ಬೆಂಗಳೂರು: ಕಣ್ಣಿಗೆ ಕಾಣದಂತೆ ಗುಪ್ತಗಾಮಿನಿಯಂತೆ ಎಲ್ಲೆಡೆ ಹರಿದಾಡುತ್ತಿರುವ ಕೊರೊನಾ ತನ್ನ 2ನೇ ಅಲೆಯಲ್ಲಿ ಹೆಚ್ಚಿನ ಪ್ರಭಾವ ಬೀರುತ್ತಿದೆ. ಹೀಗಾಗಿ ಬೆಂಗಳೂರಿನಲ್ಲಿ ಇದರ ಪ್ರತಾಪ ಹೆಚ್ಚಾಗಿದ್ದು ಸಾವು-ನೋವುಗಳು ಹೆಚ್ಚಿವೆ. ಇದರ ಜೊತೆಗೆ ಇನ್ನು ಮುಂದೆ ಮೃತದೇಹ ಸುಡೋದಕ್ಕು ಹೆಣಗಾಟ ಶುರುವಾಗಬಹುದು ಏಕೆಂದರೆ ಉಗ್ರ ಹೋರಾಟ ಮಾಡುವುದಾಗಿ ಚಿತಾಗಾರ ಸಿಬ್ಬಂದಿ ಎಚ್ಚರಿಕೆ ಕೊಟ್ಟಿದ್ದಾರೆ.
ನಿನ್ನೆ ಬೆಂಗಳೂರಿನಲ್ಲಿ ಒಂದೇ ದಿನ ಬರೋಬ್ಬರಿ 15,244 ಜನರಿಗೆ ಕೊರೊನಾ ಸೋಂಕು ತಗುಲಿದ್ದು 68 ಮಂದಿ ಬಲಿಯಾಗಿದ್ದಾರೆ. ನಗರದಲ್ಲಿ ದಿನದಿಂದ ದಿನಕ್ಕೆ ಸಾವಿನ ಸಂಖ್ಯೆ ಹೆಚ್ಚುತ್ತಿದೆ. ಬೆಂಗಳೂರಿನಲ್ಲಿ 7 ಚಿತಾಗಾರಗಳಲ್ಲಿ ನಿರಂತರವಾಗಿ ಶವ ಸಂಸ್ಕಾರ ಮಾಡಲಾಗುತ್ತಿದೆ. ರಾತ್ರಿ ಹಗಲು ಶವಗಳನ್ನು ವಿದ್ಯುತ್ ಚಿತಾಗಾರದಲ್ಲಿ ಸುಡಲಾಗುತ್ತಿದೆ. ಮೇಡಿ ಅಗ್ರಹಾರ ಚಿತಾಗಾರದಲ್ಲಿ ಹತ್ತಕ್ಕೂ ಹೆಚ್ಚು ಆ್ಯಂಬುಲೆನ್ಸ್‌ಗಳು ಕ್ಯೂ ನಿಂತಿರುತ್ತವೆ. ಬನಶಂಕರಿಯ ಚಿತಾಗಾರದಲ್ಲಿ ಇದೇ ಪರಿಸ್ಥಿತಿ ಇಂದು ಕಂಡುಬರುತ್ತಿತ್ತು. ಮತ್ತೊಂದೆಡೆ ಸುಮ್ಮನಹಳ್ಳಿಯ ಚಿತಾಗಾರದಲ್ಲಿ ಪ್ರತಿದಿನ 30ಕ್ಕೂ ಹೆಚ್ಚು ಶವ ಸಂಸ್ಕಾರ ನಡೆಸಿದ್ರೂ ಕ್ಯೂ ಕಡಿಮೆಯಾಗುತ್ತಿಲ್ಲ. ಈ ನಡುವೆ ಹಲವು ಬೇಡಿಕೆ ಈಡೇರಿಸುವಂತೆ ಚಿತಾಗಾರ ಸಿಬ್ಬಂದಿಗಳ ಪಟ್ಟು ಹಿಡಿದಿದ್ದಾರೆ. ಬೇಡಿಕೆಯನ್ನು ಬಿಬಿಎಂಪಿ ಮುಂದಿಟ್ಟಿದ್ದಾರೆ.
