ಕೃಷಿ ಕಾಯ್ದೆ ವಿರೋಧಿಸಿ ರಾಜಭವನ ಚಲೋ: ಕಾಂಗ್ರೆಸ್ ಮುಖಂಡರ ಪ್ರತಿಭಟನೆ

|

Updated on: Jan 20, 2021 | 5:22 PM

ಚಳುವಳಿ ಹತ್ತಿಕ್ಕಿದರೆ ಅದು ಬಿಜೆಪಿಗೆ ತಿರುಗುಬಾಣವಾಗಲಿದೆ. ಯಡಿಯೂರಪ್ಪ ಶಾಶ್ವತವಾಗಿ ಅಧಿಕಾರದಲ್ಲಿ ಇರುವುದಿಲ್ಲ. ರೈತರು ಮನಸ್ಸು ಮಾಡಿದರೆ ಸರ್ಕಾರ ಕಿತ್ತೊಗೆಯುತ್ತಾರೆ ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.

ಕೃಷಿ ಕಾಯ್ದೆ ವಿರೋಧಿಸಿ ರಾಜಭವನ ಚಲೋ: ಕಾಂಗ್ರೆಸ್ ಮುಖಂಡರ ಪ್ರತಿಭಟನೆ
ಡಿ.ಕೆ. ಶಿವಕುಮಾರ್ ಮತ್ತು ಸಿದ್ದರಾಮಯ್ಯ
Follow us on

ಬೆಂಗಳೂರು: ಕೃಷಿ ಕಾಯ್ದೆ ಮತ್ತು ಬೆಲೆ ಏರಿಕೆ ವಿರೋಧಿಸಿ ಕಾಂಗ್ರೆಸ್ ಇಂದು ರಾಜಭವನ ಚಲೋ ಪ್ರತಿಭಟನಾ ಮೆರವಣಿಗೆಗೆ ಕರೆ ನೀಡಿತ್ತು. ಪ್ರಮುಖ ನಾಯಕರಾದ ಡಿ.ಕೆ. ಶಿವಕುಮಾರ್, ಸಿದ್ದರಾಮಯ್ಯ ಇನ್ನಿತರ ಕಾಂಗ್ರೆಸ್ ಮುಖಂಡರು ಭಾಗಿಯಾಗಿದ್ದಾರೆ.

ಫ್ರೀಡಂಪಾರ್ಕ್‌ನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಈ ಅಪರೂಪದ ಹೋರಾಟಕ್ಕೆ ಎಲ್ಲರೂ ಸಾಕ್ಷಿಯಾಗಿದ್ದೀರಿ, ಆ ಮೂಲಕ ರಾಷ್ಟ್ರಕ್ಕೆ, ರಾಜ್ಯಕ್ಕೆ ಒಂದು ಸಂದೇಶವನ್ನು ನೀಡಿದ್ದೀರಿ. ಜನವರಿ 15ರಂದೇ ಕಿಸಾನ್ ಅಧಿಕಾರ ದಿನ ಮಾಡಬೇಕಿತ್ತು. ರಾಜ್ಯದ ರೈತರಿಗೆ ಸಂಕ್ರಾಂತಿ ವಿಶೇಷವಾದ ದಿನ. ಅವರ ಬದುಕು ಹಸನು ಮಾಡುವ ವಸ್ತುಗಳನ್ನು ಪೂಜಿಸುವ ದಿನ. ಹೀಗಾಗಿ ಅಂದು ಈ ಹೋರಾಟ ಮಾಡಲು ನಿರ್ಧರಿಸಿದ್ದೆವು. ಇದು ಕಾಂಗ್ರೆಸ್ ಅಥವಾ ಡಿಕೆಶಿಯ ಕಾರ್ಯಕ್ರಮ ಅಲ್ಲ. ಇದು ರಾಷ್ಟ್ರದ, ರಾಜ್ಯದ, ರೈತರ ಧ್ವನಿ ಎಂದು ಹೇಳಿದರು.

ರಾಷ್ಟ್ರದ ಸಮಸ್ಯೆಯ ಬಗ್ಗೆ ಮತ್ತು 3 ಕರಾಳ ಶಾಸನಗಳ ವಿರುದ್ಧ ಧ್ವನಿ ಎತ್ತಿ, ರೈತರು, ಕಾರ್ಮಿಕರು, ಜನಸಾಮಾನ್ಯರ ಸಮಸ್ಯೆಗಳನ್ನು ಎಲ್ಲರಿಗೂ ತಿಳಿಸಬೇಕು. ಇಂದು ನೀವೆಲ್ಲರೂ ಇತಿಹಾಸದ ಪುಟ ಸೇರುವಂಥ ಕೆಲಸ ಮಾಡಿದ್ದೀರಿ. ದೇಶಕ್ಕೆ ಮಾಡಿದ ತ್ಯಾಗ, ಅನ್ನದಾತನಿಗೆ ಕೊಟ್ಟ ಶಕ್ತಿ ಎಂದು ಫ್ರೀಡಂಪಾರ್ಕ್‌ನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಹೇಳಿದರು.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, ನವದೆಹಲಿಯಲ್ಲಿ ರೈತರು ಹೋರಾಟ ಮಾಡುತ್ತಿದ್ದಾರೆ. ಅವರನ್ನು ಬೆಂಬಲಿಸಿ ನಾವು ಇಂದು ಹೋರಾಟ ಮಾಡ್ತಿದ್ದೇವೆ. ರಾಜ್ಯ ಸರ್ಕಾರ ಚಳುವಳಿ ಹತ್ತಿಕ್ಕುವ ಕೆಲಸ ಮಾಡುತ್ತಿದೆ. ಚಳುವಳಿ ಹತ್ತಿಕ್ಕಿದರೆ ಅದು ಬಿಜೆಪಿಗೆ ತಿರುಗುಬಾಣವಾಗಲಿದೆ. ಯಡಿಯೂರಪ್ಪ ಶಾಶ್ವತವಾಗಿ ಅಧಿಕಾರದಲ್ಲಿ ಇರುವುದಿಲ್ಲ.ರೈತರು ಮನಸ್ಸು ಮಾಡಿದರೆ ಸರ್ಕಾರ ಕಿತ್ತೊಗೆಯುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ದೇಶದ ರೈತರು ಮೋದಿ ಸರ್ಕಾರ ತೆಗೆದುಹಾಕಲು ತೀರ್ಮಾನಿಸಿದ್ದಾರೆ. ಭ್ರಷ್ಟಾಚಾರ, ಅರಾಜಕತೆ ತಾಂಡವವಾಡುತ್ತಿದೆ. ರಾಜ್ಯದ ಜನರು ಕಷ್ಟಗಳನ್ನು ಅನುಭವಿಸುತ್ತಿದ್ದಾರೆ. ಅಭಿವೃದ್ಧಿ ಕಾರ್ಯಗಳು ಕುಂಠಿತವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಕಾಂಗ್ರೆಸ್​ನಿಂದ ರಾಜಭವನ ಚಲೋ.. ಟ್ರಾಫಿಕ್ ಜಾಮ್ ಸಮಸ್ಯೆ, ಪೊಲೀಸರಿಂದ ಪರ್ಯಾಯ ಮಾರ್ಗ

Published On - 5:15 pm, Wed, 20 January 21