ಮೈಸೂರು: ಕಿಲ್ಲರ್ ಕೊರೊನಾ ಮತ್ತೆ ತನ್ನ ರೂಪ ತೋರಿಸುತ್ತಿದೆ. ಮೈಸೂರಿನಲ್ಲೂ ಕೊರೊನಾದ ಎರಡನೇ ಅಲೆಯ ಪ್ರತಾಪ ಹೆಚ್ಚಾಗುತ್ತಿದೆ. ಕೇವಲ 8 ದಿನದಲ್ಲಿ 700ಕ್ಕೂ ಹೆಚ್ಚು ಜನರಿಗೆ ಕೊರೊನಾ ಸೋಂಕು ತಗುಲಿದ್ದು 8 ದಿನಗಳಲ್ಲಿ 10 ಜನ ಸೋಂಕಿಗೆ ಬಲಿಯಾಗಿದ್ದಾರೆ. ಕಳೆದ ಕೆಲ ದಿನಗಳಿಂದ ಕೊರೊನಾ ಪ್ರಕರಣಗಳು ಮತ್ತು ಸಾವಿನಲ್ಲಿ ಏರಿಕೆಯಾಗಿದೆ. ಹೀಗಾಗಿ ಸದ್ಯ ಅಧಿಕಾರಿಗಳಿಗೆ ಕೊರೊನಾ ನಿಯಂತ್ರಣ ಮಾಡುವುದು ದೊಡ್ಡ ತಲೆ ನೋವಾಗಿದೆ.
ಜನವರಿ, ಫೆಬ್ರವರಿಯಲ್ಲಿ ಕೊರೊನಾ ಸಂಪೂರ್ಣ ನಿಯಂತ್ರಣದಲ್ಲಿತ್ತು. ಆದ್ರೆ ಮಾರ್ಚ್ ತಿಂಗಳ ಅಂತ್ಯಕ್ಕೆ ಮೈಸೂರಿನಲ್ಲಿ ಮತ್ತೆ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿವೆ. ಪ್ರತಿನಿತ್ಯ 100ಕ್ಕೂ ಹೆಚ್ಚು ಕೊವಿಡ್ ಕೇಸ್‌ಗಳು ಪತ್ತೆಯಾಗುತ್ತಿವೆ. ಕಳೆದ ಮೂರು ದಿನಗಳಿಂದ 100ಕ್ಕಿಂತ ಹೆಚ್ಚು ಪಾಸಿಟಿವ್ ಕೇಸುಗಳು ದಾಖಲಾಗುತ್ತಿವೆ. ಜಿಲ್ಲೆಯಲ್ಲಿ ಕೊರೊನಾ ಕಂಟ್ರೋಲ್ ತಪ್ಪಿ ಹೋಗುತ್ತಿದೆ. ಇದಕ್ಕೆಲ್ಲ ಕಡಿವಾಣ ಹಾಕಬೇಕೆಂದು ಕೊರೊನಾ ನಿಯಂತ್ರಣಕ್ಕೆ ಜಿಲ್ಲಾಡಳಿತ ಸಿದ್ಧತೆ ಮಾಡಿಕೊಂಡಿದೆ. ಆದರೆ ಕೊವಿಡ್ ಸೋಂಕಿನ ಬಗ್ಗೆ ಜನರು ನಿರ್ಲಕ್ಷ್ಯ ತೋರುತ್ತಿದ್ದಾರೆ.
ಈಗಾಗಲೇ ಒಂದು ಬಾರಿ ಕೊರೊನಾ ಹೊಡೆತ ತಿಂದಿದ್ದರು ಕೊರೊನಾದ ಎರಡನೇ ಅಲೆಗೆ ಜನ ತಲೆ ಕೆಡಿಸಿಕೊಂಡಂತೆ ಕಾಣುತ್ತಿಲ್ಲ. ಸ್ಪರ್ಧೆಗಳು, ಪ್ರತಿಭಟನೆ, ಜಾತ್ರೆಗಳಲ್ಲಿ ಜನರು ಬ್ಯುಸಿಯಾಗಿದ್ದಾರೆ. ಜಾತ್ರೆಗಳನ್ನು ಮಾಡಬೇಡಿ ಎಂದರೂ, ಎಷ್ಟೇ ಅರಿವು ಮೂಡಿಸಿದ್ರು ಕೊರೊನಾ ಬಗ್ಗೆ ನಿರ್ಲಕ್ಷ್ಯ ಮಾಡುತ್ತಿದ್ದಾರೆ. ಹಾಗಾಗಿ ಮತ್ತೆ ಕೊರೊನಾ ಕೂಪಕ್ಕೆ ಮೈಸೂರು ಬೀಳಲಿದ್ಯಾ ಎಂಬ ಆತಂಕ ಅಧಿಕಾರಿಗಳ ನಿದ್ದೆ ಕೆಡಿಸಿದೆ. ಮೈಸೂರಿನಲ್ಲಿ 618 ಆಕ್ಟಿವ್ ಕೇಸ್ಗಳಿವೆ. ಜಿಲ್ಲೆಯಲ್ಲಿ 55.557 ಕ್ಕೆ ಪಾಸಿಟಿವ್ ಕೇಸ್ಗಳ ಸಂಖ್ಯೆ ಏರಿಕೆಯಾಗಿದೆ. ಈವರೆಗೆ 53.888 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. ಜಿಲ್ಲೆಯಲ್ಲಿ ಈವರೆಗೆ ಕೊರೊನಾಗೆ 1051ಮಂದಿ ಬಲಿಯಾಗಿದ್ದಾರೆ.