ಬೇಡಿಕೆ ಈಡೇರಿಲ್ಲ ಅಂದರೆ ಹೋರಾಟ ಮಾಡ್ತೀವಿ
ಚಿತಾಗಾರ ಸಿಬ್ಬಂದಿ ಬಿಬಿಎಂಪಿ ಮುಂದೆ ಹಲವು ಬೇಡಿಕೆಗಳನ್ನು ಇಟ್ಟಿದ್ದು ಈಡೇರಿಸದಿದ್ದರೆ ಮೃತದೇಹ ದಹನ ಮಾಡದೇ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ. ಕೊವಿಡ್ನಿಂದ ಸತ್ತರೇ ವಾರವಿಡೀ ಮೃತದೇಹ ಇಟ್ಟು ಕಾಯುವ ಸ್ಥಿತಿ ಬಂದರೂ ಬರಬಹುದು. ಬಿಬಿಎಂಪಿ ಎಚ್ವೆತ್ತಿಲ್ಲ ಅಂದರೆ ಸಂಕಷ್ಟ ಗ್ಯಾರಂಟಿ ಎಂದು ರುದ್ರಭೂಮಿ ನೌಕರರು ಬಿಬಿಎಂಪಿ ಮುಂದೆ ಹಲವು ಬೇಡಿಕೆ ಇಟ್ಟು ಎಚ್ಚರಿಕೆ ನೀಡಿದ್ದಾರೆ. ಸದ್ಯ 15 ದಿನದೊಳಗೆ ಬೇಡಿಕೆ ಈಡೇರಿಕೆ ಆಯುಕ್ತರು ಭರವಸೆ ಕೊಟ್ಟಿದ್ದಾರೆ. ಆದ್ರೆ ಬೇಡಿಕೆ ಈಡೇರದಿದ್ದರೆ ಚಿತಾಗಾರ ಬಂದ್ ಮಾಡಿ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಈಗ ಮನೆ ಬಿಟ್ಟು ರಾತ್ರಿ ಇಡೀ ದಹನ ಕಾರ್ಯ ಮಾಡ್ತಿದ್ದೀವಿ. ಇದ್ದಕ್ಕಿದ್ದಂತೆ ಕೆಲಸ ನಿಲ್ಲಿಸಿದ್ರೆ ಜನರಿಗೆ ತೊಂದರೆ ಆಗುತ್ತದೆ. ಹಾಗಾಗಿ ಮಾನವೀಯತೆ ದೃಷ್ಟಿಯಿಂದ ಕೆಲಸ ಮಾಡ್ತಿದ್ದೀವಿ. 15 ದಿನ ಸಮಯಾವಕಾಶ ಕೂಡ ಕೊಟ್ಟಿದ್ದೀವಿ. ಬೇಡಿಕೆ ಈಡೇರಿಲ್ಲ ಅಂದರೆ ಹೋರಾಟ ಮಾಡ್ತೀವಿ ಎಂದು ಚಿತಾಗಾರ ಸಿಬ್ಬಂದಿ ರವಿ ತಿಳಿಸಿದ್ದಾರೆ.
ಬೇಡಿಕೆಗಳು
– ರುದ್ರಭೂಮಿ ನೌಕರರನ್ನು ಡಿ ನೌಕರರಾಗಿ ಪರಿಣಗಣಿಸುವಂತೆ ಒತ್ತಾಯ
-ಹೆಚ್ಚಿನ ವೇತನ, ಸಹಾಯಧನ, ಮನೆ, ಮಕ್ಕಳ ಉಚಿತ ವಿದ್ಯಾಭ್ಯಾಸ ನೀಡಬೇಕೆಂದು ಒತ್ತಾಯ
-ಸಂಬಳ ಕೂಡ ಸರಿಯಾದ ಸಮಯಕ್ಕೆ ಆಗ್ತಾ ಇಲ್ಲ. ಹೀಗಾಗಿ ಅದು ನಿಗಧಿತಸಮಯಕ್ಕೆ ಆಗಬೇಕು.. ಇತ್ಯಾದಿ
ಇದನ್ನೂ ಓದಿ: ಬೆಂಗಳೂರಿನಲ್ಲಿ ಹೆಚ್ಚಾಯ್ತು ಕೊರೊನಾ ಸೋಂಕಿತರ ಮರಣ ಪ್ರಮಾಣ; ಅಂತ್ಯಸಂಸ್ಕಾರಕ್ಕೆ 13 ಚಿತಾಗಾರಗಳಿಗೆ ಅನುಮತಿ ನೀಡಿದ ಸರ್ಕಾರ