ಮಂಗಳೂರು: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ತಾವು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಲೇ ಇಲ್ಲ ಎಂದಿದ್ದರು ಎಂದು ನಗರದಲ್ಲಿ MLC ಬಿ.ಕೆ.ಹರಿಪ್ರಸಾದ್ ಹೇಳಿದ್ದಾರೆ. ನಾನು ಜನ ಸೇರಿದ್ದನ್ನ ನೋಡಲಷ್ಟೇ ಹೋಗಿದ್ದೆ ಎಂದಿದ್ದರು. ಬ್ರಿಟಿಷರ ವಿರುದ್ಧ ನಡಯುತ್ತಿರುವ ಹೋರಾಟ ಎಂದು ಗೊತ್ತಿರಲಿಲ್ಲ ಎಂದು ಮುಚ್ಚಳಿಕೆ ಬರೆದಿದ್ದರು. ಬ್ರಿಟಿಷ್ ಮ್ಯಾಜಿಸ್ಟ್ರೇಟ್ಗೆ ಕ್ಷಮೆಯಾಚನೆಯ ಮುಚ್ಚಳಿಕೆ ಪತ್ರ ಬರೆದಿದ್ದರು. ಇಂಥವರಿಂದ ನಮಗೆ ದೇಶಪ್ರೇಮದ ಬಗ್ಗೆ ಪಾಠ ಸರಿಯಲ್ಲ ಎಂದು ಬಿ.ಕೆ.ಹರಿಪ್ರಸಾದ್ ಹೇಳಿದ್ದಾರೆ.
‘ಎಲ್ಲ ಜಾತಿಯವರು ಮೀಸಲಾತಿ ಕೇಳಲು ಆರಂಭಿಸಿದ್ದಾರೆ’
ಇತ್ತ, ಎಲ್ಲ ಜಾತಿಯವರು ಮೀಸಲಾತಿ ಕೇಳಲು ಆರಂಭಿಸಿದ್ದಾರೆ. ಮೀಸಲಾತಿ ಬಲಾಢ್ಯರಿಗಲ್ಲ, ಅದು ಶಕ್ತಿ ಇಲ್ಲದವರಿಗೆ. ಆದರೀಗ ಎಲ್ಲರಿಗೂ ಮೀಸಲಾತಿ ಕೊಡಲು ಹುನ್ನಾರ ನಡೆದಿದೆ. ಈ ಮೂಲಕ ಮೀಸಲಾತಿ ವ್ಯವಸ್ಥೆಯನ್ನೇ ಮುಗಿಸುವ ಷಡ್ಯಂತ್ರ ನಡೆಯುತ್ತಿದೆ ಎಂದು MLC ಬಿ.ಕೆ.ಹರಿಪ್ರಸಾದ್ ಹೇಳಿದರು.
‘ಹಿಂದುತ್ವ ಎಂದು ಹೇಳುವರರು ಭಾರತೀಯರಲ್ಲ’
ಹಿಂದುತ್ವ ಎಂದು ಹೇಳುವರರು ಭಾರತೀಯರಲ್ಲ. ಹಿಂದುತ್ವ ಎಂದು ಹೇಳುವವರು ಕೋಮುವಾದಿಗಳು. ಕೋಮುವಾದವನ್ನು ಯಾರೇ ಮಾಡಲಿ ಅದು ಕೋಮುವಾದವೇ. ಕೋಮುವಾದ ಇರುವಲ್ಲಿ ಶಾಂತಿ, ನೆಮ್ಮದಿ ಇರೋದಿಲ್ಲ. ಇತ್ತೀಚಿನ ದಿನಗಳಲ್ಲಿ ಕರಾವಳಿಯನ್ನು ಕೋಮುವಾದದ ಪ್ರಯೋಗಾಲಯ ಮಾಡಿದ್ದಾರೆ ಎಂದು ನಗರದ ಪುರಭವನದಲ್ಲಿ ನಡೆಯುತ್ತಿರುವ ಭಾವೈಕ್ಯತಾ ಸಮಾವೇಶದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
RSS ಭಾರತವನ್ನು ಹಿಂದೂ ರಾಷ್ಟ್ರವಾಗಿ ಮಾಡ್ತೇವೆ ಅಂತಾ ಹೇಳುತ್ತಾರೆ. ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ಮಾಡಲು ಸಾಧ್ಯವೇ ಇಲ್ಲ. RSS ಒಂದು ಜಾತಿ ಸಂಘಟನೆಯಾಗಿದೆ. RSS ನವ್ರು ನಾವು ದೇಶಭಕ್ತರು ಅಂತಾ ಹೇಳ್ತಾರೆ. ಹಾಗಾದರೆ ಸ್ವಾತಂತ್ರ್ಯ ಹೋರಾಟಕ್ಕೆ ನಿಮ್ಮ ಕೊಡುಗೆ ಏನು? ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು. 1977 ರಲ್ಲಿ ಜನತಾ ಪಾರ್ಟಿ ಆಗದೇ ಇದಿದ್ದರೆ ಇಷ್ಟೊಂದು ಶಕ್ತಿ ಬರುತ್ತಿರಲಿಲ್ಲ. ಹೆಗ್ಡೆವಾರ್ ಬಳಿಕ ಗೋಲ್ವಾಲ್ಕರ್ RSS ಮುಖ್ಯಸ್ಥರಾಗಿ ಬಂದ್ರು. ಆದರೆ, ಇವರು ಯಾರೂ ದೇಶಕ್ಕಾಗಿ ಪ್ರಾಣವನ್ನು ಅರ್ಪಿಸಲಿಲ್ಲ ಎಂದು ಸಿದ್ಧರಾಮಯ್ಯ ಹೇಳಿದರು.
