ನವದೆಹಲಿ, ಫೆ.5: ರಾಜ್ಯಕ್ಕೆ ಬರಬೇಕಾದ ಅನುದಾನಕ್ಕಾಗಿ ಕರ್ನಾಟಕ ಕಾಂಗ್ರೆಸ್ ಸರ್ಕಾರವು ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ಸಿಡಿದೆದ್ದಿದ್ದು, ಫೆಬ್ರವರಿ 7 ರಂದು ಪ್ರತಿಭಟನೆ ನಡೆಸಲು ಮುಂದಾಗಿದೆ. ಹೀಗಾಗಿ ಪ್ರತಿಭಟನಾ ಸ್ಥಳ ದೆಹಲಿಯ ಜಂತರ್ ಮಂತರ್ಗೆ ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಸಂಸದ ಡಿ.ಕೆ.ಸುರೇಶ್, ಕಾಂಗ್ರೆಸ್ ನಾಯಕ ಮೊಹಮ್ಮದ್ ನಲಪಾಡ್ ಇದ್ದರು.
ಬಳಿಕ ಮಾತನಾಡಿದ ಡಿಕೆ ಶಿವಕುಮಾರ್, ಇದು ಸರ್ಕಾರದ ಹೋರಾಟ, ಕಾಂಗ್ರೆಸ್, ಬಿಜೆಪಿಗೆ ಸಂಬಂಧವಿಲ್ಲ. ಕೇಂದ್ರದ ಗಮನ ಸೆಳೆಯಲು ಹೋರಾಟ ಮಾಡುತ್ತಿದ್ದೇವೆ. ನಮ್ಮ ಅನುದಾನ ನಮ್ಮ ಹಕ್ಕು, ಜನರಿಗೆ ಮನದಟ್ಟು ಮಾಡಬೇಕು. ನಮಗೆ ಸಿಗಬೇಕಾದ ಪಾಲು ಕೊಡಿಸುವುದು ನಮ್ಮ ಕರ್ತವ್ಯ. ಜನ ವೋಟ್ ಕೊಟ್ಟು ಗೆಲ್ಲಿಸಿದ್ದಾರೆ, ನ್ಯಾಯ ಸಲ್ಲಿಸಬೇಕಲ್ಲವೇ? ಕೇಂದ್ರ ಸರ್ಕಾರದ ಬಳಿ ಬಿಜೆಪಿ ಸಂಸದರು ಬಾಯಿ ಬಿಡುತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.
ಸ್ಟಂಟ್ ಮಾಡಲು ನಾನು ಸಿನಿಮಾ ನಟನಲ್ಲ. ಕೇಂದ್ರ ಬಳಿ ಅನುದಾನ ಕೇಳಲು ನಿಮಗೆ ಬಾಯಿ ಇಲ್ಲ ಅಂದರೆ ನಮಗೆ ಇಲ್ವಾ? ನೀವು ಇದ್ದಾಗ ಏನೂ ಮಾಡಿಲ್ಲ. ಬರ ಪರಿಹಾರಕ್ಕೆ ನಮ್ಮ ಸಚಿವರು ಬೇಡಿಕೆ ಇಟ್ಟಿದ್ದಾರೆ. ಸಿಎಂ ಸಿದ್ದರಾಮಯ್ಯ ಕೂಡ ಮನವಿ ಮಾಡಿದ್ದಾರೆ. ಇದು ಸ್ಟಂಟಾ? ಮನರೇಗಾ ಕೂಲಿ ಹಣಕೊಟ್ಟಿಲ್ಲ, ಇದು ಸ್ಟಂಟಾ? ಇದು ಜನರ ಧ್ವನಿ, ಕನ್ನಡಿಗರ ಸ್ವಾಭಿಮಾನದ ಪ್ರಶ್ನೆ ಎಂದರು.
ನಾವು ಕಟ್ಟುವ ತೆರಿಗೆಯಲ್ಲಿ ಅರ್ಧ ಕೊಡಿ ಸಾಕು. ಪ್ರಧಾನಿ ಭೇಟಿಗೆ ಸಮಯ ಕೇಳಿದ್ದೇವೆ. ಹಣಕಾಸು ಸಚಿವರನ್ನು ಭೇಟಿ ಮನವಿ ಮಾಡುತ್ತೇವೆ. ರಾಜ್ಯದ ಎಲ್ಲ ಸಂಸದ, ಶಾಸಕರಿಗೂ ಪ್ರತಿಭಟನೆಗೆ ಭಾಗಿಯಾಗುವಂತೆ ಮನವಿ ಮಾಡಿದ್ದೇವೆ. ನರ್ಮತೆಯಿಂದ ತಲೆಬಾಗಿ ಕೇಳಿಕೊಳ್ಳುತ್ತೇನೆ ಎಂದರು.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