ಬೆಂಗಳೂರು: ಕಿಲ್ಲರ್ ಕೊರೊನಾ ರಣಕೇಕೆ ಹಾಕುತ್ತಿದೆ. ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆಯ ಜೊತೆ ಸಾವಿನ ಸಂಖ್ಯೆಯೂ ಏರಿಕೆಯಾಗುತ್ತಿದೆ. ಪ್ರತಿದಿನ 4-5 ಕೊರೊನಾ ಸೋಂಕಿತರ ಶವ ಬರ್ತಿತ್ತು. ಆದ್ರೆ ಕಳೆದ ಒಂದು ವಾರದಿಂದ ಶವಗಳ ಸಂಖ್ಯೆ ಹೆಚ್ಚಾಗಿದೆ. ದಿನಕ್ಕೆ 20-22 ಕೊವಿಡ್‌ನಿಂದ ಮೃತಪಟ್ಟವರ ಶವಗಳು ಬರ್ತಿವೆ ಎಂಬ ಭಯಾನಕ ಸುದ್ದಿ ಹೊರ ಬಿದ್ದಿದೆ.
ಕೊರೊನಾ ಎರಡನೇ ಅಲೆ ರಣಭೀಕರ ರೂಪ ತಾಳಿದೆ. ದಿನದಿಂದ ದಿನಕ್ಕೆ ತನ್ನ ಅಟ್ಟಹಾಸ ಜೋರು ಮಾಡಿದೆ. ಇದರ ಪರಿಣಾಮ ಸಾವಿನ ಸಂಖ್ಯೆ ದುಪ್ಪಟ್ಟಾಗಿದೆ. ಅದರಲ್ಲೂ ರಾಜ್ಯದ ಒಟ್ಟು ಕೊರೊನಾ ಕೇಸ್ನಲ್ಲಿ, ಸಾವಿನಲ್ಲಿ ಬೆಂಗಳೂರಿನದ್ದೇ ಸಿಂಹಪಾಲು. ಈ ಮೊದಲು 4ರಿಂದ 5 ಶವಗಳು ಬರ್ತಿತ್ತು. ಆದ್ರೆ ಕಳೆದ ಒಂದು ವಾರದಿಂದ ದಿನಕ್ಕೆ 20-22 ಶವಗಳು ಬರ್ತಿವೆ ಎಂದು ಟಿವಿ9ಗೆ ಸುಮನಹಳ್ಳಿ ಚಿತಾಗಾರದ ಸಿಬ್ಬಂದಿ ರವಿ ತಿಳಿಸಿದ್ದಾರೆ. ಚಿತಾಗಾರದ ಮುಂದೆ ಸರತಿ ಸಾಲಿನಲ್ಲಿ ಗಂಟೆಗಟ್ಟಲೆ ನಿಲ್ಲಬೇಕಾದಂತ ಪರಿಸ್ಥಿತಿ ನಿರ್ಮಾಣವಾಗಿದೆ. ಎರಡನೇ ಅಲೆಯ ಕೊರೊನಾ ಜೀವ ಹಿಂಡುತ್ತಿದೆ.
ಮೃತಪಟ್ಟವರ ಅಂತ್ಯಸಂಸ್ಕಾರ ಮಾಡಲು ಯಲಹಂಕದ ಮೇಡಿ ಅಗ್ರಹಾರದಲ್ಲಿ ಸರತಿ ಸಾಲಿನಲ್ಲಿ ನಿಲ್ಲಬೇಕಾಗಿದೆ. ಸುಮನಹಳ್ಳಿ ಚಿತಾಗಾರದಲ್ಲೂ ಅಂತ್ಯಕ್ರಿಯೆಗೆ ಕಾಯುವ ಸ್ಥಿತಿ ಎದುರಾಗಿದೆ. ಈ ಬಗ್ಗೆ ಟಿವಿ9ಗೆ ಪ್ರತಿಕ್ರಿಯೆ ನೀಡಿರುವ ಚಿತಾಗಾರದ ಸಿಬ್ಬಂದಿ ರವಿ ಬೆಂಗಳೂರಿನಲ್ಲಿ 10 ದಿನದಿಂದ ಸಾವಿನ ಸಂಖ್ಯೆ ಹೆಚ್ಚಾಗಿದೆ. ಇದರ ಜೊತೆಗೆ ಚಿತಾಗಾರಗಳಲ್ಲಿ ನಮಗೆ ಯಾವುದೇ ಸುರಕ್ಷತೆ ಇಲ್ಲ ಎಂದು ಅಳಲು ತೋಡಿಕೊಂಡಿದ್ದರು.
ಇನ್ನು ಬೆಳಗ್ಗೆ 4 ಗಂಟೆಗೆ ಸುಮನಹಳ್ಳಿ ಚಿತಾಗಾರಕ್ಕೆ ಕೊವಿಡ್ ಸೋಂಕಿತನ ಶವವನ್ನು ಆ್ಯಂಬುಲೆನ್ಸ್ ಸಿಬ್ಬಂದಿ ತಂದಿದ್ದರು. ಮೃತ ವ್ಯಕ್ತಿಯ ಸಂಬಂಧಿಕರು ಯಾರೂ ಬಾರದ ಕಾರಣ ಅಂತ್ಯಕ್ರಿಯೆ ಆಗದೆ ಮೃತದೇಹ ಇರಿಸಲಾಗಿದೆ. ಕುಟುಂಬಸ್ಥರು ಬರುವುದನ್ನು ಕಾದು ಬೆಳಗ್ಗೆ 9 ಗಂಟೆಯ ಬಳಿಕ ಮೃತದೇಹದ ಅಂತ್ಯಕ್ರಿಯೆ ನಡೆಸಲು ಚಿಂತಿಸಲಾಗಿದೆ.
ಇದನ್ನೂ ಓದಿ: ಕೊವಿಡ್‌ನಿಂದ ಮೃತಪಟ್ಟವರನ್ನು ಚಿತಾಗಾರಕ್ಕೆ ಸಾಗಿಸಲು ಯಾವುದೇ ಶುಲ್ಕ ಇಲ್ಲ: ಬಿಬಿಎಂಪಿ ಸ್ಪಷ್ಟನೆ