ಕೊರೊನಾ ಹೊಸ ರೂಲ್ಸ್
ಕೊರೊನಾ ಎರಡನೇ ಅಲೆಯ ಭೀತಿ ಹಿನ್ನಲೆಯಲ್ಲಿ ಸಿಎಂ ಬಿಎಸ್‌ವೈ ನೇತೃತ್ವದಲ್ಲಿ ಮಹತ್ವದ ಸಭೆ ನಡೆಸಲಾಯ್ತು. ಸಚಿವರು, ಸರ್ಕಾರದ ಹಿರಿಯ ಅಧಿಕಾರಿಗಳು, ಬಿಬಿಎಂಪಿ ಅಧಿಕಾರಿಗಳು ಹಾಗೂ ತಾಂತ್ರಿಕ ಸಲಹಾ ಸಮಿತಿಯ ಸದಸ್ಯರೊಂದಿಗೆ ಸಿಎಂ ಸಭೆ ನಡೆಸಿದ್ರು. ಸಭೆ ಬಳಿಕ ಮಾತನಾಡಿದ ಸಿಎಂ, ಮುಂದಿನ ಎರಡುವಾರ ಅಂದ್ರೆ 15 ದಿನ ಜಾತ್ರೆ, ಸಮಾರಂಭ, ಪ್ರತಿಭಟನೆ ನಡೆಸುವಂತಿಲ್ಲ ಅಂದ್ರು.
ಮುಂದಿನ 15 ದಿನ ಪ್ರತಿಭಟನೆ, ಧರಣಿಗಳಿಗೆ ಅವಕಾಶವಿಲ್ಲ ಇಲ್ಲ ಅಂತಾ ಇಂದಿನ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ. ಜತೆಗೆ ಜಾತ್ರೆ, ಗಮನಸೆಳೆಯೋ ಸಮಾರಂಭಗಳಿಗೂ ಬ್ರೇಕ್ ಹಾಕಲಾಗಿದೆ. ಆದ್ರೆ ಲಾಕ್‌ಡೌನ್, ನೈಟ್‌ಕರ್ಫ್ಯೂ, ಸೀಲ್‌ಡೌನ್ ಮಾತ್ರ ಇಲ್ಲ ಎಂದಿರೋ ಸರ್ಕಾರ, ಏಪ್ರಿಲ್ 5 ರಿಂದ ಕೋರಮಂಗಲ ಒಳಾಂಗಣ ಕ್ರೀಡಾಂಗಣದ ಕೊವಿಡ್ ಕೇರ್‌ಸೆಂಟ್ ಓಪನ್ ಆಗಲಿದೆ. ಜತೆಗೆ ಕೊವಿಡ್ ಪರೀಕ್ಷೆ ಹೆಚ್ಚಿಸಲು ಬೆಂಗಳೂರಿನ ಪ್ರತಿವಾರ್ಡ್‌ನಲ್ಲೂ ಮೊಬೈಲ್ ಟೀಂ ಇರಲಿದೆ. ಸಂಪರ್ಕಿತರ ಪತ್ತೆಗೆ ಕಂದಾಯ ಹಾಗೂ ಶಿಕ್ಷಣ ಇಲಾಖೆ ಸಿಬ್ಬಂದಿ ಬಳಕೆ ಮಾಡಿಕೊಳ್ಳಲು ನಿರ್ಧರಿಸಲಾಗಿದೆ. ಇನ್ನು ಬೆಂಗಳೂರು ನಗರ, ಗ್ರಾಮಾಂತರದಲ್ಲಿ ಸೋಂಕಿತರಿಗೆ ಟ್ರೀಟ್‌ಮೆಂಟ್ ನೀಡಲು ಒಟ್ಟು 1166 ಬೆಡ್‌ಗಳನ್ನ ಮೀಸಲು ಇಡಲಾಗಿದ್ದು, ಇಂದಿನಿಂದ ಮಾಸ್ಕ್ ಹಾಕದವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ.
ಸ್ಕೂಲ್ ಬಂದ್ ಇಲ್ಲ… ಸಿನಿಮಾ ಪ್ರದರ್ಶನವೂ ಓಕೆ.
ಈ ಟಫ್ ರೂಲ್ಸ್‌ಗಳ ನಡುವೆ ಸಿನಿಮಾ ಥಿಯಟರ್‌ಗಳಿಗೆ ಯಾವುದೇ ನಿರ್ಬಂಧ ಹಾಕಿಲ್ಲ. ಈಗಿರೋ ರೂಲ್ಸ್ ಮುಂದುವರಿದಿದೆ. ಇನ್ನು ಶಾಲಾ ಕಾಲೇಜ್ ಬಂದ್ ಮಾಡುವಂತೆ ತಾಂತ್ರಿಕ ಸಲಹಾ ಸಮಿತಿ ಅಭಿಪ್ರಾಯ ಕೊಟ್ಟಿದ್ರು. ಆದ್ರೆ ಈ ವಿಚಾರದಲ್ಲಿ ಶಿಕ್ಷಣ ಇಲಾಖೆ ಜತೆ ಸಭೆ ಮಾಡುತ್ತೇವೆ. ಸದ್ಯಕ್ಕೆ ಶಾಲಾ ಕಾಲೇಜುಗಳನ್ನ ಬಂದ್ ಮಾಡುವುದಿಲ್ಲ ಶಿಕ್ಷಣ ಸಚಿವರು ಹೇಳಿದ್ದಾರೆ.
ಇದನ್ನೂ ಓದಿ: ಕರ್ನಾಟಕದಲ್ಲಿ ಇಂದು 2,298 ಕೊರೊನಾ ಕೇಸ್ ಪತ್ತೆ; ಬೆಂಗಳೂರಲ್ಲೇ 1,398 ಕೊವಿಡ್ ಪಾಸಿಟಿವ್!