ಯುಪಿಎ V/S ಮೋದಿ ಕಾಲದ ಅನುದಾನ: ಅಂಕಿ-ಸಂಖ್ಯೆಯೊಂದಿಗೆ ಸಿದ್ದರಾಮಯ್ಯಗೆ ಬಿಎಸ್ವೈ, ಬೊಮ್ಮಾಯಿ ತಿರುಗೇಟು
ಕೇಂದ್ರದಿಂದ ನೀಡಬೇಕಾದ ಅನುದಾನದಲ್ಲಿ ಅನ್ಯಾಯವಾಗುತ್ತಿದೆ ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆರೋಪಕ್ಕೆ ಬಿಜೆಪಿ ನಾಯಕರು ತಿರುಗೇಟು ನೀಡಿದ್ದಾರೆ. ಹಿಂದಿನ ಯುಪಿಎ ಮತ್ತು ನರೇಂದ್ರ ಮೋದಿ ಸರ್ಕಾರ ನೀಡಿರುವ ಅನುದಾನದ ಲೆಕ್ಕಾಚಾರ ನೀಡಿ ಲೆಕ್ಕ ಹಾಕೊಳ್ಳಿ ಎಂದು ಮಾಜಿ ಮುಖ್ಯಮಂತ್ರಿಗಳಾದ ಬಿಎಸ್ ಯಡಿಯೂರಪ್ಪ ಹಾಗೂ ಬಸವರಾಜ ಬೊಮ್ಮಾಯಿ ತಿರುಗೇಟು ನೀಡಿದ್ದಾರೆ.
ಬೆಂಗಳೂರು, (ಫೆಬ್ರವರಿ 05): ಕೇಂದ್ರದಿಂದ ಕರ್ನಾಟಕಕ್ಕೆ (Karnataka)ಬರಬೇಕಾದ ಅನುದಾನ, ತೆರಿಗೆ ಹಣ (Tax Money) ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ (Congress) ಹಾಗೂ ಬಿಜೆಪಿ (BJP)ನಾಯಕರ ನಡುವಿನ ಆರೋಪ-ಪ್ರತ್ಯಾರೋಪಗಳು ತಾರಕಕ್ಕೆರಿದ್ದು,ಈ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಆರೋಪಕ್ಕೆ ಮಾಜಿ ಮುಖ್ಯಮಂತ್ರಿಗಳಾದ ಬಿಎಸ್ ಯಡಿಯೂರಪ್ಪ(BS Yediyurappa) ಹಾಗೂ ಬಸವರಾಜ ಬೊಮ್ಮಾಯಿ (Basavaraj Bommai) ಅಂಕಿ-ಸಂಖ್ಯೆ ಸಮೇತ ತಿರುಗೇಟು ನೀಡಿದ್ದಾರೆ. 15ನೇ ಹಣಕಾಸು ಆಯೋಗದಲ್ಲಿ ಕಳೆದ ಮೂರು ವರ್ಷಗಳಲ್ಲಿ ರಾಜ್ಯಕ್ಕೆ ಈಗಾಗಲೇ ರೂ. 13985 ಕೋಟಿ ರೂ. ಬಿಡುಗಡೆಯಾಗಿದ್ದು, ಈ ವರ್ಷ ಇನ್ನೂ ಸುಮಾರು 3500 ಕೋಟಿ ರೂ. ಅನುದಾನ ರಾಜ್ಯ ಸರ್ಕಾರಕ್ಕೆ ಬರಲಿದೆ ಎಂದು ಯಡಿಯೂರಪ್ಪ ತಿಳಿಸಿದ್ದಾರೆ.