‘ಈ ದೇಶದ ಸಂಪತ್ತಿನಲ್ಲಿ ಮುಸ್ಲಿಮರಿಗೂ ಪಾಲು ಕೊಡಬೇಕು’
ಈ ದೇಶದ ಸಂಪತ್ತಿನಲ್ಲಿ ಮುಸ್ಲಿಮರಿಗೂ ಪಾಲು ಕೊಡಬೇಕು. ಅಲ್ಪಸಂಖ್ಯಾತರಿಗೆ 3,050 ಕೋಟಿ ರೂಪಾಯಿ ಅನುದಾನ ನೀಡಿದ್ದೇನೆ. ಇನ್ನೊಮ್ಮೆ ಅಧಿಕಾರಕ್ಕೆ ಬಂದರೆ 10,000 ಕೋಟಿ ರೂಪಾಯಿ ನೀಡುತ್ತೇನೆ. ಬಿಜೆಪಿಯವರು ಇದ್ದ ಅನುದಾನದಲ್ಲೂ ಅಲ್ಪಸಂಖ್ಯಾತರಿಗೆ ಕಡಿಮೆ ಮಾಡಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದರು.
‘ಬಿಜೆಪಿಯವರು ಸಂವಿಧಾನ ವಿರೋಧಿಗಳು’
ಬಿಜೆಪಿಯವರು ಸಂವಿಧಾನ ವಿರೋಧಿಗಳು. ಅಲ್ಪಸಂಖ್ಯಾತರ ಹಕ್ಕುಗಳನ್ನು ರಕ್ಷಣೆ ಮಾಡುತ್ತಿಲ್ಲ. ಸಂವಿಧಾನದ ಬದಲಾವಣೆ ಬಗ್ಗೆ ಅನಂತ ಕುಮಾರ್ ಹೆಗಡೆ ಹೇಳಿದ್ದಾರೆ. ಅನಂತ ಕುಮಾರ್ ಹೆಗಡೆ ಗ್ರಾಮ ಪಂಚಾಯತ್ ಸದಸ್ಯನಾಗೋಕೂ ನಾಲಾಯಕ್ ಎಂದು ಪುರಭವನದಲ್ಲಿ ನಡೆಯುತ್ತಿರುವ ಭಾವೈಕ್ಯತಾ ಸಮಾವೇಶದಲ್ಲಿ ಸಿದ್ಧರಾಮಯ್ಯ ಹರಿಹಾಯ್ದರು.
‘ಬೀಫ್ ರಫ್ತು ಮಾಡುವುದು ಶೇ.90ರಷ್ಟು ಬಿಜೆಪಿಯವರು’
ಪ್ರಧಾನಿ ಮೋದಿ ಗೋಮುಖ ವ್ಯಾಘ್ರ ಎಂದು ಪ್ರಧಾನಿ ಮೋದಿ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು. ಅನಂತ ಕುಮಾರ್ ಹೆಗಡೆ ವಿರುದ್ಧ ಕ್ರಮ ಕೈಗೊಂಡಿಲ್ಲ. ಕೇಂದ್ರ ಗೃಹ ಸಚಿವ ಅಮಿತ್ ಶಾ ಕ್ರಮಕೈಗೊಂಡಿಲ್ಲ. ಗೋಹತ್ಯೆ ನಿಷೇಧ ಒಂದು ಧರ್ಮ ಗುರಿಯಾಗಿಸಿ ಜಾರಿ ಮಾಡಲಾಗಿದೆ. ಬೀಫ್ ತಿನ್ನುವುದು ಅವರವರ ಆಹಾರದ ಹಕ್ಕು. ಅದನ್ನು ನಿಯಂತ್ರಣ ಮಾಡುವುದಕ್ಕೆ ನೀವು ಯಾರು? ಎಂದು ಪ್ರಶ್ನಿಸಿದರು.
ನಾನು ಇಲ್ಲಿಯವರೆಗೂ ಬೀಫ್ ತಿಂದಿಲ್ಲ. ನನಗೆ ಬೀಫ್ ತಿನ್ನಬೇಕು ಅನಿಸಿದರೆ ಬೀಫ್ ತಿನ್ನುತ್ತೇನೆ. ಅದನ್ನ ಕೇಳೋಕೆ ಬಿಜೆಪಿಯವರು ಯಾರು?ಬೀಫ್ ರಫ್ತು ಮಾಡುವುದು ಶೇ.90ರಷ್ಟು ಬಿಜೆಪಿಯವರು. ಬೀಫ್ ತಿನ್ನಬಾರದು ಅಂತಾ ಹೇಳುತ್ತಾರೆ. ಆದರೆ, ಆಸ್ಟ್ರೇಲಿಯಾದಿಂದ ಬಂದ ಬೀಫ್ನ್ನು ತಿನ್ನಬಹುದು ಅಂತಾ ಹೇಳುತ್ತಾರೆ ಎಂದು ಸಿದ್ಧರಾಮಯ್ಯ ಹೇಳಿದರು.
ಇದನ್ನೂ ಓದಿ: PFI, SDPI ಸಂಘಟನೆಗಳನ್ನ ಬೆಳೆಸುತ್ತಿರುವುದೇ BJP; ಅವರದೇ ಸರ್ಕಾರವಿದೆ, ಬೇಕಿದ್ದರೆ ಬ್ಯಾನ್ ಮಾಡಲಿ: ಸಿದ್ದರಾಮಯ್ಯ ಸವಾಲ್
Published On - 6:39 pm, Mon, 22 February 21