ಹುಬ್ಬಳ್ಳಿ: ಗ್ರಾಹಕರಿಗೆ ಠೇವಣಿ ಹಣ ನೀಡದ ಹುಬ್ಬಳ್ಳಿಯ ಸರಸ್ವತಿ ಕೋ-ಆಪರೇಟಿವ್ ಸೊಸೈಟಿಗೆ ಬಡ್ಡಿ ಸಹಿತ ಠೇವಣಿ ನೀಡುವಂತೆ ಹುಬ್ಬಳ್ಳಿ ಜಿಲ್ಲಾ ಗ್ರಾಹಕರ ಆಯೋಗ ಆದೇಶಿಸಿದೆ. ಹುಬ್ಬಳ್ಳಿ ವಿಕಾಸ ನಗರದ ವಾಸಿ ಶಾರದಾ ಪೈ ಅವರು ಸರಸ್ವತಿ ಕೋ-ಆಪರೇಟಿವ್ ಸೊಸೈಟಿಯ ನಡೆಯನ್ನು ಖಂಡಿಸಿ ಜಿಲ್ಲಾ ಗ್ರಾಹಕರ ಆಯೋಗದ ಮೊರೆ ಹೋಗಿದ್ದರು. ಶಾರದಾ ಅವರ ದೂರು ಮತ್ತು ಸೊಸೈಟಿಯ ಆಕ್ಷೇಪಣೆಗಳ ಬಗ್ಗೆ ಕೂಲಂಕುಷವಾಗಿ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷ ಈಶಪ್ಪ ಭೂತೆ ಹಾಗೂ ವಿ.ಎ. ಬೋಳಶೆಟ್ಟಿ ಮತ್ತು ಪಿ.ಸಿ. ಹಿರೇಮಠ ಸದಸ್ಯರು ಆಕ್ಷೇಪಣೆಯನ್ನು ತಳ್ಳಿಹಾಕಿ ಬಡ್ಡಿ ಸಹಿತ ಠೇವಣಿ ಪಾವತಿಸುವಂತೆ ಸೊಸೈಟಿಗೆ ಆದೇಶಿಸಿದರು.
ಹುಬ್ಬಳ್ಳಿಯ ಕ್ವಾಯಿನ್ ರಸ್ತೆಯ ಶಾರದಾ ಕಾಂಪ್ಲೆಕ್ಸ್‍ನಲ್ಲಿರುವ ಸರಸ್ವತಿ ಕೋ-ಆಪ್ ರೇಟಿವ್ ಸೋಸೈಟಿಯಲ್ಲಿ 2017 ರಿಂದ 2020ರ ಅವಧಿಯಲ್ಲಿ 13,29,544 ರೂ. ಮೊತ್ತದ ಹಣವನ್ನು ತಮ್ಮ ಮಗಳ ಮದುವೆಗಾಗಿ ಒಂದು ವರ್ಷದ ಅವಧಿಗೆ 9 ವಿವಿಧ ಮೊತ್ತದ ಖಾಯಂ ಟೇವಣಿ ಇಟ್ಟಿದ್ದರು. ಆ ಠೇವಣೆ ಅವಧಿ 2018 ರಿಂದ 2021ರ ಅವಧಿಯಲ್ಲಿ ಮುಕ್ತಾಯವಾಗಿದ್ದರೂ ತನ್ನ ಠೇವಣಿ ಹಣವನ್ನು ಸೊಸೈಟಿಯವರು ನೀಡಿಲ್ಲ. ಇದರಿಂದಾಗಿ ತನ್ನ ಮಗಳ ಮದುವೆಗೆ ತೊಂದರೆಯಾಗಿದ್ದರಿಂದ ಸದರಿ ಸೊಸೈಟಿಯವರ ವರ್ತನೆ ಸೇವಾ ನ್ಯೂನ್ಯತೆ ಆಗಿದೆ ಅಂತಾ ಹೇಳಿ ಆ ಸೂಸೈಟಿಯವರ ಮೇಲೆ ಕ್ರಮ ಕೈಗೊಂಡು ತನ್ನ ಠೇವಣಿ ಹಣ ಮರುಪಾವತಿಸುವಂತೆ ಮತ್ತು ತನಗಾದ ತೊಂದರೆ ಮತ್ತು ಮಾನಸಿಕ ಹಿಂಸೆಗೆ ಈ ಪ್ರಕರಣದ ಖರ್ಚು ಸಮೇತ ಪರಿಹಾರ ಕೊಡಿಸಬೇಕೆಂದು ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರು ಸಲ್ಲಿಸಿದ್ದರು.
