ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಭಾಗಿಯಾಗಿದ್ದಾರೆ ಎನ್ನಲಾದ ಲೈಂಗಿಕ ಹಗರಣದ ಸಿಡಿ ಬಹಿರಂಗಪಡಿಸಿ, ಅದರಲ್ಲಿರುವ ಹೆಣ್ಣುಮಗಳಿಗೆ ನ್ಯಾಯ ಒದಗಿಸುವಂತೆ ಕೋರಿದ್ದ ಅರ್ಜಿಯನ್ನು ಹಿಂಪಡೆಯಲು ವಕೀಲರ ಮೂಲಕ ಸಾಮಾಜಿಕ ಹೋರಾಟಗಾರ ದಿನೇಶ್ ಕಲ್ಲಹಳ್ಳಿ ಮಾಡಿರುವ ಲಿಖಿತ ಮನವಿಯ ಬಗ್ಗೆ ಕಬ್ಬನ್ ಪಾರ್ಕ್ ಠಾಣೆ ಪೊಲೀಸರು ಈವರೆಗೆ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ.
ಗಂಭೀರ ಪ್ರಕರಣವಾಗಿರುವ ಕಾರಣ ದೂರು ಹಿಂಪಡೆಯಲು ದೂರುದಾರಿಗೆ ಅವಕಾಶ ನೀಡಬಹುದೇ ಎನ್ನುವ ಬಗ್ಗೆ ಕಾನೂನು ತಜ್ಞರ ಸಲಹೆ ಪಡೆಯಲು ಪೊಲೀಸರು ಚಿಂತನೆ ನಡೆಸಿದ್ದಾರೆ. ದಿನೇಶ್ ಪರ ಅವರ ವಕೀಲ ಕುಮಾರ್ ಪಾಟೀಲ್ ಸಲ್ಲಿಸಿರುವ ಮನವಿ ಪತ್ರವನ್ನು ಕಬ್ಬನ್ ಪಾರ್ಕ್ ಠಾಣೆಯ ಇನ್ಸ್ಪೆಕ್ಟರ್ ಮಾರುತಿ ಸ್ವೀಕರಿಸಿದರು. ಇದೀಗ ಠಾಣೆಗೆ ಎಸಿಪಿ ಯತಿರಾಜ್ ಆಗಮಿಸಿದ್ದು, ಅರ್ಜಿಯನ್ನು ಪರಿಶೀಲಿಸುತ್ತಿದ್ದಾರೆ.
‘ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ದೂರು ನೀಡಿದವರು ₹5 ಕೋಟಿಗೆ ಡೀಲ್ ಆಗಿದ್ದಾರೆ ಎಂದಿದ್ದರು. ಹೆಚ್‌ಡಿಕೆ ಹೇಳಿಕೆಯಿಂದ ರಾಜ್ಯದ ಜನರು ನನ್ನನ್ನು ಸಂಶಯದಿಂದ ನೋಡುತ್ತಿದ್ದಾರೆ. ಮಾಹಿತಿ ನೀಡಿದ ನನ್ನ ವಿರುದ್ಧವೇ ಎಚ್ಡಿಕೆ ಆರೋಪ ಮಾಡಿದ್ದರು. ನನಗೆ ಸಿಕ್ಕ ಮಾಹಿತಿ ಆಧರಿಸಿ ನಾನು ದೂರು ಕೊಟ್ಟಿದ್ದೇನೆ. ತನಿಖೆ ಮಾಡಿ ಅಂತ ನಾನು ಹೇಳಿದ್ದೆ. ಅದನ್ನು ಬಿಟ್ಟು ಇನ್ನೇನು ಮಾಡಿ ಅಂತ ಹೇಳಿದ್ದೆ. ಇಂಥ ಸಂದರ್ಭದಲ್ಲಿ ನನ್ನ ಹೋರಾಟ ಹತ್ತಿಕ್ಕುವ ಉದ್ದೇಶ. ಕುಮಾರಣ್ಣನ ಹೇಳಿಕೆಯಿಂದ ನನ್ನ ಮನಸ್ಸಿಗೆ ಆಘಾತವಾಗಿದೆ. ಹೀಗಾಗಿ ಬೇಸರವಾಗಿ ನಾನು ದೂರು ವಾಪಸ್ ಪಡೆಯುತ್ತಿದ್ದೇನೆ’ ಎಂದು ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಹೇಳಿದ್ದರು.
ಎಚ್ಡಿಕೆ ಹೇಳಿದ್ದೇನು?
ಈ ಪ್ರಕರಣದಲ್ಲಿ 5 ಕೋಟಿ ಪರಭಾರೆ ಆಗಿದೆ ಅಂತ ನನಗೆ ಮಾಹಿತಿಯಿದೆ. ಈ ರೀತಿಯ ಬ್ಲಾಕ್ಮೇಲ್ ಮಾಡುವ ವ್ಯಕ್ತಿಗಳನ್ನು ಸರ್ಕಾರ ಬಂಧಿಸಬೇಕು. ಆ ಮಾಹಿತಿಯನ್ನು ಸರ್ಕಾರವೇ ತಗೊಂಡು ಜನರ ಮುಂದೆ ಇಟ್ಟುಬಿಡಲಿ ಎಂದು ಕುಮಾರಸ್ವಾಮಿ ಹೇಳಿದ್ದರು.
Published On - 4:45 pm, Sun, 7 March 21