ತಿದೆ. ಅದೇ ಹಿನ್ನೆಲೆಯಲ್ಲಿ ಅವರು ಆ ಹೇಳಿಕೆ ನೀಡಿರಬಹುದು ಎಂದು ರಾಜಕೀಯ ವಲಯದಲ್ಲಿ ವಿಶ್ಲೇಷಣೆ ಮಾಡಲಾಗುತ್ತಿದೆ.
ಇದನ್ನೂ ಓದಿ: ಉಕ್ಕಿನ ಸೇತುವೆ ಯೋಜನೆ ಜಾರಿಗೆ ಸಿದ್ದರಾಮಯ್ಯ ಹೆದರಿದ್ದರು ಎಂದ ಡಿಕೆ ಶಿವಕುಮಾರ್; ಡಿಸಿಎಂ ಹೇಳಿಕೆಯ ಮರ್ಮವೇನು?
ಏನು ಹೇಳಿದ್ದರು ಡಿಕೆ ಶಿವಕುಮಾರ್?
ವಿಧಾನಸೌಧದಲ್ಲಿ ಕೆಂಪೇಗೌಡ ಜಯಂತಿ ವೇಳೆ ಮಾತನಾಡಿದ್ದ ಡಿಕೆ ಶಿವಕುಮಾರ್, ಶ್ರಮ ಒಬ್ಬರದ್ದಾದರೆ, ಅನುಭವಿಸುವವರು ಮತ್ತೊಬ್ಬರು. ಇದು ಹಿಂದಿನಿಂದಲೂ ನಡೆದುಕೊಂಡು ಬಂದಿದೆ ಏನೂ ಮಾಡಲಾಗದು. ವಿಧಾನಸೌಧಕ್ಕಾಗಿ ಕೆಂಗಲ್ ಹನುಮಂತಯ್ಯ ಶ್ರಮ ವಹಿಸಿದ್ದರು. ಕೈದಿಗಳು ಕಾಲಿಗೆ ಸರಪಳಿ ಹಾಕಿಕೊಂಡೇ ಕಲ್ಲು ಹೊತ್ತು ಸಾಗಿಸಿದ್ದರು. ಆದರೆ, ವಿಧಾನಸೌಧದಲ್ಲಿ ಬೇರೆಯವರು ಸವಲತ್ತು ಅನುಭವಿಸುತ್ತಿದ್ದಾರೆ, ಜೀವನವೇ ಹಾಗೆ ಎಂದು ಹೇಳಿದ್ದರು.
ಚುನಾವಣಾ ಫಲಿತಾಂಶ ಪ್ರಕಟವಾದ ನಂತರ ಮುಖ್ಯಮಂತ್ರಿ ಹೆಸರನ್ನು ಅಂತಿಮಗೊಳಿಸುವ ಮುನ್ನ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಹಲವು ದಿನಗಳ ಕಾಲ ದೆಹಲಿಯಲ್ಲಿ ಠಿಕಾಣಿ ಹೂಡಿದ್ದರು. ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಿ ತಮ್ಮ ಕಠಿಣ ಪರಿಶ್ರಮದಿಂದ ವಿಧಾನಸಭೆ ಚುನಾವಣೆಯಲ್ಲಿ ಪಕ್ಷ ಗೆಲ್ಲಲು ಸಾಧ್ಯವಾಯಿತು ಎಂದು ಶಿವಕುಮಾರ್ ಕಾಂಗ್ರೆಸ್ ಹೈಕಮಾಂಡ್ ಮುಂದೆ ವಾದಿಸಿದ್ದರು. ಹಲವು ಸುತ್ತಿನ ಚರ್ಚೆಯ ಬಳಿಕ ಹೈಕಮಾಂಡ್ ಶಿವಕುಮಾರ್ ಅವರನ್ನು ಸಮಾಧಾನಪಡಿಸಿ ಉಪ ಮುಖ್ಯಮಂತ್ರಿ ಸ್ಥಾನಕ್ಕೆ ಒಪ್ಪಿಸುವಲ್ಲಿ ಹೈಕಮಾಂಡ್ ಯಶಸ್ವಿಯಾಗಿತ್ತು.
ಇನ್ನಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
Published On - 5:42 pm, Thu, 29 June 23