ಬೆಂಗಳೂರು: ಕೊರೊನಾ 2ನೇ ಅಲೆ ರಾಜಧಾನಿ ಬೆಂಗಳೂರಿಗೆ ಅಪ್ಪಳಿಸಿದಾಗಿನಿಂದ ಸಾವು-ನೋವುಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಇದರ ನಡುವೆ ಅನೇಕ ಸಮಸ್ಯೆಗಳು ಜನರನ್ನು ಮತ್ತಷ್ಟು ಸಂಕಷ್ಟಕ್ಕೆ ನೂಕುತ್ತಿವೆ. ಇನ್ನು ಬೆಂಗಳೂರಿನ ಮೇಡಿ ಅಗ್ರಹಾರ ಚಿತಾಗಾರದ ಮುಂದೆ ಗಲಾಟೆ ನಡೆದಿದೆ. ಸರ್ಕಾರದ ರೂಲ್ಸ್ ಬಗ್ಗೆ ನಮಗೆ ಗೊತ್ತೇ ಇಲ್ಲ ಎಂದು ಮೃತ ಕುಟುಂಬಸ್ಥರು ಚಿತಾಗಾರ ಸಿಬ್ಬಂದಿ ಜೊತೆ ವಾಗ್ವಾದ ನಡೆಸಿದ ಘಟನೆ ನಡೆದಿದೆ.
ಖಾಸಗಿ ಆ್ಯಂಬುಲೆನ್ಸ್ನಲ್ಲಿ ಮೃತದೇಹ ತಂದಿದ್ದ ಹಿನ್ನೆಲೆಯಲ್ಲಿ ಮೃತದೇಹ ದಹನಕ್ಕೆ ಚಿತಾಗಾರ ಸಿಬ್ಬಂದಿ ಹಿಂದೇಟು ಹಾಕಿದ್ದಾರೆ. ಹೀಗಾಗಿ ಕಳೆದ ರಾತ್ರಿಯಿಂದ ಚಿತಾಗಾರದ ಮುಂದೆ ಮೃತರ ಕುಟುಂಬಸ್ಥರು ಕಾಯುವಂತಾಗಿದೆ. 42 ವರ್ಷದ ಮಹಿಳೆ ಕೊರೊನಾದಿಂದ ನಾರಾಯಣ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ರಾತ್ರಿ ಮೃತದೇಹವನ್ನು ಖಾಸಗಿ ಆಸ್ಪತ್ರೆ ಮೂಲಕ ತರಲಾಗಿತ್ತು.
ಈ ವೇಳೆ ಬೆಳಗ್ಗೆ 9 ಘಂಟೆಗೆ ಅಂತ್ಯಕ್ರಿಯೆ ಮಾಡುವುದಾಗಿ ಚಿತಾಗಾರ ಸಿಬ್ಬಂದಿ ತಿಳಿಸಿದ್ದರು. ಆದ್ರೆ ಇದೀಗ ಮೃತ ದೇಹ ದಹನ ಮಾಡೋಕೆ ಹಿಂದೇಟು ಹಾಕಿದ್ದಾರೆ. ಅಲ್ಲದೆ ಈ ಬಗ್ಗೆ ಆಸ್ಪತ್ರೆಯಿಂದಲೂ ಯಾವುದೇ ಮಾಹಿತಿ ನೀಡದ ಆರೋಪವಿದೆ. ಹೀಗಾಗಿ ಖಾಸಗಿ ಆ್ಯಂಬುಲೆನ್ಸ್ಗಳನ್ನ ಮಾರ್ಷಲ್ಗಳು ತಡೆಯುತ್ತಿದ್ದಾರೆ.
ಪಿಯುಸಿ ಓದುತ್ತಿರುವ ಮೃತ ಮಹಿಳೆಯ ಮಗಳು ಅಮ್ಮನನ್ನ ಕಳೆದುಕೊಂಡು ರೋಧಿಸುತ್ತಿದ್ದಾಳೆ. ಅಪ್ರಾಪ್ತೆ ಮಗಳು ಹಾಗೂ ಮಗ ಈಗ ತಾಯಿ ಇಲ್ಲದ ತಬ್ಬಲಿಯಾಗಿದ್ದಾರೆ. ಚಿತಾಗಾರದ ಮುಂದೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಕೊನೆಗೆ ಮಕ್ಕಳ ಕಣ್ಣೀರಿಗೆ ಕರಗಿದ ಸಿಬ್ಬಂದಿ ಖಾಸಗಿ ಆ್ಯಂಬುಲೆನ್ಸ್ ಅನ್ನು ಒಳಗೆ ಬಿಟ್ಟಿದ್ದಾರೆ. ಗಲಾಟೆ ಬಳಿಕ ಮೃತ ದೇಹ ದಹನಕ್ಕೆ ಚಿತಾಗಾರ ಸಿಬ್ಬಂದಿ ಒಪ್ಪಿಗೆ ಸೂಚಿಸಿದ್ದಾರೆ.
ಇದನ್ನೂ ಓದಿ: ಹಾಸನದಲ್ಲಿಯೂ ಮೃತದೇಹ ಅಂತ್ಯಸಂಸ್ಕಾರಕ್ಕೆ ಸಂಕಷ್ಟ ಶುರು; ಏನಾಗಿದೆ ಅಲ್ಲಿ?