ತುಮಕೂರು ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ ಬಗ್ಗೆ ವಿ.ಸೋಮಣ್ಣ ಸ್ಪಷ್ಟನೆ ಇಲ್ಲಿದೆ
ತುಮಕೂರು ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ಗಾಗಿ ಹಿರಿಯ ನಾಯಕ ವಿ ಸೋಮಣ್ಣ ಅವರು ಪೈಪೋಟಿ ನಡೆಸುತ್ತಿದ್ದಾರೆ. ಇಂದು ದೆಹಲಿಗೆ ಭೇಟಿ ನೀಡಿದ ಅವರು ತುಮಕೂರು ಕ್ಷೇತ್ರದಿಂದ ಸ್ಪರ್ಧಿಸುವ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಅಲ್ಲದೆ, ಬಿಜೆಪಿ ನಾಯಕರು ಜೆಡಿಎಸ್ ವರಿಷ್ಠ ಹೆಚ್ಡಿ ದೇವೇಗೌಡ ಅವರ ನಿವಾಸಕ್ಕೆ ಭೇಟಿ ನೀಡುತ್ತಿರುವ ಬಗ್ಗೆಯೂ ಪ್ರತಿಕ್ರಿಯೆ ನೀಡಿದ್ದು, ನಾವು ಜೆಡಿಎಸ್ನೊಂದಿಗೆ ಮೈತ್ರಿ ಮಾಡಿಕೊಂಡಿದ್ದೇವೆ. ಭೇಟಿ ನೀಡುವುದರಲ್ಲಿ ತಪ್ಪೇನಿದೆ ಎಂದಿದ್ದಾರೆ.
ನವದೆಹಲಿ, ಫೆ.5: ತುಮಕೂರು (Tumkur) ಕ್ಷೇತ್ರದಿಂದ ನಾನು ಸ್ಪರ್ಧೆ ಮಾಡಬೇಕೇ ಎಂಬುದನ್ನು ಹೈಕಮಾಂಡ್ ತೀರ್ಮಾನಿಸುತ್ತದೆ ಎಂದು ಬಿಜೆಪಿ ಹಿರಿಯ ನಾಯಕ ವಿ.ಸೋಮಣ್ಣ (V Somanna) ಹೇಳಿದ್ದಾರೆ. ನವದೆಹಲಿಯಲ್ಲಿ ಮಾತನಾಡಿದ ಅವರು, ತುಮಕೂರು ಹಾಲಿ ಸಂಸದ ಜಿ.ಎಸ್.ಬಸವರಾಜ್ (GS Basavaraj) ನನಗೆ ಆತ್ಮೀಯರು. ತುಮಕೂರು ಕ್ಷೇತ್ರಕ್ಕೆ ನಾನು ಬರಬೇಕೆಂದು ಅವರ ಭಾವನೆಯಾಗಿದೆ. ಸಾಧ್ಯವಾದರೆ ನಾನು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ (JP Nadda) ಅವರನ್ನು ಭೇಟಿಯಾಗುತ್ತೆನೆ ಎಂದರು.
ಖಾಸಗಿ ಕೆಲಸಕ್ಕಾಗಿ ದೆಹಲಿಗೆ ಬಂದಿದ್ದೇನೆ. ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರ ಭೇಟಿಗೂ ಯತ್ನಿಸುತ್ತೇನೆ. ಅವಕಾಶ ಸಿಗದಿದ್ದರೂ ಪಕ್ಷದ ಕೆಲಸ ಮಾಡುತ್ತೇನೆ ಎಂದರು. ಮಾಜಿ ಸಚಿವ ಕೆ.ಸುಧಾಕರ್ ಸ್ಪರ್ಧೆ ಮಾಡುವ ಬಗ್ಗೆ ಹೇಳಿಕೆ ವಿಚಾರವಾಗಿ ಮಾತನಾಡಿದ ಸೋಮಣ್ಣ, ನನಗೆ ಆ ಬಗ್ಗೆ ಮಾಹಿತಿ ಇಲ್ಲ. ಸುಧಾಕರ್ ಏನು ಹೇಳಿದ್ದಾರೆ ಅಂತ ನನಗೆ ಗೊತ್ತಿಲ್ಲ. ಗೊತ್ತಿಲ್ಲದೆ ಮಾತಾಡುವುದು ಸರಿಯಲ್ಲ ಎಂದರು.
ಇದನ್ನೂ ಓದಿ: ತುಮಕೂರು ಲೋಕಸಭಾ BJP ಟಿಕೆಟ್ ಮೇಲೆ ವಿ ಸೋಮಣ್ಣ ಕಣ್ಣು; ಸದ್ದಿಲ್ಲದೆ ಹಲವು ಮುಖಂಡರ ಭೇಟಿ
ಚುನಾವಣೆಗೆ ಕಾರ್ಯತಂತ್ರ ರೂಪಿಸಲು ಕಾರ್ಯಕರ್ತರು ಇದ್ದಾರೆ. ಪ್ರಧಾನಿ ಮೋದಿ ನೇತೃತ್ವದಲ್ಲಿ ಮತ್ತೆ ಸರ್ಕಾರ ಬರಬೇಕೆಂದು ಎಲ್ಲರ ಇಚ್ಛೆಯಾಗಿದೆ. ಭಾರತೀಯ ಜನತಾ ಪಕ್ಷದ ಬೇರು ಗಟ್ಟಿ ಇದೆ ಎಂದರು. ರಾಜ್ಯಸಭೆಗೆ ಆಯ್ಕೆ ವಿಚಾರ ಪಕ್ಷ ಏನು ಮಾಡುತ್ತೋ ನೋಡಬೇಕು. ನಾನು ಕಳೆದ ಬಾರಿ ದೆಹಲಿಗೆ ಬಂದಾಗಲೇ ಅಭಿಪ್ರಾಯ ತಿಳಿಸಿದ್ದೇನೆ. ನನ್ನದೇ ತೀರ್ಮಾನ ಅಂತಾ ನಾನು ಹೇಳುವುದಿಲ್ಲ ಎಂದರು.
ಕುಮಾರಸ್ವಾಮಿ ಭೇಟಿಯಾದ ವಿ ಸೋಮಣ್ಣ
ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಭೇಟಿಯಾಗಿರುವ ಬಗ್ಗೆ ಮಾತನಾಡಿದ ಸೋಮಣ್ಣ, ಪಕ್ಷ ಬೇರೆ ಇರಬಹುದು, ಆದರೆ ನಾವು ಮೊದಲಿನಿಂದಲೂ ಪರಿಚಯ. ಮೊನ್ನೆ ಅವರ ತೋಟದ ಮನೆಯಲ್ಲಿ ಭೇಟಿ ಆಗಿದ್ದೇನೆ. ಅವರು ಎರಡು ಬಾರಿ ಮುಖ್ಯಮಂತ್ರಿ ಆಗಿದ್ದವರು. ಹೀಗಾಗಿ ಸಹಜವಾಗಿ ಮಾತಾಡಿದ್ದೇವೆ ಅಷ್ಟೇ ಎಂದರು.
ನಾವು ಇವತ್ತು ಈ ರೀತಿ ಮಾತನಾಡಲು ದೇವೇಗೌಡರು ಕಾರಣ. ಅವರ ಒಡನಾಟ, ಅವರು ಕೊಟ್ಟಿರುವ ಅನುಭವ ಮಹತ್ವವಾಗಿದೆ. ನಾನು ನಿನ್ನೆ ವಿಮಾನದಲ್ಲಿ ಬರುವಾಗ 10 ನಿಮಿಷ ಮಲಗಿದ್ದೆ. ಆದರೆ ದೇವೇಗೌಡರು ಮಾತಾಡುತ್ತಾ ಇದ್ದರು ಎಂದರು. ಪ್ರೀತಮ್ ಗೌಡ ಇನ್ನು ಕಿರಿಯರು, ಅನುಭವ ಬೇಕು. ಏನೇನೋ ಮಾತಾಡುವುದು ಸರಿಯಲ್ಲ ಅಂತ ನಂಗೆ ಅನಿಸುತ್ತದೆ. ಮುಂದೆ ಅವರಿ ಒಳ್ಳೆ ಭವಿಷ್ಯ ಇದೆ, ಹಾಗಾಗಿ ನೋಡಿ ಮಾತಾಡಬೇಕು ಎಂದರು.
ಬಿಜೆಪಿಗರು ದೇವೇಗೌಡರ ಮನೆಗೆ ಭೇಟಿ ನೀಡುತ್ತಿರುವ ವಿಚಾರವಾಗಿ ಮಾತನಾಡಿದ ಸೋಮಣ್ಣ, ದೇವೇಗೌಡರ ಮನೆಗೆ ಹೋದರೆ ತಪ್ಪೇನು ಎಂದು ಕೇಳಿದರು. ಅಲ್ಲದೆ, ನಾವು ಅವರೂ ಮೈತ್ರಿ ಮಾಡಿಕೊಂಡಿದ್ದೇವೆ. ಅವರ ಮಾರ್ಗದರ್ಶನ, ಅವರ ಚಿಂತನೆಗಳ ಬಗ್ಗೆ ಚರ್ಚೆ ಮಾಡಲು ಹೋಗುತ್ತಾರೆ. ಹೀಗಾಗಿ ದೇವೇಗೌಡರ ಮನೆಗೆ ಹೋಗುವುದರಲ್ಲಿ ತಪ್ಪೇನಿಲ್ಲ ಎಂದರು.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