ಸೊಸೈಟಿಯವರು ಹಾಜರಾಗಿ ಕೋವಿಡ್-19 ರಿಂದ ತಮ್ಮ ವ್ಯವಹಾರ ನಿಂತು ಲುಕ್ಸಾನು ಆಗಿದೆ ಹಾಗೂ ಗ್ರಾಹಕರ ರಕ್ಷಣಾ ಕಾಯಿದೆ ಅಡಿ ಪರಿಹಾರ ನೀಡಲು ಇದು ಯೋಗ್ಯವಾದ ಪ್ರಕರಣ ಅಲ್ಲ ಅಂತಾ ಆಕ್ಷೇಪಣೆ ಸಲ್ಲಿಸಿದ್ದರು. ದೂರು ಮತ್ತು ಸೊಸೈಟಿಯ ಆಕ್ಷೇಪಣೆಗಳನ್ನು ಆಲಿಸಿದ ಆಯೋಗದ ಅಧ್ಯಕ್ಷ ಈಶಪ್ಪ ಭೂತೆ ಹಾಗೂ ವಿ.ಎ. ಬೋಳಶೆಟ್ಟಿ ಮತ್ತು ಪಿ.ಸಿ. ಹಿರೇಮಠ ಸದಸ್ಯರು ದೂರುದಾರರು ಎದುರುದಾರರ ಸಂಘದ ಸದಸ್ಯರಿದ್ದರೂ ಅವರಿಂದ ಠೇವಣಿ ರೂಪದಲ್ಲಿ ಪಡೆದ ಹಣವನ್ನು ಸಹಕಾರ ಸಂಘದವರು ತಮ್ಮ ಸಂಘದ ಅಭಿವೃದ್ಧಿಗಾಗಿ ಉಪಯೋಗಿಸಿಕೊಂಡಿರುವುದರಿಂದ ದೂರುದಾರರು ಗ್ರಾಹಕರಾಗುತ್ತಾರೆ ಮತ್ತು ಎದುರುದಾರರು ಸೇವೆ ನೀಡುವವರ ಅರ್ಥವಿವರಣೆಯಲ್ಲಿ ಬರುತ್ತಾರೆ ಎಂದು ಅಭಿಪ್ರಾಯಪಟ್ಟು ಸಹಕಾರ ಸಂಘದವರ ಆಕ್ಷೇಪಣೆಯನ್ನು ತಳ್ಳಿಹಾಕಿದರು.
ಅಲ್ಲದೆ, ಠೇವಣಿ ಅವಧಿ ಮುಗಿದರೂ ದೂರುದಾರರ ಠೇವಣಿ ಹಣವನ್ನು ಹಿಂದಿರುಗಿಸದೇ ಇರುವುದು ಸೇವಾ ನ್ಯೂನ್ಯತೆ ಆಗುತ್ತದೆ ಅಂತಾ ಆಯೋಗ ತೀರ್ಪು ನೀಡಿದೆ. ಠೇವಣಿ ಇಟ್ಟ ದಿನಾಂಕಗಳಿಂದ ಶೇ.8 ರಂತೆ ಬಡ್ಡಿ ಲೆಕ್ಕ ಹಾಕಿ ಪೂರ್ತಿ ಠೇವಣಿ ಹಣ 13,29,544 ರೂ.ವನ್ನು ತಿಂಗಳ ಒಳಗಾಗಿ ಹಿಂದಿರುಗಿಸುವಂತೆ ಆಯೋಗ ಆದೇಶಿಸಿದೆ. ಜೊತೆಗೆ ಸೇವಾ ನ್ಯೂನ್ಯತೆಯಿಂದ ಅವರಿಗೆ ಆಗಿರುವ ತೊಂದರೆ ಹಾಗೂ ಮಾನಸಿಕ ಹಿಂಸೆಗೆ 50 ಸಾವಿರ ರೂಪಾಯಿ ಪರಿಹಾರ ಹಾಗೂ 10 ಸಾವಿರ ರೂ. ಪ್ರಕರಣದ ಖರ್ಚು ವೆಚ್ಚ ನೀಡಲು ಆದೇಶಿಸಲಾಗಿದೆ.
ವರದಿ: ನರಸಿಂಹಮೂರ್ತಿ ಪ್ಯಾಟಿ, ಟಿವಿ9 ಧಾರವಾಡ
ಮತ್ತಷ್ಟು ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:31 pm, Tue, 18 October 22