ರಾಜ್ಯಕ್ಕೆ ಮೋದಿ ನೀಡಿದ್ದೆಷ್ಟು? ಲೆಕ್ಕ ಕೊಟ್ಟ ಬಿಎಸ್ವೈ
ಈ ಬಗ್ಗೆ ಮಾಧ್ಯಮ ಪ್ರಕಟಣೆ ಹೊರಡಿಸಿರುವ ಯಡಿಯೂರಪ್ಪ, 15ನೇ ಹಣಕಾಸು ಆಯೋಗದ ಶಿಫಾರಸ್ಸಿನಂತೆ ಎನ್ ಡಿಎ ಸರ್ಕಾರ ಈಗಾಗಲೇ 1,16,828 ಕೋಟಿ ರೂ. ಬಿಡುಗಡೆ ಮಾಡಿದೆ. 15 ನೇ ಹಣಕಾಸು ಆಯೋಗದ ಅವಧಿ 2026ರ ವರೆಗೆ ಇದ್ದು ಒಟ್ಟು 2.5ಲಕ್ಷ ಕೋಟಿಗೂ ಮೀರಿ ತೆರಿಗೆಯ ಹಂಚಿಕೆ ಬರಲಿದೆ. ಇದು ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಇದ್ದಾಗ 14 ನೇ ಹಣಕಾಸಿನ ಶಿಫಾರಸ್ಸಿಗಿಂತ ಅತ್ಯಧಿಕವಾಗಿದೆ. 15 ನೇ ಹಣಕಾಸಿನಲ್ಲಿ ರಾಜ್ಯ ಸರ್ಕಾರದ ಪಾಲು 3.6 ಗೆ ಇಳಿಯಲು ನೇರವಾಗಿ ಸಿದ್ದರಾಮಯ್ಯ ಸರ್ಕಾರವೇ ಕಾರಣ. ಏಕೆಂದರೆ 15ನೇ ಹಣಕಾಸಿನ ವರದಿ ತಯಾರಿ ಮಾಡುವಾಗ ರಾಜ್ಯದಲ್ಲಿ ಸಿದ್ದರಾಮಯ್ಯ ಸರ್ಕಾರ ಇತ್ತು. ರಾಜ್ಯದ ವಾಸ್ತವ ಆರ್ಥಿಕ ಸ್ಥಿತಿಯನ್ನು ಬಿಂಬಿಸಲು ವಿಫಲವಾಗಿ ಹಣಕಾಸಿನ ಆಯೋಗಕ್ಕೆ ಮನವರಿಕೆ ಮಾಡಿಕೊಡಲು ಸೋತಿದ್ದರಿಂದ ರಾಜ್ಯಕ್ಕೆ ಹಿನ್ನಡೆಯಾಗಿದೆ ಎಂದು ಕಿಡಿಕಾರಿದ್ದಾರೆ.
15ನೇ ಹಣಕಾಸು ಆಯೋಗದಲ್ಲಿ ಕಳೆದ ಮೂರು ವರ್ಷಗಳಲ್ಲಿ ರಾಜ್ಯಕ್ಕೆ ಈಗಾಗಲೇ ರೂ. 13985 ಕೋಟಿ ರೂ. ಬಿಡುಗಡೆಯಾಗಿರುತ್ತದೆ . ಈ ವರ್ಷ ಇನ್ನೂ ಸುಮಾರು ರೂ.3500 ಕೋಟಿ ಅನುದಾನ ರಾಜ್ಯ ಸರ್ಕಾರಕ್ಕೆ ಬರಲಿದೆ. ಇಷ್ಟೆಲ್ಲಾ ಮಾಹಿತಿಗಳನ್ನು ಮುಚ್ಚಿಟ್ಟು ಸಿದ್ದರಾಮಯ್ಯ ಅರ್ಧ ಸತ್ಯ ಮಾತ್ರ ಹೇಳಿದ್ದಾರೆ. ಪದೇ ಪದೇ ಸುಳ್ಳು ಹೇಳಿ ಸತ್ಯವನ್ನು ಮುಚ್ಚಿಡಬಹುದು ಎಂದುಕೊಂಡಿದ್ದಾರೆ. ಆದರೆ ಇಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕೂಡಾ ಸದನದಲ್ಲಿ ಈ ಬಗ್ಗೆ ಸೂಕ್ತ ಉತ್ತರ ನೀಡಿದ್ದಾರೆ ಎಂದು ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಎಲ್ಲೆಲ್ಲಿ ಸಾಧ್ಯವಿದೆಯೋ ಅಲ್ಲಿ ತೆರಿಗೆಗಳನ್ನು ಏರಿಸಿದ್ದಾರೆ. ವಿದ್ಯುತ್, ಸಾರಿಗೆ, ನೊಂದಣಿ ಮತ್ತು ಮುದ್ರಾಂಕ ಹಾಗೂ ಅಬಕಾರಿ ಶುಲ್ಕಗಳನ್ನು ಹೆಚ್ಚು ಮಾಡಿದ್ದಾರೆ. ಅನುತ್ಪಾದಕ ಗ್ಯಾರೆಂಟಿಗಳಿಂದ ರಾಜ್ಯದ ಆರ್ಥಿಕ ಪರಿಸ್ಥಿತಿ ಸಿದ್ದರಾಮಯ್ಯನವರ ಕೈಮೀರಿ ಹೋಗಿದೆ. ಗ್ಯಾರೆಂಟಿ ಯೋಜನೆಗಳು ಲೋಕಸಭೆ ಚುನಾವಣೆಯಲ್ಲಿ ಕೈಹಿಡಿಯುವುದಿಲ್ಲ ಎಂಬ ಸತ್ಯದ ಅರಿವಾಗಿದೆ. ಹೀಗಾಗಿ ಲೋಕಸಭೆಯ ನಂತರ ಗ್ಯಾರೆಂಟಿ ಯೋಜನೆಗಳನ್ನು ಕೈಬಿಡುವ ಸ್ಪಷ್ಟವಾದ ವಿಚಾರವನ್ನು ಹೊಂದಿದ್ದಾರೆ. ಅದಕ್ಕೆ ಪೂರಕವಾಗಿ ಇಂದು ಕೇಂದ್ರದ ಮೇಲೆ ಗೂಬೆ ಕೂರಿಸುವ ಮೂಲಕ ಅದಕ್ಕೆ ಒಂದು ತಳಹದಿಯನ್ನು ಹಾಕಿದ್ದಾರೆ ಎಂದು ಯಡಿಯೂರಪ್ಪ ಕಿಡಿಕಾರಿದರು.
ಸಿದ್ದರಾಮಯ್ಯಗೆ ಬೊಮ್ಮಾಯಿ ತಿರುಗೇಟು
ಇನ್ನು ಇದೇ ಅನುದಾನದ ವಿಚಾರವಾಗಿ ಬಸವರಾಜ ಬೊಮ್ಮಾಯಿ ಸುದ್ದಿಗೋಷ್ಠಿ ನಡೆಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಗಳಿಗೆ ತಿರುಗೇಟು ನೀಡಿದ್ದಾರೆ. ಯುಪಿಎ ಸರ್ಕಾರದ ಇದ್ದಾಗ ತೆರಿಗೆ ಪರಿಹಾರ 81,785 ಕೋಟಿ ರೂ. ಇತ್ತು. ಎನ್ಡಿಎ ಅವಧಿಯಲ್ಲಿ 2.90 ಲಕ್ಷ ಕೋಟಿ ರೂ. ತೆರಿಗೆ ಪರಿಹಾರ ಬಂದಿದೆ. ಸಿಎಂ ಸಿದ್ದರಾಮಯ್ಯ ತಮ್ಮ ಹಳೆಯ ಚಾಳಿ ಬಿಟ್ಟಿಲ್ಲ. ವೈಫಲ್ಯ ಮುಚ್ಚಿಕೊಳ್ಳುವ ಸಲುವಾಗಿ ಕೇಂದ್ರದ ಕಡೆ ಬೊಟ್ಟು ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರೈತರಿಗೆ ನಯಾಪೈಸೆ ಪರಿಹಾರ ಕೊಟ್ಟಿಲ್ಲ, ಆದ್ರೆ ಕೇಂದ್ರದ ಮೇಲೆ ಆರೋಪ ಮಾಡುತ್ತಿದ್ದಾರೆ. ಇಂದು ಸಿಎಂ ಸಿದ್ದರಾಮಯ್ಯ ಹೇಳಿದ್ದರಲ್ಲಿ ಯಾವುದೂ ಹೊಸದಿಲ್ಲ. ಎಲ್ಲ ಹಳೆಯ ವಿಚಾರ, ಇದಕ್ಕೆ ಈಗಾಗಲೇ ನಾವು ಉತ್ತರ ಕೊಟ್ಟಿದ್ದೇವೆ. ರೈಲ್ವೇ ಯೋಜನೆಗಳಿಗೆ ಹತ್ತು ವರ್ಷದಲ್ಲಿ 11 ಸಾವಿರ ಕೋಟಿ ರೂ. ಬಂದಿದೆ. ಕಿಸಾನ್ ಸಮ್ಮಾನ್ ಯೋಜನೆಯಲ್ಲಿ 11 ಸಾವಿರ ಕೋಟಿ ರೂ. ಬಂದಿದೆ. ಲೋಕಸಭೆಯಲ್ಲಿ ಸೋಲುತ್ತೇವೆ ಎಂದು ರಾಜಕೀಯ ಸ್ಟಂಟ್ ಮಾಡುತ್ತಿದ್ದಾರೆ ಎಂದು ಹೇಳಿದರು.
ದೆಹಲಿಯಲ್ಲಿ ಪ್ರತಿಭಟನೆ ಮಾಡುತ್ತಿರುವುದು ಕಾಂಗ್ರೆಸ್ ರಾಜಕೀಯ ಸ್ಟಂಟ್. ಕಾಂಗ್ರೆಸ್ಗೆ ಸೋಲುತ್ತೇವೆ ಅನ್ನೋ ಭಯ ಶುರುವಾಗಿದೆ. ಫೆ.7ರಂದು ನಾವು ಸರ್ಕಾರದ ವೈಫಲ್ಯ ವಿರುದ್ಧ ಪ್ರತಿಭಟನೆ ಮಾಡುತ್ತೇವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಗಳಲ್ಲಿ ಯಾವುದೂ ಸತ್ಯಾಂಶ ಇಲ್ಲ/ ಬರ ಪರಿಹಾರ ಬಗ್ಗೆ ನಮ್ಮ ಸಂಸದರು ಕೇಂದ್ರ ಸಚಿವರ ಜತೆ ಮಾತಾಡಿದ್ದಾರೆ. ಆದಷ್ಟು ಬೇಗ ಕೇಂದ್ರ ಸರ್ಕಾರದಿಂದ ಬರ ಪರಿಹಾರ ಬಿಡುಗಡೆ ಆಗಲಿದೆ ಎಂದರು.
