ಮಡಿಕೇರಿ: ಪ್ರಾಣಿ-ಪಕ್ಷಿ ಸಾಕೋದು ಅಂದ್ರೆ ಎಲ್ಲರಿಗೂ ಪ್ರೀತಿ. ಅದ್ರಲ್ಲೂ ಮನೆಯಲ್ಲಿ ಮಕ್ಕಳಿದ್ದರೆ ಒಂದು ಸಾಕು ಪ್ರಾಣಿಗೆ ಜಾಗ ಕೊಡಲೇಬೇಕು. ಇಷ್ಟೆಲ್ಲಾ ಮುದ್ದು ಮಾಡುವ ಸಾಕು ಪ್ರಾಣಿಗಳು ಮಾತಾಡಲು ಶುರು ಮಾಡಿದ್ರೆ ಹೇಗಿರುತ್ತೆ? ಇದೇ ರೀತಿ ಮಡಿಕೇರಿಯಲ್ಲೂ ಮಾತನಾಡುವ ಗಿಳಿ ಇದೆ. ಗಿಳಿರಾಮನ ಮಾತಿಗೆ ಎಲ್ಲರೂ ಫಿದಾ ಆಗಿದ್ದಾರೆ.
ಕೊಡಗು ಜಿಲ್ಲೆ ಸೋಮವಾರಪೇಟೆ ತಾಲ್ಲೂಕಿನ ಬ್ಯಾಡಗೊಟ್ಟದಲ್ಲಿ ಮಾತನಾಡುವ ಗಿಳಿ ಇದೆ. ಅದು ಮನೆಗೆ ಬಂದವರನ್ನ ಮಾತನಾಡಿಸುತ್ತಾ, ಕುಶಲೋಪರಿ ವಿಚಾರಿಸೋ ಗಿಳಿರಾಮ. ಪಂಜರ ಸೇರಿದ್ರೂ ಬೇಸರ ಮಾಡಿಕೊಳ್ಳದೆ ಖುಷಿಯಾಗಿರೋ ಹಕ್ಕಿ. ಆದರೆ ಈ ಗಿಳಿ ಶಾಸ್ತ್ರ ಹೇಳೋ ಗಿಳಿಯಲ್ಲ, ಆಟೋ ಚಾಲಕರೊಬ್ಬರ ಮನೆಯಲ್ಲಿ ಹ್ಯಾಪಿಯಾಗಿ ಬದುಕುತ್ತಿರೋ ಪ್ಯಾರೋಟ್.
ಮನೆಯಲ್ಲಿ ಮಾತನಾಡೋದನ್ನ ಗಮನಿಸಿಯೇ ಗಿಳಿ ತೊದಲು ಮಾತುಗಳನ್ನ ಕಲಿತುಬಿಟ್ಟಿದೆ. ಹೆಸರು ಹೇಳು ಎಂದರೆ ಪ್ರತಿಕ್ರಿಯಿಸೋ ಗಿಳಿ, ನಿತ್ಯ ಮನೆಯವರೊಂದಿಗೆ ಕುಳಿತು ಟಿವಿಯನ್ನೂ ನೋಡುತ್ತೆ. ಮನೆಗೆ ಯಾರಾದ್ರು ಹೊಸಬರು ಬಂದ್ರೆ ಸಾಕು, ತಕ್ಷಣ ಯಾರೋ ಬಂದ್ರು ಅಂತಾ ಹೇಳುವಷ್ಟು ಬುದ್ಧಿಶಕ್ತಿ ಹೊಂದಿದೆ. ಇನ್ನು ಡ್ಯಾನ್ಸ್ ಮಾಡೋದ್ರಲ್ಲೂ ಈ ಗಿಳಿ ಯಾರಿಗೂ ಕಮ್ಮಿ ಇಲ್ಲ.