ಶ್ವೇತ ಪತ್ರ ಹೊರಡಿಸಲು ಸಿಟಿ ರವಿ ಸವಾಲ್
ಇನ್ನು ಇದೇ ವಿಚಾರವಾಗಿ ಚಿಕ್ಕಮಗಳೂರಿನಲ್ಲಿ ಬಿಜೆಪಿ ನಾಯಕ ಸಿಟಿ ರವಿ ಮಾತನಾಡಿದ್ದು, ಕನ್ವಿನ್ಸ್ ಮಾಡಲು ಆಗದಿದ್ರೆ ಕನ್ಫ್ಯೂಸ್ ಮಾಡು. ಇಂದು ಸುದ್ದಿಗೋಷ್ಠಿಯಲ್ಲಿ ಸಿಎಂ ಸಿದ್ದರಾಮಯ್ಯ ಮಾಡಿದ್ದು ಅದೇ. ಮನಮೋಹನ್ ಸಿಂಗ್ ಕಾಲದಲ್ಲಿ ರಾಜ್ಯಕ್ಕೆ ಎಷ್ಟು ತೆರಿಗೆ ಹಣ ಬಂದಿದೆ. 2004-2014ರವರೆಗೆ ಎಷ್ಟು ತೆರಿಗೆ ಹಣ ಬಂದಿದೆ ಶ್ವೇತಪತ್ರ ಹೊರಡಿಸಿ. 2014-2024ರ ಫೆಬ್ರವರಿವರೆಗೆ ಮೋದಿ ಕೊಟ್ಟ ತೆರಿಗೆ ಹಣ ಎಷ್ಟು ಹೇಳಿ. ಇಬ್ಬರ ಆಡಳಿತಾವಧಿ ಅನುದಾನ-ಸಹಾಯಧನ ಎಷ್ಟು ಶ್ವೇತಪತ್ರ ಹೊರಡಿಸಿ ಎಂದು ಸಿದ್ದರಾಮಯ್ಯನವರಿಗೆ ಸವಾಲು ಹಾಕಿದರು.
2004-14ರವರಗೆ ಕೇಂದ್ರದಿಂದ ಬಂದ ತೆರಿಗೆ ಹಣ 81,795 ಕೋಟಿ ರೂ. 2014-23ರ ಡಿಸೆಂಬರ್ವರೆಗೆ ಮೋದಿ ಕೊಟ್ಟಿದ್ದು 2,82,791 ಕೋಟಿ ರೂ. 2004-14ರವರೆಗೆ ಕೇಂದ್ರದ ಅನುದಾನ-ಸಹಾಯಧನ 60,779 ಕೋಟಿ ರೂ. 2014-23ರವರೆಗೆ ಮೋದಿ ಸರ್ಕಾರ ರಾಜ್ಯಕ್ಕೆ ಕೊಟ್ಟಿದ್ದು 28,832 ಕೋಟಿ ರೂ. ಮೋದಿಯವರು ಕರ್ನಾಟಕಕ್ಕೆ ಮೂರುವರೆ ಲಕ್ಷ ಕೋಟಿ ಹಣ ನೀಡಿದ್ದಾರೆ ಎಂದು ಲೆಕ್ಕಾ ಹೇಳಿದರು.
ಸಿಎಂ ಸಿದ್ದರಾಮಯ್ಯ ಒಂದು ದಿನವೂ ಜಿಎಸ್‍ಟಿ ಕೌನ್ಸಿಲ್ ಸಭೆಗೆ ಹೋಗಲಿಲ್ಲ. ನಾನೇಕೆ ಹೋಗಬೇಕೆಂಬ ಅಹಂಕಾರದಿಂದ ಒಂದು ದಿನವೂ ಸಭೆಗೆ ಹೋಗಲಿಲ್ಲ. ಅನ್ಯಾಯವಾಗಿದ್ರೆ ಜಿಎಸ್‍ಟಿ ಸಭೆಯಲ್ಲಿ ಪ್ರಶ್ನೆ ಮಾಡಿ ನ್ಯಾಯ ಕೇಳಬಹುದಿತ್ತು. ಕೃಷ್ಣ ಭೈರೇಗೌಡ ಕೇಂದ್ರ ನೀತಿ ಎಲ್ಲಾ ಸಮಾಧಾನವಾಗಿದೆ ಎಂದು ಹೇಳಿ ಬರುತ್ತಾರೆ. ಹೊರಗಡೆ ಬಂದು ಕೇಂದ್ರಕ್ಕೆ ಬೈಯ್ಯುತ್ತಾ ಸುಳ್ಳು ಹೇಳಿ ರಾಜಕಾರಣ ಮಾಡುತ್ತಾರೆ ಎಂದು ವಾಗ್ದಾಳಿ ನಡೆಸಿದರು.
ಇನ್ನಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 4:35 pm, Mon, 5 February 24